ADVERTISEMENT

ವಿದ್ಯುತ್ ತಂತಿ ತುಳಿದು ವ್ಯಕ್ತಿ ಸಾವು

ನಗರಸಭೆ ಮುಂದೆ ಶವವಿಟ್ಟು ಸಾರ್ವಜನಿಕರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2021, 5:38 IST
Last Updated 6 ಡಿಸೆಂಬರ್ 2021, 5:38 IST
ವಿದ್ಯುತ್‌ ತಂತಿ ತುಳಿದು ಮೃತಪಟ್ಟ ಕೂಲಿಕಾರ್ಮಿಕ ಫಕೃದ್ದೀನ್‌ ಮೃತದೇಹವನ್ನು ಹಿರಿಯೂರು ನಗರಸಭೆ ಕಚೇರಿ ಮುಂದೆ ಇರಿಸಿ ಪ್ರತಿಭಟನೆ ನಡೆಸಲಾಯಿತು.
ವಿದ್ಯುತ್‌ ತಂತಿ ತುಳಿದು ಮೃತಪಟ್ಟ ಕೂಲಿಕಾರ್ಮಿಕ ಫಕೃದ್ದೀನ್‌ ಮೃತದೇಹವನ್ನು ಹಿರಿಯೂರು ನಗರಸಭೆ ಕಚೇರಿ ಮುಂದೆ ಇರಿಸಿ ಪ್ರತಿಭಟನೆ ನಡೆಸಲಾಯಿತು.   

ಹಿರಿಯೂರು: ನಗರದ ಪ್ರಧಾನ ರಸ್ತೆ ವಿಭಜಕದ ನಡುವೆ ಅಳವಡಿಸಿದ್ದ ಬೀದಿ ದೀಪಗಳ ತಂತಿ ತುಳಿದು ಶನಿವಾರ ರಾತ್ರಿ ಮೃತಪಟ್ಟ ವ್ಯಕ್ತಿಯ ಶವವನ್ನು ನಗರಸಭೆ ಮುಂದಿಟ್ಟು ಮೃತನ ಸಂಬಂಧಿಕರು, ಸಾರ್ವಜನಿಕರು ಭಾನುವಾರ ಪ್ರತಿಭಟನೆ ನಡೆಸಿದರು.

ಫಕೃದ್ದೀನ್ ಎಂಬುವವರು ಗಾರೆ ಕೆಲಸಕ್ಕೆ ಬೇಕಿದ್ದ ಸಾಮಗ್ರಿ ಖರೀದಿಸಿ ಬರುವಾಗ ಎದುರಿನಿಂದ ಬಂದ ವಾಹನದಿಂದ ತಪ್ಪಿಸಿಕೊಳ್ಳಲು ರಸ್ತೆ ವಿಭಜಕದ ಮೇಲೆ ಹತ್ತಿದ್ದಾರೆ. ಆ ವೇಳೆ ಬೀದಿ ದೀಪಕ್ಕೆ ಅಳವಡಿಸಿದ್ದ ವಿದ್ಯುತ್ ತಂತಿ ತುಳಿದು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ನಗರಸಭೆಯ ಬೇಕಾಬಿಟ್ಟಿ ನಿರ್ವಹಣೆಯೇ ಫಕೃದ್ದೀನ್‌ ಸಾವಿಗೆ ಕಾರಣ ಎಂದು ಆಕ್ರೋಶಗೊಂಡ ನೂರಾರು ಜನ ಮರಣೋತ್ತರ ಪರೀಕ್ಷೆಯ ನಂತರ ಶವವನ್ನು ನಗರಸಭೆ ಕಚೇರಿ ಮುಂದಕ್ಕೆ ತಂದು ನಗರಸಭೆ ಆಡಳಿತದ ವಿರುದ್ಧ ಧಿಕ್ಕಾರ ಕೂಗಿ, ಮೃತನ ಕುಟುಂಬಕ್ಕೆ ಪರಿಹಾರ ನೀಡುವಂತೆ ಒತ್ತಾಯಿಸಿದರು.

ವಾಗ್ವಾದ: ಮರಣೋತ್ತರ ಪರೀಕ್ಷೆ ನಡೆಯುತ್ತಿದ್ದ ಸ್ಥಳಕ್ಕೆ ಮಾಜಿ ಸಚಿವ ಡಿ. ಸುಧಾಕರ್ ಆಗಮಿಸುತ್ತಿದ್ದಂತೆ ನಗರಸಭೆ ಸದಸ್ಯ ದಾದಾಪೀರ್, ‘ನಗರಸಭೆಯಲ್ಲಿ ಏನು ನಡೆಯುತ್ತಿದೆ ಎಂಬುದು ಸದಸ್ಯನಾದ ನನಗೇ ಗೊತ್ತಿಲ್ಲ. ಅಧ್ಯಕ್ಷರ ಪೋನ್ ನಂಬರ್ ಸದಸ್ಯರ ಬಳಿ ಇಲ್ಲ. ನಗರಸಭೆ ಅವ್ಯವಸ್ಥೆಗೆ ಬಡ ಕೂಲಿಯವ ಬಲಿಯಾಗಿದ್ದಾನೆ. ವಿದ್ಯುತ್‌ ನಿರ್ವಹಣೆ ಅವ್ಯವಸ್ಥೆಯಿಂದ ಇನ್ನೆಷ್ಟು ಜನರು ಬಲಿಯಾಗಬೇಕು? ವ್ಯವಸ್ಥೆಯನ್ನು ಸರಿಪಡಿಸಬೇಕು. ಇಲ್ಲದಿದ್ದರೆ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ’ ಎಂದು ಎಚ್ಚರಿಸಿದರು.

ADVERTISEMENT

‘ಎಲ್ಲರ ಜೊತೆ ಮಾತನಾಡಿ ಸಮಸ್ಯೆ ಸರಿಪಡಿಸುತ್ತೇನೆ’ ಎಂದು ಡಿ. ಸುಧಾಕರ್ ಭರವಸೆ ನೀಡಿ ಹೊರಟು ಹೋದರು.

ಕೊಲೆ ಮೊಕದ್ದಮೆ ದಾಖಲಿಸಲು ಆಗ್ರಹ: ‘ಫಕೃದ್ದೀನ್ ಸಾವಿಗೆ ವಿದ್ಯುತ್ ದೀಪ ನಿರ್ವಹಣೆಯ ಗುತ್ತಿಗೆ ಪಡೆದವರೇ ಕಾರಣರಾಗಿದ್ದು, ಅವರನ್ನು ತಕ್ಷಣ ಬಂಧಿಸಿ, ಕೊಲೆ ಮೊಕದ್ದಮೆ ದಾಖಲಿಸಬೇಕು. ಷರತ್ತುಗಳನ್ನು ಪಾಲಿಸದ ಗುತ್ತಿಗೆದಾರರ ವಿರುದ್ಧ ಕ್ರಮಕ್ಕೆ ಶಿಫಾರಸು ಮಾಡದ ನಗರಸಭೆ ಎಂಜಿನಿಯರ್‌ಗಳ ವಿರುದ್ಧವೂ ಕ್ರಮ ಜರುಗಿಸಬೇಕು. ಘಟನೆ ಬಗ್ಗೆ ಎಸಿಬಿ ಅಥವಾ ಸಿಒಡಿ ತನಿಖೆ ನಡೆಸಬೇಕು’ ಎಂದು ನಗರಸಭೆ ಮಾಜಿ ಸದಸ್ಯ ಪ್ರೇಮ್ ಕುಮಾರ್ ಒತ್ತಾಯಿಸಿದರು.

‘ಫಕೃದ್ದೀನ್ ಅವರಿಗೆ ಮೂವರು ಹೆಣ್ಣುಮಕ್ಕಳಿದ್ದಾರೆ. ಆತನ ಕೂಲಿಯಿಂದಲೇ ಇಡೀ ಸಂಸಾರ ನಡೆಯುತ್ತಿತ್ತು. ಮೂವರು ಮಕ್ಕಳಲ್ಲಿ ಒಬ್ಬರಿಗೆ ನಗರಸಭೆಯಲ್ಲಿ ಕೆಲಸ ಕೊಡಿಸಬೇಕು. ಕನಿಷ್ಠ ₹ 50 ಲಕ್ಷ ಪರಿಹಾರ ನೀಡಬೇಕು’ ಎಂದು ಇಸ್ಮಾಯಿಲ್ ಒತ್ತಾಯಿಸಿದರು.

ನಗರಠಾಣೆ ಪೊಲೀಸರು ಮನವೊಲಿಸಿದ ನಂತರ ಅಂತ್ಯಸಂಸ್ಕಾರಕ್ಕೆ ಒಯ್ಯಲಾಯಿತು.

ಕೋಟ್‌...

ದೇವನಹಳ್ಳಿಯ ನಟರಾಜ್ ಎಂಬುವವರಿಗೆ ವಿದ್ಯುತ್ ದೀಪ ನಿರ್ವಹಣೆಯ ಗುತ್ತಿಗೆ ನೀಡಲಾಗಿದೆ. ಏನೇ ಅವಘಡಗಳು ನಡೆದರೂ ಅದಕ್ಕೆ ಗುತ್ತಿಗೆದಾರರೇ ಹೊಣೆ. ಎಲೆಕ್ಟ್ರಿಕಲ್ ಎಂಜಿನಿಯರ್ ಅವರಿಂದ ಘಟನೆ ಬಗ್ಗೆ ವಿವರ ಪಡೆದುಕೊಳ್ಳಲಾಗುವುದು.

ಉಮೇಶ್, ಪೌರಾಯುಕ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.