ADVERTISEMENT

ಮಲ್ಲಾಪುರ ಕೆರೆಯಲ್ಲಿ ಮೀನುಗಳ ಮರಣಮೃದಂಗ

ವಿಷಾನಿಲ, ಜೀವವಾಯುವಿನ ಕೊರತೆಯಿಂದ‌ ಸಾವು

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2020, 15:57 IST
Last Updated 7 ಏಪ್ರಿಲ್ 2020, 15:57 IST
ಚಿತ್ರದುರ್ಗದ ಮಲ್ಲಾಪುರ ಕೆರೆ ದಡದಲ್ಲಿ ಸತ್ತು ತೇಲುತ್ತಿರುವ ಸಾವಿರಾರು‌ ಮೀನುಗಳು
ಚಿತ್ರದುರ್ಗದ ಮಲ್ಲಾಪುರ ಕೆರೆ ದಡದಲ್ಲಿ ಸತ್ತು ತೇಲುತ್ತಿರುವ ಸಾವಿರಾರು‌ ಮೀನುಗಳು   

ಚಿತ್ರದುರ್ಗ: ತಾಲ್ಲೂಕಿನ ಮಲ್ಲಾಪುರ ಕೆರೆಯಲ್ಲಿ ಸಾವಿರಾರು ಮೀನುಗಳು ಸಾವನ್ನಪ್ಪಿದ್ದು, ಸಹಿಸಿಕೊಳ್ಳಲಾಗದ ದುರ್ವಾಸನೆ ಹೆಚ್ಚಳವಾಗಿದೆ.

ಮಂಗಳವಾರ ಬೆಳಿಗ್ಗೆ ಕೆರೆಯ ದಡದಲ್ಲಿ ಸತ್ತ ಮೀನಿನ ರಾಶಿ ಕಣ್ಣುಹಾಯಿಸಿದಷ್ಟು ದೂರ ರಾಚುತ್ತಿದೆ. ಮಲ್ಲಾಪುರ ಗ್ರಾಮ ಹಾಗೂ ಸಮೀಪದ‌ ಪಿಳ್ಳೆಕೇರನಹಳ್ಳಿಯವರೆಗೂ ಕೊಳಕು ವಾಸನೆ ಬೀರುತ್ತಿದೆ. ಕೆರೆ ಮಾರ್ಗದಿಂದ ನಗರಕ್ಕೆ‌ ಬರುವವರು ಮೂಗು ಮುಚ್ಚಿಕೊಂಡು ಬರುವಂತಾಗಿದೆ.

ಕೊರೊನಾಕ್ಕೆ ಈಗಾಗಲೇ ಜನ ಭಯಭೀತರಾಗಿರುವ ಬೆನ್ನಲ್ಲೇ ಸಾವಿರಾರು ಮೀನುಗಳು ಸತ್ತು ಬಿದ್ದಿರುವ ರಾಶಿ ಕಂಡು ಎರಡು ಗ್ರಾಮದವರು ಗಾಬರಿಗೊಂಡಿದ್ದಾರೆ. ಮರಣಮೃದಂಗಕ್ಕೆ ತುತ್ತಾದ ಮೀನುಗಳನ್ನು ನೋಡಿದವರ ಕಣ್ಣಾಲಿ ಕೂಡ ಒದ್ದೆಯಾಗಿದೆ.

ADVERTISEMENT

ಮಲ್ಲಾಪುರ ಕೆರೆ ಒಂದು ಕಾಲದಲ್ಲಿ ಪ್ರಸಿದ್ಧ ಕೆರೆಯಾಗಿತ್ತು. ಆದರೆ, ದಶಕಗಳಿಂದಲೂ ತ್ಯಾಜ್ಯದ ರಾಶಿ, ಮಲೀನ ನೀರು ಸೇರಿಕೊಂಡು ಬಹುತೇಕ ಕಲುಷಿತಗೊಂಡಿದೆ. ಮೀನುಗಳು ಸಾವನ್ನಪ್ಪಲು ಇದು ಕೂಡ ಕಾರಣವೇ ಎಂಬ ಸಂಶಯ ವ್ಯಕ್ತವಾಗುತ್ತಿದೆ. ಕೆರೆ ಕಲುಷಿತಗೊಂಡಿದ್ದರೂ ಮೀನು ಉತ್ಪಾದನೆ ಹಾಗೂ ಸಾಕಾಣಿಕೆಗೆ ಬಳಕೆಯಾಗುತ್ತಿದೆ. ಸತ್ತು ಬಿದ್ದ ಮೀನುಗಳನ್ನು ನೋಡಿ ಗುತ್ತಿಗೆ ಪಡೆದವರು ಆತಂಕಕ್ಕೆ ಒಳಗಾಗಿದ್ದಾರೆ.

'ಕಲುಷಿತ ನೀರು, ವಿಷಕಾರಕ ಪದಾರ್ಥಗಳ ಜತೆಗೆ ಭಾನುವಾರ ಸುರಿದ ಮಳೆಯಿಂದಾಗಿ ಜೀವವಾಯುವಿನ ಕೊರತೆ ಉಂಟಾಗಿದೆ. ಇದರಿಂದ ಉಸಿರಾಟದ ತೊಂದರೆಯಿಂದಲೂ ಮೃತಪಟ್ಟಿರಬಹುದು' ಎಂದು ಗ್ರಾಮದ ಕೆಲವರು ಶಂಕೆ ವ್ಯಕ್ತಪಡಿಸಿದ್ದಾರೆ.

'ಇಷ್ಟೊಂದು ದೊಡ್ಡ‌ ಪ್ರಮಾಣದಲ್ಲಿ‌ ಮೀನುಗಳು ಸತ್ತು ಬಿದ್ದಿರುವುದನ್ನು ನಾವು ಈ ಹಿಂದೆ ನೋಡಿರಲಿಲ್ಲ. ಇದು ನಿಜಕ್ಕೂ ಆತಂಕ ಸೃಷ್ಟಿಸಿದೆ' ಎಂದು ಮಹಾತ್ಮಗಾಂಧಿ ಕೆರೆ ಬಳಕೆದಾರರ ಸಂಘದ ಅಧ್ಯಕ್ಷೆ ಸಿದ್ಧಲಿಂಗಮ್ಮ ಮತ್ತು ಬಸವರಾಜಪ್ಪ‌ ತಿಳಿಸಿದ್ದಾರೆ.

'ಯಾವ ಕಾರಣಕ್ಕಾಗಿ ಮೀನು ಮೃತಪಟ್ಟಿವೆ ಎಂಬುದನ್ನು ಮೀನುಗಾರಿಕೆ ಇಲಾಖೆ ಅಧಿಕಾರಿಗಳು ಪರಿಶೀಲಿಸಿ ಖಚಿತಪಡಿಸಬೇಕು. ಇದು ಕೂಡ ಸಾಂಕ್ರಾಮಿಕ‌ ರೋಗದ ಕರಿನೆರಳನ್ನು ಸೃಷ್ಟಿಸಿದೆ.‌ ಅದನ್ನು ತಪ್ಪಿಸಲು ಕೂಡಲೇ ಮೀನುಗಳನ್ನು ಹೊರಗೆ ತೆಗೆಸಲು ಜಿಲ್ಲಾಡಳಿತ ಮುಂದಾಗಬೇಕು' ಎಂದು ಮಹಾತ್ಮಗಾಂಧಿ ಕೆರೆ ಬಳಕೆದಾರರ ಸಂಘದ ಸಿದ್ಧಪ್ಪ‌ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.