ADVERTISEMENT

ಚಿಕ್ಕೇನಹಳ್ಳಿಯಲ್ಲಿ ಕುಡಿಯುವ ನೀರಿನ ಹಾಹಾಕಾರ

ಸಮಸ್ಯೆ ಬಗೆಹರಿಸದಿದ್ದರೆ ಜಿಲ್ಲಾ ಪಂಚಾಯಿತಿ ಕಚೇರಿ ಮುಂದೆ ಪ್ರತಿಭಟನೆ: ಗ್ರಾಮಸ್ಥರ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2018, 13:25 IST
Last Updated 16 ಡಿಸೆಂಬರ್ 2018, 13:25 IST
ಸಿರಿಗೆರೆ ಸಮೀಪದ ಚಿಕ್ಕೇನಹಳ್ಳಿ ಗ್ರಾಮಸ್ಥರು ಕುಡಿಯುವ ನೀರಿಗಾಗಿ ಕೊಳವೆಬಾವಿಯ ಮುಂದೆ ಸರತಿ ಸಾಲಿನಲ್ಲಿ ನಿಂತಿರುವುದು
ಸಿರಿಗೆರೆ ಸಮೀಪದ ಚಿಕ್ಕೇನಹಳ್ಳಿ ಗ್ರಾಮಸ್ಥರು ಕುಡಿಯುವ ನೀರಿಗಾಗಿ ಕೊಳವೆಬಾವಿಯ ಮುಂದೆ ಸರತಿ ಸಾಲಿನಲ್ಲಿ ನಿಂತಿರುವುದು   

ಸಿರಿಗೆರೆ: ಸಮೀಪದ ಚಿಕ್ಕೇನಹಳ್ಳಿ ಗ್ರಾಮದಲ್ಲಿ 3 ವರ್ಷಗಳಿಂದಲೂ ಕುಡಿಯುವ ನೀರಿಗೆ ತೊಂದರೆಯಾಗಿದೆ. ಕುಡಿಯುವ ನೀರಿಗಾಗಿ ಇರುವ ಕೊಳವೆಬಾವಿಗಳಲ್ಲಿ ಕೊಡಗಳನ್ನು ಇಟ್ಟು ಕಾಯುವುದು ಸಾಮಾನ್ಯವಾಗಿದೆ.

ಗ್ರಾಮದಲ್ಲಿ ಇರುವುದು ಎರಡು ಕೊಳವೆ ಬಾವಿ. ಅವುಗಳಿಂದ ನೀರು ತುಂಬಿಸಿಕೊಳ್ಳಲು ಬೈಕ್‌, ತಳ್ಳುಗಾಡಿ, ಎತ್ತಿನಬಂಡಿ, ಸೈಕಲ್‌ಗಳ ಮೂಲಕ ಊರಿನಿಂದ ಒಂದು ಕಿ.ಮೀ ತೆರಳಬೇಕು. ನೀರಿಗಾಗಿ ಬೆಳಿಗ್ಗೆ 3ಗಂಟೆಗೆ ತೆರಳಿ ಅಲ್ಲಿ ಕಾದು ಕುಳಿತುಕೊಳ್ಳಬೇಕು ಎಂಬುದು ಗ್ರಾಮಸ್ಥರ ಅಳಲು.

ಈ ಸಮಸ್ಯೆಯನ್ನು ಗಮನಿಸಿದ ಕೆಲವು ತೋಟದ ಮಾಲೀಕರು ನೀರನ್ನು ಕೊಟ್ಟಿದ್ದಾರೆ. ಕೆರೆಗಳಲ್ಲಿ ನೀರಿಲ್. ಅಲ್ಪ–ಸ್ವಲ್ಪ ನೀರನ್ನು ನಂಬಿರುವ ನಮ್ಮ ತೋಟದಲ್ಲಿ ಬೆಳೆಗಳ ಸ್ಥಿತಿ ಏನು ಎಂಬುದು ಮಾಲೀಕರ ಆತಂಕ.

ADVERTISEMENT

350 ಮನೆಗಳಿರುವ ಈ ಗ್ರಾಮದಲ್ಲಿ 1500 ಸಾವಿರ ಜನಸಂಖ್ಯೆ ಇದೆ. ಕೆರೆಗಳು, ಬಾವಿಗಳು ಬತ್ತಿಹೋಗಿದ್ದು, ನೀರಿನ ಸಮಸ್ಯೆ ಉಲ್ಬಣಿಸಿದೆ. ‘ಸಮಸ್ಯೆ ಉಲ್ಬಣವಾಗುವ ಮುನ್ನ ಪರಿಹಾರ ಕಂಡುಹಿಡಿಯುವ ಕೆಲಸವನ್ನು ಅಧಿಕಾರಿಗಳು ಮಾಡುತ್ತಿಲ್ಲ. ಸಮಸ್ಯೆಯಾದ ಬಳಿಕವೇ ಲಕ್ಷಾಂತರ ರೂಪಾಯಿ ಖರ್ಚು ತೋರಿಸಿ ಕೈತೊಳೆದುಕೊಳ್ಳುವ ಅಧಿಕಾರಿಗಳು ಶಾಶ್ವತ ಪರಿಹಾರದ ಗೋಜಿಗೂ ಹೋಗಿಲ್ಲ' ಎಂಬುದು ಗ್ರಾಮಸ್ಥರ ದೂರು.

ನೀರು ನಿರ್ವಹಣೆ ಗ್ರಾಮ ಪಂಚಾಯಿತಿ ಸಿಬ್ಬಂದಿ ನಿರ್ಲಕ್ಷ್ಯ ವಹಿಸಿದ್ದು, ನೀರುಗಂಟಿಗಳನ್ನು ಹೇಳಿದರೆ ಅವಾಚ್ಯ ಶಬ್ಧಗಳಿಂದ ಮಾತನಾಡುತ್ತಾನೆ. ‘ಪಿಡಿಒ ಬಸವರಾಜಪ್ಪ ಬಂದು 3 ವರ್ಷಗಳಾದರೂ ನಿರ್ಲಕ್ಷ್ಯ ವಹಿಸಿದ್ದಾರೆ’ ಎಂಬುದು ಗ್ರಾಮಸ್ಥರ ಆರೋಪ

'ನಮ್ಮಲ್ಲಿ ಕುಡಿಯುವ ನೀರಿನ ಶುದ್ಧಘಟಕಗಳಿಲ್ಲ. ಕುಡಿಯುವ ನೀರಿಗಾಗಿ ಒಂದುವರೆ ಕಿಮೀ ಬೊಮ್ಮವ್ವನಾಗ್ತಿಹಳ್ಳಿ ಅಥವಾ 3ಕಿಮೀ ದೂರದ ಸಿರಿಗೆರೆಗೆ ಹೋಗಬೇಕಾಗಿದೆ. ಮನುಷ್ಯನಿಗೆ ಕುಡಿಯುವ ನೀರಿಲ್ಲದೆ, ಕೃಷಿ ನಂಬಿ ಕಟ್ಟಿಕೊಂಡಿರುವ ಜಾನುವಾರುಗಳ ಗತಿ ಏನು' ಎಂಬುದು ಕರಿಯಪ್ಪರ ಬಸವರಾಜಪ್ಪ ಅವರ ಪ್ರಶ್ನೆ.

‘ಸಿರಿಗೆರೆಯಲ್ಲಿ ಪೂರೈಕೆಯಾಗುತ್ತಿರುವ ಶಾಂತಿಸಾಗರದ ನೀರಿಗಾಗಿ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಹತ್ತಿರ ನಾವು ಕೇಳಿಕೊಂಡಿದ್ದೆವು. ದೊಡ್ಡಾಲಘಟ್ಟದಲ್ಲಿ ತೊಟ್ಟಿ ನಿರ್ಮಿಸಿ ಅಲ್ಲಿಂದ ಚಿಕ್ಕೇನಹಳ್ಳಿ, ಕೋಣನೂರು, ಬೊಮ್ಮವ್ವನಾಗ್ತಿಹಳ್ಳಿಗೆ ನೀರು ಹರಿಸಲು ಸೂಚನೆ ನೀಡಿದ್ದಾರೆ. ಆ ಕೆಲಸ ಪೂರ್ಣವಾಗುವುದಕ್ಕೆ ಒಂದುವರೆ ವರ್ಷವಾದರೂ ಬೇಕಾಗುತ್ತದೆ. ಅಲ್ಲಿಯ ತನಕ ನಮ್ಮ ಸಮಸ್ಯೆಗೆ ಅಧಿಕಾರಿಗಳು ಸ್ಪಂದಿಸಬೇಕು’ ಎಂಬುದು ಗ್ರಾಮಸ್ಥರ ಆಗ್ರಹ.

'ಸಾಮಾನ್ಯವಾಗಿ ಬೇಸಿಗೆಯಲ್ಲಿ ಕುಡಿಯುವ ನೀರಿಗೆ ತೊಂದರೆಯಾಗುತ್ತದೆ. ಆದರೆ ಈ ಚಳಿಗಾಲದಲ್ಲಿಯೇ ಸಮಸ್ಯೆ ಎದುರಾಗಿದೆ.‌ ಸಂಬಂಧಪಟ್ಟ ಅಧಿಕಾರಿಗಳು ಶಾಶ್ವತ ಪರಿಹಾರ ಕಂಡುಕೊಂಡಿಲ್ಲ' ಎಂಬುದು ಗ್ರಾಮಸ್ಥರ ದೂರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.