ಪರಶುರಾಂಪುರ: ಶೇಂಗಾ ಬದಲಾಗಿ ತೊಗರಿ ಬೆಳೆ ಬೆಳೆಯಲು ಮುಂದಾಗಿದ್ದ ರೈತರಿಗೆ ಆಘಾತವಾಗಿದೆ. ಕಳದೊಂದು ವಾರದಿಂದ ಮೋಡಕವಿದ ವಾತಾವರಣ, ಕೀಟಬಾಧೆಯಿಂದಾಗಿ ತೊಗರಿ ಇಳುವರಿ ಕುಸಿತದ ಭೀತಿ ಆರಂಭವಾಗಿದ್ದು ರೈತರು ಆತಂಕಗೊಂಡಿದ್ದಾರೆ.
ಶೇಂಗಾ ಬೆಳೆದು ಆರ್ಥಿಕವಾಗಿ ನಷ್ಟ ಅನುಭವಿಸುತ್ತಿದ್ದ ರೈತರು ಅಪಾರ ಪ್ರಮಾಣದ ಭೂಪ್ರದೇಶದಲ್ಲಿ ತೊಗರಿ ಬಿತ್ತನೆ ಮಾಡಿದ್ದರು. ಆ ಮೂಲಕ ಆರ್ಥಿಕವಾಗಿ ಸದೃಢರಾಗಲು ಪ್ರಯತ್ನ ಪಟ್ಟಿದ್ದರು. ಆದರೆ ಚಳಿಗಾಲದ ತೀವ್ರ ಶೀತದಿಂದಾಗಿ ತೊಗರಿ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗಿದೆ. ಕೀಟಬಾಧೆಯಿಂದ ತೊಗರಿ ಗಿಡಗಳು ಹಾಳಾಗುತ್ತಿದ್ದು ರೈತರು ಪರಿತಪಿಸುವಂತಾಗಿದೆ.
ಕಳೆದ ಒಂದು ವಾರದಿಂದ ಮೊಡಕವಿದ ವಾತಾವರಣವಿದ್ದು ಅತಿಯಾದ ಮಂಜು ಸುರಿಯುತ್ತಿದೆ. ಇದರಿಂದಾಗಿ ತೊಗರಿಯನ್ನು ಬೆಳೆದ ರೈತರು ಕಂಗಾಲಾಗಿದ್ದಾರೆ. ಮೊಡಕವಿದ ವಾತಾವರಣದಿಂದ ಬೆಳೆಗೆ ಕಾಯಿಕೊರಕ ರೋಗ ತಗಲುವುದರಿಂದ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎನ್ನುವಂತಾಗಿದೆ.
ಹೋಬಳಿ ವ್ಯಾಪ್ತಿಯಲ್ಲಿ ಹಿಂಗಾರು ಹಂಗಾಮಿನಲ್ಲಿ 1,720 ಎಕೆರೆ ಪ್ರದೇಶದಲ್ಲಿ ತೊಗರಿ ಬಿತ್ತನೆ ಮಾಡಲಾಗಿತ್ತು. ಅದರೆ ದಟ್ಟವಾದ ಮಂಜು ಬೀಳುತ್ತಿರುವ ಕಾರಣ ತೊಗರಿ ಕಾಯಿ ಕಟ್ಟುವ ಈ ಸಮಯದಲ್ಲಿ ಹೂ ತಿನ್ನುವ ರೋಗ ಕಾಣಿಸಿಕೊಂಡಿದೆ. ‘ಕಾಯಿಕೊರಕ ರೋಗ ಹೆಚ್ಚಾಗುತ್ತಿದ್ದು ಸಂಪೂರ್ಣ ಇಳುವರಿ ಕಡಿಮೆಯಾಗುವ ಮೂಲಕ ರೈತರನ್ನು ಸಂಕಷ್ಟಕ್ಕೆ ದೂಡುತ್ತಿದೆ’ ಎಂದು ರೈತ ಹನುಮಂತರಾಯಪ್ಪ ಬೇಸರ ವ್ಯಕ್ತಪಡಿಸಿದರು.
ಕಾಯಿ ಕಟ್ಟವ ಸಮಯದಲ್ಲಿ ತೊಗರಿಗೆ ಬಿಸಿಲಿನ ವಾತಾವರಣ ಬೇಕು. ಒಂದು ವೇಳೆ ತೇವಾಂಶ ಹೆಚ್ಚಾದರೆ ಹಾಗೂ ಮೊಡಕವಿದ ವಾತಾವರಣದಿಂದ ಕಾಯಿಕೊರಕ ರೋಗ ಬಾದೆ ಕಂಡು ಬಂದರೆ ಗಿಡಕ್ಕೆ ಸಮಸ್ಯೆಯಾಗಬಹುದು. ರೈತಸಂಪರ್ಕ ಕೇಂದ್ರದಲ್ಲಿ ದೊರೆಯುವ ಕ್ಲೋರಾಂತ್ರ ಪ್ರೋಲ್ ಔಷದಿ ಸಿಂಪಡಣೆ ಮಾಡಬೇಕು. ಇದರಿಂದ ಕೀಟಬಾದೆ ನಿಯಂತ್ರಣಕ್ಕೆ ಬರುತ್ತದೆ‘ ಎಂದು ಕೃಷಿ ಅಧಿಕಾರಿ ಎಸ್.ಆರ್.ಜೀವನ್ ಪ್ರತಿಕ್ರಿಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.