ಚಿತ್ರದುರ್ಗ: ‘ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಹಾಗೂ ರಾಜಕೀಯ ಸ್ಥಿತಿ ಅವಲೋಕಿಸಿ ಮುಸ್ಲಿಮರಿಗೂ ಒಳ ಮೀಸಲಾತಿ ನೀಡಬೇಕು. ಆ ಮೂಲಕ ಸಾಮಾಜಿಕ ನ್ಯಾಯ ಒದಗಿಸಬೇಕು’ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಒತ್ತಾಯಿಸಿದರು.
‘ಮುಸ್ಲಿಮರಲ್ಲಿ 48 ಉಪ ಜಾತಿಗಳಿವೆ. ಅವರಲ್ಲಿಯೂ ಬಡವರಿದ್ದಾರೆ. ಪರಿಶಿಷ್ಟ ಜಾತಿ ಅಷ್ಟೇ ಅಲ್ಲ, ಹಿಂದುಳಿದ ವರ್ಗದಲ್ಲೂ ಒಳಮೀಸಲು ಜಾರಿಗೊಳಿಸಲು ರಾಜ್ಯ ಸರ್ಕಾರ ಮುಂದಾಗಬೇಕು’ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.
‘ಬಿಜೆಪಿ ಮೀಸಲಾತಿ ವಿರೋಧಿ ಎಂದು ಬಿಂಬಿಸುತ್ತಿದ್ದಾರೆ. ಆದರೆ ಜವಾಹರಲಾಲ್ ನೆಹರೂ ಮೀಸಲಾತಿಯನ್ನು ವಿರೋಧಿಸಿದ್ದರು. ಆ ಪತ್ರವನ್ನು ಪ್ರಧಾನಿ ಮೋದಿ ಈಚೆಗೆ ಬಿಡುಗಡೆ ಮಾಡಿದ್ದಾರೆ. ಪರಿಶಿಷ್ಟ ಜಾತಿ, ವರ್ಗಕ್ಕೆ ಮೀಸಲಾತಿ ಹೆಚ್ಚಿಸಿದ್ದು ಬಿಜೆಪಿ. ಇದನ್ನು ಕಾಂಗ್ರೆಸ್ ಮರೆತಂತಿದೆ’ ಎಂದು ಕುಟುಕಿದರು.
‘ವಕ್ಫ್ ಆಸ್ತಿ ಸರ್ಕಾರದ್ದಲ್ಲ ಎಂದು ಸಚಿವ ಜಮೀರ್ ಅಹ್ಮದ್ ಅಹಂಕಾರದಿಂದ ಹೇಳಿದ್ದಾರೆ. ದೇಶದಲ್ಲಿನ ಎಲ್ಲ ಆಸ್ತಿಯೂ ಸರ್ಕಾರದ್ದೇ. ಜಮೀರ್, ತನ್ನ ಅಪ್ಪನ ಆಸ್ತಿ ಎಂಬಂತೆ ಮಾತನಾಡುವುದನ್ನು ನಿಲ್ಲಿಸಲಿ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.