ADVERTISEMENT

ಕಾಮಗಾರಿ ಮುಗಿಸದಿದ್ದರೆ ವೇತನದಿಂದ ನಷ್ಟ ವಸೂಲಿ

10 ದಿನದೊಳಗೆ ಅಂಗನವಾಡಿ ಕೆಲಸ ಮುಗಿಸಿ; ಎಂಜಿನಿಯರ್‌ಗಳಿಗೆ ಜಿಲ್ಲಾಧಿಕಾರಿ ವೆಂಕಟೇಶ್‌ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2025, 6:32 IST
Last Updated 12 ಅಕ್ಟೋಬರ್ 2025, 6:32 IST
ಜಿಲ್ಲಾಧಿಕಾರಿ ಟಿ.ವೆಂಕಟೇಶ್‌ ಅಧ್ಯಕ್ಷತೆಯಲ್ಲಿ  ಶುಕ್ರವಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವಿವಿಧ ಯೋಜನೆಗಳ ಜಿಲ್ಲಾ ಮಟ್ಟದ ಸಮಿತಿ ಸಭೆ ನಡೆಯಿತು
ಜಿಲ್ಲಾಧಿಕಾರಿ ಟಿ.ವೆಂಕಟೇಶ್‌ ಅಧ್ಯಕ್ಷತೆಯಲ್ಲಿ  ಶುಕ್ರವಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವಿವಿಧ ಯೋಜನೆಗಳ ಜಿಲ್ಲಾ ಮಟ್ಟದ ಸಮಿತಿ ಸಭೆ ನಡೆಯಿತು   

ಚಿತ್ರದುರ್ಗ: ‘ಜಿಲ್ಲೆಯಲ್ಲಿ ಪ್ರಗತಿಯಲ್ಲಿರುವ ಎಲ್ಲ ಅಂಗನವಾಡಿ ಕಟ್ಟಡ ನಿರ್ಮಾಣ ಕಾಮಗಾರಿಗಳನ್ನು 10 ದಿನದೊಳಗೆ ಪೂರ್ಣಗೊಳಿಸಿ ಹಸ್ತಾಂತರಿಸಬೇಕು. ಇಲ್ಲದಿದ್ದರೆ ಮುಲಾಜು ತೋರದೆ ಕಾಮಗಾರಿ ರದ್ದುಪಡಿಸಿ, ಸಂಬಂಧಪಟ್ಟ ಎಂಜಿನಿಯರ್‌ ಸಂಬಳದಿಂದಲೇ ನಷ್ಟ ವಸೂಲಿ ಮಾಡಲಾಗುವುದು’ ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಎಚ್ಚರಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವಿವಿಧ ಯೋಜನೆಗಳ ಜಿಲ್ಲಾ ಮಟ್ಟದ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಅಂಗನವಾಡಿ ಕಟ್ಟಡ ನಿರ್ಮಾಣಕ್ಕೆ 2008– 09ರಲ್ಲಿ ಅನುದಾನ ಬಿಡುಗಡೆ ಮಾಡಿದ್ದರೂ ಅಧಿಕಾರಿಗಳು ಕಾಮಗಾರಿಗಳನ್ನು ಆರಂಭಿಸಿಲ್ಲ. ಇದರಲ್ಲಿ ಅಧಿಕಾರಿಗಳ ಬೇಜವಾಬ್ದಾರಿತನ ಕಂಡು ಬರುತ್ತಿದೆ. ನಿರ್ಲಕ್ಷ್ಯ ತೋರಿದ ಪಂಚಾಯತ್ ರಾಜ್ ಮತ್ತು ಎಂಜಿನಿಯರಿಂಗ್, ನಿರ್ಮಿತಿ, ಕೆಆರ್‌ಐಡಿಎಲ್‌ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು’ ಎಂದು ಹೇಳಿದರು.

ADVERTISEMENT

‘ಪಂಚಾಯತ್ ರಾಜ್ ಮತ್ತು ಎಂಜಿನಿಯರಿಂಗ್ ಇಲಾಖೆ 201 ಅಂಗನವಾಡಿ ನಿರ್ಮಾಣಕ್ಕೆ ಮಂಜೂರಾತಿ ನೀಡಲಾಗಿದೆ. ಇದರಲ್ಲಿ 111 ಕಾಮಗಾರಿಗಳು ಪೂರ್ಣಗೊಂಡಿವೆ. 48 ಪ್ರಗತಿಯಲ್ಲಿವೆ. 42 ಕಾಮಗಾರಿಗಳು ಆರಂಭವಾಗಿಲ್ಲ. ನಿರ್ಮಿತಿ ಕೇಂದ್ರಕ್ಕೆ 149 ಅಂಗನವಾಡಿ ನಿರ್ಮಾಣಕ್ಕೆ ಮಂಜೂರಾತಿ ನೀಡಲಾಗಿದೆ’ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ವಿಜಯಕುಮಾರ್ ಸಭೆಯಲ್ಲಿ ಮಾಹಿತಿ ನೀಡಿದರು.

‘ಈ ಪೈಕಿ 101 ಪೂರ್ಣಗೊಂಡಿವೆ. 38 ಪ್ರಗತಿಯಲ್ಲಿವೆ. 10 ಪ್ರಾರಂಭಿಸಿಲ್ಲ. 32 ಅಂಗನವಾಡಿ ನಿರ್ಮಾಣಕ್ಕೆ ಕೆಆರ್‌ಐಡಿಎಲ್‌ ಮಂಜೂರಾತಿ ನೀಡಲಾಗಿತ್ತು. ಇದರಲ್ಲಿ 9 ಪೂರ್ಣಗೊಂಡಿವೆ. 8 ಪ್ರಗತಿಯಲ್ಲಿವೆ. 15 ಕಾಮಗಾರಿಗಳನ್ನು ಆರಂಭಿಸಿಲ್ಲ’ ಎಂದರು.

‘ಅಂಗನವಾಡಿ ಕಟ್ಟಡ ನಿರ್ಮಾಣದ ಘಟಕ ವೆಚ್ಚ ಸರಿದೂಗಿಸಲು ನರೇಗಾ ಒಗ್ಗೂಡಿಸಲು ಅನುಮತಿ ನೀಡಲಾಗಿದೆ. ಇದರ ಜೊತೆಗೆ ಗಣಿಭಾದಿತ ವಲಯಗಳ ಸಮಗ್ರ ಪರಿಸರ ಯೋಜನೆ (ಸಿಇಪಿಎಂಐಝಡ್) ಅಡಿಯಲ್ಲಿ 147 ಹೊಸ ಅಂಗನವಾಡಿ ಕಟ್ಟಡ ನಿರ್ಮಾಣಕ್ಕೆ, 150 ಅಂಗನವಾಡಿ ಕಟ್ಟಡ ಉನ್ನತೀಕರಣಕ್ಕೆ ಮಂಜೂರಾತಿ ನೀಡಲಾಗಿದೆ’ ಎಂದು ಜಿಲ್ಲಾಧಿಕಾರಿ ತಿಳಿಸಿದರು.

‘ಕಾಮಗಾರಿ ಆರಂಭಿಸದೆ ಅನುದಾನ ಮರಳಿಸಿದ ಅಂಗನವಾಡಿ ಕಟ್ಟಡ ಘಟಕ ವೆಚ್ಚವನ್ನು ಪರಿಷ್ಕೃತಗೊಳಿಸಿ ಜಿಲ್ಲಾ ಖನಿಜ ಪ್ರತಿಷ್ಠಾನ ಅಥವಾ ಗಣಿಬಾಧಿತ ವಲಯಗಳ ಸಮಗ್ರ ಪರಿಸರ ಯೋಜನೆಯಡಿ ಮಂಜೂರಾತಿ ನೀಡಲು ಕ್ರಮ ಕೈಗೊಳ್ಳಲಾಗುವುದು’ ಎಂದು ತಿಳಿಸಿದರು.

‘ಜಿಲ್ಲೆಯಲ್ಲಿ ಬಾಲ್ಯವಿವಾಹ ಸಾಕಷ್ಟು ಪ್ರಮಾಣದಲ್ಲಿ ನಡೆಯುತ್ತಿರುವುದು ಕಳವಳಕಾರಿಯಾಗಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಂಕಿ–ಅಂಶಗಳ ಪ್ರಕಾರ ಏಪ್ರಿಲ್‌ನಿಂದ ಸೆಪ್ಟೆಂಬರ್ ಅಂತ್ಯದವರೆಗೆ ಒಟ್ಟು 44 ಬಾಲ್ಯ ವಿವಾಹ ಪ್ರಕರಣಗಳು ದಾಖಲಾಗಿವೆ. ಬಾಲ್ಯವಿವಾಹ ತಡೆಯಲು ವಿಫಲರಾದ ಮಹಿಳಾ ಮತ್ತು ಮಕ್ಕಳ ರಕ್ಷಣೆ ಕಾವಲು ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲಾಗುವುದು’ ಎಂದರು.

‘ಪ್ರತಿ ತಿಂಗಳು ಶಾಲೆಗಳಲ್ಲಿ 7ಕ್ಕಿಂತ ಹೆಚ್ಚು ದಿನ ಗೈರಾದ ವಿದ್ಯಾರ್ಥಿಗಳ ವಿವರವನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಶಿಕ್ಷಣ ಇಲಾಖೆ ನೀಡಬೇಕು. ಸಂಬಂಧಪಟ್ಟ ಎಲ್ಲ ಇಲಾಖೆಗಳು ಸಮನ್ವಯದಿಂದ ಕೆಲಸ ನಿರ್ವಹಿಸುವ ಮೂಲಕ ಬಾಲ್ಯವಿವಾಹ ತಡೆಗಟ್ಟಲು ಪ್ರಯತ್ನಿಸಬೇಕು’ ಎಂದು ತಿಳಿಸಿದರು.

‘ಜಿಲ್ಲೆಯಲ್ಲಿ ಕಳೆದ ಏಪ್ರಿಲ್‍ನಿಂದ ಸೆಪ್ಟೆಂಬರ್‌ವರೆಗೆ ಒಟ್ಟು 117 ಬಾಲ್ಯವಿವಾಹಕ್ಕೆ ಸಂಬಂಧಿಸಿದಂತೆ ದೂರುಗಳು ದಾಖಲಾಗಿದ್ದು, ಇದರಲ್ಲಿ 73 ಪ್ರಕರಣಗಳನ್ನು ತಡೆಯಲಾಗಿದೆ. 44 ಪ್ರಕರಣಗಳಲ್ಲಿ ಬಾಲ್ಯವಿವಾಹ ನಡೆದಿದ್ದು, ಎಫ್‌ಐಆರ್‌ ದಾಖಲಿಸಲಾಗಿದೆ’ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಸಭೆಯಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ್ ಎಂ.ವಿಜಯ್, ಎಎಸ್‌ಪಿ ಶಿವಕುಮಾರ್, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಜಿ.ಪಿ.ರೇಣುಪ್ರಸಾದ್, ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ಪಿ.ಶೀಲಾ, ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಮಂಜುನಾಥ ಇದ್ದರು.

ಸಹಾಯವಾಣಿಗೆ 281 ಕರೆ

ಏಪ್ರಿಲ್‌ನಿಂದ ಸೆಪ್ಟೆಂಬರ್ ಅವಧಿಯಲ್ಲಿ 89 ಪೋಕ್ಸೊ ಪ್ರಕರಣ ದಾಖಲಾಗಿವೆ. ಮಕ್ಕಳ ಸಹಾಯವಾಣಿ ಕೇಂದ್ರ 1098ಕ್ಕೆ ಒಟ್ಟು 281 ಕರೆಗಳು ಬಂದಿದ್ದು ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ವಿಚಾರಣೆ ನಡೆಸಿ ಮಕ್ಕಳಿಗೆ ನೆರವು ನೀಡಲಾಗಿದೆ. ಪ್ರಸಕ್ತ ವರ್ಷದಲ್ಲಿ ದಾಖಲಾದ 69 ಬಾಲ ತಾಯಂದಿರ ಪ್ರಕರಣಗಳ ಕುರಿತು ವಿಶ್ಲೇಷಣಾತ್ಮಕ ವರದಿಯನ್ನು ಸಿದ್ಧಪಡಿಸಲಾಗಿದೆ’ ಎಂದು ಮಹಿಳಾ ರಕ್ಷಣಾಧಿಕಾರಿ ಪ್ರೇಮಮೂರ್ತಿ ಹೇಳಿದರು.‘69 ಪ್ರಕರಣಗಳ ಪೈಕಿ 47 ಪ್ರೇಮ ಪ್ರಕರಣಗಳಿವೆ. ಉಳಿದಂತೆ ಏಕ ಪಾಲಕರ ಕುಟುಂಬದಲ್ಲಿ 6 ಕಲಿಕೆ ನಿರಾಸಕ್ತಿ ಹಾಗೂ ಶೈಕ್ಷಣಿಕ ಸೌಲಭ್ಯಗಳ ಕೊರತೆಯಿಂದ 6 ಕುಟುಂಬದ ಒತ್ತಡದಿಂದ 7 ಸಂಬಂಧಲ್ಲಿ ಮದುವೆ ಮಾಡುವ ಇಚ್ಛೆಯಿಂದ 2 ಆರ್ಥಿಕ ಕಾರಣದಿಂದ 1 ಬಾಲ ತಾಯಂದಿರ ಪ್ರಕರಣಗಳು ಸಂಭವಿಸಿವೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.