ADVERTISEMENT

ಮಾಸ್ಕ್‌ಗಳಿಗೆ ಬೇಡಿಕೆ ಕುಸಿತ

ಬಂಡವಾಳ ವಾಪಸ್ ಬಂದರೆ ಸಾಕು ಎನ್ನುತ್ತಿರುವ ಮಾಸ್ಕ್‌ ತಯಾರಕರು

ಕೊಂಡ್ಲಹಳ್ಳಿ ಜಯಪ್ರಕಾಶ
Published 22 ಡಿಸೆಂಬರ್ 2020, 4:36 IST
Last Updated 22 ಡಿಸೆಂಬರ್ 2020, 4:36 IST
ದಾಸ್ತಾನು ಇರುವ ಮಾಸ್ಕ್‌ಗಳು
ದಾಸ್ತಾನು ಇರುವ ಮಾಸ್ಕ್‌ಗಳು   

ಮೊಳಕಾಲ್ಮುರು: ಕೊರೊನಾ ಕಾರಣದಿಂದ ಮಾಸ್ಕ್‌ಗಳಿಗೆ ಹೆಚ್ಚಿದ್ದ ಬೇಡಿಕೆಯು ರೋಗ ನಿಯಂತ್ರಣಕ್ಕೆ ಬರುತ್ತಿರುವುದರಿಂದ ಕುಸಿತದ ಹಾದಿಯಲ್ಲಿ ಸಾಗುತ್ತಿದೆ. ಇದರಿಂದಾಗಿ ಇದೀಗ ಮಾಸ್ಕ್ ತಯಾರಕರು ಸಂಕಷ್ಟಕ್ಕೆ ಒಳಗಾಗಿದ್ದಾರೆ.

ಜಿಲ್ಲೆಯ ಮಟ್ಟಿಗೆ ಮತ್ತು ಹೊರ ಜಿಲ್ಲೆಗಳಿಗೆ ಕೊರೊನಾ ಸಮಯದಲ್ಲಿ ಮೊಳಕಾಲ್ಮುರು ಪಟ್ಟಣ ಹಾಗೂ ಆಂಧ್ರಪ್ರದೇಶದ ಗಡಿಭಾಗದ ಹಲವು ಗ್ರಾಮಗಳ ಮತ್ತು ನೆರೆಯ ರಾಯದುರ್ಗದಲ್ಲಿ ಮಾಸ್ಕ್‌ಗಳ ತಯಾರಿಕೆ ನಡೆದಿತ್ತು. ಬೆಂಗಳೂರು, ದಾವಣಗೆರೆ, ಹುಬ್ಬಳ್ಳಿ, ತುಮಕೂರು ಮುಂತಾದ ಜಿಲ್ಲೆಗಳಿಗೆ ಇಲ್ಲಿಂದ ಪೂರೈಕೆ ಮಾಡಲಾಗಿತ್ತು ಎಂಬುದು ಗಮನಾರ್ಹ.

ಸಗಟು ಮಾಸ್ಕ್ ತಯಾರಕ ರಾಯದುರ್ಗದ ಫಾರೂಕ್, ‘ಕೊರೊನಾ ವೇಳೆಯಲ್ಲಿ ಜೀನ್ಸ್ ಪ್ಯಾಂಟ್ ಹೊಲಿಯುತ್ತಿದ್ದ ಬಹುತೇಕರ ಮನೆಯಲ್ಲೂ ಕುಟುಂಬಸ್ಥರು ಸೇರಿಕೊಂಡು ನಿತ್ಯ 100 ಲೆಕ್ಕದಲ್ಲಿ ಮಾಸ್ಕ್‌ಗಳನ್ನು ಹೊಲಿಯುತ್ತಿದ್ದರು. 20-25 ಸಾವಿರ ಮಾಸ್ಕ್‌ಗಳ ವಹಿವಾಟನ್ನು ನೂರಾರು ಜನ ನಡೆಸಿದ್ದಾರೆ. 20ಕ್ಕೂ ಹೆಚ್ಚಿನ ಮಂದಿ ಒಂದು ಲಕ್ಷಕ್ಕೂ ಹೆಚ್ಚು ಮಾಸ್ಕ್ ತಯಾರಿಸುತ್ತಿದ್ದರು. 5,000ಕ್ಕೂ ಹೆಚ್ಚು ಜೀನ್ಸ್ ಉದ್ಯಮದ ಕಾರ್ಮಿಕರು ಇದರಲ್ಲಿ ತೊಡಗಿಸಿಕೊಂಡಿದ್ದರು’ ಎಂದು ಹೇಳಿದರು.

ADVERTISEMENT

‘ಕೋವಿಡ್ ಪ್ರಮಾಣ ಹೆಚ್ಚಾಗಿದ್ದ ಸಮಯಕ್ಕೆ ಹೋಲಿಸಿದರೆ ಮಾಸ್ಕ್ ಬೇಡಿಕೆ ಪ್ರಮಾಣ ಶೇ 90ರಷ್ಟು ಕುಸಿದಿದೆ. ತಯಾರಿಕೆ ಪ್ರಮಾಣ ಶೇ 100ರಷ್ಟು ಸ್ಥಗಿತವಾಗಿದೆ. ಮಾಸ್ಕ್‌ಗೆ ಬೇಕಾದ ಕಚ್ಚಾ ವಸ್ತುಗಳ ದರ ಹೆಚ್ಚಳವಾಗಿರುವ ಕಾರಣ ಲಾಭಾಂಶವೂ ಸಿಗುತ್ತಿಲ್ಲ. ಈ ಎರಡು ಕಾರಣದಿಂದಾಗಿ ‘ಹಾಕಿರುವ ಬಂಡವಾಳ ಮತ್ತು ಕೊಟ್ಟಿರುವ ಕೂಲಿ ಹಣ ವಾಪಸ್ ಬಂದರೆ ಸಾಕಪ್ಪಾ’ ಎಂಬ ಸ್ಥಿತಿ ನಿರ್ಮಾಣವಾಗಿದೆ. ಅಂದಾಜು ಪ್ರಕಾರ ಈ ಭಾಗದಲ್ಲಿ 20 ಲಕ್ಷಕ್ಕೂ ಹೆಚ್ಚು ಸರ್ಜಿಕಲ್ ಮಾಸ್ಕ್, ಸಾವಿರರು ಜೀನ್ಸ್ ಮಾಸ್ಕ್‌ಗಳ ದಾಸ್ತಾನು ಉಳಿದಿವೆ. ಇವುಗಳ ಮಾರಾಟ ಹೇಗಪ್ಪಾ ಎನ್ನುವಂತಾಗಿದೆ. ಸರ್ಕಾರ ಗಮನಹರಿಸಿ ಮಾಸ್ಕ್‌ಗಳನ್ನು ಕೊಂಡುಕೊಂಡಲ್ಲಿ ತುಸು ಅನುಕೂಲವಾಗುತ್ತದೆ’ ಎಂದು ತಯಾರಕ ರಾಘವೇಂದ್ರ ಮನವಿ ಮಾಡಿದರು.

‘ಜನರು ಮಾಸ್ಕ್ ಕೊಳ್ಳಲು ಮುಂದಾಗದ ಕಾರಣ ನಾವು ದುಬಾರಿ ದರಕ್ಕೆ ಕೊಂಡಿದ್ದರೂ ಈಗ ಸಿಕ್ಕಷ್ಟು ದರಕ್ಕೆ ನೀಡಿ ಖಾಲಿ ಮಾಡಿಕೊಳ್ಳುತ್ತಿದ್ದೇವೆ. ಸರ್ಜಿಕಲ್ ಮಾಸ್ಕ್ ₹ 30 ಆಸುಪಾಸಿನಲ್ಲಿ ಕೊಂಡು ಮಾರಾಟ ಮಾಡಿದ್ದೆವು. ಈಗ ಇದು ₹ 5 ಆಸುಪಾಸಿನಲ್ಲಿ ಮಾರಾಟ ಮಾಡಲಾಗುತ್ತಿದೆ. ಇದನ್ನೂ ಕೇಳುತ್ತಿಲ್ಲ. ಮುಂದೆ ಲಸಿಕೆ ಬಂದು ಪೂರ್ತಿ ಬೇಡಿಕೆ ಇಲ್ಲದಾಗುವ ಸಾಧ್ಯತೆ ಇರುವ ಆತಂಕದಿಂದಾಗಿ ನಷ್ಟವಾರೂ ಇರುವುದನ್ನು ಖಾಲಿ ಮಾಡಿಕೊಳ್ಳುತ್ತಿದ್ದೇವೆ’ ಎಂಬುದು ಇಲ್ಲಿನ ಅಂಗಡಿ ವ್ಯಾಪಾರಿ ನುಂಕೇಶ್ ಅಭಿಪ್ರಾಯ.

‘ತಾಲ್ಲೂಕಿನ ಗಡಿ ಗ್ರಾಮಗಳಲ್ಲಿ ಸಾವಿರಾರು ಜನರು ಜೀನ್ಸ್ ಪ್ಯಾಂಟ್ ಹೊಲಿಯುವ ಕೆಲಸದಲ್ಲಿ ತೊಡಗಿಸಿ ಬದುಕು ಕಟ್ಟಿಕೊಂಡಿದ್ದಾರೆ. ಜೀವನ ಚೇತರಿಕೆ ಹಾದಿಯಲ್ಲಿ ಮರಳಿರುವುದು ಸಂತಸದ ಸಂಗತಿ. ಯಾವಾಗಲೋ ಒಮ್ಮೆ ಸಿಕ್ಕಿರುವ ಮಾಸ್ಕ್ ಲಾಭಕ್ಕಿಂತ ವರ್ಷ ಪೂರ್ತಿ ನಮಗೆ ಹೊಟ್ಟೆಪಾಡಿಗೆ ಆಸರೆಯಾಗಿರುವ ಜೀನ್ಸ್ ಬೆಳೆಯಬೇಕಿದೆ’ ಎಂದು ಉದ್ಯಮಿ ನಾಗರಾಜ್ ಅನಿಸಿಕೆ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.