ADVERTISEMENT

ಚಿತ್ರದುರ್ಗ: ಖರ್ಚಿನ ಮಿತಿ ‘ಮೀರದ’ ಅಭ್ಯರ್ಥಿಗಳು!

ಚುನಾವಣೆ: ಆಯೋಗಕ್ಕೆ ವೆಚ್ಚದ ಮಾಹಿತಿ ಸಲ್ಲಿಸಿದ 76 ಜನ

​ಪ್ರಜಾವಾಣಿ ವಾರ್ತೆ
Published 6 ಜುಲೈ 2023, 7:18 IST
Last Updated 6 ಜುಲೈ 2023, 7:18 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ    

- ಜಿ.ಬಿ.ನಾಗರಾಜ್‌

ಚಿತ್ರದುರ್ಗ: ಈಚೆಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಅಭ್ಯರ್ಥಿಗಳ ಖರ್ಚಿನ ಮಾಹಿತಿಯನ್ನು ಚುನಾವಣಾ ಆಯೋಗ ಬಹಿರಂಗಪಡಿಸಿದೆ. ಯಾವೊಬ್ಬ ಅಭ್ಯರ್ಥಿಯೂ ಆಯೋಗ ಹೇರಿದ್ದ ಮಿತಿಯನ್ನು ಮೀರದಂತೆ ಖರ್ಚು ಮಾಡಿದ್ದಾಗಿ ಮಾಹಿತಿ ಒದಗಿಸಿದ್ದಾರೆ.

ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳಿಗೆ 76 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ನಿಗದಿತ ಕಾಲಮಿತಿಯಲ್ಲಿ ಎಲ್ಲರೂ ಚುನಾವಣಾ ಆಯೋಗಕ್ಕೆ ಮಾಹಿತಿ ಸಲ್ಲಿಸಿದ್ದಾರೆ. ಅಭ್ಯರ್ಥಿಗಳ ಮಾಹಿತಿಯನ್ನು ಪರಾಮರ್ಶೆ ಮಾಡಿದ ಆಯೋಗ, ವೆಚ್ಚದ ವಿವರಗಳನ್ನು ಸಾರ್ವಜನಿಕರಿಗೆ ಮುಕ್ತವಾಗಿ ಲಭ್ಯವಾಗುವಂತೆ ಜಾಲತಾಣದಲ್ಲಿ ಪ್ರಕಟಿಸಿದೆ.

ADVERTISEMENT

ಚುನಾವಣಾ ಅಕ್ರಮಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ವೆಚ್ಚದ ಮಿತಿಯನ್ನು ಆಯೋಗ ನಿಗದಿಪಡಿಸಿದೆ. ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಯೊಬ್ಬರ ವೆಚ್ಚವನ್ನು ಆಯೋಗವು ₹ 40 ಲಕ್ಷಕ್ಕೆ ಮಿತಿಗೊಳಿಸಿದೆ. 2013ರಲ್ಲಿ ₹ 16 ಲಕ್ಷ ಹಾಗೂ 2018ರಲ್ಲಿ ಇದು ₹ 28 ಲಕ್ಷಕ್ಕೆ ನಿಗದಿ ಮಾಡಲಾಗಿತ್ತು. ಹಣ ಹಂಚಿಕೆ, ಆಮಿಷ ಒಡ್ಡುವುದು ಹಾಗೂ ಉಡುಗೊರೆ ನೀಡುವುದನ್ನು ತಡೆಯುವುದು ಇದರ ಪ್ರಮುಖ ಆಶಯ.

ಚುನಾವಣಾ ನೀತಿ ಸಂಹಿತೆ ಜಾರಿಯಾದ ದಿನದಿಂದಲೂ ಅಭ್ಯರ್ಥಿಯ ವೆಚ್ಚವನ್ನು ಲೆಕ್ಕ ಹಾಕಲಾಗುತ್ತದೆ. ಪಕ್ಷಗಳು ಅಭ್ಯರ್ಥಿಗಳನ್ನು ಘೋಷಣೆ ಮಾಡುವ ಮುನ್ನವೇ ವೆಚ್ಚದ ಮೇಲೆ ನಿಗಾ ಇಡಲು ತಂಡವನ್ನು ನೇಮಕ ಮಾಡಲಾಗುತ್ತದೆ. ಚುನಾವಣೆಯ ವೆಚ್ಚದ ವೀಕ್ಷಕರನ್ನು ನಿಯೋಜಿಸಲಾಗಿತ್ತು. ನಾಮಪತ್ರ ಸಲ್ಲಿಕೆ ಮಾಡುವ ಹಿಂದಿನ ದಿನ ಪ್ರತ್ಯೇಕ ಬ್ಯಾಂಕ್‌ ಖಾತೆಯೊಂದನ್ನು ತೆರೆದು ಚುನಾವಣಾ ವ್ಯವಹಾರಗಳನ್ನು ನಡೆಸುವಂತೆ ಅಭ್ಯರ್ಥಿಗಳಿಗೆ ಸೂಚಿಸಲಾಗಿತ್ತು. ಆಯೋಗ ಎಷ್ಟೇ ನಿರ್ಬಂಧ ವಿಧಿಸಿ, ನಿಗಾ ಇಟ್ಟರೂ ಅಭ್ಯರ್ಥಿಗಳು ಮಾಡಿದ ವೆಚ್ಚವನ್ನು ಪರಿಪೂರ್ಣವಾಗಿ ಲೆಕ್ಕ ಹಾಕಲು ಸಾಧ್ಯವಾಗಿಲ್ಲ.

ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಅಭ್ಯರ್ಥಿ ಅಥವಾ ಪಕ್ಷ ನಡೆಸುವ ಪ್ರಚಾರ ಸಭೆ, ರ‍್ಯಾಲಿ, ಸಮಾವೇಶಗಳು ವೆಚ್ಚಕ್ಕೆ ಸೇರ್ಪಡೆಯಾಗುತ್ತವೆ. ತಾರಾ ಪ್ರಚಾರಕರು ಧಾವಿಸಿ ನಡೆಸಿದ ಮತಯಾಚನೆ ಕೂಡ ಅಭ್ಯರ್ಥಿಯ ವೆಚ್ಚದ ಪಟ್ಟಿ ಸೇರುತ್ತದೆ. ಕರಪತ್ರ, ಭಿತ್ತಿಪತ್ರ, ಸಾಮಾಜಿಕ ಜಾಲತಾಣದಲ್ಲಿ ಮತದಾರರನ್ನು ಸೆಳೆಯುವ ತಂತ್ರ ಸೇರಿ ಪ್ರಚಾರಕ್ಕೆ ಬಳಕೆ ಮಾಡುವ ಸಾಮಗ್ರಿ ಕೂಡ ವೆಚ್ಚವೆಂದು ಪರಿಗಣಿಸಲಾಗುತ್ತದೆ.

‘ಪ್ರಜಾ ಪ್ರತಿನಿಧಿ ಕಾಯ್ದೆ 1951’ರ ಪ್ರಕಾರ ಚುನಾವಣೆಗೆ ಸ್ಪರ್ಧಿಸಿದ ಪ್ರತಿಯೊಬ್ಬ ಅಭ್ಯರ್ಥಿ ಫಲಿತಾಂಶ ಪ್ರಕಟವಾದ 30 ದಿನಗಳ ಒಳಗೆ ಆಯೋಗಕ್ಕೆ ಮಾಹಿತಿ ನೀಡಬೇಕು. ನಿಗದಿತ ಕಾಲಮಿತಿಯಲ್ಲಿ ಮಾಹಿತಿ ನೀಡದೇ ಇದ್ದರೆ ಕಾನೂನು ಕ್ರಮ ಕೈಗೊಳ್ಳಲು ಆಯೋಗಕ್ಕೆ ಅವಕಾಶವಿದೆ. ಮಿತಿಗಿಂತ ಹೆಚ್ಚು ವೆಚ್ಚ ಮಾಡಿ ಆಯ್ಕೆಯಾದವರು ಶಾಸಕ ಸ್ಥಾನ ಕಳೆದುಕೊಳ್ಳುವ ಸಾಧ್ಯತೆಯೂ ಇದೆ. ಅಭ್ಯರ್ಥಿ ನಡೆಸುವ ಸಭೆಗೆ ಹಾಕಿದ ಕುರ್ಚಿ, ಪೆಂಡಾಲ್‌, ಧ್ವನಿವರ್ಧಕ, ವಾಹನಗಳಿಗೆ ಆಯೋಗವೇ ದರ ನಿಗದಿ ಮಾಡಿದೆ. ತಪ್ಪು ಲೆಕ್ಕ ನೀಡಿದರೂ ಸಿಕ್ಕಿ ಬೀಳುವ ಅಪಾಯವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.