ADVERTISEMENT

ಚಿತ್ರದುರ್ಗ: ರಸ್ತೆಗಳಲ್ಲಿ ಕಸದ ರಾಶಿ; ಹೈರಾಣಾದ ಜನ

ಹಳೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ದುರ್ವಾಸನೆ, ಬೀದಿನಾಯಿಗಳ ಭಯ

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2025, 7:06 IST
Last Updated 20 ನವೆಂಬರ್ 2025, 7:06 IST
ನಗರದ ಜಿಲ್ಲಾ ಕಾರಾಗೃಹ ರಸ್ತೆಯ ವಿಭಜಕದ ಮೇಲೆ ಕಸ ಚೆಲ್ಲಾಡುತ್ತಿರುವುದು
ನಗರದ ಜಿಲ್ಲಾ ಕಾರಾಗೃಹ ರಸ್ತೆಯ ವಿಭಜಕದ ಮೇಲೆ ಕಸ ಚೆಲ್ಲಾಡುತ್ತಿರುವುದು   

ಚಿತ್ರದುರ್ಗ: ನಗರದ ವಿವಿಧ ರಸ್ತೆಗಳಲ್ಲಿ ಕಸದ ರಾಶಿ ಚೆಲ್ಲಾಡುತ್ತಿದ್ದು ಸಾರ್ವಜನಿಕರು ಅಸಹ್ಯ ಪಡುವ ಪರಿಸ್ಥಿತಿ ನಿರ್ಮಾಣವಾಗಿದೆ. ನಗರಸಭೆ ಅಧಿಕಾರಿಗಳು ಕಸ ಸಂಗ್ರಹ, ನಿರ್ವಹಣೆಯಲ್ಲಿ ವಿಫಲರಾಗುತ್ತಿದ್ದಾರೆ ಎಂಬ ಆರೋಪ ವ್ಯಾಪಕವಾಗಿದೆ.

ನಗರದ ಸ್ವಾಮಿ ವಿವೇಕಾನಂದ ನಗರ, ಜೋಗಿಮಟ್ಟಿ ರಸ್ತೆ, ಸ್ಟೇಡಿಯಂ ರಸ್ತೆ, ದರ್ಜಿ ಕಾಲೊನಿ, ಗೋಪಾಲಪುರ ರಸ್ತೆ, ಹಿಮ್ಮತನಗರ, ರಾಮ್‌ದಾಸ್‌ ಕಾಂಪೌಂಡ್‌, ನೆಹರೂ ನಗರ, ಐಯುಡಿಪಿ ಬಡಾವಣೆ, ದೊಡ್ಡಪೇಟೆ, ಚಿಕ್ಕಪೇಟೆ, ಬುರುಜನಹಟ್ಟಿ, ಕುಂಬಾರ ಬೀದಿ, ಕಾಮನಬಾವಿ ಹೀಗೆ ಬಹುತೇಕ ಬಡಾವಣೆಗಳಲ್ಲಿ ಕಸ ವಿಲೇವಾರಿ ಸಮಪರ್ಕವಾಗಿ ನಡೆಯುತ್ತಿಲ್ಲ. ಈ ಬಡಾವಣೆಗಳಲ್ಲಿ ಸ್ವಚ್ಛತೆ ಮರೀಚಿಕೆಯಾಗಿದೆ.

ನಗರದ ಎಲ್ಲೆಡೆ ಕಸದ ರಾಶಿ ಚೆಲ್ಲಾಡುತ್ತಿದ್ದು ಮಧ್ಯಾಹ್ನ 12 ಗಂಟೆಯಾದರೂ ವಿಲೇವಾರಿಯಾಗುತ್ತಿಲ್ಲ. ಗಾಳಿ ಬಂದಾಗ ಕಸ, ಕಡ್ಡಿ ರಸ್ತೆಯಲ್ಲಿ ಬಿದ್ದಿರುತ್ತದೆ. ಅದರ ನಡುವೆಯೇ ಜನರು ಓಡಾಡಬೇಕಾಗಿದೆ. ಕಸದಿಂದಾಗಿ ಬೀದಿನಾಯಿಗಳ ಹಾವಳಿಯೂ ವಿಪರೀತವಾಗಿದ್ದು, ಜನ ಭಯದಿಂದ ಓಡಾಡಬೇಕಾಗಿದೆ.

ADVERTISEMENT

ಏಕನಾಥೇಶ್ವರಿ ಪಾದಗುಡಿಯ ಮುಂಭಾಗದ ಸರ್ಕಾರಿ ಶಾಲೆ ಮುಂಭಾಗದಲ್ಲೇ ಮದ್ಯದ ಬಾಟಲಿಗಳ ರಾಶಿ ಬಿದ್ದಿವೆ. ಇದರ ಜತೆಗೆ ಮಾಂಸದ ತ್ಯಾಜ್ಯ ಅನೈರ್ಮಲ್ಯ ವಾತಾವರಣ ಸೃಷ್ಟಿಸಿದೆ. ಜೋಗಿಮಟ್ಟಿ ರಸ್ತೆಯ ಸರ್ಕಾರಿ ಶಾಲೆಯ ಮುಂದೆ ಹಾಗೂ ಮೇದೆಹಳ್ಳಿ ಅಂಡರ್‌ಪಾಸ್‌ ಬಳಿ ಕಸದ ರಾಶಿ ವಿಲೇವಾರಿಯಾಗದೆ ಉಳಿದಿದೆ.  

ಹೆದ್ದಾರಿಯಲ್ಲಿ ದುರ್ವಾಸನೆ: ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ನಗರಸಭೆ ಆಡಳಿತದ ನಿರ್ಲಕ್ಷ್ಯದಿಂದಾಗಿ ನಗರದಲ್ಲಿ ಹಾದು ಹೋಗಿರುವ ಹಳೇ ರಾಷ್ಟ್ರೀಯ ಹೆದ್ದಾರಿ ಕಸ ಬಿಸಾಡುವ ತಾಣವಾಗಿ ಮಾರ್ಪಟ್ಟಿದೆ. ರಸ್ತೆಯುದ್ದಕ್ಕೂ ಕಸ ಕೊಳೆಯುತ್ತಿದ್ದು ದುರ್ವಾಸನೆ ವಾಹನ ಚಾಲಕರ ಮೂಗಿಗೆ ಬಡಿಯುತ್ತಿದೆ.

ಚಳ್ಳಕೆರೆ ಗೇಟ್‌ನಿಂದ ಮುರುಘಾ ಮಠದ ಸರ್ಕಲ್‌ವರೆಗೂ ಜನರು ಮನೆ, ಅಂಗಡಿ, ಹೋಟೆಲ್‌ ಕಸವನ್ನು ಹೆದ್ದಾರಿ ಬದಿಗೆ ತಂದು ಸುರಿಯುತ್ತಿದ್ದಾರೆ. ರಾಷ್ಟ್ರೀಯ ಹೆದ್ದಾರಿ ಹೊಸ ಬೈಪಾಸ್‌ ನಿರ್ಮಾಣವಾದ ನಂತರ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಹಳೇ ಹೆದ್ದಾರಿ ಕಡೆಗೆ ತಿರುಗಿ ನೋಡುತ್ತಿಲ್ಲ. ನಿರ್ವಹಣಾ ಜವಾಬ್ದಾರಿ ಹೆದ್ದಾರಿ ಪ್ರಾಧಿಕಾರದ ಮೇಲಿದ್ದರೂ ಅವರು ಇದರ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ.

ಇನ್ನೊಂದೆಡೆ ನಗರಸಭೆ ಅಧಿಕಾರಿಗಳು ಕೂಡ ಹಳೇ ರಾಷ್ಟ್ರೀಯ ಹೆದ್ದಾರಿ ಸ್ವಚ್ಛತೆ ಬಗ್ಗೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಹೆದ್ದಾರಿ ಪ್ರಾಧಿಕಾರ ಅಧಿಕಾರಿಗಳ ಕಡೆ ಕೈತೋರಿ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದ್ದಾರೆ. ಎರಡೂ ಕಡೆ ಕರ್ತವ್ಯ ಲೋಪದಿಂದ ಹೆದ್ದಾರಿ ಸ್ವಚ್ಛಗೊಳ್ಳದ ಕಾರಣ ರಸ್ತೆ ತಿಪ್ಪೆಯ ರೂಪ ಪಡೆಯುತ್ತಿದೆ. ಚಳ್ಳಕೆರೆ ಗೇಟ್‌ ಮುಂದಿನ ಕೆಳಗೋಟೆ ವ್ಯಾಪ್ತಿಯಲ್ಲಿ ರಸ್ತೆಯುದ್ದಕ್ಕೂ ಕಸ ಚೆಲ್ಲಾಡುತ್ತಿದೆ.

ನಗರದ ರಸ್ತೆಗಳಲ್ಲಿ ಆಳವಡಿಸಿರುವ ರಸ್ತೆ ವಿಭಜಕಗಳು ಕಸದ ತೊಟ್ಟಿಗಳಾಗಿ ಮಾರ್ಪಟ್ಟಿವೆ. ಗಾಂಧಿ ವೃತ್ತದಿಂದ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣಕ್ಕೆ ಹೋಗುವ ಮಾರ್ಗದ ನಡುವೆ ಹಾಕಿರುವ ರಸ್ತೆ ವಿಭಜಕದಲ್ಲಿ ಮದ್ಯದ ಬಾಟಲಿ, ಮಾಂಸದ ತ್ಯಾಜ್ಯ, ಪ್ಲಾಸ್ಟಿಕ್‌, ತರಕಾರಿ ತ್ಯಾಜ್ಯವನ್ನು ಸುರಿಯಲಾಗಿದೆ.

ಜಟ್‌ಪಟ್‌ ನಗರದ ವೃತ್ತದ ರಸ್ತೆಯಲ್ಲಿ ಸಹ ಮನೆಯ ಕಸ, ಕಟ್ಟಡ ತ್ಯಾಜ್ಯ ಹಾಕಲಾಗಿದೆ. ಜೋಗಿಮಟ್ಟಿ ರಸ್ತೆ, ಜೆಸಿಆರ್‌ ಮುಖ್ಯ ರಸ್ತೆ, ತುರುವನೂರು ರಸ್ತೆ, ಹಳೆ ಬೆಂಗಳೂರು ರಸ್ತೆಯಲ್ಲೂ ಇದೇ ಪರಿಸ್ಥಿತಿ ಇದೆ.

‘ಕಸ ಸಂಗ್ರಹ ಹಾಗೂ ನಿರ್ವಹಣೆಯನ್ನು ಪರಿಶೀಲಿಸಲಾಗುವುದು. ನಗರದ ಸ್ವಚ್ಛತೆಗೆ ಕ್ರಮ ಕೈಗೊಳ್ಳಲಾಗುವುದು’ ಎಂದು ನಗರಸಭಾ ಪೌರಾಯುಕ್ತ ಎಸ್‌.ಲಕ್ಷ್ಮಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.