ನಾಯಕನಹಟ್ಟಿ: ಪಟ್ಟಣದ ದೈವಸ್ಥರು ಸಂಪ್ರದಾಯದಂತೆ ಆಚರಿಸಿಕೊಂಡು ಬಂದಿರುವ ಕೆರೆಗೆ ಗಂಗಾಪೂಜೆ ಗುರುವಾರ ಅದ್ದೂರಿಯಾಗಿ ನಡೆಯಿತು.
ನಾಯಕನಹಟ್ಟಿ ಹೋಬಳಿ 20 ವರ್ಷಗಳಿಂದ ನಿರಂತರವಾಗಿ ಬರಗಾಲದಿಂದ ತತ್ತರಿಸಿ ಹೋಗಿತ್ತು. ಸಕಾಲಕ್ಕೆ ಮಳೆ ಇಲ್ಲದೆ ಇಲ್ಲಿನ ಕೆರೆಗಳು ನೀರಿಲ್ಲದೆ ಬತ್ತಿಹೋಗಿದ್ದವು. ಇದರಿಂದ ಹೋಬಳಿಯಲ್ಲಿ ಅಂತರ್ಜಲದ ಮಟ್ಟ ಕುಸಿದು ಹೋಗಿತ್ತು. ಬಹುತೇಕ ಕೊಳವೆ ಬಾವಿಗಳಲ್ಲಿ ನೀರಿಲ್ಲದೆ ಜನ–ಜಾನುವಾರುಗಳಿಗೆ ಸಮಸ್ಯೆ ಉಂಟಾಗಿದೆ. ಅದಕ್ಕಾಗಿ ಇಲ್ಲಿನ ಜನ ಮಳೆಗಾಗಿ ವಿವಿಧ ಆಚರಣೆಗಳನ್ನು ಪಾಲಿಸಿಕೊಂಡು ಬರುತ್ತಿದ್ದರು. ಅದರಲ್ಲೂ ಕೆರೆಗಂಗಮ್ಮನ ಪೂಜೆ ವಿಶೇಷವಾಗಿದ್ದು, ಅದರಂತೆ ಪ್ರಸ್ತುತ ದೊಡ್ಡಕೆರೆಯಲ್ಲಿ ನೀರಿದ್ದರೂ ಮುಂದೆಂದೂ ಕೆರೆಯು ನೀಡು ಬತ್ತದಿರಲಿ ಎಂದು ಪೂಜೆ ನಡೆಸಿದರು.
ದೊಡ್ಡಕೆರೆ ಗಂಗಾಪೂಜೆಗಾಗಿ ಐತಿಹಾಸಿಕ ತಿಪ್ಪೇರುದ್ರಸ್ವಾಮಿ ದೇವಾಲಯದ ಪಟ್ಟದ ಗೂಳಿಯನ್ನು ಅಲಂಕರಿಸಿ, ಧ್ವಜ, ನಂದಿಕೋಲು ಕರಡೆ ಮಜಲುವಾದ್ಯ ಸೇರಿದಂತೆ ವಿವಿಧ ವಾದ್ಯಗಳಿಂದ ನೂರಾರು ಮಹಿಳೆಯರು ಗಂಗಾಪೂಜೆಗಾಗಿ ಪಟ್ಟಣದಿಂದ 6 ಕಿ.ಮೀ ದೂರದಲ್ಲಿರುವ ದೊಡ್ಡಕೆರೆಗೆ ಬಂದರು.
ದೊಡ್ಡಕೆರೆಯ ಕೋಡಿಯ ಬಳಿ ಹಾಗೂ ಕೆರೆಯ ಮುಂದೆ ಇರುವ ನಂದಿಕೋಲು ಬಾವಿಗೂ ಗಂಗಮ್ಮನ ಪೂಜೆ ಮಾಡಲಾಯಿತು. ಸಂಪ್ರದಾಯದಂತೆ ಕೆರೆಯ ಏರಿಯ ಮೇಲಿರುವ ಜೋಡಿ ಬಸವಣ್ಣ ಮೂರ್ತಿಗಳಿಗೆ ಪಂಚಾಮೃತ ಅಭಿಷೇಕ ಮಾಡಿ, ನಂತರ 108 ಕೊಡಗಳಿಂದ ಕೆರೆ ನೀರಿನ ಅಭಿಷೇಕ ಮಾಡಲಾಯಿತು.
ಭಕ್ತರಿಗೆ ಸಜ್ಜೆ ಕಡುಬು, ಪಾಯಸ, ಅನ್ನಪ್ರಸಾದ ವಿನಿಯೋಗಿಸಲಾಯಿತು. ಮರಳಿ ಮೆರವಣಿಗೆಯ ಮೂಲಕ ಬಂದು ನಾಯಕನಹಟ್ಟಿ ಪಟ್ಟಣಕ್ಕೆ ಹೊಂದಿಕೊಂಡಿರುವ ಚಿಕ್ಕಕೆರೆಯಲ್ಲಿ ಗಂಗಮ್ಮನ ಪೂಜೆ ಮಾಡಿಕೊಂಡು ಸಂಜೆ ದೇವಸ್ಥಾನವನ್ನು ತಲುಪಿದರು.
ಗ್ರಾಮಸ್ಥರಾದ ಪ.ಪಂ. ಸದಸ್ಯ ಜೆ.ಆರ್. ರವಿಕುಮಾರ್, ತಿಪ್ಪೇಶ, ದೇವಾಲಯ ಇ.ಒ. ಗಂಗಾಧರಪ್ಪ, ಗ್ರಾಮಸ್ಥರಾದ ರುದ್ರಯ್ಯ, ಕೆ.ಎನ್. ತಿಪ್ಪೇರುದ್ರಪ್ಪ, ದೊರೆತಿಪ್ಪೇಸ್ವಾಮಿ, ಗಿರಿಯಪ್ಪ, ಎನ್.ಸಿ. ತಿಪ್ಪೇಸ್ವಾಮಿ, ಬಿ.ಎಂ. ನಟರಾಜ್, ಉಮೇಶ್, ದಳವಾಯಿ ರುದ್ರಮುನಿ, ಎಸ್.ಸತೀಶ್, ಮಹಾಂತೇಶ್, ಶಿವಪ್ರಕಾಶ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.