ADVERTISEMENT

ಸಮಯ ವ್ಯರ್ಥ ಮಾಡದೆ ಪರೀಕ್ಷೆಗೆ ಸಿದ್ಧರಾಗಿ: ಟಿ. ತಿಮ್ಮಯ್ಯ

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2025, 7:23 IST
Last Updated 17 ನವೆಂಬರ್ 2025, 7:23 IST
ಚಿತ್ರದುರ್ಗದ ಗಾರೆಹಟ್ಟಿಯ ಬೃಹನ್ಮಠ ಪದವಿ ಪೂರ್ವ ಕಾಲೇಜಿನಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸಿಇಟಿ ಹಾಗೂ ನೀಟ್‌ ಪರೀಕ್ಷಾ ತರಬೇತಿಯನ್ನು ಡಿಡಿಪಿಯು ಟಿ.ತಿಮ್ಮಯ್ಯ ಉದ್ಘಾಟಿಸಿದರು
ಚಿತ್ರದುರ್ಗದ ಗಾರೆಹಟ್ಟಿಯ ಬೃಹನ್ಮಠ ಪದವಿ ಪೂರ್ವ ಕಾಲೇಜಿನಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸಿಇಟಿ ಹಾಗೂ ನೀಟ್‌ ಪರೀಕ್ಷಾ ತರಬೇತಿಯನ್ನು ಡಿಡಿಪಿಯು ಟಿ.ತಿಮ್ಮಯ್ಯ ಉದ್ಘಾಟಿಸಿದರು   

ಚಿತ್ರದುರ್ಗ: ‘ಕಠಿಣ ಪರಿಶ್ರಮದಿಂದ ಮಾತ್ರ ಸಾಧನೆ ಸಾಧ್ಯ. ಇದಕ್ಕೆ ಯಾವುದೇ ಸರಳ ಹಾಗೂ ಅಡ್ಡ ದಾರಿಗಳಿಲ್ಲ’ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೆಶಕ ಟಿ. ತಿಮ್ಮಯ್ಯ ತಿಳಿಸಿದರು.

ನಗರದ ಗಾರೆಹಟ್ಟಿಯ ಬೃಹನ್ಮಠ ಪದವಿ ಪೂರ್ವ ಕಾಲೇಜಿನಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸಿಇಟಿ ಹಾಗೂ ನೀಟ್‌ ಪರೀಕ್ಷಾ ತರಬೇತಿಗೆ ಚಾಲನೆ ನೀಡಿ ಮಾತನಾಡಿದ ಅವರು, ‘ಪಿಯುಸಿಯಲ್ಲಿ ಶ್ರದ್ಧೆಯಿಂದ ಎರಡು ವರ್ಷ ಕಲಿತರೆ ನಿಮ್ಮ ಭವಿಷ್ಯದ ಬಾಗಿಲು ತೆರೆಯುತ್ತದೆ. ನಿಮ್ಮ ಕನಸಿನಂತೆ ಉನ್ನತ ವ್ಯಾಸಂಗ ಮಾಡಬಹುದು’ ಎಂದರು.

‘ಪಿಯುಸಿ ವಿದ್ಯಾರ್ಥಿಗಳಿಗೆ ಸಿಇಟಿ ಮತ್ತು ನೀಟ್‌ ಪರೀಕ್ಷೆಗಳು ಅತಿ ಮುಖ್ಯ. ಇವು ನಿಮ್ಮ ಮುಂದಿನ ಜೀವನವನ್ನು ನಿರ್ಧರಿಸುವ ತಿರುವುಗಳಾಗಿವೆ. ಉಚಿತವಾಗಿ ತರಗತಿ ನಡೆಸಲಾಗುತ್ತಿದ್ದು, ಗೈರಾಗದಂತೆ ಸದುಪಯೋಗ ಮಾಡಿಕೊಳ್ಳಬೇಕು’ ಎಂದರು.

ADVERTISEMENT

‘ಎರಡು ವರ್ಷ ಮೋಜಿನಲ್ಲಿ ಸಮಯ ವ್ಯರ್ಥ ಮಾಡಿದರೆ ಮುಂದಿನ ಜೀವನ ಕಷ್ಟವಾಗುತ್ತದೆ. ಸಂಪನ್ಮೂಲ ವ್ಯಕ್ತಿಗಳು ಹೇಳುವ ಪ್ರತಿ ಅಂಶವನ್ನು ಗಮನದಿಂದ ಕೇಳಿ ಮನನ ಮಾಡಿಕೊಳ್ಳಬೇಕು. ಸಂಶಯ ಮೂಡಿದರೆ ಆ ಕ್ಷಣವೇ ಪ್ರಶ್ನಿಸಿ ಬಗೆಹರಿಸಿಕೊಳ್ಳಬೇಕು. ಇಲ್ಲವಾದರೆ ಪರೀಕ್ಷೆಯಲ್ಲಿ ಕಷ್ಟವಾಗುತ್ತದೆ’ ಎಂದು ತಿಳಿಸಿದರು.

‘ನಾವುಗಳು ಕೆಲವೊಂದು ಸಮಯದಲ್ಲಿ ಕಿವುಡರಾಗಬೇಕಿದೆ. ಬೇರೆಯವರ ಮಾತುಗಳಿಗೆ ಬೆಲೆ ನೀಡದೆ ನಮ್ಮ ಗುರಿಯತ್ತ ಗಮಸಹರಿಸಬೇಕು. ಕಷ್ಟ, ಬಡತನ ನಿಮ್ಮ ಸಾಧನೆಗೆ ದಾರಿ ದೀಪವಾಗಬೇಕು. ಅಕ್ಷರ ಕಲಿತವನಿಗೆ ಸಮಾಜದಲ್ಲಿ ಗೌರವ ಇರುತ್ತದೆ’ ಎಂದರು.

‘ಸಮಯವನ್ನು ವ್ಯರ್ಥ ಮಾಡದೇ ಸದುಯೋಗಪಡಿಸಿಕೊಳ್ಳಿ. ಸಾಧ್ಯವಾದಷ್ಟು ಮೊಬೈಲ್‍ಗಳಿಂದ ದೂರವಿದ್ದು, ಅಗತ್ಯಕ್ಕೆ ತಕ್ಕಂತೆ ಮಾತ್ರ ಬಳಕೆ ಮಾಡಿ. ಪುಸ್ತಕ ಓದುವುದರಿಂದ ಜ್ಞಾನ ಹೆಚ್ಚಾಗುತ್ತದೆ. ಆದರೆ ಮೊಬೈಲ್‌ನಿಂದ ಯಾವುದೇ ಉಪಯೋಗವಿಲ್ಲ’ ಎಂದು ಎಚ್ಚರಿಸಿದರು.

‘ಕಾಲೇಜಿನಲ್ಲಿ ಕಡಿಮೆ ಪ್ರಮಾಣದಲ್ಲಿ ಶುಲ್ಕ ಪಡೆಯುವುದರ ಮೂಲಕ ವಿದ್ಯಾರ್ಥಿಗಳಿಗೆ ಬೋಧನೆ ಮಾಡಲಾಗುತ್ತಿದೆ. ನಾನಾ ಕಾರಣಗಳಿಂದ ಸಿಇಟಿ, ನೀಟ್‌ ತರಬೇತಿ ನಿಲ್ಲಿಸಲಾಗಿತ್ತು. ಆದರೆ, ಈ ವರ್ಷದಿಂದ ಉಚಿತವಾಗಿ ತರಬೇತಿ ನೀಡಲಾಗುತ್ತಿದೆ’ ಎಂದು ಪ್ರಾಂಶುಪಾಲ ಪಿ.ಎಂ.ಜಿ. ರಾಜೇಶ್‌ ತಿಳಿಸಿದರು.

ಸಂಪನ್ಮೂಲ ವ್ಯಕ್ತಿಗಳಾದ ನಯನರಾಣಿ, ಅನೂಪ್‌ ಗೌಡ, ಎಸ್‌ಜೆಎಂಐಟಿ ಉಪ ಪ್ರಾಂಶುಪಾಲ ಶಿವಕುಮಾರ್‌, ಉಪನ್ಯಾಸಕರಾದ ಮೋಹನ್‌, ಮಾಲಾ, ಬಿ.ಕೆ. ಹೇಮಲತಾ ಇದ್ದರು.

ಕಾಲೇಜಿನ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿ ಎಂಬ ದೃಷ್ಟಿಯಿಂದ ಸಿಇಟಿ ನೀಟ್‌ ತರಬೇತಿಯನ್ನು ಉಚಿತವಾಗಿ ನೀಡಲಾಗುತ್ತಿದೆ. ಇದಕ್ಕಾಗಿ ಸಂಪನ್ಮೂಲ ವ್ಯಕ್ತಿಗಳನ್ನು ಆಹ್ವಾನಿಸಲಾಗಿದೆ.
-ಪಿ.ಎಂ.ಜಿ.ರಾಜೇಶ್‌, ಪ್ರಾಂಶುಪಾಲ ಬೃಹನ್ಮಠ ಪದವಿ ಪೂರ್ವ ಕಾಲೇಜು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.