
ಚಿತ್ರದುರ್ಗ: ‘ಅವಕಾಶಗಳನ್ನು ಯಾರೂ ಚಿನ್ನದ ತಟ್ಟೆಯಲ್ಲಿಟ್ಟು ತಂದು ಕೊಡುವುದಿಲ್ಲ. ನಾವೇ ಅವಕಾಶಗಳನ್ನು ಅರಸಿಕೊಂಡು ಮುನ್ನಡೆಯಬೇಕು. ವಿನಯ, ವಿಧೇಯತೆ ಜೊತೆಗೆ ಪರಿಶ್ರಮ ಪಟ್ಟಾಗ ಮಾತ್ರ ಯಶಸ್ಸು ನಮ್ಮದಾಗುತ್ತದೆ’ ಎಂದು ಕೊಪ್ಪಳ ವಿಶ್ವವಿದ್ಯಾಲಯದ ಕುಲಪತಿ ಬಿ.ಕೆ.ರವಿ ಹೇಳಿದರು.
ದೇವರಾಜ ಅರಸು ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಶುಕ್ರವಾರ ನಡೆದ ಪರಿಣಿತ್–2025 ಪದವಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
‘ವಿದ್ಯಾರ್ಥಿಗಳಿಗೆ ಜ್ಞಾನಾರ್ಜನೆ ಜೊತೆಗೆ ಕೌಶಲಗಳೂ ಅತ್ಯಂತ ಅವಶ್ಯಕ. ಎಲ್ಲವನ್ನೂ ಕೃತಕ ಬುದ್ಧಿಮತ್ತೆ (ಎಐ) ಮಾಡುತ್ತದೆ ಎಂದು ನಿರೀಕ್ಷಿಸಲು ಸಾಧ್ಯವಿಲ್ಲ. ತಂತ್ರಜ್ಞಾನವನ್ನು ಆರಾಧಿಸುವ ಜೊತೆಗೆ ಜ್ಞಾನಾರ್ಜನೆಯನ್ನೂ ವಿಸ್ತಾರ ಮಾಡಿಕೊಳ್ಳಬೇಕು. ಗುರುತೋರಿದ ಮಾರ್ಗ, ತಂದೆ–ತಾಯಿಯ ಆಶೀರ್ವಾದದ ಮೂಲಕ ಮುನ್ನಡೆದರೆ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ’ ಎಂದರು.
ದಾವಣಗೆರೆ ವಿವಿ ಕುಲಪತಿ ಬಿ.ಡಿ.ಕುಂಬಾರ ಮಾತನಾಡಿ ‘ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ಸಂವಹನ ಕೊರತೆ ಎದ್ದು ಕಾಣುತ್ತಿದೆ. ಯಾವುದಾದರೂ ಒಂದು ಭಾಷೆಯಲ್ಲಿ ಸ್ಪಷ್ಟತೆ ಸಾಧನೆಗೆ ಆದ್ಯತೆ ನೀಡಬೇಕು. ನಾವು ಇಂದು ಕೇವಲ ಉದ್ಯೋಗವನ್ನು ಬಯಸಿ ವಿದ್ಯಾಭ್ಯಾಸ ಮಾಡುತ್ತಿದ್ದೇವೆ. ಅದನ್ನು ಬಿಟ್ಟು ಇತರರಿಗೆ ಉದ್ಯೋಗ ನೀಡುವ ಹಂತಕ್ಕೆ ಬೆಳೆಯಬೇಕು. ಸಣ್ಣ ಪುಟ್ಟ ಉದ್ಯಮಗಳನ್ನು ಸೃಷ್ಟಿಸುವ ಅವಕಾಶಗಳು ಇಂದು ವಿದ್ಯಾರ್ಥಿಗಳ ಮುಂದಿವೆ’ ಎಂದು ಹೇಳಿದರು.
ಸಂಸ್ಥೆಯ ಸಂಸ್ಥಾಪಕ ಕಾರ್ಯದರ್ಶಿ, ಶಾಸಕ ಎಂ.ಚಂದ್ರಪ್ಪ ಮಾತನಾಡಿ ‘ಬಡವರ್ಗದ ಜನರಿಗೆ ಗುಣಮಟ್ಟದ ಶಿಕ್ಷಣ ನೀಡಬೇಕು ಎಂಬ ಉದ್ದೇಶದಿಂದ ದೇವರಾಜ ಅರಸು ಶಿಕ್ಷಣ ಸಂಸ್ಥೆ ಸ್ಥಾಪನೆ ಮಾಡಲಾಯಿತು. 43 ವರ್ಷಗಳಿಂದ ಇಲ್ಲಿಯವರೆಗೂ 80,000 ಮಕ್ಕಳು ಇಲ್ಲಿ ಶಿಕ್ಷಣ ಪಡೆದಿದ್ದಾರೆ. 22,000ಕ್ಕೂ ಹೆಚ್ಚು ಮಂದಿ ಪದವೀಧರರಾಗಿದ್ದಾರೆ. 500ಕ್ಕೂ ಹೆಚ್ಚು ಜನರು ಶಿಕ್ಷಕರು, ಉಪನ್ಯಾಸಕರು ನಮ್ಮ ಸಂಸ್ಥೆಯ ಜೊತೆಯಲ್ಲಿ ಬದುಕು ಕಟ್ಟಿಕೊಂಡಿದ್ದಾರೆ’ ಎಂದರು.
ಸಂಸ್ಥೆಯ ಸಿಇಒ ಎಂ.ಸಿ.ರಘುಚಂದನ್ ಮಾತನಾಡಿ ‘80–90ರ ದಶಕದಲ್ಲಿ ಪದವಿ ಅಧ್ಯಯನ ಮಾಡುವುದೇ ಒಂದು ದೊಡ್ಡ ಸಾಧನೆಯಾಗಿತ್ತು. ಆದರೆ ಈಗ ಪದವಿ ಎಂಬುದು ಕೇವಲ ಒಂದು ಕಾಗದದ ಚೂರಾಗಿದೆ. ವಿದ್ಯಾರ್ಥಿಗಳಿಗೆ ಕೌಶಲ ಅತ್ಯಂತ ಅವಶ್ಯಕವಾಗಿದೆ. ಇದನ್ನು ಮನಗಂಡು ನಾವು ‘ಕ್ರಿಯಾ’ ಹೆಸರಿನಲ್ಲಿ ಕೌಶಲ ತರಬೇತಿ ಸಂಸ್ಥೆಯನ್ನು ತೆರೆದಿದ್ದೇವೆ. ಪದವಿ ಪಡೆಯುವ ವಿದ್ಯಾರ್ಥಿಗಳಿಗೆ ಉದ್ಯೋಗ ಸೌಲಭ್ಯವನ್ನೂ ಒದಗಿಸುವುದು ಇದರ ಉದ್ದೇಶವಾಗಿದೆ’ ಎಂದರು.
₹ 50 ಸಾವಿರ ನಗದು ಪ್ರಶಸ್ತಿ: ಪದವಿಯಲ್ಲಿ ಉತ್ತಮ ಅಂಕಗಳೊಂದಿಗೆ ಅದ್ಯಾಪಕರಿಂದ ಉತ್ತಮ ಹೆಸರು ಗಳಿಸಿದ ವಿದ್ಯಾರ್ಥಿಯೊಬ್ಬರಿಗೆ ಪ್ರತಿ ವರ್ಷ ₹ 50,000 ನಗದು, ಚಿನ್ನದ ಪದಕ ಹಾಗೂ ಸ್ಮರಣಿಕೆ ನೀಡಿ ಗೌರವಿಸುವ ಪ್ರಕ್ರಿಯೆಗೆ ಕಾರ್ಯಕ್ರಮದಲ್ಲಿ ಚಾಲನೆ ನೀಡಲಾಯಿತು. ಮೊದಲ ವರ್ಷ ಬಿ.ಇಡಿಯಲ್ಲಿ ಉತ್ತಮ ವಿದ್ಯಾರ್ಥಿ ಎಂದು ಹೆಸರು ಗಳಿಸಿದ ಬಿ.ಕೃಷ್ಣಮೂರ್ತಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಬಡತನದಲ್ಲೇ ಪದವಿ ಪಡೆದು ಉತ್ತಮ ಹೆಸರು ಗಳಿಸಿರುವ ಕೃಷ್ಣಮೂರ್ತಿ ಸಮಾರಂಭದಲ್ಲಿ ಮೆಚ್ಚುಗೆ ಗಳಿಸಿದರು.
ಸಮಾರಂಭದಲ್ಲಿ ಸಂಸ್ಥೆಯ ಆಡಳಿತಾಧಿಕಾರಿ ಎಚ್.ಚಂದ್ರಕಲಾ, ಅಧ್ಯಕ್ಷೆ ಶಯಶ್ವಿನಿ ಕಿರಣ್, ಡೀನ್ ಬಿ.ಸಿ.ಅನಂತರಾಜು, ಪ್ರಾಚಾರ್ಯರಾದ ಕೆ.ಪಿ.ನಾಗಭೂಷಣಶೆಟ್ಟಿ, ಎ.ಜೆ.ಶಿವಕುಮಾರ್, ಎಂ.ಎಂ.ಮಹಾಂತೇಶ್, ಮೊಹಮ್ಮದ್ ಮುತಾಹರ್, ನವಾಜ್ ಅಹಮದ್ ಇದ್ದರು.
ಪದವಿ ದಿನವೇ ಹೆರಿಗೆ...
ಬಿ.ಇಡಿ ವಿದ್ಯಾರ್ಥಿನಿ ಮೈತ್ರಿ ಅವರಿಗೆ ಶುಕ್ರವಾರ ಬಹಳ ವಿಶೇಷ ದಿನವಾಗಿತ್ತು. ಬಹಳ ಆತುರಾತುರವಾಗಿ ಅವರು ಪದವಿ ಸ್ವೀಕಾರ ಮಾಡಲು ಅವರು ತುದಿಗಾಲಮೇಲೆ ನಿಂತಿದ್ದರು. ತುಂಬು ಗರ್ಭಿಣಿಯಾಗಿದ್ದ ಅವರು ತಕ್ಷಣವೇ ಹೆರಿಗೆಗಾಗಿ ಆಸ್ಪತ್ರೆಗೆ ದಾಖಲಾಗಬೇಕಾಗಿತ್ತು. ಸಂಸ್ಥೆಯ ಸಿಇಒ ಎಂ.ಸಿ.ರಘುಚಂದನ್ ಅವರು ಮೈತ್ರಿ ಅವರನ್ನು ವೇದಿಕೆಗೆ ಕರೆಸಿಕೊಂಡು ಪದವಿ ಪ್ರದಾನ ಮಾಡಿ ಹೆರಿಗೆಗೆ ಶುಭ ಕೋರಿದರು. ಕಾಲೇಜು ಆವರಣದಲ್ಲಿದ್ದ ಸಾವಿರಾರು ವಿದ್ಯಾರ್ಥಿಗಳು ಕರತಾಡನ ವ್ಯಕ್ತಪಡಿಸುವ ಮೂಲಕ ಶುಭಾಶಯ ತಿಳಿಸಿತು. ‘ಮೈತ್ರಿ ಅವರು ಬಿ.ಇಡಿ ಪದವಿ ಪಡೆಯುತ್ತಿರುವ ದಿನವೇ ತಾಯಿ ಪದವಿಯನ್ನೂ ಪಡೆಯುತ್ತಿರುವುದು ಸಂತೋಷದ ವಿಷಯ’ ಎಂದು ರಘುಚಂದನ್ ಬಣ್ಣಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.