ADVERTISEMENT

ಚಿತ್ರದುರ್ಗ: ಕಾಯ್ದೆ ಖಂಡಿಸಿ ರೈತರಿಂದ ಸತ್ಯಾಗ್ರಹ

ಗಾಂಧಿ ಮಾದರಿ ಅನುಸರಿಸಿ ಉಪವಾಸಕ್ಕೆ ಕುಳಿತ ಅನ್ನದಾತರು

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2020, 16:15 IST
Last Updated 2 ಅಕ್ಟೋಬರ್ 2020, 16:15 IST
ಎಪಿಎಂಸಿ, ಭೂ ಸುಧಾರಣೆ,  ಕಾರ್ಮಿಕ ಕಾಯ್ದೆ ಸೇರಿ ಜಾರಿಗೆ ಮುಂದಾಗಿರುವ ಎಲ್ಲಾ ಕಾಯ್ದೆಗಳ ತಿದ್ದುಪಡಿ ಹಿಂಪಡೆಯಬೇಕು ಎಂದು ರಾಜ್ಯ ರೈತಸಂಘ ಹಾಗೂ ಹಸಿರುಸೇನೆ (ಪುಟ್ಟಣ್ಣಯ್ಯ ಬಣ) ಕಾರ್ಯಕರ್ತರು ಚಿತ್ರದುರ್ಗದಲ್ಲಿ ಶುಕ್ರವಾರ ಉಪವಾಸ ಸತ್ಯಾಗ್ರಹ ನಡೆಸಿದರು
ಎಪಿಎಂಸಿ, ಭೂ ಸುಧಾರಣೆ,  ಕಾರ್ಮಿಕ ಕಾಯ್ದೆ ಸೇರಿ ಜಾರಿಗೆ ಮುಂದಾಗಿರುವ ಎಲ್ಲಾ ಕಾಯ್ದೆಗಳ ತಿದ್ದುಪಡಿ ಹಿಂಪಡೆಯಬೇಕು ಎಂದು ರಾಜ್ಯ ರೈತಸಂಘ ಹಾಗೂ ಹಸಿರುಸೇನೆ (ಪುಟ್ಟಣ್ಣಯ್ಯ ಬಣ) ಕಾರ್ಯಕರ್ತರು ಚಿತ್ರದುರ್ಗದಲ್ಲಿ ಶುಕ್ರವಾರ ಉಪವಾಸ ಸತ್ಯಾಗ್ರಹ ನಡೆಸಿದರು   

ಚಿತ್ರದುರ್ಗ: ಸುಗ್ರೀವಾಜ್ಞೆ ಮೂಲಕ ರೈತ ಹಾಗೂ ಕಾರ್ಮಿಕ ವಿರೋಧಿ ಕಾಯ್ದೆ ಜಾರಿಗೆ ಸರ್ಕಾರಗಳು ಮುಂದಾಗಿವೆ ಎಂದು ದೂರಿ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆಯ ಎರಡು ಬಣದ ಕಾರ್ಯಕರ್ತರು ಪ್ರತ್ಯೇಕವಾಗಿ ಶುಕ್ರವಾರ ಉಪವಾಸ ಸತ್ಯಾಗ್ರಹ ನಡೆಸಿದರು.

ಗಾಂಧಿ ಜಯಂತಿಯನ್ನು ಸರಳವಾಗಿ ಆಚರಿಸುವ ಮೂಲಕ ಅವರ ಮಾದರಿಯನ್ನೇ ಅನುಸರಿಸಿ, ಅಖಿಲ ಭಾರತ ರೈತ ಸಂಘರ್ಷ ಸಮನ್ವಯ ಸಮಿತಿ, ಐಕ್ಯ ಸಮಿತಿ ಸಂಘಟನೆಯ ನೇತೃತ್ವದಲ್ಲಿ ಸತ್ಯಾಗ್ರಹಕ್ಕೆ ಮುಂದಾದರು.

ಕೋಡಿಹಳ್ಳಿ ಚಂದ್ರಶೇಖರ್ ಬಣದ ರೈತ ಮುಖಂಡ ಈಚಘಟ್ಟ ಸಿದ್ಧವೀರಪ್ಪ, ‘ಈ ಕಾಯ್ದೆಗಳ ಜಾರಿಯಿಂದ ರೈತರು, ಕಾರ್ಮಿಕರ ಬದುಕು ಅತಂತ್ರವಾಗಲಿದೆ. ವಿದ್ಯುತ್ ಖಾಸಗೀಕರಣವಾಗಿ ರೈತರು ಸಂಕಷ್ಟಕ್ಕೆ ಸಿಲುಕಲಿದ್ದಾರೆ. ಕೃಷಿ ಕ್ಷೇತ್ರ ಸಂಪೂರ್ಣ ನಾಶವಾಗಲಿದೆ’ ಎಂದು ದೂರಿದರು.

ADVERTISEMENT

‘ರೈತ ತನ್ನ ಬೆಳೆಯನ್ನು ಎಲ್ಲಿ ಬೇಕಾದರೂ ಮಾರಾಟ ಮಾಡಬಹುದು ಎನ್ನುವುದಾದರೆ ಉದ್ಯಮಿಗಳು, ಬಂಡವಾಳಶಾಹಿಗಳು ಖರೀದಿಸಿ ಕೃತಕ ಅಭಾವ ಸೃಷ್ಟಿಸಲಿದ್ದಾರೆ. ಈ ಮೂಲಕ ಹಂತ- ಹಂತವಾಗಿ ದುಬಾರಿ ಬೆಲೆಗೆ ಆಹಾರ ಧಾನ್ಯಗಳನ್ನು ಮಾರಾಟ ಮಾಡುವುದರಿಂದ ಆಹಾರ ಅಭದ್ರತೆ ಜನಸಾಮಾನ್ಯರನ್ನು ಕಾಡಲಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಪುಟ್ಟಣ್ಣಯ್ಯ ಬಣದ ರೈತ ಮುಖಂಡ ನುಲೇನೂರು ಶಂಕರಪ್ಪ, ‘ಎಪಿಎಂಸಿ, ಭೂ ಸುಧಾರಣೆ, ಅಗತ್ಯ ವಸ್ತು ಕಾಯ್ದೆ, ಗುತ್ತಿಗೆ ಕೃಷಿ ಕಾಯ್ದೆ, ಕಾರ್ಮಿಕ ಕಾಯ್ದೆ ಜಾರಿಗೆ ಮುಂದಾಗಿರುವ ಎಲ್ಲ ಕಾಯ್ದೆಗಳ ತಿದ್ದುಪಡಿ ಹಿಂಪಡೆಯಬೇಕು’ ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಕೋರಿದರು.

ರೈತ ಮುಖಂಡರಾದ ಬಸ್ತಿಹಳ್ಳಿ ಸುರೇಶ್‌ಬಾಬು, ಧನಂಜಯ, ರುದ್ರಸ್ವಾಮಿ, ಮುದ್ದಾಪುರದ ನಾಗಣ್ಣ, ತಿಪ್ಪೇಸ್ವಾಮಿ, ಕೆ.ಹೊರಕೇರಪ್ಪ, ಟಿ.ಶಫಿವುಲ್ಲಾ, ಎಸ್.ಕೆ. ಮಹಾಂತೇಶ್, ಚಿಕ್ಕಬ್ಬಿಗೆರೆ ನಾಗರಾಜ್, ರೆಡ್ಡಿಹಳ್ಳಿ ವೀರಣ್ಣ, ಡಿ.ಎಸ್.ಮಲ್ಲಿಕಾರ್ಜುನ್, ಅಪ್ಪರಸನಹಳ್ಳಿ ಬಸವರಾಜಪ್ಪ, ಸದಾಶಿವಪ್ಪ, ರಾಜಣ್ಣ, ಶ್ರೀಕಂಠಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.