ADVERTISEMENT

ಗಾಂಜಾ: ಎಂಟು ಜನರ ಬಂಧನ

ಆಂಧ್ರಪ್ರದೇಶದ ವಿಶಾಖಪಟ್ಟಣದಿಂದ ಜಿಲ್ಲೆಗೆ ಮಾದಕವಸ್ತು ಸರಬರಾಜು

​ಪ್ರಜಾವಾಣಿ ವಾರ್ತೆ
Published 17 ಮೇ 2022, 13:29 IST
Last Updated 17 ಮೇ 2022, 13:29 IST
ಸೋಮಶೇಖರ್‌
ಸೋಮಶೇಖರ್‌   

ಚಿತ್ರದುರ್ಗ: ಹೊರರಾಜ್ಯದಿಂದ ಗಾಂಜಾ ತಂದು ಮಾರಾಟ ಮಾಡುತ್ತಿದ್ದ ಜಾಲವನ್ನು ಬೇಧಿಸಿದ ಪೊಲೀಸರು, ಎಂಟು ಆರೋಪಿಗಳನ್ನು ಬಂಧಿಸಿದ್ದಾರೆ. ಲಕ್ಷಾಂತರ ರೂಪಾಯಿ ಮೌಲ್ಯದ ಎಂಟು ಕೆ.ಜಿ. ಗಾಂಜಾ ಸೊಪ್ಪನ್ನು ಜಪ್ತಿ ಮಾಡಿದ್ದಾರೆ.

ಗಾಂಜಾ ಮಾರಾಟ ಮಾಡುತ್ತಿದ್ದ ಚಿತ್ರದುರ್ಗದ ಜೋಗಿಮಟ್ಟಿ ರಸ್ತೆಯ ಸೋಮಶೇಖರ (28), ಭರತ್‌ (22) ಹಾಗೂ ಗಾಂಜಾ ಸೇವಿಸುತ್ತಿದ್ದ ದಾದಾಪೀರ್‌ (34), ಭಾಸ್ಕರಾಚಾರಿ (28), ದಸ್ತಗಿರ್‌ (26), ಗೌಸ್‌ಪೀರ್‌ (25), ಬಾಬಾ ಪಕೃದ್ದೀನ್‌ (21), ಸಾತ್ವಿಕ್‌ (23) ಬಂಧಿತರು. ಪ್ರಮುಖ ಆರೋಪಿ ಶ್ರೀನಿವಾಸ್‌ ಅಲಿಯಾಸ್‌ ಜಪಾನ್‌ ಸೀನ ಪರಾರಿಯಾಗಿದ್ದಾನೆ.

‘ಜಟ್‌ಪಟ್‌ ನಗರದಿಂದ ಕುರುಬರಗುಡ್ಡಕ್ಕೆ ಸಾಗುವ ಮಾರ್ಗದಲ್ಲಿ ಗಾಂಜಾ ಮಾರಾಟಕ್ಕೆ ಸಂಬಂಧಿಸಿದ ಖಚಿತ ಮಾಹಿತಿ ಲಭ್ಯವಾಗಿತ್ತು. ನಗರ ಠಾಣೆಯ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ ಮಾದಕವಸ್ತು ಜಾಲ ಪತ್ತೆಯಾಗಿತ್ತು. ಗಾಂಜಾ ಮಾರಾಟ ಮಾಡುತ್ತಿದ್ದ ಹಾಗೂ ಖರೀದಿಸುತ್ತಿದ್ದವರನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಲಾಗಿದೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ.ಪರಶುರಾಮ್‌ ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ADVERTISEMENT

‘ಶ್ರೀನಿವಾಸ್‌ ಅಲಿಯಾಸ್‌ ಜಪಾನ್‌ ಸೀನ ಜಾಲದ ಪ್ರಮುಖ ರೂವಾರಿ. ಮಾದಕವಸ್ತು ಜಾಲಕ್ಕೆ ಸಂಬಂಧಿಸಿದಂತೆ ಈತನ ವಿರುದ್ಧ ಹಲವು ಪ್ರಕರಣಗಳಿವೆ. ಆಂಧ್ರಪ್ರದೇಶದ ವಿಶಾಖಪಟ್ಟಣದಿಂದ ಬಳ್ಳಾರಿಗೆ ರೈಲಿನ ಮೂಲಕ ಗಾಂಜಾ ತರುತ್ತಿದ್ದನು. ಅಲ್ಲಿಂದ ಜಿಲ್ಲೆಗೆ ತಂದು ಮಾರಾಟ ಮಾಡುತ್ತಿದ್ದನು. ಈತನ ಚಲನವಲನಗಳ ಮೇಲೆ ಪೊಲೀಸರು ನಿಗಾ ಇಟ್ಟಿದ್ದರು’ ಎಂದು ಮಾಹಿತಿ ನೀಡಿದರು.

‘ಜಟ್‌ಪಟ್‌ ನಗರ ಹಾಗೂ ಸುತ್ತಮುತ್ತಲಿನ ನಿರ್ಜನ ಪ್ರದೇಶದಲ್ಲಿ ಇವರ ಕಾರ್ಯಚಟುವಟಿಕೆ ಇತ್ತು. ಸ್ಮಶಾನ, ಜಾಲಿಪೊದೆ, ಅಗಳೇರಿ, ಕೆಂಚಪ್ಪನ ಬಾವಿ ಹೀಗೆ ಹಲವೆಡೆ ಗಾಂಜಾ ಮಾರಾಟ ಮಾಡುತ್ತಿದ್ದರು. ಚಿಕ್ಕ ಪ್ಯಾಕೆಟ್‌ಗಳಲ್ಲಿ ಗಾಂಜಾ ತುಂಬಿ ಪ್ರತಿಯೊಂದನ್ನು ₹ 400ಕ್ಕೆ ಮಾರಾಟ ಮಾಡುತ್ತಿದ್ದರು. ಗಾಂಜಾ ಸೇವಿಸುವ ಹಾಗೂ ಮಾರಾಟ ಮಾಡುವ ಇಂತಹ ಸ್ಥಳಗಳನ್ನು ಪತ್ತೆ ಮಾಡಲಾಗುತ್ತಿದೆ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

‘ನಗರ ವ್ಯಾಪ್ತಿಯ ಕಾಲೇಜು ವಿದ್ಯಾರ್ಥಿಗಳಿಗೂ ಗಾಂಜಾ ಪೂರೈಕೆ ಮಾಡುತ್ತಿದ್ದ ಸಂಗತಿ ವಿಚಾರಣೆಯ ವೇಳೆ ಬೆಳಕಿಗೆ ಬಂದಿದೆ. ಅನುಮಾನಸ್ಪದ ವ್ಯಕ್ತಿ, ಯುವಕರು ಹಾಗೂ ವಿದ್ಯಾರ್ಥಿಗಳಿಗೆ ಸಂಬಂಧಿಸಿದಂತೆ ಖಚಿತ ಮಾಹಿತಿಯನ್ನು ಸಾರ್ವಜನಿಕರು ಒದಗಿಸಿದರೆ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುವುದು. ರಕ್ತ ಪರೀಕ್ಷೆ ನಡೆಸಿ ಮಾದಕವಸ್ತು ಸೇವನೆ ಬಗ್ಗೆ ಮಾಹಿತಿ ಪಡೆಯಲಾಗುವುದು’ ಎಂದು ಹೇಳಿದರು.

ಕಿಂಗ್‌ಪಿನ್‌ ಪರಾರಿ

ಗಾಂಜಾ ಮಾರಾಟ ಜಾಲದ ಕಿಂಗ್‌ಪಿನ್‌ ಶ್ರೀನಿವಾಸ್‌ ಅಲಿಯಾಸ್‌ ಜಪಾನ್ ಸೀನ ನಿಸರ್ಗ ಕರೆಯ ನೆಪವೊಡ್ಡಿ ಪೊಲೀಸರಿಂದ ಸಿನಿಮೀಯ ರೀತಿಯಲ್ಲಿ ಪರಾರಿಯಾಗಿದ್ದಾನೆ. ಆರೋಪಿ ತಪ್ಪಿಸಿಕೊಳ್ಳಲು ಕಾರಣರಾದ ಪೊಲೀಸರ ವಿರುದ್ಧ ಕ್ರಮಕ್ಕೆ ಇಲಾಖೆ ಮುಂದಾಗಿದೆ.

‘ದಾಳಿ ನಡೆಸಿ ಬಂಧಿಸಿದಾಗ ಪೊಲೀಸರಿಗಿಂತ ಆರೋಪಿಗಳ ಸಂಖ್ಯೆ ಹೆಚ್ಚಿತ್ತು. ಠಾಣೆಗೆ ಕರೆತರುವ ಮಾರ್ಗದಲ್ಲಿ ನಿಸರ್ಗ ಕರೆಯ ನೆಪವೊಡ್ಡಿ ಗುಡ್ಡದ ಪೊದೆಯೊಂದರ ಬಳಿಗೆ ಹೋಗಿದ್ದಾನೆ. ಕಾನ್‌ಸ್ಟೆಬಲ್‌ ಇನ್ನಷ್ಟು ಎಚ್ಚರವಹಿಸುವ ಅಗತ್ಯವಿತ್ತು. ಆರೋಪಿ ಪತ್ತೆಗೆ ವಿಶೇಷ ಗಮನ ನೀಡಲಾಗಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.