ADVERTISEMENT

ಅವಕಾಶವಾದಿಗಳ ಕುರಿತು ಎಚ್ಚರ ಅಗತ್ಯ: ಎಚ್. ಆಂಜನೇಯ

ಜೈ ಭೀಮ್ ವೃತ್ತ ಉದ್ಘಾಟನೆಯಲ್ಲಿ ಮಾಜಿ ಸಚಿವ ಎಚ್. ಆಂಜನೇಯ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2021, 5:39 IST
Last Updated 6 ಡಿಸೆಂಬರ್ 2021, 5:39 IST
ಚಿತ್ರದುರ್ಗ ತಾಲ್ಲೂಕಿನ ಕೆ.ಬಳ್ಳೆಕಟ್ಟೆ ಗ್ರಾಮದಲ್ಲಿ ಜೈ ಭೀಮ್ ವೃತ್ತ ನಿರ್ಮಾಣ ಕಾರ್ಯಕ್ರಮವನ್ನು ಮಾಜಿ ಸಚಿವ ಎಚ್. ಆಂಜನೇಯ ಉದ್ಘಾಟಿಸಿದರು
ಚಿತ್ರದುರ್ಗ ತಾಲ್ಲೂಕಿನ ಕೆ.ಬಳ್ಳೆಕಟ್ಟೆ ಗ್ರಾಮದಲ್ಲಿ ಜೈ ಭೀಮ್ ವೃತ್ತ ನಿರ್ಮಾಣ ಕಾರ್ಯಕ್ರಮವನ್ನು ಮಾಜಿ ಸಚಿವ ಎಚ್. ಆಂಜನೇಯ ಉದ್ಘಾಟಿಸಿದರು   

ಚಿತ್ರದುರ್ಗ: ‘ದೇಶ ಮತ್ತು ಮಹಾತ್ಮರಿಗೆ ನಿಜವಾಗಿ ಗೌರವಿಸದೇ ನಟನೆ ಮಾಡುತ್ತಾ ವಂಚಿಸುವ ಡೋಂಗಿಗಳ, ಅವಕಾಶವಾದಿಗಳ ಕುರಿತು ಎಚ್ಚರ ವಹಿಸಬೇಕು. ಇಲ್ಲದಿದ್ದರೆ, ಅಪಾಯ ತಪ್ಪಿದ್ದಲ್ಲ’ ಎಂದು ಮಾಜಿ ಸಚಿವ ಎಚ್. ಆಂಜನೇಯ ಹೇಳಿದರು.

ತಾಲ್ಲೂಕಿನ ಕಾತ್ರಾಳ್ ಸಮೀಪದ ಕೆ. ಬಳ್ಳೆಕಟ್ಟೆ ಗ್ರಾಮದಲ್ಲಿ ಭಾನುವಾರ ಆಯೋಜಿಸಿದ್ದ ಜೈ ಭೀಮ್ ವೃತ್ತ ಉದ್ಘಾಟನೆ ಕಾರ್ಯ
ಕ್ರಮದಲ್ಲಿ ಮಾತನಾಡಿದ ಅವರು, ‘ಸಹೋದರತ್ವದಿಂದ ಬದುಕುತ್ತಿರುವವರ ನಡುವೆ ಒಂದು ಧರ್ಮ, ಜಾತಿ, ಸಿದ್ಧಾಂತದ ಸಂಕೋಲೆಗೆ ಕಟ್ಟಿಹಾಕುವ ಪ್ರಯತ್ನ ನಡೆಯುತ್ತಿದೆ. ಇದರ ವಿರುದ್ಧ ಜಾಗರೂಕರಾಗಬೇಕಿದೆ’ ಎಂದರು.

‘ಅಂಬೇಡ್ಕರ್ ಯಾವುದೇ ಸಮುದಾಯಕ್ಕೆ ಸೀಮಿತವಲ್ಲ. ಸ್ತ್ರೀ–ಪುರುಷರು ಸೇರಿ ಎಲ್ಲರಿಗೂ ಸಂವಿಧಾನದಲ್ಲಿ ಸಮಾನ ಅವಕಾಶ ಕಲ್ಪಿಸಿದ್ದಾರೆ. ಆದರೆ, ಅವರನ್ನೂ ದಲಿತ ವರ್ಗದ ಜಾತಿ ಬೇಲಿಯಲ್ಲಿ ಸಿಲುಕಿಸಲು ಪಟ್ಟಭದ್ರರು ಸದಾ ಯತ್ನ ನಡೆಸುತ್ತಿದ್ದಾರೆ. ಈ ಕಾರ್ಯ ವಿಫಲವಾಗುತ್ತಿದೆ. ಇದು ಸಫಲವಾಗಲು ಬಿಡಬಾರದು’ ಎಂದು ಎಚ್ಚರಿಸಿದರು.

ADVERTISEMENT

‘ಪ್ರಪಂಚದ ಬೆರಳೆಣಿಕೆಯಷ್ಟು ಮಹಾಪುರುಷರಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಕೂಡ ಪ್ರಮುಖರು. ವಿಶ್ವಗುರು ಬಸವಣ್ಣ, ಬುದ್ಧ, ಗಾಂಧೀಜಿ, ಸ್ವಾಮಿ ವಿವೇಕಾನಂದ ಸೇರಿ ಅನೇಕ ಮಹನೀಯರು ಮನುಕುಲದ ಉಳಿವು, ಬೆಳವಣಿಗೆಗೆ ಶ್ರಮಿಸಿದ್ದಾರೆ. ಅವರ ಆದರ್ಶ ಮೈಗೂಡಿಸಿಕೊಂಡು ದೇಶ ಮತ್ತು ಸಮಾಜವನ್ನು ಮುನ್ನಡೆಸಬೇಕಿದೆ’ ಎಂದರು.

ದೇಶದ್ರೋಹ ಪ್ರಕರಣ ದಾಖಲಿಸಿ: ‘ಬಸವಣ್ಣ ಅವರ ಅನುಭವ ಮಂಟಪದ ಪರಿಕಲ್ಪನೆಯ ಸಂವಿಧಾನ ಭಾರತದ ಸರ್ವಶ್ರೇಷ್ಠ ಗ್ರಂಥ. ಆದರೆ, ಇತ್ತೀಚೆಗೆ ಅದನ್ನು ಬದಲಿಸುತ್ತೇವೆ ಎಂದು ಕೆಲವರು ವಿಕೃತ ಮೆರೆಯುತ್ತಿರುವುದು ಆತಂಕದ ವಿಷಯ. ಇಂತಹವರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಬೇಕು’ ಎಂದು ಆಗ್ರಹಿಸಿದರು. ಶಾಸಕ ಜಿ.ಎಚ್. ತಿಪ್ಪಾರೆಡ್ಡಿ, ಕೆಪಿಸಿಸಿ ಕಾರ್ಯದರ್ಶಿ ಹನುಮಲಿ ಷಣ್ಮುಖಪ್ಪ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಆರ್. ನರಸಿಂಹರಾಜು, ಐನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕವಿತಾ, ಸದಸ್ಯರಾದ ಮೇಘರಾಜ್, ಪ್ರಸನ್ನಕುಮಾರ್, ಗುತ್ತಿಗೆದಾರ ಬ್ಯಾಲಾಳ್ ಜಯಣ್ಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.