ನಾಯಕನಹಟ್ಟಿ: ಹೋಬಳಿಯ ಬಹುತೇಕ ಗ್ರಾಮಗಳಲ್ಲಿ ರೈತರು ಸುಗ್ಗಿಕಾಲದಲ್ಲಿ ಧಾನ್ಯ ಒಕ್ಕಲಿಗೆಂದು ನಿರ್ಮಿಸುತ್ತಿದ್ದ ಕಣ ಪದ್ಧತಿ ಕಣ್ಮರೆಯಾಗಿದ್ದು, ಡಾಂಬರು ರಸ್ತೆಯನ್ನೇ ಕಣವನ್ನಾಗಿ ಬಳಸುತ್ತಿರುವುದು ವಾಹನ ಸವಾರರಿಗೆ ಸಂಕಷ್ಟ ತಂದಿದೆ.
ಹೋಬಳಿಯ ಚನ್ನಬಸಯ್ಯನಹಟ್ಟಿ, ಗೌಡಗೆರೆ, ಜೋಗಿಹಟ್ಟಿ, ಅಬ್ಬೇನಹಳ್ಳಿ, ಮುಷ್ಠಲಗುಮ್ಮಿ, ಭೀಮಗೊಂಡನಹಳ್ಳಿ, ಮಲ್ಲೂರಹಳ್ಳಿ, ಗುಂತಕೋಲ್ಮನಹಳ್ಳಿ, ತೊರೆಕೋಲಮ್ಮನಹಳ್ಳಿ, ಮಲ್ಲೇಬೋರನಹಟ್ಟಿ ಸೇರಿ ಹತ್ತಾರು ಗ್ರಾಮಗಳಲ್ಲಿ ಸಣ್ಣ ಮತ್ತು ಮಧ್ಯಮ ಹಿಡುವಳಿದಾರರು ರಸ್ತೆ ಒಕ್ಕಣೆಗೆ ಮುಂದಾರಾಗಿದ್ದಾರೆ.
ಹೋಬಳಿಯಾದ್ಯಂತ ಸುಗ್ಗಿಕಾಲ ಆರಂಭವಾಗಿದ್ದು, ಸಿರಿಧಾನ್ಯಗಳಾದ ರಾಗಿ, ಸಜ್ಜೆ, ನವಣೆ, ತೊಗರಿ, ಹುರುಳಿ ಬೆಳೆಗಳಿಂದ ಕಾಳುಗಳನ್ನು ಬೇರ್ಪಡಿಸುವ ಕಾರ್ಯ ನಡೆಯುತ್ತಿದೆ. ಕಳೆದೆರಡು ದಶಕಗಳ ಹಿಂದೆ ರೈತರು ತಮ್ಮ ಜಮೀನು ಹಾಗೂ ಮನೆಗಳ ಬಳಿ ಕಣ ನಿರ್ಮಿಸಿ ಒಕ್ಕಲು ಪದ್ಧತಿ ಅನುಸರಿಸಿ ಕಾಳುಗಳನ್ನು ಬೇರ್ಪಡಿಸುತ್ತಿದ್ದರು.
ಆದರೆ, ಕಾಲ ಬದಲಾಗುತ್ತಾ ಕಣ ಪದ್ಧತಿ ಸಂಪೂರ್ಣ ಮಾಯವಾಗಿ ರಸ್ತೆ ಒಕ್ಕಲು ಪದ್ಧತಿ ಅಸ್ತಿತ್ವಕ್ಕೆ ಬಂದಿದೆ. ಜಿಲ್ಲಾ ಮುಖ್ಯರಸ್ತೆ ಮತ್ತು ರಾಜ್ಯ ಹೆದ್ದಾರಿ ಡಾಂಬರ್ ರಸ್ತೆಗಳೇ ಒಕ್ಕಲು ಕಣಗಳಾಗಿ ಬದಲಾಗಿವೆ. ರಸ್ತೆ ಮೇಲೆ ಒಕ್ಕಲಿಗೆ ತೆನೆಗಳನ್ನು ಹಾಕಿದಲ್ಲಿ ವಾಹನಗಳು ಅವುಗಳ ಮೇಲೆ ಸಂಚರಿಸಿದರೇ ಕಾಳು ಬೇರ್ಪಡುತ್ತದೆ. ವಾಹನ ಸವಾರರು ತೆನೆ ಬಿಟ್ಟು ಹೋಗಲೂ ಆಗದು, ಹೋದರೆ ಕಾಳು ಬೇರ್ಪಡದು ಎಂಬ ಸ್ಥಿತಿ ಇದೆ.
ವಾಹನ ಸವಾರರು ಹೈರಾಣ: ಕೃಷಿಕರು ಹಲವು ರಸ್ತೆ, ಸೇತುವೆ, ಕಡಿದಾದ ತಿರುವುಗಳಲ್ಲಿ ಒಕ್ಕಣೆ ಕಾರ್ಯ ಮಾಡುತ್ತಿದ್ದು, ಸುಗಮ ಸಂಚಾರಕ್ಕೆ ಸಂಚಕಾರ ಉಂಟಾಗಿದೆ. ಇದರಿಂದ ವಾಹನ ಸವಾರರಿಗೆ ತೀವ್ರ ಕಿರಿಕಿರಿ ಆಗಿದೆ.
ಕೆಲವು ರೈತರು ರಸ್ತೆಯಲ್ಲಿ ಒಕ್ಕಲು ಮಾಡಿಕೊಳ್ಳುತ್ತಿದ್ದರೂ, ಜನರಿಗೆ ತೊಂದರೆ ಆಗದಂತೆ ನೋಡಿಕೊಳ್ಳುತ್ತಿದ್ದಾರೆ. ಆದರೆ ಕೆಲವು ರೈತರು ರಸ್ತೆಯಲ್ಲಿ ಓಡಾಡಲು ಸಹ ಸ್ಥಳಾವಕಾಶ ನೀಡದಂತೆ ರಸ್ತೆ ತುಂಬೆಲ್ಲಾ ಬೆಳೆಗಳನ್ನು ಹರಡುತಿದ್ದಾರೆ. ಇದರಿಂದ ದೊಡ್ಡ ವಾಹನಗಳಾದ ಲಾರಿಗಳು, ಬಸ್, ಟ್ರ್ಯಾಕ್ಟರ್‌ಗಳು ಹೇಗೋ ಸಂಚರಿಸುತ್ತವೆ. ಆದರೆ, ದ್ವಿಚಕ್ರ ವಾಹನಗಳು, ಆಟೊ, ಸಣ್ಣಪ್ರಮಾಣದ ಗೂಡ್ಸ್‌ವಾಹನಗಳು, ಕಾರುಗಳು, ಶಾಲಾ ವಾಹನಗಳು ಸೇರಿ ಸಣ್ಣಪುಟ್ಟ ವಾಹನಗಳಿಗೆ ಈ ಒಕ್ಕಲು ಜಾಗವನ್ನು ದಾಟಿಕೊಂಡು ಹೋಗುವುದು ಸಾಕಷ್ಟು ತೊಂದರೆಯಾಗುತ್ತಿದೆ.
ರಸ್ತೆಪಕ್ಕದ ಗುಂಡಿ ಸಮೀಪ ವಾಹನಗಳನ್ನು ಚಲಾಯಿಸಬೇಕಿದೆ. ರಸ್ತೆಯಲ್ಲಿ ಸವಾರರಿಗೆ ದೂಳಿನ ಸಿಂಚನವಾಗುತ್ತಿದೆ. ವಾಹನಗಳ ಚಕ್ರಗಳಿಗೆ ಹುರುಳಿ ಬೆಳೆಯ ಬಳ್ಳಿ ಸುತ್ತಿಕೊಂಡು ವಾಹನಗಳು ಮುಂದೆ ಸಾಗದಂತೆ ಅಪಾಯ ತಂದೊಡ್ಡಿವೆ.
ಕಲುಷಿತವಾಗುವ ಕಾಳುಗಳು: ರಸ್ತೆ ಮೇಲೆ ಸಂಚರಿಸುವ ವಾಹನಗಳ ಚಕ್ರಗಳಿಗೆ ಕಾಳುಗಳು ಚೆಲ್ಲಾಪಿಲ್ಲಿಯಾಗಿ ಚದುರಿ ಹೋಗುತ್ತವೆ. ಇದರಿಂದ ರೈತನಿಗೆ ಅರ್ಧ, ರಸ್ತೆಗೆ ಅರ್ಧ ಎನ್ನುವಂತಾಗುತ್ತದೆ. ಹೀಗೆ ರಸ್ತೆಯ ಮೇಲೆ ಒಕ್ಕಲು ಮಾಡುವುದರಿಂದ ಕಾಳುಗಳಲ್ಲಿ ಕಲ್ಲುಮಣ್ಣು ಸೇರಿ ಕಲುಷಿತಗೊಳ್ಳುತ್ತಿದೆ. ಈ ಬಗ್ಗೆ ರೈತರಿಗೂ ಅಸಮಧಾನವಿದೆ.
ಹೋಬಳಿಯಾದ್ಯಂತ ಬಹುತೇಕ ಸಣ್ಣ ಮತ್ತು ಮಧ್ಯಮ ರೈತರಿದ್ದು, ಬಹುತೇಕರು ಎತ್ತುಗಳ ಸಾಕಣೆ ಸ್ಥಗಿತಗೊಳಿಸಿದ್ದಾರೆ. ಎತ್ತುಗಳಿದ್ದಲ್ಲಿ ಕೃಷಿಗೂ, ಸುಗ್ಗಿಕಾಲದ ಒಕ್ಕಲು ಕಣಗಳಿಗೂ ಕಳೆ ಮತ್ತು ಬಲ. ಎತ್ತುಗಳೇ ಇಲ್ಲದ್ದರಿಂದ ಅಲ್ಪಸ್ವಲ್ಪ ಬೆಳೆಯ ಒಕ್ಕಣೆಗೆ ಯಂತ್ರಗಳು ಲಭಿಸದಿರುವುದು ಮತ್ತು ಕಾಳುಗಳನ್ನು ಬೇರ್ಪಡಿಸಲು ಇರುವ ಆಧುನಿಕ ಯಂತ್ರಗಳ ಬಾಡಿಗೆ ದುಬಾರಿ ಆಗಿರುವುದರಿಂದ ರೈತರು ಡಾಂಬರ್ ರಸ್ತೆ ಒಕ್ಕಣೆಗೆ ಮುಂದಾಗುತ್ತಿದ್ದಾರೆ. ಇದು ವಾಹನ ಸವಾರರಿಗೆ ಸಮಸ್ಯೆ ತಂದೊಡ್ಡಿದೆ.
‘ರಾಜ್ಯ ಹೆದ್ದಾರಿಯಲ್ಲಿ ವಾಹನಗಳು ವೇಗವಾಗಿ ಸಂಚರಿಸುತ್ತವೆ. ರಸ್ತೆ ಒಕ್ಕಣೆಯಲ್ಲಿ ಮಗ್ನರಾದ ರೈತರು ವಾಹನಗಳ ವೇಗವನ್ನು ಅರಿಯದೆ ರಸ್ತೆಯಲ್ಲಿಯೇ ಇರುತ್ತಾರೆ. ಇದರಿಂದ ವಾಹನಗಳ ಡಿಕ್ಕಿಯಿಂದ ಪ್ರಾಣಾಪಾಯ ಸಂಭವ ಹೆಚ್ಚಿರುತ್ತದೆ. ಹಾಗಾಗಿ ರೈತರು ರಸ್ತೆಯನ್ನು ಬಿಟ್ಟು ತಮ್ಮ ಜಮೀನಿನಲ್ಲೇ ಒಕ್ಕಣೆಗೆ ಮುಂದಾಗಬೇಕಿದೆ. ಉದ್ಯೋಗ ಖಾತ್ರಿ ಯೋಜನೆಯಲ್ಲಿ ಸಾಮೂಹಿಕ ಮತ್ತು ರೈತರಿಗೆ ಪ್ರತ್ಯೇಕ ಕಣಗಳನ್ನು ನಿರ್ಮಿಸಿಕೊಳ್ಳಲು ಅವಕಾಶವಿತ್ತು. ಆದರೆ, ಯೋಜನೆಯ ದುರ್ಬಳಕೆಯಿಂದ ಹಿನ್ನೆಡೆಯಾಗಿದೆ. ಇದರಿಂದ ಕಣ ನಿರ್ಮಾಣ ಯೋಜನೆ ಕುಂಠಿತವಾಗಿದೆ.
ರಸ್ತೆ ಕಣದಿಂದ ಲಘುವಾಹನಗಳ ಸವಾರರು ಜೀವ ಕೈಯಲ್ಲಿ ಹಿಡಿದು ಸಂಚರಿಸುವ ಸ್ಥಿತಿ ಇದೆ. ಪ್ರತಿವರ್ಷ ಸುಗ್ಗಿ ಕಾಲದಲ್ಲಿ ಬೈಕ್ ಚಲಾಯಿಸುವಾಗ ನಿಯಂತ್ರಣ ತಪ್ಪಿ ಗಾಯಗೊಂಡಿದ್ದೇವೆಕೆ.ಜಿ.ಆರ್.ಮಲ್ಲಿಕಾರ್ಜುನ ಬೈಕ್ ಸವಾರ ನಾಯಕನಹಟ್ಟಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.