ADVERTISEMENT

ಚಿತ್ರದುರ್ಗ: ಶೋಭಾಯಾತ್ರೆ ಇಂದು; ದೀಪಾಲಂಕಾರದಲ್ಲಿ ಕಂಗೊಳಿಸುತ್ತಿದೆ ಕೋಟೆನಗರಿ

ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್‌ ಚಾಲನೆ

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2025, 4:08 IST
Last Updated 13 ಸೆಪ್ಟೆಂಬರ್ 2025, 4:08 IST
ಶೋಭಾಯಾತ್ರೆ ಸಾಗುವ ಬಿ.ಡಿ.ರಸ್ತೆ ದೀಪಾಲಂಕಾರದಲ್ಲಿ ಕಂಗೊಳಿಸುತ್ತಿರುವುದು
ಶೋಭಾಯಾತ್ರೆ ಸಾಗುವ ಬಿ.ಡಿ.ರಸ್ತೆ ದೀಪಾಲಂಕಾರದಲ್ಲಿ ಕಂಗೊಳಿಸುತ್ತಿರುವುದು   

ಚಿತ್ರದುರ್ಗ: ವಿಶ್ವ ಹಿಂದೂ ಪರಿಷತ್‌, ಬಜರಂಗದಳ ಸ್ಥಾಪಿಸಿರುವ ಗಣಪತಿ ವಿಸರ್ಜನೆ ಅಂಗವಾಗಿ ಶನಿವಾರ ಶೋಭಾಯಾತ್ರೆ ನಡೆಯಲಿದ್ದು, ಇಡೀ ನಗರ ದೀಪಾಲಂಕಾರದಲ್ಲಿ ಕಂಗೊಳಿಸುತ್ತಿದೆ.

ಶೋಭಾಯಾತ್ರೆ ಸಾಗುವ ಮಾರ್ಗವನ್ನು ಆಕರ್ಷಕ ದೀಪಗಳಿಂದ ಅಲಂಕಾರ ಮಾಡಲಾಗಿದೆ. ಅಷ್ಟೇ ಅಲ್ಲದೆ ನಗರದ ಪ್ರಮುಖ ವೃತ್ತಗಳನ್ನು ವಿಶೇಷವಾಗಿ ಅಲಂಕಾರ ಮಾಡಲಾಗಿದೆ. ಮದಕರಿ ವೃತ್ತ, ಅಂಬೇಡ್ಕರ್‌ ವೃತ್ತ, ಪ್ರವಾಸಿ ಮಂದಿರ ಬಳಿಯ ಮಹಾವೀರ ವೃತ್ತ, ಗಾಂಧಿ ವೃತ್ತ, ಸಂಗೊಳ್ಳಿ ರಾಯಣ್ಣ ವೃತ್ತ, ಕನಕ ಸರ್ಕಲ್‌ಗಳು ಬಣ್ಣಬಣ್ಣದ ವಿದ್ಯುತ್‌ ದೀಪಗಳಿಂದ ಕಂಗೊಳಿಸುತ್ತಿವೆ.

ಪ್ರತಿಮೆಗಳನ್ನು ವಿವಿಧ ಹೂಗಳಿಂದ ಅಲಂಕಾರ ಮಾಡಲಾಗಿದೆ. ದೀಪಾಲಂಕಾರ ನೋಡುವುದಕ್ಕಾಗಿ ಶುಕ್ರವಾರ ರಾತ್ರಿ ಅಪಾರ ಸಂಖ್ಯೆಯ ಜನರು ತಂಡೋಪತಂಡವಾಗಿ ರಸ್ತೆಗೆ ಬಂದಿದ್ದರು. ಮೆರವಣಿಗೆ ಸಾಗುವ ಮಾರ್ಗದಲ್ಲಿ ಸುತ್ತು ಹಾಕಿ ಆಕರ್ಷಕ ಅಲಂಕಾರ ನೋಡಿ ಸಂಭ್ರಮಿಸಿದರು.

ADVERTISEMENT

ಮದಕರಿ ನಾಯಕ ಪ್ರತಿಮೆಯ ಹಿಂದೆ ಹಿಮಾಲಯ ಪರ್ವತ ಸೃಷ್ಟಿಸಲಾಗಿದೆ. ಜೊತೆಗೆ ದೇಶದ ರಕ್ಷಣೆಗೆ ಸಂಬಂಧಪಟ್ಟ ಶಸ್ತ್ರಾಸ್ತ್ರ, ರಾಕೆಟ್‌ ಚಿತ್ರ ರೂಪಿಸಲಾಗಿದೆ. ಪ್ರತಿಮೆಯ ಸುತ್ತಲೂ ಕಾರಂಜಿ ಚಿಮ್ಮುತ್ತಿದ್ದು ನೀರು ಹಾಗೂ ವಿದ್ಯುತ್‌ ದೀಪದ ಬೆಳಕು ಆಕರ್ಷಕ ದೃಶ್ಯ ಸೃಷ್ಟಿಸಿದೆ.

ಡಾ. ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆಯ ಹಿಂದೆ ಸ್ತಂಭಗಳ ಮೂಲಕ ಮಂಟಪವನ್ನು ನಿರ್ಮಾಣ ಮಾಡಲಾಗಿದೆ. ಒನಕೆ ಓಬವ್ವ ಪ್ರತಿಮೆ ಹಿಂದೆ ರೌದ್ರಾವತಾರದ ಮಹಿಳೆ ಚಿತ್ರ ಬಿಡಿಸಲಾಗಿದ್ದು ಒನಕೆ ಓಬವ್ವ ಅವರ ಶೌರ್ಯದ ಪ್ರತಿಬಿಂಬವಾಗಿ ಕಾಣುತ್ತಿದೆ. ಹೊಳಲ್ಕರೆ ರಸ್ತೆಯಲ್ಲಿನ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ರಾಯಣ್ಣ ಪ್ರತಿಮೆ ಹಿಂದೆ ತಾಂಡವಾಡುತ್ತಿರುವ ಶಿವವನ್ನು ಇರಿಸಲಾಗಿದೆ. ಕನಕ ವೃತ್ತದಲ್ಲಿ ಕನಕದಾಸರ ಪ್ರತಿಮೆ ಹಿಂದೆ ಮಂಟಪವನ್ನು ನಿರ್ಮಾಣ ಮಾಡಿ ಅಲ್ಲಿ ವೆಂಕಟೇಶ್ವರ ಹಾಗೂ ಪದ್ಮಾವತಿಯನ್ನು ಪ್ರತಿಮೆ ಪ್ರತಿಷ್ಠಾಪನೆ ಮಾಡಲಾಗಿದೆ.

ಒಡೆಯರ್‌ ಚಾಲನೆ

‘ಶನಿವಾರ ಬೆಳಿಗ್ಗೆ ಶೋಭಾಯಾತ್ರೆ ಆರಂಭಗೊಳ್ಳಲಿದ್ದು ಮೈಸೂರು ಸಂಸದ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ಚಾಲನೆ ನೀಡುವರು. ಜೊತೆಗೆ ವಿವಿಧ ಮಠಗಳ ಮಠಾಧೀಶರು, ಸಾಧು–ಸಂತರು ಪಾಲ್ಗೊಳ್ಳುವರು. ವಿವಿಧ ಪಕ್ಷಗಳ ಮುಖಂಡರು ಕೂಡ ಈ ವೇಳೆ ಭಾಗವಹಿಸುವರು’ ಎಂದು ವಿಶ್ವ ಹಿಂದೂ ಪರಿಷತ್‌ ಮುಖಂಡ ಪ್ರಭಂಜನ್‌ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಮದಕರಿ ವೃತ್ತಕ್ಕೆ ವಿಶೇಷ ಅಲಂಕಾರ ಮಾಡಿರುವುದು

‘ಶೋಭಾಯಾತ್ರೆಯಲ್ಲಿ ವಿಶೇಷವಾದ ಮಂಗಳೂರು ಚಂಡೆವಾದ್ಯ, ನಾಸಿಕ್‌ ಡೋಲು ವಾದನದ ಕಲಾವಿದರು ಭಾಗವಹಿಸಲಿದ್ದಾರೆ. ಜೊತೆಗೆ ಸ್ಥಳೀಯ ಡೋಲುವಾದನದ 10 ತಂಡಗಳು ಮೆರವಣಿಗೆಯಲ್ಲಿ ಭಾಗವಹಿಸಲಿವೆ. ಶೋಭಾಯಾತ್ರೆ ಆರಂಭಗೊಳ್ಳವುದಕ್ಕೂ ಮೊದಲು ಹೋಮ, ಹವನ, ವಿಶೇಷ ಪೂಜೆ, ಮಹಾ ಮಂಗಳಾರತಿ ನಡೆಯಲಿದೆ’ ಎಂದರು.

‘ವರ್ಷದಿಂದ ವರ್ಷಕ್ಕೆ ಭಾಗವಹಿಸುವ ಭಕ್ತರ ಸಂಖ್ಯೆ ಹೆಚ್ಚಾಗುತ್ತಿದೆ. ಕಳೆದ ವರ್ಷಕ್ಕಿಂತಲೂ ಈ ಬಾರಿ 1 ಲಕ್ಷ ಹೆಚ್ಚಿನ ಜನರು ಭಾಗವಹಿಸುವ ನಿರೀಕ್ಷೆ ಇದೆ. ನಗರವನ್ನು ವಿಶೇಷವಾಗಿ ಅಲಂಕಾರ ಮಾಡುವ ಮೂಲಕ ಭಕ್ತರಿಗೆ ಸ್ವಾಗತ ಕೋರಲಾಗುತ್ತಿದೆ. ಜಾನಪದ ಕಲಾತಂಡಗಳ ನಡುವೆ ಶೋಭಾಯಾತ್ರೆ ಹೊರಡಲಿದೆ’ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಸಮಿತಿ ನಾಯಕರಾದ ಶರಣ್‌ ಕುಮಾರ್, ಕೇಶವ ಇದ್ದರು.

4 ವಾಹನಗಳಲ್ಲಿ ಸ್ಪೀಕರ್‌ ಹಾಕ್ತೀವಿ

‘ಜಿಲ್ಲಾಡಳಿತ ಡಿ.ಜೆ ಬಳಕೆಯನ್ನು ನಿಷೇಧಿಸಿದೆ. ಆದರೆ ನಾವು ಯಾವಾಗಲೂ ಡಿ.ಜೆ ಬಳಸುವುದಿಲ್ಲ. ಕಾನೂನು ಸುಪ್ರೀಂ ಕೋರ್ಟ್‌ ಸೂಚನೆಯಂತೆ ಸ್ಪೀಕರ್‌ಗಳನ್ನು ಬಳಸುತ್ತೇವೆ. ನಾಲ್ಕು ವಾಹನಗಳಲ್ಲಿ ಸ್ಪೀಕರ್‌ ಅಳವಡಿಸುತ್ತೇವೆ. ಇದಕ್ಕೆ ಪೊಲೀಸರಿಂದ ಅನುಮತಿಯನ್ನೂ ಪಡೆದಿದ್ದೇವೆ’ ಎಂದು ಪ್ರಭಂಜನ್‌ ಹೇಳಿದರು. ‘ಗಣೇಶೋತ್ಸವ ಶೋಭಾಯಾತ್ರೆಯನ್ನು ಯಶಸ್ವಿಯಾಗಿ ನಡೆಸಲು ಸಕಲ ಸಿದ್ಧತೆ ಮಾಡಿಕೊಂಡಿದ್ದೇವೆ. ನಮ್ಮ ಸಮಿತಿಯ ಸದಸ್ಯರು ಎಲ್ಲವನ್ನೂ ಸಮರ್ಪಕವಾಗಿ ನಿರ್ವಹಣೆ ಮಾಡುತ್ತಾರೆ’ ಎಂದರು.

ಹೊಳಲ್ಕೆರೆ ರಸ್ತೆಯ ಕನಕ ವೃತ್ತದ ಚಿತ್ರಣ ಚಿತ್ರಗಳು: ಚಂದ್ರಪ್ಪ ವಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.