ಧರ್ಮಪುರ: ಕೋವಿಡ್ ಸಂಕಷ್ಟದ ನಂತರ ಬಸ್ ಸಂಚಾರ ವ್ಯವಸ್ಥೆಯಲ್ಲಿ ತುಂಬಾ ವ್ಯತ್ಯಾಸಗಳಾಗಿದ್ದು, ಗ್ರಾಮೀಣ ಪ್ರದೇಶದಲ್ಲಿ ಸಂಚರಿಸುತ್ತಿದ್ದ ಕೆಲವು ಖಾಸಗಿ ಬಸ್ ಸಂಚಾರವನ್ನು ಮಾಲೀಕರು ನಿಲ್ಲಿಸಿದ್ದಾರೆ. ಇನ್ನು ಶಕ್ತಿ ಯೋಜನೆ ಆರಂಭದ ಬಳಿಕ ಖಾಸಗಿ ಬಸ್ ಅವಲಂಬಿಸುವವರೇ ಇಲ್ಲದಂತಾಗಿದೆ. ಪರಿಣಾಮ ಸರ್ಕಾರಿ ಬಸ್ ಪ್ರಯಾಣ ಪ್ರಯಾಸವಾಗಿದೆ.
ಧರ್ಮಪುರದಿಂದ– ಶಿರಾ ಮಾರ್ಗವಾಗಿ ತುಮಕೂರು ಮತ್ತು ಬೆಂಗಳೂರಿನತ್ತ ಸಂಚರಿಸಲು ಸರ್ಕಾರಿ ಬಸ್‌ನಲ್ಲಿ ಸೀಟ್ ಸಿಗುವುದಿರಲಿ, ಒಳಗಡೆ ಕಾಲಿಡಲೂ ಆಗದ ಸ್ಥಿತಿ ಇದೆ.
‘ನಿತ್ಯ ಬೆಳಿಗ್ಗೆ 4.30ಕ್ಕೆ ಪರಶುರಾಂಪುರದಿಂದ ಧರ್ಮಪುರಕ್ಕೆ ಬರುವ ಬಸ್ ಒಮ್ಮೊಮ್ಮೆ ನಿಲ್ಲಿಸದೇ ಹೋಗುತ್ತಾರೆ. ಇದರಿಂದ ಬೆಳಿಗ್ಗೆ ನಾಲ್ಕು ಗಂಟೆಗೇ ಸುತ್ತಮುತ್ತಲಿನ ಹಳ್ಳಿಗಳಿಂದ ಬಂದು ಕಾಯುವ ಪ್ರಯಾಣಿಕರು ಹತಾಶೆಯಿಂದ ಊರಿಗೆ ಹಿಂತಿರುಗಬೇಕು. ನಂತರದ ಸಮಯದಲ್ಲಿ ಶಿರಾಕ್ಕೆ ಬಸ್ ಇದ್ದರೂ ವಿದ್ಯಾರ್ಥಿಗಳಿಂದ ತುಂಬಿಕೊಂಡು ನೇತಾಡುವ ದೃಶ್ಯ ಕಂಡುಬರುತ್ತದೆ’ ಎಂದು ಪ್ರಯಾಣಿಕರು ತಿಳಿಸುತ್ತಾರೆ.
ಬೆಳಿಗ್ಗೆ 9.30ಕ್ಕೆ ಧರ್ಮಪುರದಿಂದ ಬೆಂಗಳೂರಿಗೆ ಸಾರಿಗೆ ಸಂಸ್ಥೆಯ ಬಸ್ ಇದೆ. ನಿತ್ಯ ಕನಿಷ್ಠ 60ರಿಂದ 70 ಪ್ರಯಾಣಿಕರು ಕಾಯುತ್ತಿರುತ್ತಾರೆ. ಇದರಿಂದ ಬಸ್ ಹತ್ತುವುದೇ ದುಸ್ತರ. ನೂಕು ನುಗ್ಗಲಿನ ಪರಿಸ್ಥಿತಿಯಿಂದ ಜೇಬು, ಚಿನ್ನದ ಸರ ಕಳವು ಪ್ರಕರಣಗಳು ನಡೆಯುತ್ತವೆ. ಬಸ್ ಹತ್ತುವಾಗ ಕಿಟಕಿ ಮತ್ತು ಚಾಲಕರ ಬಾಗಿಲಿನಿಂದ ಜನರು ಹತ್ತುವ ದೃಶ್ಯ ನಿತ್ಯ ಕಂಡುಬರುತ್ತದೆ.
ಹಿರಿಯೂರು ಡಿಪೋಗೆ ಒತ್ತಾಯ:
ಹಿರಿಯೂರಿನಲ್ಲಿ ಡಿಪೋ ನಿರ್ಮಾಣವಾಗಿದೆ. ಆದರೆ, ಉದ್ಘಾಟನೆಯ ಭಾಗ್ಯ ಕಾಣದೇ ತಾಲ್ಲೂಕಿನ ಗ್ರಾಮೀಣ ಪ್ರದೇಶದಲ್ಲಿ ಸರ್ಕಾರಿ ಬಸ್‌ಗಳ ಸಂಚಾರ ಮರೀಚಿಕೆಯಾಗಿಯೇ ಉಳಿದಿದೆ. ಗ್ರಾಮೀಣ ಭಾಗಗಳಲ್ಲಿನ ಪ್ರಯಾಣಿಕರು ಬಸ್ ಸಂಚಾರ ಇಲ್ಲದ್ದರಿಂದ ಹಿಡಿಶಾಪ ಹಾಕುಂತಾಗಿದೆ. ಸಚಿವರು ತುರ್ತಾಗಿ ಇದರ ಬಗ್ಗೆ ಗಮನಹರಿಸಿ ಡಿಪೋ ಉದ್ಘಾಟಿಸುವ ಮೂಲಕ ಗಡಿ ಭಾಗಗಳಿಗೆ ಸುಗಮ ಸಂಚಾರ ವ್ಯವಸ್ಥೆ ಕಲ್ಪಿಸಿಕೊಡಲಿ ಎಂಬುದು ನಾಗರಿಕರ ಒತ್ತಾಯ.
‘ಡಿಪೋ ನಿರ್ಮಾಣ ಕಾಮಗಾರಿ ಮುಗಿದಿದೆ. ಉದ್ಘಾಟನೆಯ ದಿನಾಂಕ ಗೊತ್ತಿಲ್ಲ’ ಎಂದು ಸಾರಿಗೆ ಸಂಸ್ಥೆಯ ಚಿತ್ರದುರ್ಗ ವಿಭಾಗೀಯ ನಿಯಂತ್ರಣಾಧಿಕಾರಿ ಶ್ರೀನಿವಾಸ ತಿಳಿಸಿದರು.
ಶಕ್ತಿ ಯೋಜನೆ ಜಾರಿಯಾದ ಬಳಿಕ ಬಸ್‌ನಲ್ಲಿ ಓಡಾಡುವ ಪ್ರಯಾಣಿಕರ ಸಂಖ್ಯೆ ಹೆಚ್ಚಿದೆ. ಅದಕ್ಕಾಗಿ ಸರ್ಕಾರಿ ಬಸ್ ಸಂಚಾರವನ್ನು ಮತ್ತಷ್ಟು ಹೆಚ್ಚಿಸಬೇಕು.
-ನಾಗೇಂದ್ರಪ್ಪ ಕೆಎಸ್ಆರ್‌ಟಿಸಿ ನಿವೃತ್ತ ನೌಕರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.