ADVERTISEMENT

ಏಕಾಏಕಿ ಗೋಶಾಲೆ ಸ್ಥಗಿತ: ಕಂಗಾಲಾದ ರೈತರು, ಬಾರದ ಮಳೆ, ಮೇವಿಗೆ ಹಾಹಾಕಾರ

ನಿಯಮದ ನೆಪ ಹೇಳುವ ಅಧಿಕಾರಿಗಳು

ಕೊಂಡ್ಲಹಳ್ಳಿ ಜಯಪ್ರಕಾಶ
Published 17 ಜೂನ್ 2019, 20:15 IST
Last Updated 17 ಜೂನ್ 2019, 20:15 IST
ಮೊಳಕಾಲ್ಮುರು ತಾಲ್ಲೂಕಿನ ಮುತ್ತಿಗಾರಹಳ್ಳಿ ಮ್ಯಾಸರಹಟ್ಟಿ ಗೋಶಾಲೆ ಸ್ಥಗಿತಗೊಳಿಸಿರುವುದರಿಂದ ಸೋಮವಾರ ಸಗಣಿ ರಾಶಿಯಲ್ಲಿ ಬಿದ್ದಿರುವ ಮೇವು ತಿನ್ನುತ್ತಿರುವ ಜಾನುವಾರು
ಮೊಳಕಾಲ್ಮುರು ತಾಲ್ಲೂಕಿನ ಮುತ್ತಿಗಾರಹಳ್ಳಿ ಮ್ಯಾಸರಹಟ್ಟಿ ಗೋಶಾಲೆ ಸ್ಥಗಿತಗೊಳಿಸಿರುವುದರಿಂದ ಸೋಮವಾರ ಸಗಣಿ ರಾಶಿಯಲ್ಲಿ ಬಿದ್ದಿರುವ ಮೇವು ತಿನ್ನುತ್ತಿರುವ ಜಾನುವಾರು   

ಮೊಳಕಾಲ್ಮುರು (ಚಿತ್ರದುರ್ಗ): ಒಂದೆಡೆ ಮಳೆ ಇಲ್ಲ ಎಂದು ರೈತರು ತಲೆ ಮೇಲೆ ಕೈಹೊತ್ತು ಕೂತಿದ್ದಾರೆ. ಇದರ ನಡುವೆಯೇ ಗೋಶಾಲೆಗಳನ್ನು ಏಕಾಏಕಿ ಮುಚ್ಚಲು ಸರ್ಕಾರ ಆದೇಶ ಹೊರಡಿಸಿರುವುದರಿಂದ ದಿಕ್ಕು ತೋಚದಂತಾಗಿದೆ.

ಪ್ರತಿ ವರ್ಷ ಬರಪೀಡಿತ ಹಾಗೂ ಗೋಶಾಲೆಗಳನ್ನು ತೆರೆಯುವ ಜಿಲ್ಲೆಗಳ ಪೈಕಿ ಚಿತ್ರದುರ್ಗವೂ ಒಂದಾಗಿದೆ. ಅದರಲ್ಲೂ ಮೊಳಕಾಲ್ಮುರು, ಚಳ್ಳಕೆರೆ, ಹಿರಿಯೂರು ತಾಲ್ಲೂಕುಗಳಲ್ಲಿ ಗೋಶಾಲೆಗಳನ್ನು ಪ್ರತಿ ವರ್ಷ ತೆರೆಯಲಾಗುತ್ತಿದೆ. ಅದರಂತೆ ಈ ವರ್ಷವೂ ಈ ಮೂರು ತಾಲ್ಲೂಕುಗಳಲ್ಲಿ ಗೋಶಾಲೆಗಳನ್ನು ಆರಂಭಿಸಲಾಗಿತ್ತು. ಆದರೆ, ‘ರಾಷ್ಟ್ರೀಯ ವಿಪತ್ತುಗಳ ನಿರ್ವಹಣಾ ಮಂಡಳಿಯ (ಎನ್‌ಡಿಆರ್‌ಎಫ್‌) ನಿಯಮಾವಳಿಗಳನ್ನು ಮುಂದಿಟ್ಟುಕೊಂಡು ಜೂನ್‌ 15ರಂದು ಗೋಶಾಲೆಗಳನ್ನು ಮುಚ್ಚಲು ಜಿಲ್ಲಾಡಳಿತ ಕ್ರಮ ಕೈಗೊಂಡಿದೆ. ಇದರ ಪರಿಣಾಮ ಸಾವಿರಾರು ಜಾನುವಾರು ಬೀದಿಗೆ ಬಿದ್ದಿವೆ.

ಮೊಳಕಾಲ್ಮುರು ತಾಲ್ಲೂಕಿನ ರಾಂಪುರ, ಮುತ್ತಿಗಾರಹಳ್ಳಿ, ಮಾರಮ್ಮನಹಳ್ಳಿ, ಚಳ್ಳಕೆರೆ ತಾಲ್ಲೂಕಿನ ಉಳ್ಳಾರ್ಥಿ, ಹಿರೇಕೆರೆ ಕಾವಲು, ಚೌಳೂರು ಗೇಟ್, ಸಾಣಿಕೆರೆ, ಕಾಲುವೇಹಳ್ಳಿ, ಮಲ್ಲೂರಹಳ್ಳಿ, ನಾಗಗೊಂಡನಹಳ್ಳಿ, ಅಜ್ಜನಗುಡಿ, ಹಿರಿಯೂರು ತಾಲ್ಲೂಕಿನ ಟಿ. ಗೊಲ್ಲಹಳ್ಳಿ, ಹರ್ತಿಕೋಟೆ ಹಾಗೂ ಕರಿಯಾಲದಲ್ಲಿ ಗೋಶಾಲೆಗಳನ್ನು ಆರಂಭಿಸಲಾಗಿತ್ತು. ಒಂದು ತಿಂಗಳ ಹಿಂದೆಯೇ ಹಿರಿಯೂರಿನ ಗೋಶಾಲೆಗಳನ್ನು (ಟಿ. ಗೊಲ್ಲಹಳ್ಳಿಯಲ್ಲಿ 134, ಹರ್ತಿಕೋಟೆಯಲ್ಲಿ 190, ಕರಿಯಾಲದಲ್ಲಿ 70 ಜಾನುವಾರು ಇತ್ತು) ಮುಚ್ಚಲಾಗಿದೆ. ಜೂ.15ರಂದು ಮೊಳಕಾಲ್ಮುರು ತಾಲ್ಲೂಕಿನ ಗೋಶಾಲೆಗಳನ್ನೂ ಮುಚ್ಚಲಾಗಿದೆ.

ADVERTISEMENT

ಚಳ್ಳಕೆರೆ ತಾಲ್ಲೂಕಿನ ಗೋಶಾಲೆಗಳು ಮಾತ್ರ ಇನ್ನೂ ಇವೆ ಎಂದು ಪಶು ಸಂಗೋಪನಾ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು.

ಮುತ್ತಿಗಾರಹಳ್ಳಿ ಗೋಶಾಲೆಗೆ ಸೋಮವಾರ ‘ಪ್ರಜಾವಾಣಿ’ ಪ್ರತಿನಿಧಿ ಭೇಟಿ ನೀಡಿದಾಗ, ತಮಗೆ ಗೋಶಾಲೆ ಮುಚ್ಚಿರುವ ಬಗ್ಗೆ ಮಾಹಿತಿಯೇ ಇಲ್ಲ. ಮಳೆಯೂ ಸರಿಯಾಗಿ ಬಂದಿಲ್ಲ. ಮೇವು ಎಲ್ಲಿಯೂ ಸಿಗುತ್ತಿಲ್ಲ. ಮಳೆ ಬರುವ ತನಕ ಗೋಶಾಲೆ ಮುಂದುವರಿಸಬೇಕಿತ್ತು ಎಂದು ಅಲ್ಲಿದ್ದ ಹತ್ತಾರು ಜಾನುವಾರು ಸಾಕಾಣಿಕೆದಾರರು ಮನವಿ ಮಾಡಿದರು.

‘ಸಮಸ್ಯೆ ಆಲಿಸಲು ಯಾವುದೇ ಜನಪ್ರತಿನಿಧಿಗಳು, ಅಧಿಕಾರಿಗಳು ಸ್ಥಳಕ್ಕೆ ಬರುತ್ತಿಲ್ಲ. ಮೇವು ಬ್ಯಾಂಕ್‌ನಲ್ಲಿ ಪ್ರತಿ ಕೆ.ಜಿ.ಗೆ ₹ 2ರ ದರದಲ್ಲಿ ಮೇವು ನೀಡಲಾಗುವುದು ಎನ್ನುತ್ತಿದ್ದಾರೆ. ಬರಗಾಲದಲ್ಲಿ ನಮಗೇ ಕೆಲಸವಿಲ್ಲ. ಹೀಗಿರುವಾಗ ಮೇವನ್ನು ಖರೀದಿಸಿ ಹಾಕುವುದಾದರೂ ಹೇಗೆ? ಯಾರ ಬಳಿ ಕಷ್ಟ ಹೇಳಿಕೊಳ್ಳಬೇಕು ಎಂದು ತೋಚುತ್ತಿಲ್ಲ’ ಎಂದು ತಿಪ್ಪಯ್ಯ, ಪಾಲಯ್ಯ ಅಳಲು ತೋಡಿಕೊಂಡಿದರು.

‘ಗೋಶಾಲೆ ಮುಂದುವರಿಸಬೇಕಾದರೆ ಸರ್ಕಾರದ ಅನುಮತಿ ಕಡ್ಡಾಯ. ಇಲ್ಲದಿದ್ದರೆ ಅನುದಾನ ಬರುವುದಿಲ್ಲ. ಸರ್ಕಾರ ಹಂತದಲ್ಲಿ ಈ ಬಗ್ಗೆ ನಿರ್ಣಯ ಕೈಗೊಳ್ಳಬೇಕು. ಜನಪ್ರತಿನಿಧಿಗಳ ಪಾತ್ರ ಇದರಲ್ಲಿ ಬಹಳ ಮುಖ್ಯ. ನಮ್ಮ ಕೈಯಲ್ಲಿ ಏನೂ ಇಲ್ಲ’ ಎಂದು ಕಂದಾಯ ಇಲಾಖೆ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿದರು.

ದೇವರ ಎತ್ತುಗಳಿಗೂ ಮೇವಿಲ್ಲ

ಈ ಭಾಗದಲ್ಲಿ ಕಾಣಸಿಗುವ ಮ್ಯಾಸಬೇಡ ಜನಾಂಗದ ದೇವರ ಎತ್ತುಗಳಿಗೂ ಮೇವು ಸ್ಥಗಿತಗೊಳಿಸಲಾಗಿದೆ. ಮಾಲೀಕರು ಇಲ್ಲದ ಈ ಜಾನುವಾರಿಗೆ ಕಿಲಾರಿಗಳು ಮಾತ್ರ ಇರುತ್ತಾರೆ. ಅರಣ್ಯ ಪ್ರದೇಶದಲ್ಲಿ ಮೇವು ಇಲ್ಲದ ಕಾರಣ ಗೋಶಾಲೆಯಲ್ಲಿ ಆಶ್ರಯ ಪಡೆದಿದ್ದವು. ಮುಂದೆ ಜಾನುವಾರಿಗೆ ಮೇವು ಹೇಗೆ ಒದಗಿಸಬೇಕು ಎಂಬ ಆತಂಕಕ್ಕೆ ಕಿಲಾರಿಗಳು ಒಳಗಾಗಿದ್ದಾರೆ.

ಯಾವ ಗೋಶಾಲೆಯಲ್ಲಿ ಎಷ್ಟು ಜಾನುವಾರು?

ಮೊಳಕಾಲ್ಮುರು ತಾಲ್ಲೂಕು: ಮಾರಮ್ಮನಹಳ್ಳಿ 1,663, ರಾಂಪುರ 722, ಮುತ್ತಿಗಾರಹಳ್ಳಿ 2,220,

ಚಳ್ಳಕೆರೆ ತಾಲ್ಲೂಕು: ಉಳ್ಳಾರ್ಥಿ 1,335, ಚೌಳೂರು ಗೇಟ್ 1,380, ಅಜ್ಜನಗುಡಿ 835, ಸಾಣಿಕೆರೆ 282, ಹಿರೇಕೆರೆ ಕಾವಲು 1,060, ಕಾಲುವೇಹಳ್ಳಿ 426, ಮಲ್ಲೂರಹಳ್ಳಿ 756

* ಎನ್‌.ಡಿ.ಆರ್‌.ಎಫ್‌ ನಿಯಮಾವಳಿ ಪ್ರಕಾರ 90 ದಿನಗಳ ನಂತರ ಗೋಶಾಲೆ ಮುಂದುವರಿಸಲು ಅವಕಾಶವಿಲ್ಲ. ಹೀಗಾಗಿ ಗೋಶಾಲೆ ಮುಚ್ಚಿದ್ದೇವೆ.

-ಅನಿತಾಲಕ್ಷ್ಮೀ,ತಹಶೀಲ್ದಾರ್, ಮೊಳಕಾಲ್ಮುರು

* ಬರಸ್ಥಿತಿಯಲ್ಲಿ ಜನಪ್ರತಿನಿಧಿಗಳು ಕಾಳಜಿ ತೋರಿಸಿ ನೆರವಿಗೆ ಬರಬೇಕು. ಆದರೆ, ಇಲ್ಲಿ <br/>ಗೋಶಾಲೆಗಳತ್ತ ಯಾರೊಬ್ಬರೂ ತಿರುಗಿ ನೋಡದಿರುವುದು ಬೇಸರದ ಸಂಗತಿ ಆಗಿದೆ.

-ಜಾಫರ್ ಷರೀಫ್,ಸಿಪಿಐ ಕಾರ್ಯದರ್ಶಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.