ADVERTISEMENT

ಮನೆ ದರೋಡೆ: ಐವರ ಬಂಧನ

ಹೋಟೆಲ್‌ ಬಾಡಿಗೆ ಕಟ್ಟಲು ದರೋಡೆಗೆ ಇಳಿದ ಯುವಕರು

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2021, 16:30 IST
Last Updated 22 ಡಿಸೆಂಬರ್ 2021, 16:30 IST
ತುರುವನೂರು ಠಾಣೆಯ ಪೊಲೀಸರು ವಶಪಡಿಸಿಕೊಂಡ ನಗದು ಹಾಗೂ ಚಿನ್ನಾಭರಣ.
ತುರುವನೂರು ಠಾಣೆಯ ಪೊಲೀಸರು ವಶಪಡಿಸಿಕೊಂಡ ನಗದು ಹಾಗೂ ಚಿನ್ನಾಭರಣ.   

ಚಿತ್ರದುರ್ಗ: ತಾಲ್ಲೂಕಿನ ಬಂಗಾರಕ್ಕನಹಳ್ಳಿಯಲ್ಲಿ ನಡೆದ ದರೋಡೆ ಪ್ರಕರಣವನ್ನು ಭೇದಿಸಿದ ತುರುವನೂರು ಠಾಣೆಯ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ₹ 3.24 ಲಕ್ಷ ಮೌಲ್ಯದ ಚಿನ್ನಾಭರಣ, ₹ 1 ಲಕ್ಷ ನಗದು, ಕಾರು ಸೇರಿ ₹ 11 ಲಕ್ಷ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.

ಚಿತ್ರದುರ್ಗ ತಾಲ್ಲೂಕು ಚಿಕ್ಕಗೊಂಡನಹಳ್ಳಿಯ ಶಿವಧ್ವಜ (28), ತಿಪ್ಪೇಸ್ವಾಮಿ (28), ಬೆಂಗಳೂರಿನ ಅಭಿಷೇಕ್ (32), ವಿಕಾಸ್ (27), ವಜ್ರಮಣಿ (23) ಬಂಧಿತರು. ಆರೋಪಿಗಳನ್ನು ನ್ಯಾಯಾಲಯದ ಎದುರು ಹಾಜರುಪಡಿಸಿ ಜೈಲಿಗೆ ಕಳುಹಿಸಲಾಗಿದೆ.

‘ಚಿಕ್ಕಗೊಂಡನಹಳ್ಳಿಯ ಶಿವಧ್ವಜ ಹಾಗೂ ಬೆಂಗಳೂರಿನ ಅಭಿಷೇಕ್‌, ವಿಕಾಸ್‌ ಪರಿಚಿತರು. ಹಣ ಮಾಡುವ ಉದ್ದೇಶದಿಂದ ಇವರು ಚಿತ್ರದುರ್ಗಕ್ಕೆ ಬಂದಿರುತ್ತಾರೆ. ಹೋಟೆಲ್‌ವೊಂದರಲ್ಲಿ ತಂಗಿದ್ದ ಇವರಿಗೆ ಬಾಡಿಗೆ ಕಟ್ಟಲು ಹಣ ಇಲ್ಲದಂತಹ ಸ್ಥಿತಿ ನಿರ್ಮಾಣವಾಗುತ್ತದೆ. ಶಿವಧ್ವಜನೊಂದಿಗೆ ಚರ್ಚಿಸಿ ಬಂಗಾರಕ್ಕನಹಳ್ಳಿಯ ತಿಪ್ಪೇಸ್ವಾಮಿ ಎಂಬುವರ ತೋಟದ ಮನೆಯ ದರೋಡೆಗೆ ಸಂಚು ರೂಪಿಸುತ್ತಾರೆ’ ಎಂದು ಪೊಲೀಸ್‌ ವರಿಷ್ಠಾಧಿಕಾರಿ ಜಿ.ರಾಧಿಕಾ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ADVERTISEMENT

‘ಬೆಂಗಳೂರಿಗೆ ತೆರಳಿ ವಜ್ರಮಣಿಯ ನೆರವು ಪಡೆಯುತ್ತಾರೆ. ಮುಖಕ್ಕೆ ಮಾಸ್ಕ್‌, ಕೈಗೆ ಗ್ಲೌಸ್‌ ಹಾಗೂ ಹಗ್ಗವನ್ನು ಖರೀದಿಸಿ ಚಿತ್ರದುರ್ಗಕ್ಕೆ ಮರಳುತ್ತಾರೆ. ಸ್ಥಳೀಯನಾಗಿದ್ದ ಆರೋಪಿ ತಿಪ್ಪೇಸ್ವಾಮಿ ನೆರವು ಪಡೆದು ನ.28ರಂದು ರಾತ್ರಿ 8.15ಕ್ಕೆ ತೋಟದ ಮನೆಗೆ ನುಗುತ್ತಾರೆ’ ಎಂದು ವಿವರಿಸಿದರು.

‘ಮನೆಯ ಯಜಮಾನ, ಅವರ ಪತ್ನಿ ಹಾಗೂ ಮಕ್ಕಳಿಬ್ಬರ ಕೈಕಾಲು ಕಟ್ಟಿ ಬೆದರಿಸುತ್ತಾರೆ. ಚಿನ್ನಾಭರಣ, ನಗದು ದರೋಡೆ ಮಾಡುತ್ತಾರೆ. ಶ್ವಾನದಳದ ದಿಕ್ಕು ತಪ್ಪಿಸುವ ಉದ್ದೇಶದಿಂದ ಕೃತ್ಯ ನಡೆಸಿದ ಮನೆಯ ತುಂಬ ಕಾರದ ಪುಡಿ ಚಲ್ಲುತ್ತಾರೆ. ಪೊಲೀಸ್‌ ಇನ್‌ಸ್ಪೆಕ್ಟರ್‌ ವೆಂಕಟೇಶ್‌ ನೇತೃತ್ವದ ತಂಡ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.