ಹಿರಿಯೂರು: ಆಸ್ಪತ್ರೆಗೆ ವೈದ್ಯರು ಸಕಾಲಕ್ಕೆ ಬರುತ್ತಿಲ್ಲ. ಸಮರ್ಪಕವಾಗಿ ಕರ್ತವ್ಯ ನಿರ್ವಹಿಸುತ್ತಿಲ್ಲ ಎಂದು ಆರೋಪಿಸಿ ರೈತಸಂಘ ಮತ್ತು ಹಸಿರುಸೇನೆ ನೇತೃತ್ವದಲ್ಲಿ ತಾಲ್ಲೂಕಿನ ಜವನಗೊಂಡನಹಳ್ಳಿಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಶನಿವಾರ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಯಿತು.
‘ವೈದ್ಯರು ಆರೋಗ್ಯ ಕೇಂದ್ರ ಇರುವ ಊರಿನಲ್ಲಿಯೇ ನೆಲೆಸಬೇಕು ಎಂಬ ನಿಯಮ ಇಲ್ಲಿನ ವೈದ್ಯರಿಗೆ ಅನ್ವಯವಾಗಿಲ್ಲ. ಬೆಳಿಗ್ಗೆ 11ಕ್ಕೆ ಬರುವ ಅವರು 3 ಗಂಟೆಗೆ ವಾಪಸ್ ಹೋಗುತ್ತಾರೆ. ವಾರದಲ್ಲಿ ಒಂದೆರಡು ದಿನ ಬರುವುದೇ ಇಲ್ಲ. ಸರ್ಕಾರದಿಂದ ಸರಬರಾಜು ಮಾಡುವ ಔಷಧಿಗಳ ಬದಲಿಗೆ ಚೀಟಿ ಬರೆದು ಸ್ಥಳೀಯ ಔಷಧಿ ಅಂಗಡಿಗಳಲ್ಲಿ ಖರೀದಿಸಲು ಹೇಳುತ್ತಾರೆ. ವೈದ್ಯರು ಕರ್ತವ್ಯಕ್ಕೆ ಬರುವ ದಿನ ನೋಡಿಕೊಂಡು ಮನುಷ್ಯರಿಗೆ ಕಾಯಿಲೆಗಳು ಬರಬೇಕಿದೆ. ಇಂತಹ ವ್ಯಕ್ತಿ ನಮ್ಮೂರಿಗೆ ಬೇಡ. ತಕ್ಷಣ ವರ್ಗಾವಣೆ ಮಾಡಿ ಬೇರೆಯವರನ್ನು ನೇಮಿಸಬೇಕು’ ಎಂದು ರೈತ ಮುಖಂಡರು ಆಗ್ರಹಿಸಿದರು.
‘ಜವನಗೊಂಡನಹಳ್ಳಿ ರಾಷ್ಟ್ರೀಯ ಹೆದ್ದಾರಿ 48 ರಲ್ಲಿದ್ದು, ಹೋಬಳಿಯ ಮುಖ್ಯ ಕೇಂದ್ರವಾಗಿದೆ. ಇದನ್ನು ಅಪಘಾತಗಳ ವಲಯ ಎಂದು ಗುರುತಿಸಲಾಗಿದೆ. ಈ ಭಾಗದಲ್ಲಿ ಅಪಘಾತಗಳು ಸಂಭವಿಸಿದಾಗ ಗಾಯಾಳುಗಳನ್ನು 20 ಕಿ.ಮೀ. ದೂರವಿರುವ ಹಿರಿಯೂರು ಅಥವಾ ಶಿರಾ ನಗರಕ್ಕೆ ಕರೆದೊಯ್ಯುವ ವೇಳೆಗೆ ಸತ್ತೇ ಹೋಗಿರುತ್ತಾರೆ. ಈ ಆಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸಿ ದಿನದ 24 ಗಂಟೆಯೂ ವೈದ್ಯಕೀಯ ಸೇವೆ ದೊರೆಯುವಂತೆ ಮಾಡಬೇಕು’ ಎಂದು ರೈತರು ಮನವಿ ಮಾಡಿದರು.
ರೈತರ ಮನವಿ ಸ್ವೀಕರಿಸಿದ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶ್, ‘ಈ ಆಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸುವ ಪ್ರಸ್ತಾವ ಸರ್ಕಾರದ ಮಟ್ಟದಲ್ಲಿದೆ. ಅಲ್ಲಿಯವರೆಗೆ ಇಲ್ಲಿನ ವೈದ್ಯರು ಸರಿಯಾದ ಸಮಯಕ್ಕೆ ಕರ್ತವ್ಯಕ್ಕೆ ಹಾಜರಾಗುವಂತೆ ಕ್ರಮ ಕೈಗೊಳ್ಳುತ್ತೇವೆ’ ಎಂದು ಭರವಸೆ ನೀಡಿದರು.
ಪ್ರತಿಭಟನೆಯಲ್ಲಿ ರೈತಸಂಘದ ಜಿಲ್ಲಾಧ್ಯಕ್ಷ ಕೆ.ಟಿ. ತಿಪ್ಪೇಸ್ವಾಮಿ, ತಾಲ್ಲೂಕು ಅಧ್ಯಕ್ಷ ಆಲೂರು ಸಿದ್ದರಾಮಣ್ಣ, ಈರಣ್ಣ, ಎಂ.ಆರ್. ಈರಣ್ಣ, ಕೆ.ಆರ್. ಹಳ್ಳಿ ರಾಜಪ್ಪ, ರಾಜಕುಮಾರ, ಚಂದ್ರಪ್ಪ, ಸಣ್ಣ ತಿಮ್ಮಣ್ಣ, ವಿರೂಪಾಕ್ಷಪ್ಪ, ಕನ್ಯಪ್ಪ, ವಜೀರ್ ಸಾಬ್, ಜಯರಾಮಣ್ಣ, ಪೆಟ್ರೋಲ್ ಬಂಕ್ ಮಹಾಲಿಂಗಪ್ಪ, ಕಲೀಮ್ ಸಾಬ್, ನಟರಾಜ್, ಆರ್.ಕೆ. ಗೌಡ, ತಿಪ್ಪೇಸ್ವಾಮಿ, ಮಂಜುನಾಥ್, ಚಂದ್ರಪ್ಪ, ಶಿವಣ್ಣ, ತಿಮ್ಮಣ್ಣ, ಕುಮಾರ್ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.