ADVERTISEMENT

85 ಸಾವಿರ ಜನರಿಗೆ ಲಸಿಕೆ: ಶಾಸಕಿ ಪೂರ್ಣಿಮಾ ಶ್ರೀನಿವಾಸ್

​ಪ್ರಜಾವಾಣಿ ವಾರ್ತೆ
Published 22 ಜೂನ್ 2021, 6:33 IST
Last Updated 22 ಜೂನ್ 2021, 6:33 IST
ಹಿರಿಯೂರು ತಾಲ್ಲೂಕಿನ ಜವನಗೊಂಡನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ಹಾಕಿಸುವ ಅಭಿಯಾನಕ್ಕೆ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಚಾಲನೆ ನೀಡಿದರು
ಹಿರಿಯೂರು ತಾಲ್ಲೂಕಿನ ಜವನಗೊಂಡನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ಹಾಕಿಸುವ ಅಭಿಯಾನಕ್ಕೆ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಚಾಲನೆ ನೀಡಿದರು   

ಜವನಗೊಂಡನಹಳ್ಳಿ (ಹಿರಿಯೂರು): ‘ಕೊರೊನಾ ಸೋಂಕು ನಿಯಂತ್ರಣಕ್ಕೆ ಸರ್ಕಾರದ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಪಾಲಿಸುವ ಜೊತೆಗೆ 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರೂ ಲಸಿಕೆ ಹಾಕಿಸಿಕೊಳ್ಳುವ ಮೂಲಕ ಕೊರೊನಾ ಹರಡುವಿಕೆಗೆ ಪೂರ್ಣ ಕಡಿವಾಣ ಹಾಕಬೇಕು’ ಎಂದು ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಮನವಿ ಮಾಡಿದರು.

ತಾಲ್ಲೂಕಿನ ಜವನಗೊಂಡನಹಳ್ಳಿ, ದಿಂಡಾವರ, ವಾಣಿ ವಿಲಾಸಪುರ ಹಾಗೂ ಐಮಂಗಲ ಗ್ರಾಮಗಳ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸೋಮವಾರ 18 ವರ್ಷದ ಮೇಲ್ಪಟ್ಟವರಿಗೆ ಲಸಿಕೆ ಹಾಕಿಸುವ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ತಾಲ್ಲೂಕಿನಲ್ಲಿ ಇದುವರೆಗೂ 85 ಸಾವಿರ ಜನರಿಗೆ ಲಸಿಕೆ ಹಾಕಲಾಗಿದೆ. ಆರಂಭದಲ್ಲಿ ಲಸಿಕೆ ಸಂಗ್ರಹ ಸಾಕಷ್ಟು ಪ್ರಮಾಣದಲ್ಲಿದ್ದರೂ ವಿರೋಧ ಪಕ್ಷಗಳ ಅಪಪ್ರಚಾರದಿಂದ ಲಸಿಕೆ ಪಡೆಯಲು ಕೆಲವರು ಹಿಂದೇಟು ಹಾಕಿದರು. ಕೊರೊನಾವನ್ನು ದೇವರು ಓಡಿಸುತ್ತದೆ ಎಂಬ ಭ್ರಮೆ ಸಲ್ಲ. ನಾವೆಲ್ಲರೂ ವೈದ್ಯ ವಿಜ್ಞಾನವನ್ನು ನಂಬಬೇಕಿದೆ. ಲಸಿಕೆ ಪಡೆದ ನಂತರ ದೇವರಿಗೆ ಪೂಜೆ ಸಲ್ಲಿಸಿ. ಮೂಢನಂಬಿಕೆಗೆ ಕಟ್ಟುಬಿದ್ದು ಜೀವ ಹಾನಿಯಾಗುವುದು ಬೇಡ’ ಎಂದು ಅವರು ಸಲಹೆ ನೀಡಿದರು.

ADVERTISEMENT

‘ಜಿಲ್ಲೆಯಲ್ಲಿ ನಮ್ಮ ತಾಲ್ಲೂಕು ಕೊರೊನಾ ಸೋಂಕು ನಿಯಂತ್ರಿಸುವಲ್ಲಿ ಗಣನೀಯ ಪ್ರಯತ್ನ ನಡೆಸಿದ್ದು, ನಮ್ಮಲ್ಲಿ ಸೋಂಕಿನ ಪ್ರಮಾಣ ಶೇ 2ರಷ್ಟಿದೆ. ಇದಕ್ಕೆ ಕೊರೊನಾ ವಾರಿಯರ್ಸ್ ಸತತ ಶ್ರಮ, ಸಕಾಲದಲ್ಲಿ ಮರಡಿಹಳ್ಳಿ, ಧರ್ಮಪುರ ಹಾಗೂ ಹಿರಿಯೂರಿನಲ್ಲಿ 110 ಹಾಸಿಗೆಗಳ ಕೋವಿಡ್ ಆಸ್ಪತ್ರೆ, 800ಕ್ಕೂ ಹೆಚ್ಚು ಸೋಂಕಿತರಿಗೆ ಒಮ್ಮೆಲೆ ಆರೈಕೆ ಮಾಡುವ ವ್ಯವಸ್ಥೆ, ಆಮ್ಲಜನಕದ ಕೊರತೆ ಆಗದಂತೆ ನೋಡಿಕೊಂಡಿದ್ದು ಕಾರಣವಾಯಿತು. ಮೂರನೇ ಅಲೆಯನ್ನು ಎದುರಿಸಲು ಆರೋಗ್ಯ ಇಲಾಖೆಯವರು ಸೂಕ್ತ ಸಿದ್ಧತೆ ಮಾಡಿಕೊಳ್ಳಬೇಕು’ ಎಂದು ಪೂರ್ಣಿಮಾ ಶ್ರೀನಿವಾಸ್ ಸೂಚಿಸಿದರು.

ವರ್ಗಾವಣೆಗೊಂಡಿರುವತಹಶೀಲ್ದಾರ್ ಸತ್ಯನಾರಾಯಣ, ನೂತನವಾಗಿ ಕರ್ತವ್ಯಕ್ಕೆ ಹಾಜರಾಗಿರುವ ತಹಶೀಲ್ದಾರ್ ಶಿವಕುಮಾರ್, ರಾಜ್ಯ ಹಿಂದುಳಿದ ವರ್ಗಗಳ ಮುಖಂಡ ಡಿ.ಟಿ. ಶ್ರೀನಿವಾಸ್, ಡಿವೈಎಸ್ಪಿ ರೋಷನ್ ಜಮೀರ್, ಸಿಪಿಐ ರಾಘವೇಂದ್ರ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶ್, ಡಾ.ಶೃತಿ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಬಾನಾ ಪರ್ವಿನ್ ಇದ್ದರು.

ದಿಂಡಾವರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ಲಸಿಕೆ ಮಹಾ ಅಭಿಯಾನದಲ್ಲಿ ಮುಖಂಡರಾದ ಡಿ. ಶಿವಣ್ಣ, ದ್ಯಾಮೇಗೌಡ, ರಾಮಕೃಷ್ಣ, ಪರಮೇಶ್, ಬಾಲಣ್ಣ, ಪರುಶುರಾಮಪ್ಪ, ಕೃಷ್ಣಪ್ಪ, ಮಂಜುನಾಥ, ದಾಸಪ್ಪ, ಮೇಣಪ್ಪ, ಮಹಾಲಿಂಗಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.