ADVERTISEMENT

ಶಾಸಕ ಕೆ.ಸಿ.ವೀರೇಂದ್ರ ಸಹೋದರ ನಾಗರಾಜ್ ಇಡಿ ವಶಕ್ಕೆ

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2025, 10:19 IST
Last Updated 22 ಆಗಸ್ಟ್ 2025, 10:19 IST
   

ಚಿತ್ರದುರ್ಗ: ಜಾರಿ ನಿರ್ದೇಶನಾಲಯದ (ಇಡಿ) ಅಧಿಕಾರಿಗಳು ಶುಕ್ರವಾರ ಚಳ್ಳಕೆರೆಯಲ್ಲಿರುವ ಚಿತ್ರದುರ್ಗ ಶಾಸಕ ಕೆ.ಸಿ.ವೀರೇಂದ್ರ ಹಾಗೂ ಅವರ ಸಹೋದರರ ಮನೆ ಮೇಲೆ ದಾಳಿ ನಡೆಸಿದ್ದಾರೆ. ವೀರೇಂದ್ರ ಸಹೋದರ ಕೆ.ಸಿ.ನಾಗರಾಜ್‌ ಅವರನ್ನು ವಶಕ್ಕೆ ಪಡೆದಿರುವ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದಾರೆ.

3 ಕಾರ್‌ನಲ್ಲಿ ಬಂದ 10 ಅಧಿಕಾರಿಗಳ ತಂಡ ಏಕಕಾಲದಲ್ಲಿ ನಾಲ್ಕು ಕಡೆಗಳಲ್ಲಿ ದಾಳಿ ನಡೆಸಿತು. ಶಾಸಕ ಕೆ.ಸಿ.ವೀರೇಂದ್ರ ಅವರ ಮನೆ, ಸಹೋದರರಾದ ಕೆ.ಸಿ.ನಾಗರಾಜ್‌, ಕೆ.ಸಿ.ತಿಪ್ಪೇಸ್ವಾಮಿ ಅವರ ಮನೆಗಳಿಗೆ ತೆರಳಿ ಪರಿಶೀಲನೆ ನಡೆಸುತ್ತಿದ್ದಾರೆ.

ದಾಳಿ ನಡೆಯುತ್ತಿದ್ದಂತೆ ಅಪಾರ ಸಂಖ್ಯೆಯ ಜನರು ವೀರೇಂದ್ರ ಮನೆಯತ್ತ ಬರುತ್ತಿದ್ದಾರೆ. ಸಿಆರ್‌ಪಿಎಫ್‌ ಯೋಧರು ಮನೆ ಸುತ್ತಲೂ ಭದ್ರತೆ ಕೈಗೊಂಡಿದ್ದಾರೆ. ಶಾಸಕರ ಮನೆಗೆ ಸಂಪರ್ಕಿಸುವ ಎಲ್ಲಾ ರಸ್ತೆಗಳನ್ನು ಬ್ಯಾರಿಕೇಡ್‌ ಹಾಕಿ ಬಂದ್‌ ಮಾಡಲಾಗಿದೆ.

ADVERTISEMENT

ದಾಳಿಯ ನಂತರ ಶಾಸಕರ ಸಹೋದರ ಕೆ.ಸಿ.ನಾಗರಾಜ್‌ ವಕೀಲರೊಬ್ಬರನ್ನು ಕರೆದುಕೊಂಡು ಬಂದರು. ಅಧಿಕಾರಿಗಳು ನಾಗರಾಜ್‌ ಅವರನ್ನು ವಶಕ್ಕೆ ಪಡೆದು ವಕೀಲ ಉಮೇಶ್‌ ಅವರನ್ನು ವಾಪಸ್‌ ಕಳುಹಿಸಿದರು. ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಕೆ.ಸಿ.ನಾಗರಾಜ್‌ ‘ನಾನು ಬೆಂಗಳೂರಿನಿಂದ ಬಂದಿದ್ದೇನೆ. ಯಾವ ಕಾರಣಕ್ಕೆ ದಾಳಿ ನಡೆಸಿದ್ದಾರೆ ಎಂಬ ಬಗ್ಗೆ ಮಾಹಿತಿ ಇಲ್ಲ. ಯಾವುದೇ ತನಿಖೆಗೂ ನಾವು ಸಿದ್ಧರಾಗಿದ್ದೇವೆ. ಶಾಸಕ ವೀರೇಂದ್ರ ಅವರೂ ಶೀಘ್ರ ಬರುತ್ತಾರೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.