ADVERTISEMENT

ತುಂಗಭದ್ರಾ ಹಿನ್ನೀರು ಯೋಜನೆ ಜಾರಿಗೆ ಒತ್ತು

ಜೆ.ಬಿ.ಹಳ್ಳಿ ಪಂಚಾಯಿತಿಯಲ್ಲಿ ಜನಸಂಪರ್ಕ ಸಭೆ:

​ಪ್ರಜಾವಾಣಿ ವಾರ್ತೆ
Published 6 ಜನವರಿ 2019, 14:39 IST
Last Updated 6 ಜನವರಿ 2019, 14:39 IST
ಮೊಳಕಾಲ್ಮುರು ತಾಲ್ಲೂಕಿನ ಜಾಗೀರ ಬುಡ್ಡೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಶನಿವಾರ ಶಾಸಕ ಬಿ. ಶ್ರೀರಾಮುಲು ಜನಸಂಪರ್ಕ ಸಭೆ ನಡೆಸಿದರು
ಮೊಳಕಾಲ್ಮುರು ತಾಲ್ಲೂಕಿನ ಜಾಗೀರ ಬುಡ್ಡೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಶನಿವಾರ ಶಾಸಕ ಬಿ. ಶ್ರೀರಾಮುಲು ಜನಸಂಪರ್ಕ ಸಭೆ ನಡೆಸಿದರು   

ಮೊಳಕಾಲ್ಮುರು: ತೀವ್ರ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿರುವ ತಾಲ್ಲೂಕಿಗೆ ತುಂಗಭದ್ರಾ ಹಿನ್ನೀರು ಮೂಲಕ ಶಾಶ್ವತ ನೀರಿನ ವ್ಯವಸ್ಥೆ ಕಲ್ಪಿಸಲು ಸರ್ಕಾರದ ಮೇಲೆ ಒತ್ತಡ ಹೇರಲಾಗಿದೆ ಎಂದು ಶಾಸಕ ಬಿ. ಶ್ರೀರಾಮುಲು ಹೇಳಿದರು.

ಶನಿವಾರ ತಾಲ್ಲೂಕಿನ ಜೆ.ಬಿ.ಹಳ್ಳಿ ಗ್ರಾಮಪಂಚಾಯಿತಿ (ಜಾಗೀರಬುಡ್ಡೆನಹಳ್ಳಿ) ವ್ಯಾಪ್ತಿ ಗ್ರಾಮಗಳಲ್ಲಿ ನಡೆಸಿದ ಜನಸಂಪರ್ಕ ಸಭೆಯಲ್ಲಿ ಅವರು ಮಾತನಾಡಿದರು.

ಯಾವುದೇ ಗ್ರಾಮಕ್ಕೂ ಹೋದರೂ ನೀರಿನ ಸಮಸ್ಯೆ ಬಗ್ಗೆ ಜನರು ದೂರುತ್ತಿದ್ದಾರೆ. ಇದನ್ನು ಶಾಶ್ವತ ಯೋಜನೆಯಿಂದ ಮಾತ್ರ ನಿವಾರಿಸಲು ಸಾಧ್ಯ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ₹ 2,150 ಕೋಟಿ ವೆಚ್ಚದ ಯೋಜನೆ ಜಾರಿ ಮಾಡಿದೆ. ಸರ್ವೇ ಕಾರ್ಯ ಮುಗಿದು ಟೆಂಡರ್ ಕಾರ್ಯ ಪ್ರಗತಿಯಲ್ಲಿದೆ. ಅನುದಾನ ಕೊರತೆಯಿಂದ ಜಾರಿಯಾಗುವಲ್ಲಿ ವಿಳಂಬವಾಗುತ್ತಿದೆ ಎಂದು ಹೇಳಿದರು.

ADVERTISEMENT

‘ತುಂಗಭದ್ರಾ ನೀರಿನ ಯೋಜನೆ ಅನುಷ್ಠಾನವಾಗುವ ತನಕ ಸ್ಥಳೀಯವಾಗಿ ಲಭ್ಯವಿರುವ ನೀರನ್ನು ನೀಡಲು ಅಧಿಕಾರಿಗಳು ಮುಂದಾಗಬೇಕು. ಕೊಳವೆಬಾವಿ ಕೊರೆಸುವ ಜತೆಗೆ ತುರ್ತು ಸ್ಥಿತಿಯಲ್ಲಿ ಟ್ಯಾಂಕರ್ ನೀರು ನೀಡಬೇಕು. ಯಾವುದೇ ಕಾರಣಕ್ಕೂ ಸಮಸ್ಯೆ ಎಂದು ಹೇಳಿಕೊಂಡು ಜನರು ಪರದಾಡುವುದನ್ನು ಸಹಿಸುವುದಿಲ್ಲ. ಸಮಸ್ಯೆ ಬಗ್ಗೆ ನನ್ನ ಗಮನಕ್ಕೆ ತಂದಲ್ಲಿ ತಕ್ಷಣ ಕ್ರಮ ಕೈಗೊಳ್ಳುತ್ತೇನೆ’ ಎಂದು ಹೇಳಿದರು.

ಬೊಮ್ಮಕ್ಕನಹಳ್ಳಿಯಲ್ಲಿ ಹೆದ್ದಾರಿ ಹಾದು ಹೋಗುತ್ತಿರುವ ಪರಿಣಾಮ ಮನೆಗಳನ್ನು ಕಳೆದುಕೊಳ್ಳುತ್ತಿರುವ ಸಂತ್ರಸ್ತರಿಗೆ ಪರ್ಯಾಯ ವ್ಯವಸ್ಥೆ ಮಾಡಲು ಅಧಿಕಾರಿಗಳಿಗೆ ಸೂಚಿಸಲಾಗುವುದು. ಉದ್ಯೋಗಖಾತ್ರಿ ಯೋಜನೆಯಲ್ಲಿ ಜಾಬ್ ಕಾರ್ಡ್ ಹೊಂದಿರುವವರು ಗುಳೆ ಹೋಗದಂತೆ ಪಂಚಾಯಿತಿ ಎಚ್ಚರ ವಹಿಸಬೇಕು ಎಂದರು.

ಪಕ್ಕುರ್ತಿ, ಎನ್.ಆರ್.ಕೆ. ಪುರ, ಹೊಸದಡಗೂರು, ಹಳೆ ದಡಗೂರು, ಜಂಬಲಮಲ್ಕಿ, ಓಬಳಾಪುರ, ಬಸಾಪುರ ಗ್ರಾಮಗಳಿಗೆ ಭೇಟಿ ನೀಡಿದ್ದರು. ಗ್ರಾಮ ಪಂಚಾಯಿತಿ ಅಧ್ಯಕ್ಷ ಕುರುಗೋಡಪ್ಪ, ತಾಲ್ಲೂಕು ಪಂಚಾಯಿತಿ ಸದಸ್ಯ ನರೇಂದ್ರಬಾಬು, ಬಿಜೆಪಿ ಮುಖಂಡರಾದ ಆರ್.ಜಿ. ಗಂಗಾಧರಪ್ಪ, ಚನ್ನಬಸಪ್ಪ, ಜಿಂಕಲು ಬಸವರಾಜ್, ಎಸ್. ಪರಮೇಶ್ವರಪ್ಪ, ಪಾಲಯ್ಯ, ಸಂಜೀವಪ್ಪ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.