ADVERTISEMENT

ಮುಸ್ಲಿಂ ಮೀಸಲಾತಿ ಪುನರ್ ‌ಸ್ಥಾಪಿಸಲು ಒತ್ತಾಯ

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2023, 5:29 IST
Last Updated 28 ಮಾರ್ಚ್ 2023, 5:29 IST
ಮುಸ್ಲಿಂ ಮೀಸಲಾತಿಯನ್ನು ಪುನರ್ ಸ್ಥಾಪಿಸಲು ಒತ್ತಾಯಿಸಿ ಹೊಸದುರ್ಗದಲ್ಲಿ ಸೋಮವಾರ ಎಸ್.ಡಿ.ಪಿ.ಐಯಿಂದ ತಹಶೀಲ್ದಾರ್‌ಗೆ ಮಾನವಿ ಸಲ್ಲಿಸಲಾಯಿತು.
ಮುಸ್ಲಿಂ ಮೀಸಲಾತಿಯನ್ನು ಪುನರ್ ಸ್ಥಾಪಿಸಲು ಒತ್ತಾಯಿಸಿ ಹೊಸದುರ್ಗದಲ್ಲಿ ಸೋಮವಾರ ಎಸ್.ಡಿ.ಪಿ.ಐಯಿಂದ ತಹಶೀಲ್ದಾರ್‌ಗೆ ಮಾನವಿ ಸಲ್ಲಿಸಲಾಯಿತು.   

ಹೊಸದುರ್ಗ: ಮುಸ್ಲಿಂ ಸಮುದಾಯಕ್ಕಿದ್ದ ಮೀಸಲಾತಿಯನ್ನು ಪುನರ್ ಸ್ಥಾಪಿಸುವಂತೆ ಕೋರಿ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್.ಡಿ.ಪಿ.ಐ)ದಿಂದ ರಾಜ್ಯಪಾಲರಿಗೆ ಸೋಮವಾರ ಮನವಿ ಸಲ್ಲಿಸಲಾಯಿತು.

ರಾಜ್ಯ ಸರ್ಕಾರ ಮುಸ್ಲಿಂ ಸಮುದಾಯಕ್ಕಿದ್ದ ಮೀಸಲಾತಿಯನ್ನು ಕಡಿಮೆ ಮಾಡಿ, ಆರ್ಥಿಕ ದುರ್ಬಲ ವರ್ಗಕ್ಕೆ ಸೇರಿಸಿದೆ. ಈ ಪ್ರಕ್ರಿಯೆ ಅಸಂವಿಧಾನಿಕವಾಗಿದ್ದು, ಒಂದು ನಿರ್ದಿಷ್ಟ ಸಮುದಾಯದ ವಿರುದ್ಧ ಉದ್ದೇಶಿತ ದಾಳಿಯಾಗಿದೆ ಎಂದು ಮುಖಂಡರು ದೂರಿದರು.

ಇತರೆ ಹಿಂದುಳಿದ ವರ್ಗಗಳಂತೆ ಮುಸ್ಲಿಂ ಸಮುದಾಯ ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿರುವ ಬಗ್ಗೆ ಅಧ್ಯಯನದ ನಂತರವೇ ಮೀಸಲಾತಿ ಕಲ್ಪಿಸಲಾಗಿತ್ತು. ಈ ಹಿಂದೆ ರಚಿಸಲಾಗಿದ್ದ ನಾಗನಗೌಡ ಸಮಿತಿ, ವೆಂಕಟಸ್ವಾಮಿ ಆಯೋಗ ಹಾಗೂ ಚಿನ್ನಪ್ಪ ರೆಡ್ಡಿ ಆಯೋಗ ಮುಸ್ಲಿಮರನ್ನು ಹಿಂದುಳಿದ ವರ್ಗಗಳಿಗೆ ಸೇರಿಸಿವೆ. ಹೀಗಿದ್ದರೂ ಸಮುದಾಯದವರ ಅಭಿವೃದ್ಧಿಗೆ ತಡೆಯೊಡ್ಡಿ, ಅವರನ್ನು ಮುಖ್ಯವಾಹಿನಿಗೆ ಬಾರದಂತೆ ಮಾಡಲು ಈ ಷಡ್ಯಂತ್ರ ನಡೆಸಲಾಗಿದೆ. ಮುಸ್ಲಿಂಮರ ಹಿತ ದೃಷ್ಟಿ ಕಾಯುವುದು ಸರ್ಕಾರದ ಕಾರ್ಯ. ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ADVERTISEMENT

ಗೌಸಿಯಾ ನಗರದಿಂದ ತಾಲ್ಲೂಕು ಕಚೇರಿವರೆಗೆ ಮುಖಂಡರು ಪ್ರತಿಭಟನಾ ಮೆರವಣಿಗೆ ನಡೆಸಿದರು.

ಎಸ್.ಡಿ.ಪಿ.ಐ‌. ಜಿಲ್ಲಾ ಅಧ್ಯಕ್ಷರು ಶ್ರೀನಿವಾಸ್ ಬಾಳೆಕಾಯಿ, ತಾಲ್ಲೂಕು ಅಧ್ಯಕ್ಷ ಇಮ್ರೋಜ್ ಖಾನ್, ಮುಖಂಡ ಮಶಾ ಸಾಬ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.