ADVERTISEMENT

ಧರ್ಮಪುರ| ಕಿಡಿಗೇಡಿಗಳ ದುಷ್ಕೃತ್ಯ: 9 ಎಕರೆ ಟೊಮೊಟೊ ನಾಶ

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2023, 16:20 IST
Last Updated 30 ಆಗಸ್ಟ್ 2023, 16:20 IST
ಧರ್ಮಪುರ ಹೋಬಳಿಯ ಮ್ಯಾದನಹೊಳೆಯಲ್ಲಿ ಕಿಡಿಗೆಡಿಗಳ ದುಷ್ಕೃತ್ಯದಿಂದ ರೈತ ಎಂ.ಎಚ್. ಷಣ್ಮುಖಪ್ಪ ಅವರ 9 ಎಕರೆಯಲ್ಲಿನ ಟೊಮೊಟೊ ಬೆಳೆ ನಾಶವಾಗಿರುವುದು
ಧರ್ಮಪುರ ಹೋಬಳಿಯ ಮ್ಯಾದನಹೊಳೆಯಲ್ಲಿ ಕಿಡಿಗೆಡಿಗಳ ದುಷ್ಕೃತ್ಯದಿಂದ ರೈತ ಎಂ.ಎಚ್. ಷಣ್ಮುಖಪ್ಪ ಅವರ 9 ಎಕರೆಯಲ್ಲಿನ ಟೊಮೊಟೊ ಬೆಳೆ ನಾಶವಾಗಿರುವುದು   

ಧರ್ಮಪುರ: ಸಮೀಪದ ಮ್ಯಾದನಹೊಳೆಯಲ್ಲಿ ಕಿಡಿಗೇಡಿಗಳ ದುಷ್ಕೃತ್ಯದಿಂದ ಫಸಲಿಗೆ ಬಂದಿದ್ದ ಒಂಬತ್ತು ಎಕರೆಯಲ್ಲಿನ ಟೊಮೊಟೊ ಸಂಪೂರ್ಣವಾಗಿ ನಾಶವಾಗಿದೆ.

ರೈತ ಎಂ.ಎಚ್. ಷಣ್ಮುಖಪ್ಪ ಒಟ್ಟು ಹದಿನಾರು ಎಕರೆ ಜಮೀನನ್ನು ಲೀಸ್ ಪಡೆದಿದ್ದು, ಅದರಲ್ಲಿ ಒಂಬತ್ತು ಎಕರೆಗೆ ಟೊಮೊಟೊವನ್ನು ಜೂನ್ ತಿಂಗಳಿನಲ್ಲಿ ನಾಟಿ ಮಾಡಿದ್ದರು. ಈಗಾಗಲೇ ಕಳೆದ ಒಂದು ವಾರದಿಂದ ಬೆಳೆ ಆರಂಭವಾಗಿತ್ತು. ಆದರೆ, ಕೈಗೆ ಬಂದ ತುತ್ತು ಬಾಯಿಗೆ ಇಲ್ಲವೆಂಬಂತಾಗಿದೆ.

ಆಗಸ್ಟ್ 24, 25ರಂದು ಷಣ್ಮುಖಪ್ಪ ಅವರ ಪುತ್ರಿಯ ಮದುವೆ ಇತ್ತು. ಮದುವೆ ಸಂಭ್ರಮದಲ್ಲಿದ್ದ ಇವರು ಜಮೀನಿನ ಕಡೆ ಹೆಚ್ಚು ಗಮನ ನೀಡಿರಲಿಲ್ಲ. ಜತೆಗೆ ವಿದ್ಯುತ್ ಸಮಸ್ಯೆ ಇದ್ದುದ್ದರಿಂದ ಟೊಮೊಟೊ ಗಿಡಕ್ಕೆ ಔಷಧ ಸಿಂಪಡಣೆ ಮಾಡಲು ಮುಂಚಿತವಾಗಿ ಐದು ಡ್ರಂಗಳಲ್ಲಿ ನೀರು ಸಂಗ್ರಹ ಮಾಡಿದ್ದರು. ಸೋಮವಾರ ಟೊಮೊಟೊ ಗಿಡಕ್ಕೆ ಔಷಧ ಸಿಂಪಡಣೆ ಮಾಡಿದ್ದಾರೆ. ಐದು ಡ್ರಂನಲ್ಲಿದ್ದ ನೀರು ಉಪಯೋಗಿಸಿದ 9 ಎಕರೆಯ ಟೊಮೊಟೊ ಸಂಪೂರ್ಣವಾಗಿ ಒಣಗಿ ನೆಲಕ್ಕುರುಳಿವೆ. ಅದರಲ್ಲಿ ಸಂಗ್ರಹ ನೀರು ಮುಗಿದ ಮೇಲೆ ಮತ್ತೆ ಪಂಪ್‌ಸೆಟ್‌ನಿಂದ ನೀರು ಪಡೆದು ಔಷಧ ಸಿಂಪಡಣೆ ಮಾಡಿರುವ ಹತ್ತು ಸಾಲು ಗಿಡಗಳು ಮಾತ್ರ ಉಳಿದುಕೊಂಡಿವೆ.

ADVERTISEMENT

₹ 15 ಲಕ್ಷ ಖರ್ಚು ಮಾಡಿದ್ದ ಷಣ್ಮುಖಪ್ಪ‌ ಅವರು ಈಗ ಕಂಗಾಲಾಗಿದ್ದಾರೆ. 

‘ಟೊಮೊಟೊಗೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಇದ್ದುದ್ದರಿಂದ ಒಟ್ಟು ಒಂಬತ್ತು ಎಕರೆಯಲ್ಲಿ ₹ 15 ಲಕ್ಷ ಖರ್ಚು ಮಾಡಿ ಟೊಮೊಟೊ ಬೆಳೆದಿದ್ದೆ. ಬೆಳೆ ಉತ್ತಮವಾಗಿ ಬಂದಿತ್ತು. ಆದರೆ, ಕಿಡಿಗೇಡಿಗಳು ನೀರು ಸಂಗ್ರಹಿಸಿದ್ದ ಡ್ರಂ ಗಳಲ್ಲಿ ಕಳೆ ನಾಶಕ ಮಿಶ್ರಣ ಮಾಡಿರುವುದರಿಂದ ಔಷಧಿಸಿಂಪಡಣೆ ಮಾಡಿದಾಗ ಸಂಪೂರ್ಣವಾಗಿ ಒಣಗಿ ಹೋಗಿವೆ. ಮಾರುಕಟ್ಟೆಯಲ್ಲಿ ಒಂದು ಕ್ರೇಟ್‌ಗೆ ₹ 200 ದರ ಸಿಕ್ಕಿದ್ದರೂ ಕನಿಷ್ಠ ₹ 25 ಲಕ್ಷ ಆದಾಯ ಬರುತ್ತಿತ್ತು. ಈಗ ಎಲ್ಲವುದು ಮುಗಿದು ಹೋಗಿದೆ‘ ಎಂದು ರೈತ ಎಂ.ಎಚ್. ಷಣ್ಮುಖಪ್ಪ ಮ್ಯಾದನಹೊಳೆ ಅಳಲು ತೋಡಿಕೊಂಡರು.

ಚಿತ್ರಸುದ್ದಿ:ಒಣಗಿ ಹೋಗುವ ಮೊದಲು ಟೊಮೊಟೊ ತೋಟದಲ್ಲಿ ಎಂ.ಎಚ್.ಷಣ್ಮುಖಪ್ಪ(ಸಂಗ್ರಹ ಚಿತ್ರ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.