ADVERTISEMENT

ಚಿತ್ರದುರ್ಗ | ಕೋಟೆನಾಡಿನ ಪರಿಸರಕ್ಕೆ ಜೀವಕಳೆ ತುಂಬಿದ ವೇದಾವತಿ

ನದಿಯಲ್ಲಿ ನೀರು ಕಂಡು ಹರ್ಷಗೊಂಡ ಜನರು

ಜಿ.ಬಿ.ನಾಗರಾಜ್
Published 5 ಜೂನ್ 2020, 4:28 IST
Last Updated 5 ಜೂನ್ 2020, 4:28 IST
ಪರಶುರಾಂಪುರ ಸಮೀಪದ ಚೌಳೂರಿನಲ್ಲಿ ನಿರ್ಮಿಸಿದ ಬ್ಯಾರೇಜ್‌ನಲ್ಲಿ ಸಂಗ್ರಹವಾಗಿರುವ ನೀರು.
ಪರಶುರಾಂಪುರ ಸಮೀಪದ ಚೌಳೂರಿನಲ್ಲಿ ನಿರ್ಮಿಸಿದ ಬ್ಯಾರೇಜ್‌ನಲ್ಲಿ ಸಂಗ್ರಹವಾಗಿರುವ ನೀರು.   

ಚಿತ್ರದುರ್ಗ: ಕಣ್ಣು ಹಾಯಿಸಿದಷ್ಟು ದೂರಕ್ಕೆ ಮರಳು ಕಾಣಿಸುತ್ತಿದ್ದ ವೇದಾವತಿ ನದಿಯಲ್ಲಿ ಗಂಗೆ ಉಕ್ಕುತ್ತಿದ್ದಾಳೆ. ಬರಡು ಭೂಮಿಯಂತಾಗಿದ್ದ ನದಿಯ ಇಕ್ಕೆಲ ಹಸಿರಿನಿಂದ ಕಂಗೊಳಿಸುತ್ತಿದೆ. ಜಲದಂತೆ ಬದುಕಿನ ಭರವಸೆಗಳೂ ಬತ್ತುತ್ತಿದ್ದ ರೈತರ ಬಾಳಲ್ಲಿ ಹರ್ಷದ ಹೊನಲು ಹರಿಯಲಾರಂಭಿಸಿದೆ.

ಕೋಟೆನಾಡಿನ ಜೀವನದಿ ವೇದಾವತಿ ಒಡಲಿಗೆ ಭದ್ರಾ ನೀರು ಸೇರಿದ ಬಳಿಕ ಬದುಕಿನ ಚಿತ್ರಣವೇ ಬದಲಾಗಿದೆ. ಕೃಷಿ ಮೇಲಿನ ಭರವಸೆ ಪುಟಿದೇಳತೊಡಗಿದೆ. ಗ್ರಾಮೀಣ ಪ್ರದೇಶದ ಜನಜೀವನವನ್ನು ನದಿ ಪ್ರಭಾವಿಸಿದ್ದು ದಿಟವಾಗುತ್ತಿದೆ. ಭೂಮಿಯಲ್ಲಿ ಅಂತರ್ಜಲ ಉಕ್ಕುತ್ತಿದ್ದು, ಕುರಿಗಾಹಿಗಳ ವಲಸೆ ಕಡಿಮೆಯಾಗಲಿದೆ.

ದಶಕಗಳ ಕಾಲ ಹರಿಯದೇ ಉಳಿದಿದ್ದ ವೇದಾವತಿ ನದಿ ತಿಂಗಳಿಂದ ಜೀವಕಳೆ ಪಡೆದಿದೆ. ನೀರು ಹರಿಯತೊಡಗಿದಂತೆ ಪರಿಸರವೂ ಬದಲಾಗಿದೆ. ಮೈಗೆ ಸೋಕುತ್ತಿದ್ದ ಗಾಳಿಯಲ್ಲಿ ತೇವಾಂಶ ಇರುವುದು ಗೊತ್ತಾಗುತ್ತಿದೆ. ಹಕ್ಕಿ–ಪಕ್ಷಿಗಳ ಕಲರವ ಕಿವಿಗೆ ಮುದನೀಡುತ್ತಿದೆ. ಕುಡಿಯುವ ನೀರಿಗೆ ಉಂಟಾಗುತ್ತಿದ್ದ ತಾಪತ್ರಯಕ್ಕೆ ಪೂರ್ಣವಿರಾಮ ಬಿದ್ದಿದೆ.

ADVERTISEMENT

ಚಿಕ್ಕಮಗಳೂರು ಜಿಲ್ಲೆಯ ಮುಳ್ಳಯ್ಯನಗಿರಿಯಲ್ಲಿ ಹುಟ್ಟುವ ವೇದಾವತಿ ನದಿ ಕಾಫಿನಾಡಿನಲ್ಲಿ 55 ಕಿ.ಮೀ ದೂರ ಹರಿಯುತ್ತದೆ. ತರೀಕೆರೆ ತಾಲ್ಲೂಕಿನ ಹಳ್ಳಗಳ ಮೂಲಕ ಅಯ್ಯನ ಕೆರೆ, ಮದಗದ ಕೆರೆ ಸೇರುತ್ತದೆ. ಅಲ್ಲಿಂದ ಮುಂದಕ್ಕೆ ನದಿಯ ಸ್ವರೂಪ ಪಡೆದು ಹೊಸದುರ್ಗ ತಾಲ್ಲೂಕಿನ ಭಾಗಶೆಟ್ಟಿಹಳ್ಳಿ ಬಳಿ ಕೋಟೆನಾಡು ಪ್ರವೇಶಿಸುತ್ತದೆ. ಪಶ್ಚಿಮಘಟ್ಟದಲ್ಲಿ ಮಳೆ ಸುರಿದರೆ ವಿ.ವಿ.ಜಲಾಶಯಕ್ಕೆ ನೀರು ಬರುತ್ತದೆ. ಆದರೆ, ಅಲ್ಲಿಂದ ಮುಂದಕ್ಕೆ ನದಿ ಹರಿದಿದ್ದು ಕಡಿಮೆ.

‘ಚಿಕ್ಕವರಿದ್ದಾಗ ನದಿಯಲ್ಲಿ ನೀರು ಹರಿಯುತ್ತಿತ್ತು. ಭತ್ತ ಸೇರಿ ಅನೇಕ ಬೆಳೆಗಳನ್ನು ಬೆಳೆಯುತ್ತಿದ್ದೆವು. ಹಲವು ಬಾರಿ ನದಿ ಉಕ್ಕಿ ಊರಿಗೆ ನೀರು ನುಗ್ಗಿದ್ದನ್ನು ಕಂಡಿದ್ದೇವೆ. ಕಾಲಕ್ರಮೇಣ ನೀರಿನ ಹರಿವು ಕಡಿಮೆಯಾಯಿತು. ಮಳೆ ಬಂದಾಗ ಮಾತ್ರ ನದಿಯಲ್ಲಿ ಕಾಣಿಸಿಕೊಳ್ಳುತ್ತಿದ್ದ ನೀರು ಸಂಪೂರ್ಣ ಬತ್ತಿ ಹೋಗುತ್ತಿತ್ತು. 20 ವರ್ಷಗಳ ಬಳಿಕ ನದಿ ಮೈದುಂಬಿ ಹರಿಯುವುದನ್ನು ಕಂಡೆವು’ ಎನ್ನುತ್ತ ಪರಶುರಾಂಪುರ ಸಮೀಪದ ಚೌಳೂರು ಬ್ಯಾರೇಜು ದಿಟ್ಟಿಸತೊಡಗಿದರು 80 ವರ್ಷದ ವೆಂಕಟೇಶಪ್ಪ.

ಮಾರಿಕಣಿವೆ ಸಮೀಪ ನಿರ್ಮಿಸಿದ 30 ಟಿಎಂಸಿ ಸಾಮರ್ಥ್ಯದ ವಾಣಿವಿಲಾಸ ಸಾಗರ ಜಲಾಶಯಕ್ಕೆ ಶತಮಾನ ಕಳೆದಿದೆ. ಜಲಾಶಯ ಭರ್ತಿಯಾಗಿ ನದಿ ಮುಂದಕ್ಕೆ ಹರಿದಿದ್ದನ್ನು ಕಂಡವರು ಅಪರೂಪ. ಹಿರಿಯೂರು ತಾಲ್ಲೂಕಿನಲ್ಲೇ 60 ಕಿ.ಮೀ ಹರಿಯುವ ನದಿ ಚಳ್ಳಕೆರೆ ಮೂಲಕ ಆಂಧ್ರಪ್ರದೇಶ ತಲುಪುತ್ತದೆ. ಅಲ್ಲಿ ಕೃಷ್ಣಾ ನದಿಯನ್ನು ಸೇರಿ ಮುಂದಕ್ಕೆ ಸಾಗುತ್ತದೆ. ಆದರೆ, ಇತ್ತೀಚಿನ ವರ್ಷಗಳಲ್ಲಿ ಹೀಗೆ ನದಿ ಆಂಧ್ರಪ್ರದೇಶದವರೆಗೂ ಹರಿದಿಲ್ಲ.

ಹಿರಿಯೂರು ತಾಲ್ಲೂಕಿನ ನದಿಯ ಇಕ್ಕೆಲಗಳಲ್ಲಿದ್ದ ತೆಂಗಿನ ತೋಟಗಳು ಈಗ ನಳನಳಿಸುತ್ತಿವೆ. ಕುಡಿಯುವ ನೀರಿನ ಉದ್ದೇಶಕ್ಕೆ ನಿರ್ಮಿಸಿದ ಬ್ಯಾರೇಜುಗಳು ಭರ್ತಿಯಾಗಿವೆ. ಒಂದೂವರೆ ತಿಂಗಳು ನದಿಯಲ್ಲಿ ನೀರು ಹರಿದಿದ್ದರಿಂದ ಹಿರಿಯೂರು, ಚಳ್ಳಕೆರೆ ಭಾಗದ ಪರಿಸರ ಸಂಪೂರ್ಣ ಬದಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.