ಸಿರಿಗೆರೆ: ಚಿತ್ರದುರ್ಗ, ದಾವಣಗೆರೆ, ಚಿಕ್ಕಮಗಳೂರು ಮತ್ತು ತುಮಕೂರು ರೈತರ ಪಾಲಿನ ಆಶಾಕಿರಣವಾಗಿರುವ ಭದ್ರಾ ಮೇಲ್ಡಂಡೆ ಯೋಜನೆಗೆ ಕೇಂದ್ರ ಸರ್ಕಾರ 2022ರಲ್ಲಿ ಘೋಷಣೆ ಮಾಡಿದ್ದ ₹ 5,300 ಕೋಟಿ ಅನುದಾನವನ್ನು ಇದುವರೆಗೂ ಬಿಡುಗಡೆ ಮಾಡದೇ ಇರುವುದರಿಂದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪದಾಧಿಕಾರಿಗಳು ದೆಹಲಿಗೆ ತೆರಳಿ ಪ್ರಧಾನಿ ಮೋದಿಯವರನ್ನು ಭೇಟಿ ಮಾಡಲು ಸಜ್ಜಾಗಿದ್ದಾರೆ.
ತರಳಬಾಳು ಮಠದ ಸದ್ಧರ್ಮ ನ್ಯಾಯಪೀಠದಲ್ಲಿ ತರಳಬಾಳು ಜಗದ್ಗುರು ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಯನ್ನು ಭೇಟಿ ಮಾಡಿದ ನಂತರ ಸಂಘದ ಗೌರವಾಧ್ಯಕ್ಷ ಎಚ್.ಆರ್. ತಿಮ್ಮಯ್ಯ ಈ ವಿಚಾರ ತಿಳಿಸಿದರು.
‘ಭರವಸೆ ಇಲ್ಲಿಯವರೆಗೂ ಈಡೇರಿಲ್ಲ. ಕೇಂದ್ರ ಈ ಹಣ ಬಿಡುಗಡೆ ಮಾಡಿದರೆ ಯೋಜನೆ ಚುರುಕುಗೊಳ್ಳಲಿದೆ. ಹಾಗಾಗಿ ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ, ಹಣಕಾಸು ಸಚಿವೆ ನಿರ್ಮಲಾ ಸೀತರಾಮನ್ ಹಾಗೂ ಸಂಸದ ಗೋವಿಂದ ಕಾರಜೋಳ ಅವರಿಗೆ ಈಗಾಗಲೇ ಮನವಿ ಸಲ್ಲಿಸಲಾಗಿದೆ. ಶ್ರೀಗಳು ರಾಜ್ಯ ಸರ್ಕಾರದ ಮೇಲೆ ಒತ್ತಡ ತಂದು ಮಧ್ಯ ಕರ್ನಾಟಕದಲ್ಲಿ ಹಲವು ಏತ ನೀರಾವರಿಗಳನ್ನು ಯಶಸ್ವಿಗೊಳಿಸಿದ್ದಾರೆ. ಅವರು ರೈತರ ಪಾಲಿನ ಆಶಾಕಿರಣವಾಗಿದ್ದಾರೆ. ಭದ್ರಾ ಮೇಲ್ಡಂಡೆ ಯೋಜನೆಯು ಪೂರ್ಣಗೊಳ್ಳಲು ಶ್ರೀಗಳ ನೆರವು ಬೇಕಾಗಿದೆ. ಅವರು ರೈತರ ಪರ ನಿಂತಿದ್ದಾರೆ’ ಎಂದರು.
‘ಭದ್ರಾ ಅಣೆಕಟ್ಟೆಯ 29.90 ಟಿಎಂಸಿ ನೀರನ್ನು ಮಧ್ಯ ಕರ್ನಾಟಕದ ನಾಲ್ಕು ಜಿಲ್ಲೆಗಳ 367 ಕೆರೆಗಳಿಗೆ ತುಂಬಿಸುವ ಮಹತ್ವದ ಯೋಜನೆ ಇದಾಗಿದೆ. ಈ ಯೋಜನೆ ಕಾರ್ಯಗತವಾದರೆ 2.25 ಲಕ್ಷ ಹೆಕ್ಟೇರ್ ಭೂಮಿಯನ್ನು ನೀರಾವರಿ ಸೌಲಭ್ಯಕ್ಕೆ ಒಳಪಡಿಸಬಹುದಾಗಿದೆ. ಈ ಯೋಜನೆಯು ಸಾಕಾರಗೊಳ್ಳುವಂತೆ 5 ದಶಕಗಳಿಂದ ನಿರಂತರವಾಗಿ ಹೋರಾಟ ಮಾಡಿಕೊಂಡು ಬರಲಾಗಿದೆ’ ಎಂದು ಹೇಳಿದರು.
ರೈತಸಂಘದ ಚಿಕ್ಕಕಬ್ಬಿಗೆರೆ ನಾಗರಾಜ್, ಕಾರ್ಯಾಧ್ಯಕ್ಷ ಬಿ.ಎ. ಲಿಂಗಾರೆಡ್ಡಿ, ಪ್ರಧಾನ ಕಾರ್ಯದರ್ಶಿ ಎಲ್. ಮಲ್ಲಿಕಾರ್ಜುನ್, ಕಾರ್ಯದರ್ಶಿ ಎಂ.ಡಿ. ಸುರೇಶ್, ಕೊಟ್ರಬಸಪ್ಪ, ಆಡನೂರು ಶಿವಕುಮಾರ್, ರಾಮರೆಡ್ಡಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.