ADVERTISEMENT

ಚಿತ್ರದುರ್ಗ | ಪಾದಚಾರಿ ಮಾರ್ಗಗಳೇ ಮಾಯ; ಕಣ್ಮುಚ್ಚಿ ಕುಳಿತ ಆಡಳಿತ

ಮುಖ್ಯ ರಸ್ತೆಯಲ್ಲೇ ಓಡಾಡುವ ಜನ: ಮಕ್ಕಳು, ವೃದ್ಧರು, ಶಾಲೆ–ಕಾಲೇಜುಗಳ ವಿದ್ಯಾರ್ಥಿಗಳ ಪಡಿಪಾಟಲು

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2025, 5:00 IST
Last Updated 24 ನವೆಂಬರ್ 2025, 5:00 IST
ಚಿತ್ರದುರ್ಗದ ಮೇದೆಹಳ್ಳಿ ರಸ್ತೆಯ ಫುಟ್‌ಪಾತ್‌ನಲ್ಲಿ ಮಾರಾಟಕ್ಕೆ ಇಟ್ಟಿರುವ ಸಾಮಗ್ರಿಗಳು ಪ್ರಜಾವಾಣಿ ಚಿತ್ರಗಳು: ವಿ.ಚಂದ್ರಪ್ಪ
ಚಿತ್ರದುರ್ಗದ ಮೇದೆಹಳ್ಳಿ ರಸ್ತೆಯ ಫುಟ್‌ಪಾತ್‌ನಲ್ಲಿ ಮಾರಾಟಕ್ಕೆ ಇಟ್ಟಿರುವ ಸಾಮಗ್ರಿಗಳು ಪ್ರಜಾವಾಣಿ ಚಿತ್ರಗಳು: ವಿ.ಚಂದ್ರಪ್ಪ   

ಚಿತ್ರದುರ್ಗ: ‘ಕೋಟೆನಾಡಿನಲ್ಲಿ ಪಾದಚಾರಿ ಮಾರ್ಗ ಎಲ್ಲಿದೆ ಹುಡುಕಿಕೊಡಿ’... ಎಂಬ ಮೌಖಿಕ ದೂರು ನಾಗರಿಕರಿಂದ ನಿತ್ಯ ನಿರಂತರ ಕೇಳಿಬರುತ್ತಿದೆ. ಆದರೆ, ಸಂಬಂಧಪಟ್ಟ ಆಡಳಿತ ಈ ವಿಚಾರದಲ್ಲಿ ಜಾಣ ಕುರುಡು ಪ್ರದರ್ಶಿಸುತ್ತಿದೆ. 

ರಾಜ್ಯದಲ್ಲೇ ಅತ್ಯಂತ ಹಳೆಯ ಜಿಲ್ಲೆ ಎಂಬ ಖ್ಯಾತಿ ಹೊಂದಿರುವ ಚಿತ್ರದುರ್ಗದಲ್ಲಿ ಪಾದಚಾರಿ ಮಾರ್ಗಗಳೇ ಮಾಯವಾಗಿವೆ. ಬೆಳಿಗ್ಗೆ, ಇಳಿ ಸಂಜೆಯಲ್ಲಿ ನಿರ್ಭೀಡೆಯಿಂದ ಹೆಜ್ಜೆ ಹಾಕಬೇಕೆಂದರೆ ಅಂಗಡಿ ಸಾಮಗ್ರಿಗಳು ಇವುಗಳನ್ನು ಆಕ್ರಮಿಸಿಕೊಂಡಿವೆ. ಇದರಿಂದ ಜನ ಜೀವ ಭಯದಲ್ಲಿ ರಸ್ತೆಯಲ್ಲೇ ಸಾಗಬೇಕಾದ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಿದೆ.

ನಗರದ ಬಿ.ಡಿ. ರಸ್ತೆ, ಲಕ್ಷ್ಮಿ ಬಜಾರ್‌, ವಾಸವಿ ಮಹಲ್‌, ಆನೆಬಾಗಿಲು, ಮೇದೆಹಳ್ಳಿ, ಎಸ್‌ಬಿಎಂ ವೃತ್ತ, ಧರ್ಮಶಾಲಾ ರಸ್ತೆ, ಪ್ರಸನ್ನ ಚಿತ್ರಮಂದಿರ, ಸಂತೆ ಮಾರುಕಟ್ಟೆಯ ಆಸುಪಾಸಿನ ಹಲವು ರಸ್ತೆಯಲ್ಲಿರುವ ವಾಣಿಜ್ಯ ಮಳಿಗೆಗಳು ಫುಟ್‌ಪಾತ್‌ ಅನ್ನು ನುಂಗಿ ಹಾಕಿವೆ! ಗ್ರಾಹಕರನ್ನು ಸೆಳೆಯಲು ಅಂಗಡಿ ಮಾಲೀಕರು ಪಾದಚಾರಿ ಮಾರ್ಗದಲ್ಲಿ ವಸ್ತುಗಳನ್ನು ಇಡುವುದು ಸಾಮಾನ್ಯವಾಗಿದೆ. ಅಂಗಡಿಗಳ ಮುಂದೆ ಕಬ್ಬಿಣದ ಗ್ರಿಲ್‌ಗಳನ್ನೂ ಹಾಕಿಕೊಂಡಿರುವುದು ಸಮಸ್ಯೆಗೆ ಕಾರಣವಾಗಿದೆ.

ADVERTISEMENT

ಫರ್ನಿಚರ್ ಸಾಮಗ್ರಿ, ಅಂಗಡಿಗಳ ಬೋರ್ಡ್‌, ಜ್ಯೂಸ್ ಸ್ಟಾಲ್‌ಗೆ ಬರುವ ಗ್ರಾಹಕರಿಗೆ ಕೂರಲು ಆಸನ, ಪ್ಲಾಸ್ಟಿಕ್‌ ಪುಟ್ಟಿ ಹೀಗೆ ನಾನಾ ಸಾಮಗ್ರಿಗಳು ಪಾದಚಾರಿ ಮಾರ್ಗಗಳಲ್ಲಿ ಕಾಣ ಸಿಗುತ್ತವೆ. ಚಳ್ಳಕೆರೆ ಟೋಲ್‌ಗೇಟ್‌ನಿಂದ ಪ್ರವಾಸಿ ಮಂದಿರದವರೆಗಿನ ರಸ್ತೆಯ ಎರಡೂ ಬದಿಯಲ್ಲಿ ಗೂಡಂಗಡಿಗಳು ತಲೆ ಎತ್ತಿರುವುದರಿಂದ ಫುಟ್‌ಪಾತ್‌ನ ಕುರುಹು ಇಲ್ಲದಂತಾಗಿದೆ.  

ಜನದಟ್ಟಣೆ ಹೆಚ್ಚಾಗಿರುವ ಆರ್‌ಟಿಒ ಕಚೇರಿಯಿಂದ ಜಿಲ್ಲಾ ಆಸ್ಪತ್ರೆಯವರೆಗಿನ ತುರುವನೂರು ರಸ್ತೆ, ಜೆಸಿಆರ್‌ ಮುಖ್ಯರಸ್ತೆ‌, ಗಾಂಧಿ ವೃತ್ತದಿಂದ ಕನಕ ವೃತ್ತದವರೆಗಿನ ಪ್ರದೇಶಗಳಲ್ಲಿ ಪಾದಚಾರಿ ಮಾರ್ಗಗಳೇ ಇಲ್ಲವಾಗಿವೆ.  

ತುರುವನೂರು ರಸ್ತೆ ವಿಸ್ತರಣೆ ಮಾಡಿ ಎರಡೂ ಬದಿಯಲ್ಲಿ ಪಾದಚಾರಿ ಮಾರ್ಗ ನಿರ್ಮಿಸಲಾಗಿತ್ತು. ಅದನ್ನು ಕೆಲ ಶೋ ರೂಂಗಳು ಆಕ್ರಮಿಸಿಕೊಂಡಿವೆ. ಆಟೊ, ಬೈಕ್‌ಗಳನ್ನೂ ಇಲ್ಲೇ ನಿಲುಗಡೆ ಮಾಡಲಾಗುತ್ತಿದೆ. 

ರಂಗಯ್ಯನ ಬಾಗಿಲಿನಿಂದ ಜಿಲ್ಲಾ ಆಸ್ಪತ್ರೆ ಮುಂಭಾಗದ ರಸ್ತೆಯನ್ನು ವಿಸ್ತರಣೆ ಮಾಡಲಾಗಿದ್ದು, ಫುಟ್‌ಪಾತ್‌ ಇಲ್ಲವಾಗಿದೆ. ಈ ಕಾರಣಕ್ಕೆ ಜಿಲ್ಲಾ ಆಸ್ಪತ್ರೆಯ ಮುಂಭಾಗದ ರಸ್ತೆಯ ಇಕ್ಕೆಲಗಳಲ್ಲಿ ಎಳನೀರು, ಫಾಸ್ಟ್‌ಫುಡ್‌ ಅಂಗಡಿಗಳು ತಲೆ ಎತ್ತಿವೆ!

ಕೆಳಗೋಟೆ ಸಮೀಪದ ರಾಷ್ಟ್ರೀಯ ಹೆದ್ದಾರಿಯ ಸರ್ವೀಸ್‌ ರಸ್ತೆಯ ಪಾದಚಾರಿ ಮಾರ್ಗ ಸಿಮೆಂಟ್‌ ಶೀಟ್‌, ಕಲ್ಲು, ಮರಳು ಹಾಗೂ ತ್ಯಾಜ್ಯ ವಸ್ತುಗಳಿಂದ ಆವೃತವಾಗಿದೆ. ಚಳ್ಳಕೆರೆ ಟೋಲ್‌ ಗೇಟ್‌ ತಿರುವಿನಿಂದ ಆರ್‌ಟಿಒ ವರೆಗೂ ಕಸದ ರಾಶಿ ತುಂಬಿದೆ. ಈ ರಸ್ತೆಯಲ್ಲಿ ದಿನದ 24 ಗಂಟೆ ಲಾರಿ, ಬಸ್ಸು, ದ್ವಿಚಕ್ರ ವಾಹನಗಳ ಸಂಚಾರ ಹೆಚ್ಚಾಗಿರುತ್ತದೆ. ಶಾಲಾ ದಿನಗಳಲ್ಲಿ ವಾಹನಗಳು ಇನ್ನೂ ಹೆಚ್ಚಾಗಿರುತ್ತವೆ. ಈ ರಸ್ತೆಯ ಪಾದಚಾರಿ ಮಾರ್ಗದಲ್ಲಿ ಕಾಲಿಡಲೂ ಸ್ಥಳವಿಲ್ಲದಂತಾಗಿದೆ. 

ನಗರ ವ್ಯಾಪ್ತಿಯ ರಸ್ತೆಗಳ ಅಭಿವೃದ್ಧಿ ಯೋಜನೆಯಲ್ಲಿಯೇ ದೋಷ ಇರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಚಳ್ಳಕೆರೆ ಟೋಲ್‌ಗೇಟ್‌ನಿಂದ ಪ್ರವಾಸಿ ಮಂದಿರದವರೆಗೆ ಮಾತ್ರ ಕಾಣುವ ಪಾದಾಚಾರಿ ಮಾರ್ಗ ಉಳಿದೆಡೆ ಹುಡುಕುವಂತಾಗಿದೆ. ರಸ್ತೆ ಅಭಿವೃದ್ಧಿಗೆ ತೋರುತ್ತಿರುವ ಕಾಳಜಿಯನ್ನು ಪಾದಚಾರಿ ಮಾರ್ಗ ನಿರ್ಮಾಣಕ್ಕೆ ತೋರುತ್ತಿಲ್ಲ ಎಂದು ನಾಗರಿಕರು ಬೇಸರ ವ್ಯಕ್ತಪಡಿಸುತ್ತಾರೆ. 

ಚಿತ್ರದುರ್ಗದ ಮೇದೆಹಳ್ಳಿ ರಸ್ತೆಯಲ್ಲಿ ಪಾದಚಾರಿ ಮಾರ್ಗ ಮರೆಯಾಗಿರುವುದರಿಂದ ಜನರು ರಸ್ತೆಯಲ್ಲೇ ಓಡಾಡುತ್ತಿರುವುದು 
ಹೊಸದುರ್ಗದಲ್ಲಿ ಪಾದಚಾರಿ ಮಾರ್ಗದ ಮೇಲೆ ಅಂಗಡಿ ಸಾಮಗ್ರಿಗಳನ್ನು ಇಟ್ಟಿರುವುದು 
ಹೊಳಲ್ಕೆರೆಯ ಶಿವಮೊಗ್ಗ ರಸ್ತೆಯ ಪಾದಚಾರಿ ಮಾರ್ಗದಲ್ಲಿ ತಲೆ ಎತ್ತಿರುವ ಗೂಡಂಗಡಿಗಳು
ಅಂಗಡಿಯವರು ಪಾದಚಾರಿ ಮಾರ್ಗಗಳನ್ನು ಆಕ್ರಮಿಸಿಕೊಂಡಿರುವುದು ಗಮನಕ್ಕೆ ಬಂದಿದೆ. ಶೀಘ್ರ ಮಾಲೀಕರಿಗೆ ಸೂಚನೆ ನೀಡಿ ಅವುಗಳನ್ನು ತೆರವುಗೊಳಿಸುವ ಮೂಲಕ ಜನರಿಗೆ ಅನುಕೂಲ ಮಾಡಿಕೊಡುತ್ತೇವೆ
ಎಸ್‌.ಲಕ್ಷ್ಮಿ ಪೌರಾಯುಕ್ತೆ ಚಿತ್ರದುರ್ಗ
ವಾಣಿಜ್ಯ ಅಂಗಡಿಗಳು ಫುಟ್‌ಪಾತ್‌ ಅತಿಕ್ರಮಿಸಿಕೊಂಡಿರುವುದರಿಂದ ಚಿತ್ರದುರ್ಗದಲ್ಲಿ ಪಾದಚಾರಿ ಮಾರ್ಗವನ್ನು ಹುಡುಕುವಂತಾಗಿದೆ. ಹೀಗಾಗಿ ನಾಗರಿಕರು ಜೀವ ಭಯದಲ್ಲೇ ರಸ್ತೆಗಳಲ್ಲಿ ನಡೆದುಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ
ಎಂ.ದಯಾನಂದ ನಾಗರಿಕ
ಪೊಲೀಸ್‌ ಇಲಾಖೆ ಸಹಕಾರದಿಂದ ಹೊಸದುರ್ಗದಲ್ಲಿ ಮೊದಲು ಅರಿವು ಮೂಡಿಸುವ ಕಾರ್ಯ ಮಾಡಲಾಗುತ್ತದೆ. ಮುಂದಿನ 20 ದಿನಗಳೊಳಗೆ ಅಂಗಡಿಗಳನ್ನು ತೆರವುಗೊಳಿಸಲು ಕ್ರಮವಹಿಸಲಾಗುತ್ತದೆ
ಎನ್‌.ನಾಗಭೂಷಣ್‌ ಮುಖ್ಯಾಧಿಕಾರಿ ಪುರಸಭೆ

ರಸ್ತೆ ಪಕ್ಕ ಗೂಡಂಗಡಿಗಳ ಕಾರುಬಾರು

-ಸಾಂತೇನಹಳ್ಳಿ ಸಂದೇಶ್ ಗೌಡ

ಹೊಳಲ್ಕೆರೆ: ಪಟ್ಟಣದ ಮುಖ್ಯರಸ್ತೆಗಳ ಪಕ್ಕದಲ್ಲಿ ಗೂಡಂಗಡಿಗಳ ಹಾವಳಿ ಹೆಚ್ಚಾಗಿದ್ದು ವಾಹನ ಸವಾರರಿಗೆ ತೊಂದರೆಯಾಗಿದೆ. ಶಿವಮೊಗ್ಗ– ಚಿತ್ರದುರ್ಗ ರಸ್ತೆ ದಾವಣಗೆರೆ– ಹೊಸದುರ್ಗ ರಸ್ತೆಗಳ ಎರಡೂ ಬದಿಯಲ್ಲಿ ನೂರಾರು ಗೂಡಂಗಡಿಗಳಿದ್ದು ಸಾರ್ವಜನಿಕರಿಗೂ ಕಿರಿಕಿರಿಯಾಗುತ್ತಿದೆ. ಮುಖ್ಯವೃತ್ತ ತಾಲ್ಲೂಕು ಕಚೇರಿ ಮುಂಭಾಗ ಹೊಸದುರ್ಗ ರಸ್ತೆ ದಾವಣಗೆರೆ ಕ್ರಾಸ್‌ನಲ್ಲಿ ಬೆಳಿಗ್ಗೆ ಆರಂಭವಾಗುವ ತಿಂಡಿ ಹೋಟೆಲ್‌ಗಳು  ಮಧ್ಯಾಹ್ನದವರೆಗೂ ಕಾರ್ಯಾಚರಣೆ ನಡೆಸುತ್ತವೆ. ಮಧ್ಯಾಹ್ನ ಆಗುತ್ತಿದ್ದಂತೆ ಸಂವಿಧಾನ ಸೌಧದ ಪಕ್ಕದ ಪ್ರಮುಖ ರಸ್ತೆಯಲ್ಲಿ ಎಗ್‌ ರೈಸ್‌ ಕಬಾಬ್‌ ಬಿರಿಯಾನಿ ಅಂಗಡಿಗಳು ತಾಲ್ಲೂಕು ಕಚೇರಿ ಮುಂದೆ ಊಟದ ಹೋಟೆಲ್‌ಗಳು ತೆರೆದುಕೊಳ್ಳುತ್ತವೆ.

ಇಲ್ಲಿಗೆ ಬರುವ ಗ್ರಾಹಕರು ಮುಖ್ಯರಸ್ತೆಯಲ್ಲಿ ಬೈಕ್‌ ಕಾರ್‌ ನಿಲ್ಲಿಸುವುದರಿಂದ ಸಂಚಾರ ದಟ್ಟಣೆ ಸಮಸ್ಯೆ ಉಂಟಾಗುತ್ತಿದೆ.  ಮಧ್ಯಾಹ್ನ ಮೂರು ಗಂಟೆ ನಂತರ ಶಿವಮೊಗ್ಗ ರಸ್ತೆಯಲ್ಲಿ ಪಾನಿಪೂರಿ ಮಸಾಲ ಪೂರಿ ಗೋಬಿ ಮಂಚೂರಿ ಸ್ಟಾಲ್‌ಗಳು ಆರಂಭವಾಗುತ್ತವೆ. ರಾತ್ರಿಯವರೆಗೂ ಈ ಸ್ಟಾಲ್‌ಗಳು ತೆರೆದಿರುತ್ತವೆ. ಈ ಗೂಡಂಗಡಿಗಳಲ್ಲಿ ಸ್ವಚ್ಛತೆಯ ಕೊರತೆ ಇದ್ದು ರೋಗ ಹರಡುವ ಭೀತಿ ಇದೆ. ‘₹5 ರಿಂದ ₹10 ಲಕ್ಷದವರೆಗೆ ಠೇವಣಿ ಕಟ್ಟಿ ಪ್ರತಿ ತಿಂಗಳು ಸಾವಿರಾರು ರೂಪಾಯಿ ಬಾಡಿಗೆ ಕೊಟ್ಟು ಮಳಿಗೆ ಪಡೆದಿದ್ದೇವೆ. ನಮ್ಮ ಮಳಿಗೆಯ ಮುಂದಿನ ರಸ್ತೆಯ ಪಕ್ಕದಲ್ಲೇ ಹಣ್ಣಿನ ಅಂಗಡಿಗಳು ಹೋಟೆಲ್‌ಗಳು ತಲೆ ಎತ್ತಿವೆ. ಇದರಿಂದ ನಮ್ಮ ಅಂಗಡಿಗಳಿಗೆ ಬರುವ ಗ್ರಾಹಕರು ಮತ್ತು ಪಾದಚಾರಿಗಳಿಗೆ ಕಿರಿ ಕಿರಿಯಾಗುತ್ತಿದೆ. ಪುರಸಭೆಯವರು ಈ ಬಗ್ಗೆ ಗಮನ ಹರಿಸಬೇಕು’ ಎಂದು ಮಳಿಗೆ ಬಾಡಿಗೆ ಪಡೆದಿರುವ ವ್ಯಾಪಾರಿಗಳು ಆಗ್ರಹಿಸಿದ್ದಾರೆ.

ಫುಟ್‌ಪಾತ್‌ ಅತಿಕ್ರಮಣ; ಪಾದಚಾರಿಗಳಿಗೆ ಕಿರಿಕಿರಿ

-ಎಚ್‌.ಡಿ.ಸಂತೋಷ್‌

ಹೊಸದುರ್ಗ: ಪಟ್ಟಣದ ಜನನಿಬಿಡ ಪ್ರದೇಶಗಳಲ್ಲಿನ ರಸ್ತೆಗಳಲ್ಲಿರುವ ಅಂಗಡಿಗಳು ಪಾದಚಾರಿ ಮಾರ್ಗ ಅತಿಕ್ರಮಣ ಮಾಡಿಕೊಂಡಿರುವುದರಿಂದ ಜನ ಕಿರಿಕಿರಿ ಅನುಭವಿಸುವಂತಾಗಿದೆ. ಖಾಸಗಿ ಬಸ್‌ ನಿಲ್ದಾಣದಿಂದ ಸಿದ್ದರಾಮರ ನಗರದವರೆಗೂ ರಸ್ತೆಯ ಎರಡು ಬದಿಗಳಲ್ಲಿ ಪಾದಚಾರಿ ಮಾರ್ಗಗಳಿವೆ.

ಪೊಲೀಸ್‌ ಠಾಣೆ ಪಕ್ಕ ಗಾಂಧಿ ವೃತ್ತ ಟಿ.ಬಿ ವೃತ್ತ ಪ್ರವಾಸಿ ಮಂದಿರದ ರಸ್ತೆ ಸೇರಿದಂತೆ ವಿವಿಧೆಡೆ ಎಗ್‌ ರೈಸ್‌ ಪಾನಿಪೂರಿ ಹಣ್ಣು ಹೂವಿನ ಅಂಗಡಿ ಸೇರಿದಂತೆ ಹಲವು ಅಂಗಡಿಗಳ ಬೋರ್ಡ್‌ಗಳು ಕಾಣಸಿಗುತ್ತವೆ. ಇವು ಪಾದಚಾರಿ ಮಾರ್ಗಕ್ಕೂ ವ್ಯಾಪಿಸಿಕೊಂಡಿವೆ. ಕೆಲವೆಡೆ ಇವು ವಾಹನ ನಿಲುಗಡೆಯ ತಾಣವಾಗಿದ್ದು ಪಾದಚಾರಿಗಳ ಪಡಿಪಾಟಲು ಹೇಳತೀರದಾಗಿದೆ.   

ಸೋಮವಾರವಂತೂ ಫುಟ್‌ಪಾತ್‌ ಅಕ್ಷರಶಃ ಮಾರುಕಟ್ಟೆಯಂತೆಯೇ ಗೋಚರಿಸುತ್ತದೆ. ಈ ಕುರಿತು ಕ್ರಮ ಕೈಗೊಂಡು ಪಾದಚಾರಿಗಳಿಗೆ ಅನುಕೂಲ ಮಾಡಿಕೊಡಬೇಕಿರುವ ಆಡಳಿತವು ಕಣ್ಣುಮುಚ್ಚಿ ಕುಳಿತಿದೆ.  ‘ಪಾದಚಾರಿ ಮಾರ್ಗ ಆಕ್ರಮಿಸಿಕೊಂಡಿರುವ ಕಾರಣ ಜನರಿಗೆ ತೊಂದರೆ ಉಂಟಾಗಿದೆ. ಕೆಲವು ವ್ಯಾಪಾರಿಗಳು ಜೀವನೋಪಾಯಕ್ಕಾಗಿ ಅಂಗಡಿ ಹಾಕಿಕೊಂಡಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ ಅಂಗಡಿಗಳನ್ನು ತೆರವುಗೊಳಿಸುವ ಮೂಲಕ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು. ಜತೆಗೆ ವ್ಯಾಪಾರಿಗಳಿಗೆ ಸೂಕ್ತ ಸ್ಥಳ ಕಲ್ಪಿಸುವ ಬಗ್ಗೆ ಗಮನಹರಿಸಬೇಕು’ ಎನ್ನುತ್ತಾರೆ ಪಟ್ಟಣದ ನಿವಾಸಿ ಶಂಕರ್‌.

ಪಾದಚಾರಿ ಮಾರ್ಗ ಇಲ್ಲದ ಕಾರಣ ಜನರು ರಸ್ತೆಗಳಲ್ಲೇ ಓಡಾಡುವ ಪರಿಸ್ಥಿತಿ ಸೃಷ್ಟಿಯಾಗಿದೆ. ಮಕ್ಕಳು  ವೃದ್ಧರು ಮತ್ತು ಶಾಲೆ–ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳು ವಾಹನ ಡಿಕ್ಕಿಯಾಗಿ ಅಪಾಯಕ್ಕೆ ಸಿಲುಕುವ ಸಾಧ್ಯತೆ ಇದೆ. ಇನ್ನಾದರೂ ನಗರಸಭೆ ಮತ್ತು ಪೊಲೀಸ್ ಇಲಾಖೆ ಕ್ರಮ ಕೈಗೊಂಡು ಪಾದಚಾರಿಗಳಿಗೆ ಅನುಕೂಲ ಮಾಡಿಕೊಡಬೇಕು ಎಂಬುದು ಸ್ಥಳೀಯರ ಒತ್ತಾಯ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.