ADVERTISEMENT

ಚಿತ್ರದುರ್ಗ: ಏಕದಂತನ ಸ್ವಾಗತಕ್ಕೆ ಸಡಗರದ ಸಿದ್ಧತೆ

ಮನೆ, ಮನಗಳಿಗೆ ಬಂದ ಗೌರಿ; ಪೆಂಡಾಲ್‌ಗಳಲ್ಲಿ ಆಕರ್ಷಕ ದೀಪಾಲಂಕಾರ

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2024, 15:33 IST
Last Updated 6 ಸೆಪ್ಟೆಂಬರ್ 2024, 15:33 IST
ಚಿತ್ರದುರ್ಗ ನಗರದ ಪಿಎನ್‌ಟಿ ಕ್ವಾಟ್ರಸ್‌ನ ಸಿದ್ಧಿ ವಿನಾಯಕ ದೇವಸ್ಥಾನದ ಆವರಣದಲ್ಲಿ ಪ್ರತಿಷ್ಠಾಪಿಸಿರುವ ಗೌರಿ ದೇವಿ ಮೂರ್ತಿ
ಚಿತ್ರದುರ್ಗ ನಗರದ ಪಿಎನ್‌ಟಿ ಕ್ವಾಟ್ರಸ್‌ನ ಸಿದ್ಧಿ ವಿನಾಯಕ ದೇವಸ್ಥಾನದ ಆವರಣದಲ್ಲಿ ಪ್ರತಿಷ್ಠಾಪಿಸಿರುವ ಗೌರಿ ದೇವಿ ಮೂರ್ತಿ   

ಚಿತ್ರದುರ್ಗ: ವರುಣ ದೇವನ ಕೃಪೆಯಿಂದ ಈ ಬಾರಿ ಕೆರೆಕಟ್ಟೆಗಳಲ್ಲಿನ ಜೀವ ಜಲದ ವೈಭವ ಗೌರಿ ಗಣೇಶ ಹಬ್ಬದ ಸಂಭ್ರಮವನ್ನು ಇಮ್ಮಡಿಗೊಳಿಸಿದೆ. ಜಿಲ್ಲೆಯಾದ್ಯಂತ ಏಕದಂತನ ಪೂಜೆಗೆ ಕ್ಷಣಗಣನೆ ಶುರುವಾಗಿದೆ.

ಕಳೆದ ಹದಿನೈದು ದಿನದಂದ ಪ್ರಾರಂಭವಾದ ಸಿದ್ಧತೆಗಳು ಬಹುತೇಕ ಶುಕ್ರವಾರ ರಾತ್ರಿ ಅಂತಿಮ ಹಂತ ತಲುಪಿದವು. ವಿಘ್ನ ನಿವಾರಕನನ್ನು ಭಕ್ತಿಪೂರ್ವಕವಾಗಿ ಸ್ವಾಗತಿಸಲು ಮನೆ–ಮನಗಳು ಸಜ್ಜಾಗಿವೆ.

ಮಧ್ಯಾಹ್ನ, ಸಂಜೆಯ ಮಳೆಯ ಆತಂಕದಲ್ಲಿದ್ದ ಜನರು ಮಾರುಕಟ್ಟೆಗೆ ಬೆಳಿಗ್ಗೆಯೇ ಆಗಮಿಸಿ ಪೂಜಾ ಸಾಮಾಗ್ರಿ ಖರೀದಿಸಿದರು. ಇದರಿಂದಾಗಿ ಗಾಂಧಿ ವೃತ್ತ, ಸಂತೆ ಹೊಂಡದ ರಸ್ತೆ, ಮೆದೇಹಳ್ಳಿ ರಸ್ತೆ, ಹೊಳಲ್ಕೆರೆ ರಸ್ತೆ, ಆನೆಬಾಗಿಲು, ಎಪಿಎಂಸಿ ಹೂವಿನ ಮಾರುಕಟ್ಟೆಯಲ್ಲಿ ಜನ ದಟ್ಟಣೆ ಉಂಟಾಗಿತ್ತು. ಹೂವು, ಹಣ್ಣು, ಬಾಳೆ ಕಂದು, ಬಾಳೆ ಎಲೆ, ಮಾವಿನ ಎಲೆ, ತರಕಾರಿ ಸೇರಿದಂತೆ ಮತ್ತಿತರ ಅಗತ್ಯ ವಸ್ತುಗಳ ಖರೀದಿ ಜೋರಾಗಿ ನಡೆಯಿತು. ಮಧ್ಯಾಹ್ನದ ವೇಳೆಗೆ ಮೆದೇಹಳ್ಳಿ ರಸ್ತೆಯಲ್ಲಿ ಸಂಚಾರ ದಟ್ಟಣೆಯುಂಟಾಗಿ ವಾಹನ ಸವಾರರು ಕಿರಿಕಿರಿ ಅನುಭವಿಸಿದರು.

ADVERTISEMENT

ಮನೆಯ ಬಾಗಿಲು, ದೇವರ ಕೋಣೆ, ಗಣೇಶ ಮೂರ್ತಿಗಾಗಿ ವಿವಿಧ ಬಗೆಯ ಹೂ, ಹಾರಗಳನ್ನು ಕೊಳ್ಳಲು ಆಸಕ್ತಿ ತೋರಿದರು. ‌ಇತ್ತ ಗಣಪತಿ ಪ್ರತಿಷ್ಠಾಪನ ಸಮಿತಿಗಳ ಸದಸ್ಯರು ಮಂಟಪ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದರು.

ಚೆಂಡು ಹೂವು ಮಾರಿಗೆ ₹ 60–80, ಸೇವಂತಿಗೆ, ಕಲರ್‌ ಹಾಗೂ ಬಿಳಿ ಸೇವಂತಿಗೆ ₹ 100–150, ಕನಕಾಂಬರ, ಮಲ್ಲಿಗೆ ₹ 120–150, ಮಾವಿನ ಸೊಪ್ಪು ₹ 40 ರಿಂದ 50, ಬಾಳೆಕಂದು ಜೋಡಿ ₹ 50, ತೆಂಗಿನ ಕಾಯಿ 30ರಿಂದ 40, ಸೇಬು – ₹ 170, ದ್ರಾಕ್ಷಿ – ₹ 20, ಬಾಳೆಹಣ್ಣು ಕೆಜಿಗೆ ₹ 100, ಹೂವಿನ ಹಾರುಗಳು 150 ರಿಂದ ಪ್ರಾರಂಭವಾಗಿ ಗಾತ್ರ ಹಾಗೂ ವಿನ್ಯಾಸಕ್ಕೆ ತಕ್ಕಂತೆ ಬೆಲೆ ನಿಗಧಿಗೊಳಿಸಲಾಗಿತ್ತು.

ಆನೆಬಾಗಿಲು, ಚಿಕ್ಕಪೇಟೆ, ಗಾಂಧಿ ವೃತ್ತ, ಹೊಳಲ್ಕೆರೆ ರಸ್ತೆ ಸೇರಿದಂತೆ ಮತ್ತಿತರ ಕಡೆಗಳಲ್ಲಿ ಗೌರಿ–ಗಣೇಶ ಮೂರ್ತಿಗಳ ಮಾರಾಟ ಕಂಡು ಬಂದಿತು. ಕುಟುಂಬ ಸಮೇತರಾಗಿ ಆಗಮಿಸಿದ ಜನರು ಗೌರಿ ಗಣೇಶ ಮೂರ್ತಿಗಳನ್ನು ಶಾಸ್ತ್ರೋಕ್ತವಾಗಿ ತೆಗೆದುಕೊಂಡು ಹೋದರೆ ಕೆಲವರು ಮುಂಗಡ ಹಣ ಪಾವತಿಸಿ ಶನಿವಾರ ಬೆಳಿಗ್ಗೆ ಬರುವುದಾಗಿ ತಿಳಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ಈ ಬಾರಿ ಗಣೇಶ ಮೂರ್ತಿಗಳ ದರ ಕೊಂಚ ಹೆಚ್ಚಳವಾಗಿದೆ. ₹ 300 ರಿಂದ 400ರಿಂದ ಪ್ರಾರಂಭವಾಗಿ ವಿನ್ಯಾಸಕ್ಕೆ ತಕ್ಕಂತೆ ದರ ನಿಗದಿಗೊಳಿಸಲಾಗಿದೆ. ಶಿರಾ, ತಿಪಟೂರು ಭಾಗದಿಂದ 25 ಲೋಡ್‌ ಗಣಪತಿ ಮೂರ್ತಿಗಳು ಮಾರುಕಟ್ಟೆ ಪ್ರವೇಶಿಸಿವೆ. ರಸ್ತೆ ಪಕ್ಕದಲ್ಲಿ ಗಣೇಶ ಮೂರ್ತಿಗಳನ್ನು ಮಾರಾಟ ಮಾಡಲು ನಗರಸಭೆಗೆ ದುಪ್ಪಟ್ಟು ಜಕಾತಿ ಕಟ್ಟಬೇಕು. ಮಳೆ ಬಂದರೆ ನಮ್ಮನ್ನು ಯಾರು ಕಾಪಾಡುವುದಿಲ್ಲ. ಜತೆಗೆ ರಾತ್ರಿ ವೇಳೆ ಮೂರ್ತಿ ಕಳ್ಳತನ ಸಾಮಾನ್ಯವಾಗಿದ್ದು, ಸದಾ ಎಚ್ಚರದಿಂದ ಕಾಯಬೇಕು ಎನ್ನುತ್ತಾರೆ ಮೂರ್ತಿ ಮಾರಾಟಗಾರರು.

ಚಿತ್ರದುರ್ಗದ ಹೊಳಲ್ಕೆರೆ ರಸ್ತೆಯಲ್ಲಿ ಚೆಂಡು ಹೂವು ಪೊಣಿಸುತ್ತಿರುವ ಹೂವು ವ್ಯಾಪಾರಸ್ಥರು
ಚಿತ್ರದುರ್ಗ ನಗರದ ಸಂತೆ ಹೊಂಡದ ಬಳಿ ಬಳೆ ಮಾರಾಟದಲ್ಲಿ ತಲ್ಲೀನರಾದ ಮಹಿಳೆಯರು. ಪ್ರಜಾವಾಣಿ ಚಿತ್ರ; ವಿ.ಚಂದ್ರಪ್ಪ‌
ಚಿತ್ರದುರ್ಗ ನಗರದ ಆನೆಬಾಗಿಲ ಬಳಿ ಮಳೆಯಿಂದ ರಕ್ಷಣೆಗೆ ಗೌರಿ ಗಣೇಶ ಮೂರ್ತಿಗಳಿಗೆ ಪ್ಲಾಸ್ಟಿಕ್‌ ಕವರ್‌ ಮುಚ್ಚಿರುವುದು
ಪ್ರತಿ ವರ್ಷದಂತೆ ಈ ಬಾರಿಯೂ ಗೌರಿ ದೇವಿಯನ್ನು ಪ್ರತಿಷ್ಠಾಪಿಸಲಾಗಿದ್ದು ಐದು ದಿನ ಪೂಜೆ ಸಲ್ಲಿಸಿ ಚಂದ್ರವಳ್ಳಿಯಲ್ಲಿ ವಿಸರ್ಜಿಸಲಾಗುತ್ತದೆ. ನಿತ್ಯವೂ ಮಹಿಳೆಯರಿಗೆ ಅರಿಶಿಣ ಕುಂಕುಮದ ಜತೆ ಬಾಗಿನ ನೀಡಲಾಗುತ್ತದೆ.
ಗುರುಮೂರ್ತಿ ಅಧ್ಯಕ್ಷರು ಪಿಎನ್‌ಟಿ ಕ್ವಾಟ್ರಸ್‌ ಸಿದ್ಧಿ ವಿನಾಯಕ ದೇವಸ್ಥಾನ

ದೇವಸ್ಥಾನಗಳಲ್ಲಿ ವಿಶೇಷ ಅಲಂಕಾರ

ಜಿಲ್ಲೆಯಾದ್ಯಂತ ಶುಕ್ರವಾರ ಸಡಗರ ಸಂಭ್ರಮದಿಂದ ಸ್ವರ್ಣಗೌರಿ ಹಬ್ಬ ಆಚರಿಸಲಾಯಿತು. ನಗರದ ಪಿಎನ್‌ಟಿ ಕ್ವಾಟ್ರಸ್‌ ಗಣಪತಿ ದೇವಸ್ಥಾನದ ಆವರಣದಲ್ಲಿ 6 ಅಡಿ ಎತ್ತರದ ಗೌರಿಯನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಲಾಯಿತು. ನೀಲಕಂಠೇಶ್ವರ ದೇವಸ್ಥಾನ ಜೆ.ಸಿ.ಆರ್‌ ಬಡಾವಣೆ ದೊಡ್ಡಪೇಟೆಯ ಗೌರಿ ಮನೆ ಮೇಲುದುರ್ಗದ ಏಕನಾಥೇಶ್ವರಿ ಉಚ್ಚಂಗಿ ಯಲ್ಲಮ್ಮ ಹೊಳಲ್ಕೆರೆ ರಸ್ತೆಯ ಬರಗೇರಮ್ಮ ಕೆಳಗೋಟೆಯ ಕೊಲ್ಲಾಪುರದ ಶ್ರೀ ಮಹಾಲಕ್ಷ್ಮಿ ದೇವಿ ಕಣಿವೆ ಮಾರಮ್ಮ ತಿಪ್ಪಿನಘಟ್ಟಮ್ಮ ದೇವಸ್ಥಾನದಲ್ಲಿ ಗೌರಮ್ಮನ ಮಾದರಿಯ ಅಲಂಕಾರ ಮಾಡಲಾಗಿತ್ತು. ದೇಗುಲಗಳಲ್ಲಿ ಬಾಗಿನ ಕೊಡುವ ದೃಶ್ಯ ಸಾಮಾನ್ಯವಾಗಿತ್ತು. ಭಕ್ತರು ವಿಶೇಷ ಪೂಜೆ ಸಲ್ಲಿಸಿ ದೇವರ ಕೃಪೆಗೆ ಪಾತ್ರರಾದರು. ಸಂಪ್ರದಾಯದಂತೆ ನೆರೆ-ಹೊರೆಯ ಮುತ್ತೈದೆಯರನ್ನು ಆಹ್ವಾನಿಸಿ ಅರಿಶಿಣ ಕುಂಕುಮ ಎಲೆ-ಅಡಿಕೆ ಹೂವು-ಹಣ್ಣು ನೀಡಿ ಉಡಿ ತುಂಬಿದರು. ನಗರದ ಬುರುಜನಹಟ್ಟಿ ನೆಹರುನಗರ ಜೆಸಿಆರ್‌ ಬಡಾವಣೆ ಜೋಗಿಮಟ್ಟಿ ರಸ್ತೆ ಸೇರಿದಂತೆ ನಾನಾ ಕಡೆಗಳಲ್ಲಿ ನಾಗರ ಕಲ್ಲಿಗೆ ಹಾಲೆರೆದು ಹಬ್ಬ ಆಚರಿಸಿದರು.

1644 ಸಾರ್ವಜನಿಕ ಸ್ಥಳದಲ್ಲಿ ಗಣೇಶ ಪ್ರತಿಷ್ಠಾಪನೆ

ಜಿಲ್ಲೆಯಲ್ಲಿ ಸಾರ್ವಜನಿಕವಾಗಿ ಗಣೇಶ ಮಹೋತ್ಸವ ಆಚರಿಸುವ ಸುಮಾರು 1644 ನಾನಾ ಸಂಘ ಸಂಸ್ಥೆಗಳು ಅಗತ್ಯ ತಯಾರಿ ನಡೆಸಿವೆ. ಶಿವ-ಪಾರ್ವತಿ ಹುಲಿ ಸಿಂಹ ಹಂಸ ನವಿಲು ಸರ್ಪ ಇಲಿ ಶ್ರೀಕೃಷ್ಣ ಕಮಲದ ಮೇಲೆ ಕುಳಿತಿರುವುದು ಸೇರಿದಂತೆ ನಾನಾ ವಿನ್ಯಾಸಗಳ ಗಣೇಶ ಮೂರ್ತಿಗಳು ಭಕ್ತರನ್ನು ಆಕರ್ಷಿಸುತ್ತಿವೆ. 1644 ಸಾರ್ವಜನಿಕ ಗಣೇಶ ಮಹೋತ್ಸವದಲ್ಲಿ 9 ಅತೀಸೂಕ್ಷ್ಮ 197 ಸೂಕ್ಷ್ಮ 1438 ಸಾಮಾನ್ಯ ಎಂದು ಗುರುತಿಸಲಾಗಿದೆ. ಮೊದಲ ದಿನವೇ 42 ಸಾರ್ವಜನಿಕ ಗಣೇಶ ಮೂರ್ತಿಗಳು ವಿಸರ್ಜನೆಯಾಗುತ್ತಿದ್ದು ಎರಡನೇ ದಿನ 11 ಮೂರನೇ ದಿನ 888 ನಾಲ್ಕನೆ ದಿನ 38 ಐದನೇ ದಿನ 399 ಗಣೇಶ ಮೂರ್ತಿಗಳನ್ನು ವಿಸರ್ಜನೆ ಮಾಡಲಿದ್ದಾರೆ. 22ನೇ ದಿನ ಹಿಂದೂ ಮಹಾಗಣಪತಿ ಸೇರಿದಂತೆ ಮೂರು ಗಣೇಶ ಮೂರ್ತಿಗಳು ಹಾಗೂ 30ನೇ ದಿನ ಒಂದು ಗಣೇಶ ಮೂರ್ತಿ ವಿಸರ್ಜನೆ ಮಾಡಲಾಗುತ್ತಿದೆ. ಇದಕ್ಕಾಗಿ ಆಯಾ ಸಂಘ ಸಂಸ್ಥೆಯವರು ಎಲ್ಲಾ ರೀತಿಯ ಅಗತ್ಯ ಸಿದ್ಧತೆ ಮಾಡಿಕೊಂಡಿದ್ದಾರೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಚೇರಿ ಮಾಹಿತಿ ನೀಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.