ADVERTISEMENT

ಪತ್ರಿಕಾ ದಿನಾಚರಣೆ| ಧಾವಂತದಲ್ಲಿ ಸುಳ್ಳು ಸುದ್ದಿಗಳ ವೈಭವೀಕರಣ: ಪ್ರಭಾಕರ್‌ ವಿಷಾದ

​ಪ್ರಜಾವಾಣಿ ವಾರ್ತೆ
Published 22 ಜುಲೈ 2025, 5:21 IST
Last Updated 22 ಜುಲೈ 2025, 5:21 IST
ಜಿಲ್ಲಾ ಪತ್ರಕರ್ತರ ಸಂಘದ ವತಿಯಿಂದ ನಡೆದ ಪತ್ರಿಕಾ ದಿನಾಚರಣೆಗೆ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್‌ ಚಾಲನೆ ನೀಡಿದರು
ಜಿಲ್ಲಾ ಪತ್ರಕರ್ತರ ಸಂಘದ ವತಿಯಿಂದ ನಡೆದ ಪತ್ರಿಕಾ ದಿನಾಚರಣೆಗೆ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್‌ ಚಾಲನೆ ನೀಡಿದರು   

ಚಿತ್ರದುರ್ಗ: ‘ರೋಚಕ ಹಾಗೂ ಬೆಚ್ಚಿಬೀಳಿಸುವ ಸುದ್ದಿ ನೀಡುತ್ತೇವೆ ಎನ್ನುವ ಧಾವಂತದಲ್ಲಿ ಸುಳ್ಳು ಹಾಗೂ ಊಹೆಯ ವೈಭವೀಕರಣ ಹೆಚ್ಚುತ್ತಿದೆ. ಪತ್ರಕರ್ತರು ಗಾಳಿ ಸುದ್ದಿಗಳಿಗೆ ಗವಾಕ್ಷಿಗಳಾಗುತ್ತಿದ್ದಾರೆ’ ಎಂದು ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ್ ವಿಷಾದಿಸಿದರು.

ನಗರದ ಪತ್ರಿಕಾ ಭವನದಲ್ಲಿ ಸೋಮವಾರ ನಡೆದ ಪತ್ರಿಕಾ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.

‘ಸುಳ್ಳು ಸುದ್ದಿಗಳ ನಡುವೆ ಅಭಿವೃದ್ಧಿ, ತನಿಖಾ ಹಾಗೂ ಮಾನವೀಯ ಮೌಲ್ಯಗಳನ್ನು ಬಿಂಬಿಸುವ ಸುದ್ದಿಗಳು ಮರೆಯಾಗುತ್ತಿವೆ. ಇದರಿಂದ ಮಾಧ್ಯಮ ಕ್ಷೇತ್ರಕ್ಕೆ ಹಾನಿಯಾಗುತ್ತಿದೆ. ಸಾಮಾಜಿಕ ಮಾಧ್ಯಮ, ಮುದ್ರಣ ಹಾಗೂ ದೃಶ್ಯ ಮಾಧ್ಯಮಗಳು ಊಹೆಗಳಿಂದ ಪ್ರಭಾವಿತಗೊಳ್ಳುತ್ತಿವೆ. ವಾಸ್ತವದಲ್ಲಿ ಇಲ್ಲದ ಸುದ್ದಿಗೆ ಜೀವ ತುಂಬಿ ಓದುಗ, ಪ್ರೇಕ್ಷಕರ ದಿಕ್ಕು ತಪ್ಪಿಸಲಾಗುತ್ತಿದೆ’ ಎಂದು ಹೇಳಿದರು.

ADVERTISEMENT

‘ಸುದ್ದಿಯನ್ನು ಬೇಕಾಬಿಟ್ಟಿಯಾಗಿ ಬರೆದು ಸುಳ್ಳನ್ನೇ ಸತ್ಯವೆಂದು ಪ್ರಚಾರ ಮಾಡಲಾಗುತ್ತಿದೆ. ಇಂತಹ ಸಂದಿಗ್ಧ ಸ್ಥಿತಿಗೆ ಪತ್ರಿಕೋದ್ಯಮ ಬಂದು ನಿಂತಿದೆ. ಸಾರ್ವಜನಿಕರೂ ಸುಳ್ಳು ಅಥವಾ ಸತ್ಯ ಯಾವುದು ಎನ್ನುವ ಗೊಂದಲದಲ್ಲಿದ್ದಾರೆ. ಪತ್ರಕರ್ತರು ಗಾಳಿ ಸುದ್ದಿಗೆ ಗವಾಕ್ಷಿಗಳಾಗದೇ, ಸತ್ಯಕ್ಕೆ ಕಿಟಕಿಯಾಗಬೇಕು’ ಎಂದರು.

ರಾಜ್ಯ ವಸತಿ ಖಾತೆ ಸಚಿವರ ಮಾಧ್ಯಮ ಸಲಹೆಗಾರರಾದ ಎಸ್‌.ಲಕ್ಷ್ಮಿನಾರಾಯಣ ಮಾತನಾಡಿ, ‘ರಾಜ್ಯದ ಎಲ್ಲ ವಸತಿ ಯೋಜನೆಗಳಲ್ಲಿ ಪತ್ರಕರ್ತರಿಗೆ ಶೇ 2ರಷ್ಟು ಮೀಸಲು ನೀಡುವ ಯೋಜನೆ ಜಾರಿಗೆ ತರಲು ಸಿದ್ಧತೆ ನಡೆಯುತ್ತಿದೆ. ಈ ನಿಟ್ಟಿನಲ್ಲಿ ಪತ್ರಕರ್ತರ ಹಿತ ಕಾಯಲು ಆದ್ಯತೆ ನೀಡಲಾಗುವುದು’ ಎಂದರು.

ಹೊಳಲ್ಕೆರೆ ಶಾಸಕ ಎಂ. ಚಂದ್ರಪ್ಪ ಮಾತನಾಡಿ, ‘ಪತ್ರಕರ್ತರ ಕ್ಷೇಮಾಭಿವೃದ್ಧಿ ನಿಧಿಗೆ ₹ 3 ಲಕ್ಷ ಘೋಷಣೆ ಮಾಡಲಾಗಿದ್ದು, ಪತ್ರಕರ್ತರು ಇದರ ಲಾಭ ಪಡೆಯಬಹುದು. ಹೊಳಲ್ಕೆರೆ ಕಾರ್ಯನಿರತ ಪತ್ರಕರ್ತರ ಸಂಘದ ಕಟ್ಟಡಕ್ಕೆ ₹ 10ಲಕ್ಷ ಅನುದಾನ ಮಂಜೂರು ಮಾಡಲಾಗುವುದು’ ಎಂದರು.

ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಮಾತನಾಡಿ ‘ಹಂತ ಹಂತವಾಗಿ ಗ್ರಾಮೀಣ ಪತ್ರಕರ್ತರ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಕೆಲಸ ಮಾಡಲಾಗುತ್ತಿದೆ. ಮಾಧ್ಯಮ ಸಂಜೀವಿನಿ ಯೋಜನೆಯನ್ನು ವಾರ್ತಾ ಇಲಾಖೆ ಮಾದ್ಯಮ ಪಟ್ಟಿಯಲ್ಲಿರುವ ಪತ್ರಿಕೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎಲ್ಲರಿಗೂ ವಿಸ್ತರಿಸುವಂತೆ ಮುಖ್ಯಮಂತ್ರಿಗೆ ಮನವಿ ಮಾಡಲಾಗುವುದು’ ಎಂದರು.

ಮಾಜಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಮಾತನಾಡಿ, ‘ಪತ್ರಕರ್ತರಿಗೆ ನಿವೇಶನ ಅಥವಾ ಮನೆಗಳನ್ನು ಮಂಜೂರು ಮಾಡಲು ನಿಯಮಗಳಲ್ಲಿ ತೊಡಕಿದೆ. ವಸತಿ ಇಲಾಖೆ ನಿಯಮಗಳನ್ನು ಬದಲು ಮಾಡಿದರೆ, ಪತ್ರಕರ್ತರಿಗೆ ಅನೂಕಲವಾಗಿದೆ’ ಎಂದರು.

ಸಭೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಟಿ. ಕುಮಾರಸ್ವಾಮಿ, ಉಪ ವಿಭಾಗಾಧಿಕಾರಿ ಮೆಹಬೂಬ್ ಜಿಲಾನಿ ಖುರೇಷಿ, ಮಾಧ್ಯಮ ಅಕಾಡೆಮಿ ಸದಸ್ಯ ಎಂ.ಎನ್. ಅಹೋಬಳಪತಿ, ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ದಿನೇಶ್ ಗೌಡಗೆರೆ, ಪ್ರಧಾನ ಕಾರ್ಯದರ್ಶಿ ಎಸ್. ಸಿದ್ದರಾಜು, ಖಜಾಂಚಿ ಡಿ. ಕುಮಾರಸ್ವಾಮಿ, ಕಾರ್ಯನಿರತ ಪತ್ರಕರ್ತರ ಸಂಘದ ರಾಷ್ಟ್ರೀಯ ಮಂಡಳಿ ಸದಸ್ಯ ಸಿ. ಹೆಂಜಾರಪ್ಪ, ಜಿಲ್ಲಾ ವಾರ್ತಾಧಿಕಾರಿ ಬಿ.ವಿ. ತುಕಾರಾಂರಾವ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.