
ಚಿತ್ರದುರ್ಗ: ಜಾನುವಾರು ಹತ್ಯೆ ಪ್ರತಿಬಂಧಕ ಹಾಗೂ ಸಂರಕ್ಷಣಾ ಕಾಯ್ದೆ ತಿದ್ದುಪಡಿ ಮಸೂದೆಯನ್ನು ಬೆಳಗಾವಿ ಅಧಿವೇಶನದಲ್ಲಿ ಮಂಡಿಸಬಾರದು ಎಂದು ಆಗ್ರಹಿಸಿ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗ ದಳದ ಸದಸ್ಯರು ಜಿಲ್ಲಾಧಿಕಾರಿ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಸಿದರು.
ತಿದ್ದುಪಡಿ ಕಾಯ್ದೆಗೆ ರಾಜ್ಯ ಸಚಿವ ಸಂಪುಟ ಒಪ್ಪಿಗೆ ನೀಡಿರುವುದು ಖಂಡನೀಯ. ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ಈ ಮಸೂದೆಗೆ ಅನುಮೋದನೆ ದೊರೆಯಬಾರದು. ಅಕ್ರಮ ಗೋ ಸಾಗಾಟಕ್ಕೆ ಬಳಸುವ ವಾಹನಗಳ ಬಿಡುಗಡೆಯ ನಿಯಮವನ್ನು ಸಡಿಲಗೊಳಿಸುವ ತಿದ್ದುಪಡಿಯನ್ನು ಸರ್ಕಾರ ಮಂಡಿಸಲು ತಯಾರಿ ನಡೆಸುತ್ತಿದೆ ಎಂದುಆರೋಪಿಸಿದರು.
ಈಗ ಜಾರಿಯಲ್ಲಿರುವ ಕಾಯ್ದೆಯಲ್ಲಿ ಗೋವುಗಳನ್ನು ಅಕ್ರಮವಾಗಿ ಸಾಗಾಟ ಮಾಡುವಾಗ ವಶಪಡಿಸಿಕೊಂಡ ವಾಹನಗಳ ಬಿಡುಗಡೆಗೆ ಬ್ಯಾಂಕ್ ಗ್ಯಾರಂಟಿ ನೀಡಬೇಕು. ಇದನ್ನು ಬದಲಿಸಲು ಸರ್ಕಾರ ಮುಂದಾಗಿರುವುದು ಸರಿಯಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಸಾರ್ವಜನಿಕರ ಭಾವನೆಗೆ ಸ್ಪಂದಿಸಿದ್ದ ಹಿಂದಿನ ಬಿಜೆಪಿ ಸರ್ಕಾರ ಗೋ ಸಂರಕ್ಷಣೆ ಸಂಬಂಧ ಕಠಿಣ ಕಾಯ್ದೆ ಜಾರಿಗೊಳಿಸಿತ್ತು. ಆದರೆ ಕಾಂಗ್ರೆಸ್ ಸರ್ಕಾರ ಅಲ್ಪಸಂಖ್ಯಾತರ ತುಷ್ಟೀಕರಣಕ್ಕಾಗಿ ತಿದ್ದುಪಡಿ ಮಸೂದೆ ಜಾರಿಗೆ ತರಲು ಮುಂದಾಗಿದೆ. ತಿದ್ದುಪಡಿಯು ಸಂವಿಧಾನದ ಆಶಯಕ್ಕೆ ವಿರುದ್ಧವಾದುದು. ಸರ್ಕಾರ ಈ ತಿದ್ದುಪಡಿ ಮಸೂದೆಯನ್ನು ಜಾರಿಗೊಳಸಬಾರದು ಎಂದು ಒತ್ತಾಯಿಸಿದರು.
ಹೋರಾಟದಲ್ಲಿ ಮಾಜಿ ಶಾಸಕ ಎಸ್.ಕೆ.ಬಸವರಾಜನ್, ವಿಎಚ್‌ಪಿ ಪ್ರಾಂತ ಸಂಯೋಜಕ ಪ್ರಭಂಜನ್, ಜಿಲ್ಲಾ ಕಾರ್ಯದರ್ಶಿ ಚನ್ನಕೇಶವ, ಪ್ರಾಂತ ಉಪಾಧ್ಯಕ್ಷ ಮಂಜುನಾಥ್, ಮುಖಂಡರಾದ ಕೃಷ್ಣ , ದಿನೇಶ್ ರಾಮು, ನಾಗರಾಜ ಬೇದ್ರೆ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.