ADVERTISEMENT

ಆಹಾರದ ಕಿಟ್‌ ಪಡೆಯಲು ಪರದಾಟ

ಇಲಾಖೆ ಕಚೇರಿ ಬಳಿ ಜಮಾಯಿಸಿದ ಸಾವಿರಾರು ಕಟ್ಟಡ ಕಾರ್ಮಿಕರು

​ಪ್ರಜಾವಾಣಿ ವಾರ್ತೆ
Published 29 ಜುಲೈ 2021, 13:20 IST
Last Updated 29 ಜುಲೈ 2021, 13:20 IST
ಚಿತ್ರದುರ್ಗದ ಜೆಸಿಆರ್‌ ಬಡಾವಣೆಯ ಕಾರ್ಮಿಕ ಇಲಾಖೆಯ ಕಚೇರಿಯ ಎದುರು ಸರತಿ ಸಾಲಿನಲ್ಲಿ ಕಾಯುತ್ತಿರುವ ಮಹಿಳಾ ಕಾರ್ಮಿಕರು.
ಚಿತ್ರದುರ್ಗದ ಜೆಸಿಆರ್‌ ಬಡಾವಣೆಯ ಕಾರ್ಮಿಕ ಇಲಾಖೆಯ ಕಚೇರಿಯ ಎದುರು ಸರತಿ ಸಾಲಿನಲ್ಲಿ ಕಾಯುತ್ತಿರುವ ಮಹಿಳಾ ಕಾರ್ಮಿಕರು.   

ಚಿತ್ರದುರ್ಗ: ಕಾರ್ಮಿಕ ಕಲ್ಯಾಣ ಮಂಡಳಿ ಮಂಜೂರು ಮಾಡಿದ ಆಹಾರದ ಕಿಟ್‌ಗಳನ್ನು ಪಡೆಯಲು ಕಟ್ಟಡ ಕಾರ್ಮಿಕರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಕೆಲಸ ಬಿಟ್ಟು ಇಲಾಖೆಯ ಕಚೇರಿಯಲ್ಲಿ ಕಾಯುವಂತಾಗಿದ್ದು, ಕೋವಿಡ್‌ ಮಾರ್ಗಸೂಚಿಗಳು ಉಲ್ಲಂಘನೆಯಾಗುತ್ತಿವೆ.

ಆಹಾರದ ಕಿಟ್‌ಗೆ ಅಗತ್ಯವಿರುವ ಟೋಕನ್‌ ಜೆಸಿಆರ್‌ ಬಡಾವಣೆಯ ಕಾರ್ಮಿಕ ಇಲಾಖೆಯಲ್ಲಿ ಸಿಗುತ್ತದೆ. ಇದನ್ನು ಪಡೆಯಲು ತಾಲ್ಲೂಕಿನ ಕಾರ್ಮಿಕರು ನಿರೀಕ್ಷೆ ಮೀರಿ ಬರುತ್ತಿದ್ದಾರೆ. ಕೆಲವರು ರಾತ್ರಿಯೇ ಬಂದು ಮಲಗುತ್ತಿದ್ದಾರೆ. ಮಹಿಳೆಯರು ನಸುಕಿನ 5.30ಕ್ಕೆ ಬಂದು ಸರತಿ ಸಾಲಿನಲ್ಲಿ ಕಾಯುತ್ತಿದ್ದಾರೆ.

‘ಚಿತ್ರದುರ್ಗ ತಾಲ್ಲೂಕಿನಲ್ಲಿ 24 ಸಾವಿರ ನೋಂದಾಯಿತ ಕಾರ್ಮಿಕರಿದ್ದಾರೆ. ತಾಲ್ಲೂಕಿಗೆ 15 ಸಾವಿರ ಆಹಾರದ ಕಿಟ್‌ಗಳು ಬಂದಿವೆ. ಕೆಲ ಕುಟುಂಬದಲ್ಲಿ ಹಲವು ಕಟ್ಟಡ ಕಾರ್ಮಿಕರು ಇದ್ದಾರೆ. ಹೀಗಾಗಿ, ಕುಟುಂಬವೊಂದಕ್ಕೆ ಒಂದು ಕಿಟ್‌ ನೀಡಲಾಗುತ್ತಿದೆ. ಆಧಾರ್‌ ಕಾರ್ಡ್‌, ಕಾರ್ಮಿಕರ ಗುರುತಿನ ಚೀಟಿ ಹಾಗೂ ಪಡಿತರ ಚೀಟಿಯನ್ನು ಗಮನಿಸಿ ಟೋಕನ್‌ ನೀಡಲಾಗುತ್ತಿದೆ’ ಎಂದು ಸೇವಾ ಕೇಂದ್ರದ ಕಾರ್ಮಿಕ ಬಂಧು ಸಂಜೀವಮೂರ್ತಿ ಮಾಹಿತಿ ನೀಡಿದ್ದಾರೆ.

ADVERTISEMENT

ಜುಲೈ ಎರಡನೇ ವಾರದಿಂದ ಕಾರ್ಮಿಕರಿಗೆ ಆಹಾರದ ಕಿಟ್‌ ವಿತರಿಸಲಾಗುತ್ತಿದೆ. ಕಾರ್ಮಿಕರಿಗೆ ಸಂಬಂಧಿಸಿದ ಸಂಘ–ಸಂಸ್ಥೆಗಳ ನೆರವಿನಿಂದ ಕಿಟ್‌ ವಿತರಣೆ ಮಾಡಲಾಗುತ್ತಿತ್ತು. ನೈಜ ಕಾರ್ಮಿಕರಿಗೆ ವಂಚನೆ ಆಗುತ್ತಿದೆ ಎಂಬ ಆರೋಪ ಕೇಳಿ ಬಂದಿದ್ದರಿಂದ ಕಾರ್ಮಿಕ ಇಲಾಖೆಯ ಕಚೇರಿಯಲ್ಲಿ ಟೋಕನ್‌ ನೀಡಲಾಗುತ್ತಿದೆ. ಟೋಕನ್‌ ಪಡೆದವರ ಪಟ್ಟಿಯನ್ನು ಸಿದ್ಧಪಡಿಸಿ ಮರುದಿನ ನೀಡಲಾಗುತ್ತದೆ. ಕಿಟ್‌ ಪಡೆಯಲು ಕಾರ್ಮಿಕರು ಕೆಇಬಿ ಸಮುದಾಯ ಭವನಕ್ಕೆ ತೆರಳಬೇಕು.

‘15 ವರ್ಷದಿಂದ ಗಾರೆ ಕೆಲಸ ಮಾಡುತ್ತಿದ್ದೇನೆ. ಲಾಕ್‌ಡೌನ್‌ ಸಂದರ್ಭದಲ್ಲಿ ಕೆಲಸ ಇಲ್ಲದೇ ತೊಂದರೆ ಅನುಭವಿಸಿದೆ. ಆಹಾರ ಧಾನ್ಯದ ಕಿಟ್‌ ಸಿಕ್ಕರೆ ಕುಟುಂಬಕ್ಕೆ ಅನುಕೂಲವಾಗುತ್ತದೆ. ಗ್ರಾಮದ ಏಳು ಜನರು ಬೆಳಿಗ್ಗೆ 6ಕ್ಕೆ ಬಂದು ಸರತಿಯಲ್ಲಿ ಕಾಯುತ್ತಿದ್ದೇವೆ’ ಎಂದು ಕ್ಯಾದಿಗೆರೆಯ ಮಾಳಕ್ಕ ಅಳಲು ತೋಡಿಕೊಂಡರು.

ಜೆಸಿಆರ್ ಮುಖ್ಯರಸ್ತೆಯಲ್ಲಿರುವ ಕಾರ್ಮಿಕ ಇಲಾಖೆಯ ಕಟ್ಟಡದ ಸುತ್ತ ಕಾರ್ಮಿಕರ ಸರತಿ ಸಾಲು ನಿರ್ಮಾಣವಾಗುತ್ತಿದೆ. ನಸುಕಿನಲ್ಲಿ ಬಂದು ಸರತಿಯಲ್ಲಿ ಕಾಯುವವರಿಗೆ ಮಧ್ಯಾಹ್ನದ ಹೊತ್ತಿಗೆ ಟೋಕನ್‌ ಸಿಗುತ್ತಿದೆ. ಸಾವಿರಾರಕ್ಕೂ ಅಧಿಕ ಜನರು ಸರತಿಯಲ್ಲಿ ಕಾಯುವುದರಿಂದ ಕೋವಿಡ್‌ ಮಾರ್ಗಸೂಚಿಗಳು ಪಾಲನೆ ಆಗುತ್ತಿಲ್ಲ. ಜನರನ್ನು ನಿಯಂತ್ರಿಸಲು ಪೊಲೀಸರು ಆಗಾಗ ಲಾಠಿ ಬೀಸುತ್ತಿದ್ದಾರೆ.

ಸರತಿಯಲ್ಲಿ ಕಾಯುವವರು ಊಟ, ತಿಂಡಿ ಸೇವಿಸಲು ಸಾಧ್ಯವಾಗುತ್ತಿಲ್ಲ. ಮಧುಮೇಹದಿಂದ ಬಳಲುವ ಕೆಲವರು ಕುಸಿದು ಬಿದ್ದ ನಿದರ್ಶನಗಳಿವೆ. ಕಾರ್ಮಿಕ ಸೇವಾ ಕೇಂದ್ರದಲ್ಲಿ ಇಬ್ಬರು ಸಿಬ್ಬಂದಿ ಇದ್ದು, ಎಲ್ಲರಿಗೂ ಟೋಕನ್‌ ವಿತರಣೆ ಮಾಡುವುದು ಕಷ್ಟವಾಗುತ್ತಿದೆ. ಬೆಳಿಗ್ಗೆ 9ರಿಂದ ಸಂಜೆ 5ರವರೆಗೆ ಕಾರ್ಯನಿರ್ವಹಿಸಿದರೂ ಗರಿಷ್ಠ 600 ಜನರಿಗೆ ಮಾತ್ರ ಟೋಕನ್‌ ನೀಡಲು ಸಾಧ್ಯವಾಗುತ್ತಿದೆ.

‘ಪಡಿತರದ ಮಾದರಿಯಲ್ಲಿ ಗ್ರಾಮ ಪಂಚಾಯಿತಿವಾರು ಆಹಾರದ ಕಿಟ್‌ ಹಂಚಿಕೆ ಮಾಡಿದ್ದರೆ ಯಾವುದೇ ತೊಂದರೆ ಆಗುತ್ತಿರಲಿಲ್ಲ. ತಾಲ್ಲೂಕಿನ ಎಲ್ಲ ಕಾರ್ಮಿಕರಿಗೆ ಒಂದೆಡೆ ವ್ಯವಸ್ಥೆ ಮಾಡಿದ್ದರಿಂದ ಈ ಸಮಸ್ಯೆ ಸೃಷ್ಟಿಯಾಗಿದೆ. ಈ ಬಗ್ಗೆ ಅಧಿಕಾರಿಗಳ ಗಮನ ಸೆಳೆದರೂ ಪ್ರಯೋಜನವಾಗಿಲ್ಲ’ ಎಂದು ಕಾರ್ಮಿಕರೊಬ್ಬರು ಆಕ್ರೋಶ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.