ADVERTISEMENT

ಮತದಾರರಿಗೆ ಕೋಳಿ, ಹಣ್ಣು ಹಂಚಿಕೆ

ಶಿವಗಂಗಾ ಚಿತ್ತಯ್ಯ
Published 25 ಡಿಸೆಂಬರ್ 2020, 6:17 IST
Last Updated 25 ಡಿಸೆಂಬರ್ 2020, 6:17 IST
ಚಳ್ಳಕೆರೆ ಡಾಬಾ, ಹೋಟೆಲ್‌ಗಳಲ್ಲಿ ಕಿಕ್ಕಿರಿದ ಜನ
ಚಳ್ಳಕೆರೆ ಡಾಬಾ, ಹೋಟೆಲ್‌ಗಳಲ್ಲಿ ಕಿಕ್ಕಿರಿದ ಜನ   

ಚಳ್ಳಕೆರೆ: ಗ್ರಾಮ ಪಂಚಾಯಿತಿ ಚುನಾವಣಾ ಪ್ರಚಾರ ಮತ್ತು ಮತಯಾಚಿಸುವ ಕಾರ್ಯ ದಿನ ದಿನಕ್ಕೂ ರಂಗೇರುತ್ತಿದೆ. ಚುನಾವಣೆಯಲ್ಲಿ ಗೆಲ್ಲಲು ಕೆಲ ಅಭ್ಯರ್ಥಿಗಳು ಮನೆ ಮನೆಗೆ ಕೋಳಿ ಮತ್ತು ಹಣ್ಣು ವಿತರಿಸುತ್ತಿದ್ದಾರೆ.

ತೀರಾ ಪೈಪೋಟಿ ಇರುವ ತಾಲ್ಲೂಕಿನ ಪರಶುರಾಂಪುರ ಮತ್ತು ಚಳ್ಳಕೆರೆ ಕಸಬಾ ಹೋಬಳಿ ವ್ಯಾಪ್ತಿಯ ದೊಡ್ಡಚೆಲ್ಲೂರು, ಪಿ.ಮಹದೇವಪುರ, ಕ್ಯಾದಿಗುಂಟೆ, ಪಗಡಲಬಂಡೆ, ಚೌಳೂರು, ಹುಲಿಕುಂಟೆ, ಬೆಳಗೆರೆ, ಕಾಪರಹಳ್ಳಿ, ಟಿ.ಎನ್.ಕೋಟೆ, ತೊರೆಬೀರನಹಳ್ಳಿ, ದೇವರಮರಿಕುಂಟೆ, ಸಾಣಿಕೆರೆ ಮುಂತಾದ ಗ್ರಾಮದಲ್ಲಿ ಮತ ಸೆಳೆದುಕೊಳ್ಳಲು ಮತದಾರರಿಗೆ ಕೋಳಿ ಮತ್ತು ಹಣ್ಣು ಹಂಚಿಕೆಕಾರ್ಯ ನಾಲ್ಕೈದು ದಿನದಿಂದ ನಿರಂತರವಾಗಿ ನಡೆಯುತ್ತಲೇ ಇದೆ.

ಇನ್ನು ಕೆಲವರು ಟ್ರ್ಯಾಕ್ಟರ್, ಕಾರು, ಟಾಟಾಎಸಿ ಮುಂತಾದ ವಾಹನಗಳಲ್ಲಿ ಯುವ ಮತದಾರರನ್ನು ರಾತ್ರಿ ಹೊತ್ತು ನಗರದ ಡಾಬಾ, ಹೋಟೆಲ್‍ಗಳಿಗೆ ಕರೆದೊಯ್ದು ಮದ್ಯ ಮತ್ತು ಬಾಡೂಟ ಕೊಡಿಸುತ್ತಿದ್ದಾರೆ.

ADVERTISEMENT

ಇದರಿಂದ ಪ್ರತಿದಿನ ನಗರದ ಡಾಬಾ, ಹೋಟೆಲ್‍ಗಳಲ್ಲಿ ಜನ ಕಿಕ್ಕಿರಿದಿರುತ್ತಾರೆ. ದಿನಕ್ಕೆ ಡಾಬಾದಲ್ಲಿ ₹ 30 ಸಾವಿರದಿಂದ ₹ 40 ಸಾವಿರ ವ್ಯಾಪಾರ ನಡೆಯುತ್ತಿದೆ.

‘ಒಂದೇ ದಿನ 2-3 ಪಾರ್ಟಿಯಲ್ಲಿ ಪಾಲ್ಗೊಂಡ ಜನರು ಗೀರೈಸ್, ಎಗ್‍ರೈಸ್, ಮಟನ್, ಚಿಕನ್ ಬಿರಿಯಾನಿ, ಗೋಬಿ, ಪಿಶ್‍ಫ್ರೈ ಮುಂತಾದ ಕರಿದ ಆಹಾರ ಪದಾರ್ಥವನ್ನು ಅರ್ಧಂಬರ್ಧ ತಿಂದು ತಟ್ಟೆಯಲ್ಲೇ ಬಿಟ್ಟು ಹೋಗುತ್ತಾರೆ’ ಎಂದು ಹೋಟೆಲ್‌ ಕೆಲಸಗಾರರೊಬ್ಬರು ಮಾಹಿತಿ ನೀಡಿದರು.

ಒಂದೇ ಗ್ರಾಮದಲ್ಲಿ 2-3 ಗುಂಪಿನ ಕಡೆಯವರು ಪ್ರತಿದಿನ ತೋಟದ ಮನೆಯಲ್ಲಿ ಬಾಡೂಟ ಏರ್ಪಡಿಸುತ್ತಿದ್ದಾರೆ. ಊಟಕ್ಕೆ ಹೋಗದ ಮಹಿಳೆ ಮತ್ತು ಮಕ್ಕಳಿಗೆ ಮನೆಗೊಂದು ಕೋಳಿ ಮತ್ತು ಸಸ್ಯಹಾರಿಗಳಿಗೆ ಒಂದು ಕೆ.ಜಿ ದ್ರಾಕ್ಷಿ, ಬಾಳೆ, ಕಿತ್ತಲೆ ಹಣ್ಣಿನ ಜತೆಗೆ ತಮ್ಮ ಗುರುತಿನ ಬ್ಯಾಲೆಟ್ ಪತ್ರವನ್ನು ಹ್ಯಾಂಡ್ ಕವರ್‌ಲ್ಲಿ ಇಟ್ಟು ಪ್ರತಿ ಮನೆಗೆ ತಲುಪಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಪ್ರಮುಖ ರಾಜಕೀಯ ಪಕ್ಷಗಳ ಮುಖಂಡರು ಗ್ರಾಮಗಳಿಗೆ ಭೇಟಿ ನೀಡಿ ಕಾರ್ಯಕರ್ತರ ಸಭೆ ನಡೆಸುವ ಮೂಲಕ ಪಕ್ಷದ ಬೆಂಬಲಿಗರನ್ನು ಚುನಾವಣೆಯಲ್ಲಿ ಗೆಲ್ಲಿಸುವ ಕಸರತ್ತು ನಡೆಸುತ್ತಿದ್ದಾರೆ.

ಆರ್ಥಿಕವಾಗಿ ಸದೃಢವಾಗಿಲ್ಲದವರು ಸಮುದಾಯ ಭವನ ನಿರ್ಮಾಣ ಮತ್ತು ದೇವಸ್ಥಾನ ಅಭಿವೃದ್ಧಿ ಕೆಲಸವನ್ನು ಮುಂದಿಟ್ಟು ಕೊಂಡು ಮತಯಾಚನೆಯಲ್ಲಿ ತೊಡಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.