ADVERTISEMENT

ದೊಡ್ಡಕೆರೆ ಪ್ರವಾಸೋದ್ಯಮ ತಾಣವಾಗಿಸಲು ಚರ್ಚೆ: ಶಿವಾಚಾರ್ಯ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2021, 3:14 IST
Last Updated 24 ಅಕ್ಟೋಬರ್ 2021, 3:14 IST
ಭರಮಸಾಗರ ಬಿಚ್ಚುಗತ್ತಿ ಭರಮಣ್ಣ ನಾಯಕ ದೊಡ್ಡಕೆರಯನ್ನು ಶನಿವಾರ ಸಿರಿಗೆರೆ ಶ್ರೀಗಳು ವೀಕ್ಷಿಸಿ ಮಾತನಾಡಿದರು.
ಭರಮಸಾಗರ ಬಿಚ್ಚುಗತ್ತಿ ಭರಮಣ್ಣ ನಾಯಕ ದೊಡ್ಡಕೆರಯನ್ನು ಶನಿವಾರ ಸಿರಿಗೆರೆ ಶ್ರೀಗಳು ವೀಕ್ಷಿಸಿ ಮಾತನಾಡಿದರು.   

ಭರಮಸಾಗರ: ಇಲ್ಲಿನ ಬಿಚ್ಚುಗತ್ತಿ ಭರಮಣ್ಣ ನಾಯಕ ದೊಡ್ಡಕೆರೆಯಲ್ಲಿ ಬೋಟಿಂಗ್ ವ್ಯವಸ್ಥೆ ಹಾಗೂ ಡಿಲವರಿ ಚೇಂಬರ್ ಬಳಿ ನೀರು ಚಿಮ್ಮುವುದನ್ನು ವೀಕ್ಷಿಸಲು ಅನುಕೂಲವಾಗುವಂತೆ ಕಿರು ಸೇತುವೆ ನಿರ್ಮಿಸಬೇಕು ಎಂದು ಸಿರಿಗೆರೆಯ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಸಲಹೆ ನೀಡಿದರು.

ಇಲ್ಲಿನ ಬಿಚ್ಚುಗತ್ತಿ ಭರಮಣ್ಣ ನಾಯಕ ದೊಡ್ಡಕೆರೆಗೆ ಎರಡನೇ ಬಾರಿ ಶನಿವಾರ ಭೇಟಿ ನೀಡಿ ಕೆರೆಯನ್ನು ವೀಕ್ಷಿಸಿ ಅವರು ಮಾತನಾಡಿ, ಕೆರೆಯನ್ನು ಪ್ರವಾಸಿ ತಾಣವನ್ನಾಗಿಸಲು ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಬಳಿ ಮಾತನಾಡುವುದಾಗಿ ತಿಳಿಸಿದರು.

‘ಕೆರೆಯ ಸುತ್ತಲೂ ಯಾವುದೇ ಅಂಗಡಿ ಮಳಿಗೆಯನ್ನು ತೆರೆಯಲು ಅವಕಾಶ ನೀಡಬಾರದು. ಕೆರೆಯನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಕೆರೆಗೆ ಸೇರುತ್ತಿರುವ ಚರಂಡಿ ಹಾಗೂ ಮಲಿನ ನೀರನ್ನು ಬೇರೆಡೆಗೆ ಬಿಡಬೇಕು. ಕೆರೆ ಏರಿಯ ಮೇಲೆ ಸೌಂದರ್ಯ ಸವಿಯಲು ಕಲ್ಲು ಹಾಸುಗಳನ್ನು ನಿರ್ಮಿಸಬೇಕು’ ಎಂದು ಗ್ರಾಮ ಪಂಚಾಯಿತಿಯವರಿಗೆ ಸೂಚಿಸಿದರು.

ADVERTISEMENT

‘ಸಮಾಜದ ಕೆಲಸ ಮಾಡುವಾಗ ಯಾವುದೇ ಪಕ್ಷ ನೋಡಬಾರದು. ಈ ಹಿಂದೆ ಯಡಿಯೂರಪ್ಪ ಅವರು ಸೂಳೆಕೆರೆಯಿಂದ ಕುಡಿಯುವ ನೀರು ಹರಿಸಲು ₹25 ಕೋಟಿ ನೀಡಿ ಎಲ್ಲರ ಬಾಯಾರಿಕೆಯನ್ನು ನೀಗಿಸಿದರು’ ಎಂದು ಸ್ಮರಿಸಿದರು.

‘ಭರಮಸಾಗರ ಕೆರೆ ನೀರು ತುಂಬಿಸುವ ವಿಚಾರದಲ್ಲಿ ಮಾಜಿ ಸಚಿವರಾದ ಎಚ್. ಆಂಜನೇಯ, ಎಸ್. ಎಸ್‌. ಮಲ್ಲಿಕಾರ್ಜುನ, ಜಗಳೂರು ಮಾಜಿ ಶಾಸಕ ರಾಜೇಶ್’ ಸಹಕರಿಸಿದ್ದರು’ ಎಂದು ಹೇಳಿದರು.

ನೀರು ಚಿಮ್ಮುವ ದೃಶ್ಯಕ್ಕೆ ಎಲ್ಲರ ಮೆಚ್ಚುಗೆ: ಈ ನೀರು ಚುಮ್ಮುವ ಚಿತ್ರವನ್ನು ನಮ್ಮಲ್ಲಿ ಬರುವವರಿಗೆಲ್ಲಾ ಸುಮಾರು 500ಕ್ಕೂ ಹೆಚ್ಚು ಜನರಿಗೆ ತೋರಿಸಿದ್ದೇವೆ. ಅಲ್ಲದೆ ವಿದೇಶದಲ್ಲಿರುವವರಿಗೂ ಇದನ್ನು ಹಂಚಿಕೊಳ್ಳಲಾಗಿದೆ. ವಿಶ್ವ ಬ್ಯಾಂಕ್ ಸದಸ್ಯರೂ ಇದಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ’ ಎಂದರು.

ಬಿಜೆಪಿ ಮಂಡಲ ಅಧ್ಯಕ್ಷ ಶೈಲೇಶ್ ಕುಮಾರ್, ಕೆರೆಹೋರಾಟ ಸಮಿತಿ ಅಧ್ಯಕ್ಷ ಶಶಿಪಾಟೀಲ್, ಮುಖಂಡರಾದ ಡಿ.ವಿ.ಶರಣಪ್ಪ, ಎಚ್. ಎನ್. ತಿಪ್ಪೇಸ್ವಾಮಿ, ನಿವೃತ್ತ ಬೆಸ್ಕಾಂ ಎಂಜಿನಿಯರ್ ಚಂದ್ರಶೇಖರಪ್ಪ, ಕಾಂಗ್ರೆಸ್‌ ಅಸಂಘಟಿತ ಕಾರ್ಮಿಕರ ರಾಜ್ಯಾಧ್ಯಕ್ಷ ಜಿ.ಎಸ್. ಮಂಜುನಾಥ್, ನೀರಾವರಿ ನಿಗಮದ ಎಂಜಿನೀಯರುಗಳಾದ ಮಲ್ಲಪ್ಪ, ಮನೋಜ್, ಎಸ್ ಎನ್ ಸಿ ಕಂಪನಿಯ ಬಾಬುಪೂಜಾರ್, ಡಿ.ಎಸ್. ಪ್ರವೀಣ್, ಡಿ.ಎಸ್. ಪ್ರದೀಪ್, ಸಿರಿಗೆರೆ ಗ್ರಾ.ಪಂ. ಅದ್ಯಕ್ಷ ಮೋಹನ್, ಬಸವರಾಜ್, ಚಿಕ್ಕಬೆನ್ನೂರು ಮುಖಂಡ ತೀರ್ಥಪ್ಪ, ರಂಗವ್ವನಹಳ್ಳಿ ಹನುಮಂತಪ್ಪ ಅವರೂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.