ADVERTISEMENT

ಬೆಳೆ ವಿಮೆಗೆ ಕಾಲಮಿತಿ ನಿಗದಿಪಡಿಸಿ: ಜಿಲ್ಲಾಧಿಕಾರಿ ಕವಿತಾ ಎಸ್‌.ಮನ್ನಿಕೇರಿ

ಜಿಲ್ಲಾಧಿಕಾರಿಗೆ ರೈತ ಮುಖಂಡರ ಮನವಿ, ವಿಮಾ ಕಂಪನಿ ವಿರುದ್ಧ ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2020, 13:59 IST
Last Updated 27 ಅಕ್ಟೋಬರ್ 2020, 13:59 IST
ಕವಿತಾ ಎಸ್.ಮನ್ನಿಕೇರಿ
ಕವಿತಾ ಎಸ್.ಮನ್ನಿಕೇರಿ   

ಚಿತ್ರದುರ್ಗ: ಬೆಳೆ ವಿಮೆ ಕಂತು ಪಾವತಿಗೆ ಕಾಲಮಿತಿ ನಿಗದಿಪಡಿಸಿದ ಮಾದರಿಯಲ್ಲೇ ಪರಿಹಾರದ ಮೊತ್ತ ವಿತರಣೆಗೆ ಕಂಪನಿಗಳಿಗೆ ಕಾಲಮಿತಿ ನಿಗದಿಪಡಿಸಬೇಕು ಎಂದು ರೈತ ಮುಖಂಡರು ಜಿಲ್ಲಾಧಿಕಾರಿ ಕವಿತಾ ಎಸ್‌.ಮನ್ನಿಕೇರಿ ಅವರಿಗೆ ಮನವಿ ಮಾಡಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಬೆಳೆ ವಿಮೆಗೆ ಸಂಬಂಧಿಸಿದಂತೆ ಮಂಗಳವಾರ ನಡೆದ ಸಭೆಯಲ್ಲಿ ರೈತರು ಒಕ್ಕೊರಲಿನಿಂದ ಈ ಬೇಡಿಕೆಯನ್ನು ಮುಂದಿಟ್ಟರು. ವಿಮಾ ಕಂಪನಿಗಳ ವಿರುದ್ಧ ಹರಿಹಾಯ್ದರು.

‘2016 ರಿಂದ ಈವರೆಗೂ ವಿಮಾ ಕಂಪನಿಗಳು ಸರಿಯಾದ ರೀತಿಯಲ್ಲಿ ಪರಿಹಾರ ನೀಡಿಲ್ಲ. ಆಧಾರ್ ಕಾರ್ಡ್, ಬ್ಯಾಂಕ್ ಖಾತೆ ಸರಿಯಿಲ್ಲ ಎಂಬ ಸಬೂಬು ಹೇಳಿ ರೈತರನ್ನು ವಂಚಿಸುತ್ತಿವೆ. ಪರಿಹಾರಕ್ಕೆ ಅಲೆದು ರೈತರು ಸಾಕಾಗಿದ್ದಾರೆ. ಅನೇಕರು ಕಂತು ಪಾವತಿಸುವುದನ್ನು ಕೈಬಿಟ್ಟಿದ್ದಾರೆ’ ಎಂದು ರೈತರು ಜಿಲ್ಲಾಧಿಕಾರಿ ಗಮನ ಸೆಳೆದರು.

ADVERTISEMENT

‘ಅಕಾಲಿಕ ಮಳೆಯಿಂದಾಗಿ ಜಿಲ್ಲೆಯಲ್ಲಿ ಶೇ 75ಕ್ಕಿಂತ ಹೆಚ್ಚಿನ ಪ್ರಮಾಣ ಬೆಳೆ ನಷ್ಟವಾಗಿದೆ. ಈ ಬಗ್ಗೆ ಕೂಡಲೇ ಬೆಳೆ ಸಮೀಕ್ಷೆ ಆಗಬೇಕು. ಶೇಂಗಾ, ರಾಗಿ, ಮೆಕ್ಕೆಜೋಳ ಖರೀದಿ ಕೇಂದ್ರ ತೆರೆಯಬೇಕು. ರೈತರಿಗೆ ನ್ಯಾಯಯುತ ಪರಿಹಾರ ದೊರೆಯಬೇಕು’ ಎಂದು ಆಗ್ರಹಿಸಿದರು.

ಕೃಷಿ ಇಲಾಖೆ ಜಂಟಿ ನಿರ್ದೇಶಕ ವಿ.ಸದಾಶಿವ ಮಾತನಾಡಿ, ‘2019-20ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ 76,538 ರೈತರು ಕರ್ನಾಟಕ ರೈತ ಸುರಕ್ಷಾ, ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಯಡಿ ನೋಂದಣಿ ಮಾಡಿಸಿದ್ದರು. ಈ ಪೈಕಿ 50,577 ಫಲಾನುಭವಿಗಳಿಗೆ ₹71 ಕೋಟಿ ವಿಮಾ ಪರಿಹಾರ ಪಾವತಿಸಲಾಗಿದೆ. 2020-21ನೇ ಸಾಲಿನ ಮುಂಗಾರು ಹಂಗಾಮಿಗೆ 85,912 ರೈತರು ಬೆಳೆ ವಿಮೆ ನೋಂದಣಿ ಮಾಡಿಸಿದ್ದಾರೆ’ ಎಂದು ಮಾಹಿತಿ ನೀಡಿದರು.

ಕಳಪೆ ಈರುಳ್ಳಿ ಬೀಜ: ಕ್ರಮ

ಕಳಪೆ ಗುಣಮಟ್ಟದ ಈರುಳ್ಳಿ ಪೂರೈಸಿದ ಮಾರಾಟಗಾರರ ವಿರುದ್ಧ ಯಾವ ಕ್ರಮ ಕೈಗೊಂಡಿದ್ದೀರಿ ಎಂದು ಜಿಲ್ಲಾಧಿಕಾರಿ ಕವಿತಾ ಅವರು ತೋಟಗಾರಿಕೆ ಇಲಾಖೆ ಉಪನಿರ್ದೇಶಕಿ ಸವಿತಾ ಅವರನ್ನು ಪ್ರಶ್ನಿಸಿದರು. ಕಳಪೆ ಗುಣಮಟ್ಟದ ಈರುಳ್ಳಿ ಬೀಜದ ಬಗ್ಗೆ ರೈತರು ಅಸಮಾಧಾನ ವ್ಯಕ್ತಪಡಿಸಿದರು.

‘ರೈತರು ಆರೋಪ ಮಾಡಿದ ಬಿತ್ತನೆ ಬೀಜಗಳನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ವರದಿ ಬಂದ ಬಳಿಕ ಶಿಸ್ತು ಕ್ರಮ ಕೈಗೊಳ್ಳಲಾಗುವುದು’ ಎಂದು ಸವಿತಾ ಸಭೆಗೆ ಮಾಹಿತಿ ನೀಡಿದರು.

ಪಶುಸಂಗೋಪನಾ ಇಲಾಖೆ ಉಪನಿರ್ದೇಶಕ ಡಾ.ಕೃಷ್ಣಪ್ಪ, ಜಿಲ್ಲಾ ಕೈಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಹನುಮಂತರಾಜು, ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ.ಓಂಕಾರಪ್ಪ ಇದ್ದರು.

ವಿಮಾ ಕಂಪನಿ ರೈತರಿಗೆ ಸರಿಯಾಗಿ ಮಾಹಿತಿ ನೀಡಬೇಕು. ರೈತರೊಂದಿಗೆ ತಾಳ್ಮೆಯಿಂದ ವರ್ತಿಸಬೇಕು. ವಿಮೆ ಶೀಘ್ರ ಪಾವತಿಗೆ ಕ್ರಮ ಕೈಗೊಳ್ಳಲಾಗುವುದು.
-ಕವಿತಾ ಎಸ್.ಮನ್ನಿಕೇರಿ
ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.