ADVERTISEMENT

ರೈತ ಸಂಪರ್ಕ ಕೇಂದ್ರದ ಸ್ಪ್ರಿಂಕ್ಲರ್‌ ಪೈಪ್‌ಗಳು ಆಂಧ್ರದ ಪಾಲು

ಪರಶುರಾಂಪುರ ಹೋಬಳಿ ರೈತರ ಆರೋಪ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2020, 3:05 IST
Last Updated 17 ಡಿಸೆಂಬರ್ 2020, 3:05 IST
ಪರಶುರಾಂಪುರ ರೈತ ಸಂಪರ್ಕ ಕೇಂದ್ರದ ಪರಶುರಾಂಪುರ ರೈತ ಸಂಪರ್ಕ ಕೇಂದ್ರದಲ್ಲಿದ್ದ ಸ್ಪ್ರಿಂಕ್ಲರ್‌ ಪೈಪ್‌ಗಳು (ಸಂಗ್ರಹ ಚಿತ್ರ)
ಪರಶುರಾಂಪುರ ರೈತ ಸಂಪರ್ಕ ಕೇಂದ್ರದ ಪರಶುರಾಂಪುರ ರೈತ ಸಂಪರ್ಕ ಕೇಂದ್ರದಲ್ಲಿದ್ದ ಸ್ಪ್ರಿಂಕ್ಲರ್‌ ಪೈಪ್‌ಗಳು (ಸಂಗ್ರಹ ಚಿತ್ರ)   

ಪರಶುರಾಂಪುರ: ಇಲ್ಲಿನ ರೈತ ಸಂಪರ್ಕ ಕೇಂದ್ರದ ಸ್ಪ್ರಿಂಕ್ಲರ್‌ ಪೈಪ್‌ಗಳು ಆಂಧ್ರದ ಗಡಿ ಗ್ರಾಮಗಳಲ್ಲಿ ದುಬಾರಿ ಬೆಲೆಗೆ ಮಾರಾಟವಾಗುತ್ತಿದ್ದು, ಹೋಬಳಿಯ ಅರ್ಹ ಫಲಾನುಭವಿಗಳಿಗೆ ಸಿಗುತ್ತಿಲ್ಲ ಎಂಬ ಗೋಳು ಸಾರ್ವಜನಿಕರಿಂದ ಕೇಳಿ ಬರುತ್ತಿದೆ.

ಕೃಷಿ ಇಲಾಖೆಯು ರೈತರಿಗೆ ರಿಯಾಯಿತಿ ದರದಲ್ಲಿ ₹ 2070ಕ್ಕೆ ಒಂದು ಸ್ಪ್ರಿಂಕ್ಲರ್‌ ಸೆಟ್ ಮಾರಾಟ ಮಾಡುತ್ತಿದೆ. ಆದರೆ ಕೆಲವರು ಇದನ್ನೇ ದಂಧೆ ಮಾಡಿಕೊಂಡು ₹8 ಸಾವಿರದಿಂದ ₹10 ಸಾವಿರದವರೆಗೂ ಮಾರಿಕೊಳ್ಳುತ್ತಿದ್ದಾರೆ. ಇದಕ್ಕೆ ಕೃಷಿ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ಅನುವುಗಾರರ ಸಹಕಾರ ಇದೆ ಎಂಬುದು ರೈತರ ದೂರು.

10 ತಿಂಗಳ ಹಿಂದೆಯೇ ಅರ್ಜಿ ಹಾಕಿ ಹಣ ಕಟ್ಟಿದ್ದರೂ ಅವರಿಗೆ ಸಿಗದ ಸ್ಪ್ರಿಂಕ್ಲರ್‌ಗಳು ಆಂಧ್ರದವರಿಗೆ ಹೇಗೆ ಸಿಗುತ್ತವೆ ಎಂಬುವುದು ಯಕ್ಷ ಪ್ರಶ್ನೆಯಾಗಿದೆ. ಆದ್ದರಿಂದ ಈ ಭಾಗದ ರೈತರಿಗೆ ಆಗುತ್ತಿರುವ ಅನ್ಯಾಯವನ್ನು ಕೃಷಿ ಇಲಾಖೆಯ ಮೇಲಧಿಕಾರಿಗಳು ಸರಿಪಡಿಸಬೇಕು. ಅರ್ಹ ಫಲಾನುಭವಿಗಳಿಗೆ ರಿಯಾಯಿತಿ ದರದಲ್ಲಿ ಸ್ಪ್ರಿಂಕ್ಲರ್‌ಗಳು ಸಿಗುವಂತಾಗಬೇಕು ಎಂಬುದು ರೈತರಾದ ಎ.ನಾಗರಾಜ, ತಿಪ್ಪೇಸ್ವಾಮಿ, ಮಲ್ಲಿಕಾರ್ಜನ, ಮಲ್ಲೇಶಪ್ಪ ಅವರ ಒತ್ತಾಯ.

ADVERTISEMENT

‘ಎರಡು ವರ್ಷಗಳಿಂದಲೂ ಸಾಮಾನ್ಯ ವರ್ಗದ ರೈತರಿಗೆ ಸ್ಪ್ರಿಂಕ್ಲರ್‌ ಸೆಟ್‌ಗಳು ಬಂದಿಲ್ಲ. ಕಾರಣ ಕೇಳಿದೆ ಅನುದಾನ ಇಲ್ಲ ಎಂದು ಹೇಳುತ್ತಾರೆ. ಆದರೆ, ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ರೈತರಿಗೆ ಸ್ಪ್ರಿಂಕ್ಲರ್‌ ಸೆಟ್ ನೀಡುತ್ತಾರೆ. ಅದರಲ್ಲಿ ಕೆಲವು ರೈತರು ಹೆಚ್ಚಿನ ಬೆಲೆಗೆ ಮಾರಾಟ ಮಾಡಿಕೊಳ್ಳುತ್ತಿದ್ದಾರೆ. ರೈತರಲ್ಲಿ ಎಲ್ಲಾ ವರ್ಗದವರಿಗೂ ಕೃಷಿ ಪರಿಕರಗಳನ್ನು ಸಕಾಲಕ್ಕೆ ನೀಡಿದರೆ ಅವರ ಬದುಕು ಹಸನಾಗುತ್ತದೆ’ ಎನ್ನುತ್ತಾರೆ ಕ್ಯಾದಿಗುಂಟೆ ರೈತ ಕಿಸಾನ್ ನಾಗರಾಜು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.