ADVERTISEMENT

ಕುಷ್ಠರೋಗ ಮುಕ್ತ ಜಿಲ್ಲೆಗೆ ಪಣ: ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ ಸಂದೇಶ

​ಪ್ರಜಾವಾಣಿ ವಾರ್ತೆ
Published 26 ಜನವರಿ 2023, 5:29 IST
Last Updated 26 ಜನವರಿ 2023, 5:29 IST
ದಿವ್ಯ ಪ್ರಭು
ದಿವ್ಯ ಪ್ರಭು   

ಚಿತ್ರದುರ್ಗ: ಕುಷ್ಠ ರೋಗಿಗಳ ವಿರುದ್ಧ ಕಳಂಕ ಹಾಗೂ ತಾರತಮ್ಯ ಮನೋಭಾವ ಸಲ್ಲದು. ಅವರನ್ನು ಮುಖ್ಯವಾಹಿನಿಗೆ ತಂದು ಸೂಕ್ತ ಚಿಕಿತ್ಸೆ ನೀಡಲು ಪ್ರಯತ್ನಿಸಬೇಕು ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ ಹೇಳಿದರು.

ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ಕುಷ್ಠರೋಗ ಅರಿವು ಆಂದೋಲನ ಕಾರ್ಯಕ್ರಮ ಅನುಷ್ಠಾನ ಕುರಿತು ಜಿಲ್ಲಾ ಮಟ್ಟದ ಅಂತರ್ ಇಲಾಖಾ ಸಮನ್ವಯ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.

‘ಜ. 30ರಂದು ಮಹಾತ್ಮ ಗಾಂಧೀಜಿ ಅವರ 75ನೇ ಹುತಾತ್ಮ ದಿನಾಚರಣೆ ಅಂಗವಾಗಿ ಜಿಲ್ಲೆಯಲ್ಲಿ ಸ್ಪರ್ಶ್ ಕುಷ್ಠ ಅರಿವು ಆಂದೋಲನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಜಿಲ್ಲೆಯಲ್ಲಿರುವ ಸಂಪನ್ಮೂಲಗಳನ್ನು ಬಳಸಿಕೊಂಡು ನಾವೆಲ್ಲರೂ ಜಿಲ್ಲೆಯನ್ನು ಕುಷ್ಠರೋಗದಿಂದ ಮುಕ್ತಗೊಳಿಸಲು ಪಣ ತೊಟ್ಟು ಬದ್ಧರಾಗಬೇಕು’ ಎಂದು ಹೇಳಿದರು.

ADVERTISEMENT

ಕುಷ್ಠರೋಗವನ್ನು ಸುಲಭವಾಗಿ ಪತ್ತೆ ಹಚ್ಚಿ ಸಂಪೂರ್ಣವಾಗಿ ಗುಣಪಡಿಸಬಹುದು. ಜನರಲ್ಲಿ ಈ ಕುರಿತು ಅರಿವು ಮೂಡಿಸಬೇಕು. ನಗರ ಸಭೆ, ಪುರಸಭೆ, ಪಟ್ಟಣ ಹಾಗೂ ಗ್ರಾಮ ಪಂಚಾಯಿತಿ ಕಸ ಸಂಗ್ರಹಣದ ವಾಹನಗಳಲ್ಲಿ ಅಭಿಯಾನದ ಕುರಿತು ಆಡಿಯೊ ಜಿಂಗಲ್ ಮೂಲಕ ಪ್ರಚುರಪಡಿಸಬೇಕು. ಮಕ್ಕಳಿಗೆ ಕುಷ್ಠ, ಟಿ.ಬಿ. ಮಲೇರಿಯಾ ರೋಗಗಳ ಕುರಿತು ಶಾಲೆಗಳಲ್ಲಿ ತಿಳಿವಳಿಕೆ ನೀಡಬೇಕು ಎಂದರು.

‘ಜಿಲ್ಲೆಯಲ್ಲಿ 64 ಕುಷ್ಠರೋಗಿಗಳು ಇದ್ದು, ಅವರಿಗೆ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ. ಪ್ರಸಕ್ತ ವರ್ಷ ಜರುಗಿದ ಕುಷ್ಠರೋಗ ಪತ್ತೆ ಸಮೀಕ್ಷಾ ಅಭಿಯಾನದಲ್ಲಿ 27 ಪ್ರಕರಣಗಳು ಕಂಡುಬಂದಿವೆ. ಜ. 30ರಿಂದ ಫೆ.13ರವರೆಗೆ ಕುಷ್ಠರೋಗ ಅರಿವು ಪಾಕ್ಷಿಕ ಆಚರಿಸಲು ಸಿದ್ಧತೆ ಕೈಗೊಳ್ಳಲಾಗಿದೆ’ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಚ್.ರಂಗನಾಥ ಹೇಳಿದರು.

ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಡಾ.ರಂಗನಾಥ್, ಕುಷ್ಠರೋಗ ನಿರ್ಮೂಲನಾಧಿಕಾರಿ ಡಾ.ಚಂದ್ರಶೇಖರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.