ADVERTISEMENT

ನಾಯಕನಹಟ್ಟಿ ಪಟ್ಟಣ ಪಂಚಾಯಿತಿ ಮೀಸಲಾತಿ ಬದಲಾವಣೆಗೆ ಅಸಮಾಧಾನ

ಪ.ಪಂ. ಅಧ್ಯಕ್ಷ-, ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಪ್ರಕಟ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2020, 2:45 IST
Last Updated 10 ಅಕ್ಟೋಬರ್ 2020, 2:45 IST
ನಾಯಕನಹಟ್ಟಿಯ ಪಟ್ಟಣ ಪಂಚಾಯಿತಿ ಕಚೇರಿ
ನಾಯಕನಹಟ್ಟಿಯ ಪಟ್ಟಣ ಪಂಚಾಯಿತಿ ಕಚೇರಿ   

ನಾಯಕನಹಟ್ಟಿ: ಸತತ 23 ತಿಂಗಳಿನಿಂದ ಅಧ್ಯಕ್ಷ-ಉಪಾಧ್ಯಕ್ಷರಿಲ್ಲದೆ ಬಿಕೋ ಎನ್ನುತ್ತಿದ್ದ ಪಟ್ಟಣ ಪಂಚಾಯಿತಿಗೆ ಮೀಸಲಾತಿ ಪಟ್ಟಿ ಹೊರಡಿಸಿದ್ದು, ಪಟ್ಟಿಯ ವಿರುದ್ಧ ಕಾಂಗ್ರೆಸ್ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

2015ರ ಜುಲೈ 24ರಂದು ನಾಯಕನಹಟ್ಟಿ ಗ್ರಾಮ ಪಂಚಾಯಿತಿಯಿಂದ ಪಟ್ಟಣ ಪಂಚಾಯಿತಿಗೆ ಮೇಲ್ದರ್ಜೆಗೇರಿತು. 8 ವಾರ್ಡ್‌ಗಳು ಸಾಮಾನ್ಯ ವರ್ಗಕ್ಕೆ, 2 ವಾರ್ಡ್‌ಗಳು ಪರಿಶಿಷ್ಟ ಜಾತಿಗೆ, 6 ವಾರ್ಡ್‌ಗಳು ಪರಿಶಿಷ್ಟ ಪಂಗಡಕ್ಕೆ ಒಟ್ಟು 16 ವಾರ್ಡ್‌ಗಳ ಮೀಸಲಾಯಿತು.

ಚುನಾವಣೆಯಲ್ಲಿ 8 ಬಿಜೆಪಿಯಿಂದ, 7 ಕಾಂಗ್ರೆಸ್‌ನಿಂದ, ಒಬ್ಬರು ಪಕ್ಷೇತರರಾಗಿ ಆಯ್ಕೆಯಾದರು. ಅಧ್ಯಕ್ಷ ಸ್ಥಾನವನ್ನು ಪರಿಶಿಷ್ಟ ಪಂಗಡಕ್ಕೆ, ಉಪಾಧ್ಯಕ್ಷ ಸ್ಥಾನವನ್ನು ಪರಿಶಿಷ್ಟ ಜಾತಿಗೆ ಮೀಸಲಿರಿಸಿ ಸರ್ಕಾರ ಮೊದಲ ಅವಧಿಗೆ ಮೀಸಲಾತಿ ನಿಗದಿಪಡಿಸಿತು. ಅಧಿಕಾರವಧಿ2018ರ ನ.30ಕ್ಕೆ ಕೊನೆಯಾಯಿತು. ಅಂದಿನಿಂದ ಇಂದಿನವರೆಗೂ ಪಟ್ಟಣ ಪಂಚಾಯಿತಿಗೆ ತಹಶೀಲ್ದಾರ್ ಆಡಳಿತಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು.

ADVERTISEMENT

ಎರಡನೇ ಅವಧಿಗೆ ಹೊರಡಿಸಿದ ಮೀಸಲಾತಿ ಪಟ್ಟಿಯಲ್ಲಿ ಪರಿಶಿಷ್ಟ ಜಾತಿ ಮಹಿಳೆಗೆ ಅಧ್ಯಕ್ಷ ಸ್ಥಾನ, ಹಿಂದುಳಿದ ವರ್ಗ ‘ಎ’ ಮಹಿಳೆಗೆ ಉಪಾಧ್ಯಕ್ಷ ಸ್ಥಾನ ಮೀಸಲಾಗಿದ್ದವು.ಬಿಜೆಪಿಯಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ಮಹಿಳಾ ಸದಸ್ಯೆ ಇರದ ಕಾರಣ ಕಾಂಗ್ರೆಸ್‌ನ ಮಂಜುಳಾ ಶ್ರೀಕಾಂತ್ ಅಧ್ಯಕ್ಷರಾಗುವುದು ಖಚಿತವಾಗಿತ್ತು. ಗುರುವಾರ ಬಿಡುಗಡೆಗೊಂಡ ಪಟ್ಟಿಯಲ್ಲಿ ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ, ಉಪಾಧ್ಯಕ್ಷ ಸ್ಥಾನ ಹಿಂದುಳಿದ ವರ್ಗ ‘ಎ’ಗೆ ಮೀಸಲಾಗಿದೆ. ಇದಕ್ಕೆ ಪಟ್ಟಣ ಪಂಚಾಯಿತಿ ಕಾಂಗ್ರೆಸ್ ಸದಸ್ಯರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ನೂತನ ಮೀಸಲಾತಿ ಪಟ್ಟಿಯಂತೆ ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿಯ ಎನ್.ಮಹಾಂತಣ್ಣ, ಬೋರಮ್ಮ ಓಬಣ್ಣ, ವೈ.ಗಿರಿಜಮ್ಮ, ಬೋರಮ್ಮ ದಿವಾಕರ್, ಎಸ್.ಪಿ.ನಾಗರಾಜ್, ಅನಸೂಯಮ್ಮ ಪ್ರಬಲ ಆಕಾಂಕ್ಷಿಗಳಾಗಿದ್ದಾರೆ. ಉಪಾಧ್ಯಕ್ಷ ಸ್ಥಾನ ಷಗುಫ್ತಾ ಯಾಸ್ಮೀನ್ ‌ಕೌಸರ್ ಅವರಿಗೆ ಬಹುತೇಕ ಖಚಿತವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.