ADVERTISEMENT

ಅಡಿಕೆಯಲ್ಲಿ ಹಸಿ ಮೆಣಸು ಬೆಳೆದ ರೈತ

ಮಿಶ್ರಕೃಷಿಯಿಂದ ಉತ್ತಮ ಇಳುವರಿ ಪಡೆದ ನಾಗರಾಜ್

ಸಾಂತೇನಹಳ್ಳಿ ಸಂದೇಶ ಗೌಡ
Published 28 ಜುಲೈ 2021, 6:21 IST
Last Updated 28 ಜುಲೈ 2021, 6:21 IST
ಹೊಳಲ್ಕೆರೆ ತಾಲ್ಲೂಕಿನ ಟಿ. ಎಮ್ಮಿಗನೂರಿನ ರೈತ ಸಿ.ಆರ್. ನಾಗರಾಜ್ ಬೆಳೆದಿರುವ ಹಸಿ ಮೆಣಸಿನಕಾಯಿ ಸಸಿಗಳು.
ಹೊಳಲ್ಕೆರೆ ತಾಲ್ಲೂಕಿನ ಟಿ. ಎಮ್ಮಿಗನೂರಿನ ರೈತ ಸಿ.ಆರ್. ನಾಗರಾಜ್ ಬೆಳೆದಿರುವ ಹಸಿ ಮೆಣಸಿನಕಾಯಿ ಸಸಿಗಳು.   

ಹೊಳಲ್ಕೆರೆ: ತಾಲ್ಲೂಕಿನ ಟಿ.ಎಮ್ಮಿಗನೂರಿನ ರೈತ ಸಿ.ಆರ್. ನಾಗರಾಜ್ ಅಡಿಕೆಯಲ್ಲಿ ಹಸಿ ಮೆಣಸಿನಕಾಯಿ ಬೆಳೆದು ಉತ್ತಮ ಇಳುವರಿ ಪಡೆದಿದ್ದಾರೆ.

ಸಿ.ಆರ್. ನಾಗರಾಜ್ ತಮ್ಮ ಒಂದು ಎಕರೆ ಜಮೀನಿನಲ್ಲಿ ‘ಸಿತಾರ’ ತಳಿಯ 4,500 ಮೆಣಸಿನಕಾಯಿ ಸಸಿ ಬೆಳೆದಿದ್ದಾರೆ. ಈಗ ತಿಂಗಳ ಬೆಳೆ ಇದ್ದು, ಮೆಣಸಿನ ಗಿಡಗಳು ಕಾಯಿಕಟ್ಟಿವೆ. ಹಸಿ ಮೆಣಸಿನಕಾಯಿ ಮಾರಾಟ ಮಾಡುವ ಉದ್ದೇಶದಿಂದ ಮೆಣಸಿನ ಗಿಡ ಬೆಳೆದಿದ್ದು, ಕಟಾವಿಗೆ ಸಿದ್ಧವಾಗಿದೆ.

‘ಎನ್.ಜಿ. ಹಳ್ಳಿಯ ನರ್ಸರಿಯಲ್ಲಿ 90 ಪೈಸೆಗೆ ಒಂದರಂತೆ ಮೆಣಸಿನ ಸಸಿ ತಂದು ನಾಟಿ ಮಾಡಿದ್ದೆವು. ಸಾಗಾಣಿಕೆ ವೆಚ್ಚ ಸೇರಿ ಸಸಿಗಳಿಗೆ ₹4,500 ಖರ್ಚಾಗಿದೆ. ಗೊಬ್ಬರ, ಔಷಧಿಗೆ ₹4,000 ಖರ್ಚಾಗಿದೆ. ಅಡಿಕೆ ಸಸಿ ಜತೆಗೇ ಮೆಣಸಿನ ಗಿಡಗಳಿಗೂ ಹನಿ ನೀರಾವರಿ ವ್ಯವಸ್ಥೆ ಮಾಡಿಸಿದ್ದೇನೆ. ಇದರಿಂದ ನೀರು ಪೋಲಾಗುವುದು ತಪ್ಪುತ್ತದೆ. ಸಸಿ ನಾಟಿ ಮಾಡುವುದರಿಂದ ಕಳೆ ತೆಗೆಯುವುದು, ಗೊಬ್ಬರ ಹಾಕುವುದು, ಔಷಧ ಸಿಂಪರಣೆಯನ್ನು ನಾವೇ ಮಾಡಿದ್ದೇವೆ. ಇದರಿಂದ ಕೂಲಿ ಹಣ ಉಳಿತಾಯ ಆಗಿದೆ. ಪತ್ನಿ ಮಂಜುಳಾ ಹಾಗೂ ದ್ವಿತೀಯ ಪಿಯುಸಿ ಓದುತ್ತಿದ್ದ ಮಗಳು ಸಿಂಚನಾ ಕೃಷಿಗೆ ನೆರವಾಗಿದ್ದಾರೆ’ ಎನ್ನುತ್ತಾರೆ ಕೃಷಿಕ ನಾಗರಾಜ್.

ADVERTISEMENT

‘ಪ್ರತೀ ಗಿಡದಲ್ಲಿ ಈಗ ಅರ್ಧ ಕೆಜಿಗೂ ಹೆಚ್ಚು ಮೆಣಸಿನಕಾಯಿ ಇದೆ. ಗಿಡದ ತುಂಬ ಹೂ, ಈಚುಗಳಿದ್ದು, ಬಲಿತ ಕಾಯಿ ಬಿಡಿಸಿದಂತೆ ಎಳೆಕಾಯಿಗಳು ಬಲಿಯುತ್ತವೆ. ಈಗ ಮಾರುಕಟ್ಟೆಯಲ್ಲಿ ಕೆಜಿಗೆ ₹40 ದರವಿದ್ದು, ನಮಗೆ ₹20ರಿಂದ ₹25 ಸಿಗುತ್ತದೆ. ವಾರಕ್ಕೆ ಎರಡು ಬಾರಿ ಕಾಯಿ ಬಿಡಿಸಬಹುದು. ಗಿಡಕ್ಕೆ 1 ಕೆಜಿ ಮೆಣಸಿನ ಕಾಯಿ ಸಿಕ್ಕಿದರೆ 40 ಕ್ವಿಂಟಲ್ ಇಳುವರಿ ಬರುತ್ತದೆ. ಕ್ವಿಂಟಲ್‌ಗೆ ₹2,000 ಸಿಕ್ಕಿದರೂ
₹ 80 ಸಾವಿರ ಆದಾಯ ನಿರೀಕ್ಷಿಸಿದ್ದೇವೆ’ ಎನ್ನುತ್ತಾರೆ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.