ADVERTISEMENT

ಮೇವು ಲಭ್ಯತೆಯ ನಿಖರ ಮಾಹಿತಿ ಸಲ್ಲಿಸಿ: ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್‌.ಜೆ

ಬರ ನಿರ್ವಹಣೆ ಕುರಿತು ಸಭೆಯಲ್ಲಿ ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್‌.ಜೆ ಸೂಚನೆ

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2023, 14:28 IST
Last Updated 16 ನವೆಂಬರ್ 2023, 14:28 IST
ಚಿತ್ರದುರ್ಗದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಬರ ನಿರ್ವಹಣೆ ಕುರಿತ ಸಭೆಯಲ್ಲಿ ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್‌.ಜೆ ಮಾತನಾಡಿದರು
ಚಿತ್ರದುರ್ಗದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಬರ ನಿರ್ವಹಣೆ ಕುರಿತ ಸಭೆಯಲ್ಲಿ ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್‌.ಜೆ ಮಾತನಾಡಿದರು   

ಚಿತ್ರದುರ್ಗ: ಜಿಲ್ಲೆಯಲ್ಲಿ ಬರದ ಪರಿಸ್ಥಿತಿ ಎದುರಾಗಿರುವುದರಿಂದ ಜಾನುವಾರುಗಳಿಗೆ ಮೇವಿನ ಸಮಸ್ಯೆ ಆಗದಂತೆ ಎಚ್ಚರವಹಿಸಬೇಕು. ಮೇವು ಲಭ್ಯತೆಯ ನಿಖರ ಮಾಹಿತಿ ನೀಡಬೇಕು ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್‌.ಜೆ ಪಶುಸಂಗೋಪನೆ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಬರ ನಿರ್ವಹಣೆ ಕುರಿತು ಹಮ್ಮಿಕೊಂಡಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಮೇವಿನ ಲಭ್ಯತೆ ವಿಚಾರದಲ್ಲಿ ಅಧಿಕಾರಿಗಳು ಕೊಡುವ ವರದಿ ಬಹಳ ಮುಖ್ಯವಾಗಿದೆ. ಇದರಿಂದ ಬರ ಪರಿಹಾರ ಕಾರ್ಯಕೈಗೊಳ್ಳಲು ಅನುಕೂಲವಾಗಲಿದೆ. ಸದ್ಯದ ಮೇವಿನ ಸ್ಥಿತಿಗತಿ ಹಾಗೂ ಮುಂದಿನ 90 ದಿನಗಳಿಗೆ ಎಷ್ಟು ಮೇವು ಬೇಕಾಗಬಹುದು ಎಂಬ ನಿಖರ ಅಂಕಿ–ಅಂಶ ನೀಡಬೇಕು. ಬೇಡಿಕೆಗೆ ಅನುಗುಣವಾಗಿ ಗೋಶಾಲೆ ತೆರೆಯಲು ಬೇಕಾಗಿರುವ ಸ್ಥಳ, ಕುಡಿಯುವ ನೀರು, ಮೇವು ಸೇರಿದಂತೆ ಅಗತ್ಯ ಮೂಲಸೌಕರ್ಯಕ್ಕೆ ಸಿದ್ಧತೆ ಮಾಡಿಕೊಳ್ಳಬೇಕು’ ಎಂದು ತಾಕೀತು ಮಾಡಿದರು.

ADVERTISEMENT

ಚಳ್ಳಕೆರೆ ಹಾಗೂ ಮೊಳಕಾಲ್ಮುರು ತಾಲ್ಲೂಕಿನಲ್ಲಿ ಜನರು ವಲಸೆ ಹೋಗುತ್ತಿರುವುದು ಗಮನಕ್ಕೆ ಬಂದಿದೆ. ಈ ಎರಡು ತಾಲ್ಲೂಕಿನಲ್ಲಿ ಜಾಬ್‌ ಕಾರ್ಡ್‌ ನೋಂದಣಿ ಮಾಡಿಸಲು ಹೆಚ್ಚಿನ ಆದ್ಯತೆ ನೀಡಬೇಕು. ಇದರಿಂದ ಜನರು ವಲಸೆ ಹೋಗುವುದು ತಪ್ಪಲಿದೆ. ಈ ಕುರಿತು ಜಾಗೃತಿ ಮೂಡಿಸಬೇಕು ಎಂದು ಸಲಹೆ ನೀಡಿದರು.

ಮುಂಬರುವ ದಿನಗಳಲ್ಲಿ ಕುಡಿಯುವ ನೀರಿಗೆ ತೊಂದರೆ ಉಂಟಾಗಬಹುದಾದ ಸಮಸ್ಯಾತ್ಮಕ ಗ್ರಾಮಗಳನ್ನು ಗುರುತಿಸಬೇಕು. ಜತೆಗೆ ಆರು ತಿಂಗಳವರೆಗೆ ನೀರಿನ ಸಮಸ್ಯೆ ಆಗದಂತೆ ಕ್ರಿಯಾ ಯೋಜನೆ ತಯಾರಿಸಿ ಅಗತ್ಯ ಕ್ರಮವಹಿಸಬೇಕು. ಸದ್ಯಕ್ಕೆ ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಇಲ್ಲ. ಮಳೆಯ ಕೊರತೆ ಕಾರಣ ಮುಂದಿನ ದಿನಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಕಂಡುಬರುವ ಸಾಧ್ಯತೆ ಇರುವುದರಿಂದ ಮುಂಜಾಗ್ರತಾ ಕ್ರಮವಾಗಿ ಯೋಜನೆ ರೂಪಿಸಬೇಕು ಎಂದರು.

ಕುಡಿಯುವ ನೀರಿನ ಸಮಸ್ಯೆ ಕಂಡುಬಂದ ತಕ್ಷಣ ಕೊಳವೆಬಾವಿ ಅವಶ್ಯಕತೆ ಇದ್ದರೆ ತಕ್ಷಣ ಕೊರೆಯಿಸಬೇಕು. ಈ ಬಗ್ಗೆ ತಹಶೀಲ್ದಾರ್‌ಗಳ ಬಳಿ ಮಾಹಿತಿ ಇರಬೇಕು. ಜನಪ್ರತಿನಿಧಿಗಳೊಂದಿಗೆ ಸಮಾಲೋಚಿಸಿ, ಜಲಜೀವನ್‌ ಮಿಷನ್, ಗ್ರಾಮ ಪಂಚಾಯಿತಿ 15ನೇ ಹಣಕಾಸು ಯೋಜನೆಯಡಿ ಅನುದಾನ ಬಳಸಿಕೊಂಡು ಕೊಳವೆಬಾವಿ ಕೊರೆಸಲು ವ್ಯವಸ್ಥೆ ಮಾಡಿಕೊಳ್ಳಬೇಕು ಎಂದು ಸೂಚಿಸಿದರು.

ಪ್ರತಿ 15 ದಿನಗಳಿಗೊಮ್ಮೆ ಕುಡಿಯುವ ನೀರಿನ ಗುಣಮಟ್ಟ ಪರೀಕ್ಷೆಗೆ ಒಳಪಡಿಸಬೇಕು. ನಗರ ಸ್ಥಳೀಯ ಸಂಸ್ಥೆಯ ಅಧಿಕಾರಿಗಳು ನೀರಿನ ಪರೀಕ್ಷೆಯ ವರದಿ ಇಟ್ಟುಕೊಳ್ಳಬೇಕು. ಆರೋಗ್ಯ ಇಲಾಖೆಯಿಂದ ಮೈಕ್ರೋ ಬಯೋಲಾಜಿ ಪರೀಕ್ಷೆ ಹಾಗೂ ಗ್ರಾಮೀಣ ಕುಡಿಯುವ ಸರಬರಾಜು ಇಲಾಖೆಯಿಂದ ರಾಸಾಯನಿಕ ಪರೀಕ್ಷೆ ಮಾಡಿಸಬೇಕು ಎಂದು ತಾಕೀತು ಮಾಡಿದರು.

ಜಿಲ್ಲಾ ಪಂಚಾಯಿತಿ ಸಿಇಒ ಎಸ್‌.ಜೆ.ಸೋಮಶೇಖರ್‌, ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಟಿ. ಕುಮಾರಸ್ವಾಮಿ, ಉಪವಿಭಾಗಾಧಿಕಾರಿ ಎಂ. ಕಾರ್ತಿಕ್‌, ಕೃಷಿ ಇಲಾಖೆ ಜಂಟಿ ಕೃಷಿ ನಿರ್ದೇಶಕ ಮಂಜುನಾಥ್‌, ಪಶುಸಂಗೋಪನಾ ಇಲಾಖೆ ಉಪನಿರ್ದೇಶಕ ಡಾ. ಬಾಬುರತ್ನ ಇದ್ದರು.

ಶುದ್ಧ ಕುಡಿಯುವ ನೀರಿನ ಘಟಕ ಸರಿಪಡಿಸಿ

ಪ್ರಸ್ತುತ ದಿನಗಳಲ್ಲಿ ಬಹಳಷ್ಟು ಜನರು ಶುದ್ಧ ಕುಡಿಯುವ ನೀರಿನ ಘಟಕದ ನೀರನ್ನು ಬಳಸುತ್ತಿದ್ದಾರೆ. ಜಿಲ್ಲೆಯಲ್ಲಿ ದುರಸ್ತಿಯಲ್ಲಿರುವ ಎಲ್ಲಾ ನೀರಿನ ಘಟಕಗಳನ್ನು ಸರಿಪಡಿಸಬೇಕು ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್‌.ಜೆ ಅವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು. ಜನರು ಘಟಕದ ನೀರನ್ನು ಬಳಸುವಾಗ ಅವುಗಳೇ ಸರಿಯಾಗಿ ಇಲ್ಲದಿದ್ದರೆ ಹೇಗೆ? ಸಂಬಂಧಪಟ್ಟ ಏಜೆನ್ಸಿ ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲವೇ ಎಂದು ಪ್ರಶ್ನಿಸಿದರು. ದುರಸ್ತಿಯಲ್ಲಿರುವ ಎಲ್ಲಾ ಘಟಕಗಳನ್ನು ಶೀಘ್ರ ಸರಿಪಡಿಸಿ ಜನರಿಗೆ ಲಭ್ಯವಾಗುವಂತೆ ಕ್ರಮ ವಹಿಸಬೇಕು ಎಂದು ತಾಕೀತು ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.