
ಮೊಳಕಾಲ್ಮುರು: ಪತಿಯ ಮರಣ ಪ್ರಮಾಣಪತ್ರಕ್ಕಾಗಿ ಅರ್ಜಿ ಸಲ್ಲಿಸಿದ್ದ ಅರ್ಜಿದಾರ ಮಹಿಳೆಯೇ ಮೃತಪಟ್ಟಿರುವುದಾಗಿ ಘೋಷಿಸಿ ಪ್ರಮಾಣಪತ್ರ ನೀಡುವ ಮೂಲಕ ಆರೋಗ್ಯ ಇಲಾಖೆ ಯಡವಟ್ಟು ಮಾಡಿದ್ದು, ಬೆಳಕಿಗೆ ಬಂದಿದೆ.
ಇಲ್ಲಿನ ಸಾರ್ವಜನಿಕ ಆಸ್ಪತ್ರೆ ಸಿಬ್ಬಂದಿಯು ಈ ಸಮಸ್ಯೆ ಉಂಟು ಮಾಡಿರುವ ಪರಿಣಾಮ ಸಂತ್ರಸ್ತ ಕುಟುಂಬ ಸಮಸ್ಯೆ ಸರಿಪಡಿಸಿಕೊಳ್ಳಲು ಒಂದು ವರ್ಷದಿಂದ ಕಚೇರಿಗೆ ಅಲೆದಾಡುತ್ತಿದೆ. ಇನ್ನೂ ಪರಿಹಾರವ ದೊರೆತಿಲ್ಲ ಎಂದು ವರದಿಯಾಗಿದೆ.
ಘಟನೆ ವಿವರ: ಪಟ್ಟಣದ ದವಳಪ್ಪನ ಬೀದಿ ಬಡಾವಣೆಯ ಸಿ. ತಿಮ್ಮರಾಜು ಎಂಬವರು 2024ರ ನ. 28ರಂದು ಅನಾರೋಗ್ಯದಿಂದ ಸ್ಥಳೀಯ ತಾಲ್ಲೂಕು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಒಂದು ತಿಂಗಳ ನಂತರ ಪತ್ನಿ ಡಿ.ಪುಷ್ಪಾವತಿ ಅವರು ಪತಿಯ ಮರಣ ಪ್ರಮಾಣಪತ್ರಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಆಗ ನೀಡಿದ್ದ ಪ್ರಮಾಣಪತ್ರದಲ್ಲಿ ತಿಮ್ಮರಾಜು ಅವರ ತಾಯಿಯ ಹೆಸರು ತಪ್ಪಾಗಿ ನಮೂದಾಗಿತ್ತು. ಮತ್ತೆ ಪುಷ್ಪವತಿ ಹೊಸದಾಗಿ ಅರ್ಜಿ ಸಲ್ಲಿಸಿದ್ದರು.
2ನೇ ಸಲ ನೀಡಿದ ಪ್ರಮಾಣ ಪತ್ರವನ್ನು ಕೆಲವು ದಿನಗಳ ನಂತರ ತಾಲ್ಲೂಕು ಕಚೇರಿಗೆ ಆದಾಯ ಮತ್ತು ಜಾತಿ ಪ್ರಮಾಣ ಪತ್ರಕ್ಕೆ ಸಲ್ಲಿಸಿದಾಗ ಪುಷ್ಪಾವತಿ ಅವರಿಗೆ ಅಚ್ಚರಿಯ ಪ್ರಶ್ನೆ ಎದುರಾಗಿತ್ತು. ಪತಿ ಮರಣ ಪ್ರಮಾಣಪತ್ರದಲ್ಲಿ ಮೃತರ ಕಾಲಂನಲ್ಲಿ ತನ್ನ ಹೆಸರನ್ನೇ ನಮೂದಿಸುವ ಮೂಲಕ ಅರ್ಜಿದಾರರಾದ ಪುಷ್ಪವತಿಯೇ ಮೃತಪಟ್ಟಿದ್ದಾರೆ ಎಂದು ಘೋಷಿಸಿ ಪ್ರಮಾಣಪತ್ರ ನೀಡಲಾಗಿತ್ತು. ಇದರಿಂದ ತಬ್ಬಿಬ್ಬಾದ ಪುಷ್ಪಾವತಿ ಮತ್ತೆ ತಪ್ಪು ತಿದ್ದಿಸಲು ತಾಲ್ಲೂಕು ಆಸ್ಪತ್ರೆ ಕಚೇರಿ ಅರ್ಜಿ ಸಲ್ಲಿಸಿದರು.
ಹಲವು ತಿಂಗಳುಗಳಿಂದ ತಿದ್ದುಪಡಿ ಪ್ರಮಾಣಪತ್ರಕ್ಕೆ ಅಲೆದಾಡುತ್ತಿದ್ದರೂ ಪ್ರಯೋಜನವಾಗಿಲ್ಲ. ಇಲ್ಲದ ಸಬೂಬು ಹೇಳುತ್ತಿದ್ದಾರೆ ಎಂದು ಪುಷ್ಪವತಿ ದೂರಿದ್ದಾರೆ.
‘ತಪ್ಪು ಪ್ರಮಾಣಪತ್ರ ನೀಡಿರುವ ಪರಿಣಾಮ ವಿಧವಾ ವೇತನಕ್ಕೆ ಅರ್ಜಿ ಸಲ್ಲಿಸಲು ಮತ್ತು ಮಕ್ಕಳ ವಿದ್ಯಾಭ್ಯಾಸಕ್ಕೆ ಅಗತ್ಯ ದಾಖಲೆ ಸಲ್ಲಿಸಲು ತೊಂದರೆಯಾಗಿದೆ. ನನ್ನದಲ್ಲದ ತಪ್ಪಿಗೆ ಒಂದು ವರ್ಷದಿಂದ ಮಾನಸಿಕವಾಗಿ ಹಿಂಸೆ ಅನುಭವಿಸುತ್ತಿದ್ದೇನೆ. ಸಂಬಂಧಪಟ್ಟ ಹಿರಿಯ ಅಧಿಕಾರಿಗಳು ಗಮನಹರಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು’ ಎಂದು ಮನವಿ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.