ADVERTISEMENT

ಮದುವೆಗೆ ಕೂಡಿಟ್ಟ ಹಣವೂ ದೋಖಾ

ಜನರ ಉಳಿತಾಯದ ಹಣ, ಠೇವಣಿ ದೋಚಿದ ಆರೋಪ

​ಪ್ರಜಾವಾಣಿ ವಾರ್ತೆ
Published 18 ಜೂನ್ 2019, 15:43 IST
Last Updated 18 ಜೂನ್ 2019, 15:43 IST
ಖಾಸಗಿ ಹಣಕಾಸು ಸಂಸ್ಥೆಯಲ್ಲಿ ಠೇವಣಿ ಇಟ್ಟು ಮೋಸ ಹೋದ ಮಹಿಳೆಯರು ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಅವರ ಬಳಿ ಮಂಗಳವಾರ ಅಳಲು ತೋಡಿಕೊಂಡರು
ಖಾಸಗಿ ಹಣಕಾಸು ಸಂಸ್ಥೆಯಲ್ಲಿ ಠೇವಣಿ ಇಟ್ಟು ಮೋಸ ಹೋದ ಮಹಿಳೆಯರು ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಅವರ ಬಳಿ ಮಂಗಳವಾರ ಅಳಲು ತೋಡಿಕೊಂಡರು   

ಚಿತ್ರದುರ್ಗ: ಪುತ್ರಿಯ ದಾಂಪತ್ಯ ಜೀವನ ಮುರಿದು ಬಿದ್ದು ಮೂರು ವರ್ಷಕ್ಕೆ ₹ 1 ಲಕ್ಷ ಜೀವನಾಂಶ ಸಿಕ್ಕಿತು. ಮರು ಮುದುವೆಗೆ ನೆರವಾಗಲೆಂದು ಆ ತಾಯಿ ಖಾಸಗಿ ಹಣಕಾಸು ಸಂಸ್ಥೆಯಲ್ಲಿ ನಿಶ್ಚಿತ ಠೇವಣಿ ಇಟ್ಟಿದ್ದರು. ಅವಧಿ ಪೂರೈಸುವ ಮುನ್ನವೇ ಸಂಸ್ಥೆ ಬಾಗಿಲು ಮುಚ್ಚಿದ್ದು, ಅಬೀದಾ ಕುಟುಂಬದಲ್ಲೀಗ ಕತ್ತಲು ಆವರಿಸಿದೆ.

ಚಿತ್ರದುರ್ಗದ ಬಸವೇಶ್ವರ ಟಾಕೀಸು ರಸ್ತೆಯಲ್ಲಿರುವ ‘ಗ್ರೇಟ್‌ ಫೋರ್ಟ್‌ ಮೈನಾರಿಟಿಸ್‌ ಮಲ್ಟಿಪರ್ಪಸ್‌ ಸೌಹಾರ್ದ್‌ ಕೋ–ಆಪರೇಟಿವ್‌ ಲಿಮಿಟೆಡ್‌’ ಇಂತಹ ಹಲವು ಕುಟುಂಬಗಳ ಬೆಳಕು ಆರಿಸಿದೆ. ನ್ಯಾಯ ಕೊಡಿಸುವಂತೆ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಮುಂದೆ ಅಂಗಲಾಚುತ್ತಿದ್ದ ಪರಿ ಮೋಸ ಹೋದವರ ಅಸಹಾಯಕತೆಗೆ ಸಾಕ್ಷಿಯಾಗಿತ್ತು.

ಅಬೀದಾ ಅವರದು ಕಡುಬಡತನದ ಕುಟುಂಬ. ಪತಿ ದೂರವಾದ ಬಳಿಕ ಇಬ್ಬರು ಹೆಣ್ಣು ಮಕ್ಕಳನ್ನು ಪೊರೆಯಲು ಅವರು ಮನೆಗೆಲಸ ಮಾಡಿಕೊಂಡಿದ್ದರು. ಕೂಡಿಟ್ಟ ಅಲ್ಪ ಹಣದಲ್ಲಿ ಪುತ್ರಿಯ ಮದುವೆ ಮಾಡಿದ್ದರು. ಸಂಸಾರದ ಬಂಡಿ ಆರು ತಿಂಗಳಿಗೆ ಕಳಚಿ ಬಿದ್ದಿತು. ಕಾನೂನಾತ್ಮಕವಾಗಿ ವಿಚ್ಛೇದನ ಪಡೆಯುವ ಪ್ರಕ್ರಿಯೆ ಮೂರು ವರ್ಷ ನಡೆಯಿತು. ಕೊನೆಗೂ ನ್ಯಾಯಾಲಯದಲ್ಲಿ ಪ್ರಕರಣ ಇತ್ಯರ್ಥವಾಗಿ ಪುತ್ರಿಗೆ ₹ 1 ಲಕ್ಷ ಜೀವನಾಂಶ ಸಿಕ್ಕಿತು. ಮರು ಮದುವೆಗೆ ಬಳಸಿಕೊಳ್ಳಲು ‘ಗ್ರೇಟ್‌ ಫೋರ್ಟ್‌ ಮೈನಾರಿಟಿಸ್‌ ಮಲ್ಟಿಪರ್ಪಸ್‌ ಸೌಹಾರ್ದ್‌ ಕೋ–ಆಪರೇಟಿವ್‌ ಲಿಮಿಟೆಡ್‌’ನಲ್ಲಿ ಒಂದು ವರ್ಷಕ್ಕೆ ನಿಶ್ಚಿತ ಠೇವಣಿ ಇಟ್ಟಿದ್ದರು. ಅವಧಿ ಪೂರ್ಣಗೊಳ್ಳಲು ಇನ್ನೂ ನಾಲ್ಕು ತಿಂಗಳು ಬಾಕಿ ಇತ್ತು. ಆಗಲೇ ಇವರಿಗೆ ಮೋಸದ ಜಾಲಕ್ಕೆ ಸಿಲುಕಿದ್ದು ಗಮನಕ್ಕೆ ಬಂದಿದೆ.

ADVERTISEMENT

ಬಸವೇಶ್ವರ ಟಾಕೀಸು ರಸ್ತೆಯಲ್ಲಿ ಕಚೇರಿ ಹೊಂದಿದ್ದ ಹಣಕಾಸು ಸಂಸ್ಥೆ ಎರಡೂವರೆ ದಶಕಗಳಿಂದ ಚಿತ್ರದುರ್ಗ ನಗರದಲ್ಲಿತ್ತು. ಗುಜರಿ ವ್ಯಾಪಾರಿಗಳು, ಬೀಡಿ ಕಟ್ಟುವ ಕಾರ್ಮಿಕರು, ಮನೆಗೆಲಸದ ಮಹಿಳೆಯರು, ತರಕಾರಿ ವ್ಯಾಪಾರಸ್ಥರು ಈ ಕಂಪನಿಯಲ್ಲಿ ಹೂಡಿಕೆ ಮಾಡಿದ್ದರು. ಪಿಗ್ಮಿ, ನಿಶ್ಚಿತ ಠೇವಣಿ ಹಾಗೂ ಸಂಚಿತ ಠೇವಣಿಯ ಮೂಲಕ ಹಲವರು ಉಳಿತಾಯದ ಹಣ ಹೂಡಿಕೆ ಮಾಡಿದ್ದರು. ಎರಡು ದಶಕ ಠೇವಣಿದಾರರ ವಿಶ್ವಾಸ ಉಳಿಸಿಕೊಂಡಿದ್ದ ಸಂಸ್ಥೆ, ಈಚೆಗೆ ಕೆಲ ವರ್ಷಗಳಿಂದ ಮೋಸದ ದಾರಿ ತುಳಿದಿತ್ತು ಎಂಬುದು ವಂಚನೆಗೊಳಗಾದವರ ಆರೋಪ.

ಗುಜರಿ ವ್ಯಾಪಾರಿ ಅಬ್ದುಲ್‌ ಅವರಿಗೆ ಹಣಕಾಸು ಸಂಸ್ಥೆಯೊಂದಿಗೆ 28 ವರ್ಷಗಳ ಸುದೀರ್ಘ ಒಡನಾಟವಿದೆ. ಇದೇ ಮೊದಲ ಬಾರಿಗೆ ಮೋಸ ಹೋಗಿದ್ದೇವೆ ಎಂಬುದು ಅವರ ಅಳಲು. ₹ 1 ಸಾವಿರದಿಂದ ₹ 15 ಲಕ್ಷದವರೆಗೂ ಹಣ ಕಳೆದುಕೊಂಡವರು ಇಲ್ಲಿದ್ದಾರೆ.

‘ಆರಂಭದ ದಿನಗಳಲ್ಲಿ ನಿತ್ಯ ₹ 10 ಪಿಗ್ಮಿ ಕಟ್ಟುತ್ತಿದ್ದೆ. ಈಗ ಅದು ₹ 100ಕ್ಕೆ ಏರಿಕೆ ಆಗಿತ್ತು. ಪ್ರತಿ ವರ್ಷವೂ ಹಣವನ್ನು ಬಡ್ಡಿ ಸಮೇತ ಮರುಪಾವತಿ ಮಾಡುತ್ತಿದ್ದರು. ವಿಶ್ವಾಸ ಉಳಿಸಿಕೊಂಡಿದ್ದರಿಂದ ಮಗಳ ಶಿಕ್ಷಣಕ್ಕೆ ಅನುಕೂಲವಾಗಲಿ ಎಂದು ಒಂದಷ್ಟು ಹಣವನ್ನು ನಿಶ್ಚಿತ ಠೇವಣಿ ಇಟ್ಟಿದ್ದೆ. ಹೀಗೆ ಮೋಸ ಹೋಗುತ್ತೇವೆ ಎಂಬುದು ಗೊತ್ತಾಗಲಿಲ್ಲ’ ಎಂದರು ಅಬ್ದುಲ್.

ಈ ಸಂಸ್ಥೆಯಲ್ಲಿ ಆರು ಮಂದಿ ಪಿಗ್ಮಿ ಸಂಗ್ರಹಿಸುತ್ತಿದ್ದರು. ತಿಂಗಳಿಂದ ನಿಯಮಿತವಾಗಿ ಪಿಗ್ಮಿ ಸಂಗ್ರಹಿಸಲು ಇವರು ಬರುತ್ತಿರಲಿಲ್ಲ. ಇದರಿಂದ ಅನುಮಾನಗೊಂಡ ಅನೇಕರು ಪಿಗ್ಮಿ ಸಂಗ್ರಹಿಸುತ್ತಿದ್ದ ರಾಜು ಎಂಬುವರನ್ನು ಪ್ರಶ್ನಿಸಿದಾಗ ಸಂಸ್ಥೆ ನಷ್ಟದಲ್ಲಿರುವುದು ಗೊತ್ತಾಗಿದೆ. ಇದನ್ನು ವಿಚಾರಿಸಲು ತೆರಳಿದಾಗ ಸಂಸ್ಥೆ ಬಾಗಿಲು ಮುಚ್ಚಿದ್ದು ಗಮನಕ್ಕೆ ಬಂದಿದೆ.

ವಂಚನೆಗೆ ಒಳಗಾಗಿರುವ ಸಂಗತಿ ತಿಳಿಯುತ್ತಿದ್ದಂತೆ ಅಘಾತಗೊಂಡ ಹಲವರು, ತಿಂಗಳ ಹಿಂದೆ ನಗರ ಠಾಣೆಗೆ ದೂರು ನೀಡಿದ್ದರು. ಮಧ್ಯಸ್ಥಿಕೆ ವಹಿಸಿದ ಪೊಲೀಸರು, ಹಣ ಪಾವತಿಸುವಂತೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಸೈಯದ್ ಶಕೀಲ್‌ ಹಾಗೂ ವ್ಯವಸ್ಥಾಪಕ ಜಬೀವುಲ್ಲಾಗೆ ತಾಕೀತು ಮಾಡಿದ್ದರು. ದಿನಗಳು ಉರುಳಿದರೂ ಹಣ ಮಾತ್ರ ಠೇವಣಿದಾರರ ಕೈಸೇರುತ್ತಿಲ್ಲ. ಠಾಣೆಯಲ್ಲಿ ಪ್ರಕರಣವೂ ದಾಖಲಾಗುತ್ತಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.