ADVERTISEMENT

ಚಿತ್ರದುರ್ಗ: ಮುಂಜಾನೆ ಗರ್ಭಗುಡಿ ಪ್ರವೇಶಿಸಿದ ಏಕನಾಥೇಶ್ವರಿ

ಗುಡಿ ತುಂಬಿದ ದೃಶ್ಯ ಕಣ್ತುಂಬಿಕೊಂಡ ಭಕ್ತರು – ಒಲ್ಲದ ಮನಸ್ಸಿನಿಂದ ಹೊರಟ ದೇವಿ

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2025, 16:19 IST
Last Updated 13 ಏಪ್ರಿಲ್ 2025, 16:19 IST
ಚಿತ್ರದುರ್ಗದ ಕೋಟೆಯ ಏಕನಾಥೇಶ್ವರಿ ದೇವಿಯ ದೇಗುಲದಲ್ಲಿ ಮೂಲ, ಉತ್ಸವ ಮೂರ್ತಿ
ಚಿತ್ರದುರ್ಗದ ಕೋಟೆಯ ಏಕನಾಥೇಶ್ವರಿ ದೇವಿಯ ದೇಗುಲದಲ್ಲಿ ಮೂಲ, ಉತ್ಸವ ಮೂರ್ತಿ   

ಚಿತ್ರದುರ್ಗ: ಕೋಟೆನಾಡಿನ ಅಧಿದೇವತೆ ಏಕನಾಥೇಶ್ವರಿ ದೇವಿಯ ಉತ್ಸವ ಮೂರ್ತಿಯ ಗುಡಿ ತುಂಬುವ ಕಾರ್ಯ ಭಾನುವಾರ ಮುಂಜಾನೆ ಭಕ್ತರ ಸಮ್ಮುಖದಲ್ಲಿ ನಡೆಯಿತು.

ಪಾದಗುಡಿ ಆವರಣದಲ್ಲಿ ಶನಿವಾರ ಸಂಜೆ ಸಿಡಿ ಮಹೋತ್ಸವದ ಬಳಿಕ ದೇವಿಯ ಉತ್ಸವ ಮೂರ್ತಿ ಮೆರವಣಿಗೆ ಸಂಪ್ರದಾಯದಂತೆ ಉಚ್ಚಂಗಿ ಯಲ್ಲಮ್ಮ ದೇವಿ ದೇವಸ್ಥಾನ, ದೊಡ್ಡಪೇಟೆ, ಉಜ್ಜಯನಿ ಮಠ, ಕೂಡಲೀ ಶೃಂಗೇರಿ ಮಠ, ಜೋಗಿಮಟ್ಟಿ ರಸ್ತೆ, ಸುಣ್ಣದ ಗುಮ್ಮಿ, ಜಟ್ ಪಟ್ ನಗರ, ಪ್ರಶಾಂತ ನಗರ, ಕರುವಿನಕಟ್ಟೆ ವೃತ್ತ, ಫಿಲ್ಟರ್ ಹೌಸ್, ಕೋಟೆ ಮಾರ್ಗವಾಗಿ ಮೇಲುದುರ್ಗ ತಲುಪಿತು.

ಜೆಎಂ ರಸ್ತೆಯ ಮೊದಲ ತಿರುವಿನಲ್ಲಿ ಬರಗೇರಮ್ಮ- ಏಕನಾಥೇಶ್ವರಿ ದೇವಿ, ನಾಲ್ಕನೇ ಕ್ರಾಸ್‌ನ ಸೇತುವೆ ಬಳಿ ಏಕನಾಥೇಶ್ವರಿ-ತ್ರಿಪುರಸುಂದರಿ ತಿಪ್ಪಿನಘಟ್ಟಮ್ಮ ದೇವಿ ಮುಖಾಮುಖಿಯಾದರು. ಈ ಮೂಲಕ ಅಕ್ಕನ ದರ್ಶನವನ್ನು ತಂಗಿಯರಿಬ್ಬರು ಪಡೆದರು. ಇದೇ ವೇಳೆ ಭಕ್ತರು ಸಂಭ್ರಮಿಸಿದರು. ಇದೇ ವೇಳೆ ಆಯಾ ಭಾಗದ ಭಕ್ತರು ಪೂಜೆ, ಮಹಾಮಂಗಳಾರತಿ ಸಲ್ಲಿಸಿದರು.

ADVERTISEMENT

ಕೋಟೆ ಆವರಣದಿಂದ ಒಲ್ಲದ ಮನಸ್ಸಿನಿಂದ ಹೊರಟ ದೇವಿಯ ಉತ್ಸವ ಮೂರ್ತಿಯನ್ನು ಮೇಲುದುರ್ಗ ತಲುಪಿದಾಗ ಮುಂಜಾನೆ ಆಗಿತ್ತು. ಜಾತ್ರಾ ಮಹೋತ್ಸವ ಅಂಗವಾಗಿ ಒಂದು ವಾರದಿಂದಲೂ ಊರಾಡಿದ ದೇವಿಯ ಉತ್ಸವ ಮೂರ್ತಿಗೆ ಶಾಸ್ತ್ರ, ಸಂಪ್ರದಾಯದಂತೆ ಗಂಗಾಪೂಜೆ ನೆರವೇರಿತು. ಅರ್ಚಕರು ಮೂರ್ತಿಯನ್ನು ಹೊತ್ತು ಗುಡಿಯೊಳಗೆ ಹೆಜ್ಜೆ ಹಾಕಿದರು. ಗುಡಿ ತುಂಬಿದ ದೃಶ್ಯವನ್ನು ನೆರೆದಿದ್ದ ಭಕ್ತರು ಕಣ್ತುಂಬಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.