ADVERTISEMENT

ಹಿರಿಯೂರು: ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣಕ್ಕೆ ಕಸದ ಸಂಕಷ್ಟ

ಸ್ವಚ್ಛತಾ ಕಾರ್ಯಕ್ಕೆ ರಸ್ತೆ ಸಾರಿಗೆ ಸಂಸ್ಥೆ ಸಿಬ್ಬಂದಿ ಹರಸಾಹಸ

​ಪ್ರಜಾವಾಣಿ ವಾರ್ತೆ
Published 26 ಆಗಸ್ಟ್ 2021, 5:10 IST
Last Updated 26 ಆಗಸ್ಟ್ 2021, 5:10 IST
ಹಿರಿಯೂರಿನ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ (ಎಡಚಿತ್ರ). ಬಸ್‌ ನಿಲ್ದಾಣದಲ್ಲಿ ಪ್ರಯಾಣಿಕರು ಬಿಸಾಡಿದ ಕಸವನ್ನು ನಗರಸಭೆ ವಿಲೇವಾರಿ ಮಾಡದ ಕಾರಣ ರಾಶಿ ಬಿದ್ದಿರುವುದು.
ಹಿರಿಯೂರಿನ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ (ಎಡಚಿತ್ರ). ಬಸ್‌ ನಿಲ್ದಾಣದಲ್ಲಿ ಪ್ರಯಾಣಿಕರು ಬಿಸಾಡಿದ ಕಸವನ್ನು ನಗರಸಭೆ ವಿಲೇವಾರಿ ಮಾಡದ ಕಾರಣ ರಾಶಿ ಬಿದ್ದಿರುವುದು.   

ಹಿರಿಯೂರು: ನಗರದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ನಿಲ್ದಾಣವನ್ನು ಸ್ವಚ್ಛವಾಗಿಡುವುದು ಸಂಸ್ಥೆಯ ಅಧಿಕಾರಿಗಳಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ.

ಮಾಜಿ ಸಚಿವ ಡಿ. ಮಂಜುನಾಥ್ ಅವರ ದೂರದೃಷ್ಟಿಯ ಫಲವಾಗಿ 1998ರಲ್ಲಿ ₹ 36 ಲಕ್ಷ ವೆಚ್ಚದಲ್ಲಿ ನಿಲ್ದಾಣ ನಿರ್ಮಾಣಗೊಂಡಿದೆ. ವಾರದ ಸಂತೆ ನಡೆಯುತ್ತಿದ್ದ ಜಾಗವನ್ನು ಅಂದಿನ ಪುರಸಭೆ ಆಡಳಿತ ನಡೆಸುತ್ತಿದ್ದವರು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ನಿರ್ಮಾಣಕ್ಕೆ ಬಿಟ್ಟುಕೊಟ್ಟಾಗ, ಬೆಂಗಳೂರು–ಮುಂಬೈ, ಬೀದರ್–ಶ್ರೀರಂಗಪಟ್ಟಣದಂತಹ ಹೆದ್ದಾರಿಗಳನ್ನು ಸಂಪರ್ಕಿಸುವ ಹಿರಿಯೂರಿಗೆ ದೊಡ್ಡ ವರದಾನವಾಗಲಿದೆ ಎಂಬ ಭಾವನೆ ಜನರಲ್ಲಿತ್ತು. ಆದರೆ ನಿಲ್ದಾಣಕ್ಕೆ ಹೊಂದಿಕೊಂಡಿರುವ ಮನೆಗಳ ಜನ ತಮ್ಮ ಮನೆಯ ತ್ಯಾಜ್ಯವನ್ನು ನಿಲ್ದಾಣಕ್ಕೆ ಬಿಡುತ್ತಿರುವುದು, ನಿಲ್ದಾಣದ ಜಾಗವನ್ನು ಒತ್ತುವರಿ ಮಾಡಿರುವುದು ನಿಲ್ದಾಣದ ಸಿಬ್ಬಂದಿಗೆ ಸವಾಲಾಗಿ ಪರಿಣಮಿಸಿದೆ. ಪ್ರಯಾಣಿಕರು ಬಿಸಾಡಿ ಹೋಗುವ ನೀರಿನ ಬಾಟಲ್ ಇತ್ಯಾದಿಗಳನ್ನು ಒಂದೆಡೆ ಸಂಗ್ರಹಿಸಿದ್ದರೂ, ನಗರಸಭೆ ಅದನ್ನು ವಿಲೇವಾರಿ ಮಾಡದಿರುವುದು ನಿಲ್ದಾಣಕ್ಕೆ ಕಪ್ಪು ಚುಕ್ಕೆಯಂತಾಗಿದೆ.

ನಿಲ್ದಾಣದ ಕೆಳಭಾಗದ ಅಂಚಿನಲ್ಲಿ ‘ಪಾವತಿಸಿ, ಬಳಸಿ’ ಪದ್ಧತಿಯ ಶೌಚಾಲಯವಿದ್ದು, ಗುತ್ತಿಗೆದಾರರು ವ್ಯವಸ್ಥಿತವಾಗಿ ನಿರ್ವಹಿಸುತ್ತಿದ್ದಾರೆ. ಆದರೆ ಅಲ್ಲಿಯ ತ್ಯಾಜ್ಯವನ್ನು ಶೌಚಾಲಯದ ಎಡಭಾಗದಲ್ಲಿನ ದೊಡ್ಡ ಗುಂಡಿಗೆ ಬಿಡಲಾಗುತ್ತಿದ್ದು, ಸಹಿಸಲು ಆಗದ ದುರ್ವಾಸನೆ ಹೊರಸೂಸುತ್ತಿದೆ. ಪ್ರಯಾಣಿಕರು ಮೂಗು ಮುಚ್ಚಿ ಓಡಾಡಬೇಕಿದೆ. ಶೌಚಾಲಯಕ್ಕೆ ಹೊಂದಿಕೊಂಡು ಸ್ವಲ್ಪ ಖಾಲಿ ಜಾಗವಿದ್ದು, ಮೂರ್ನಾಲ್ಕು ದೊಡ್ಡ ಮರಗಳು ಬೆಳೆದಿವೆ. ಅವುಗಳ ಜೊತೆ ಅಲಂಕಾರಿಕ ಗಿಡ ಬೆಳೆಸಿದಲ್ಲಿ ನಿಲ್ದಾಣದ ಅಂದ ಹೆಚ್ಚುತ್ತದೆ ಎನ್ನುವುದು ಸಾರ್ವಜನಿಕರ ಅಭಿಮತ.

ADVERTISEMENT

ನಗರಸಭೆ ನಿರ್ಲಕ್ಷ್ಯ: ‘ಇಲ್ಲಿಯ ನಗರಸಭೆ ಆರೋಗ್ಯ ನಿರೀಕ್ಷಕರಿಗೆ ಬಸ್ ನಿಲ್ದಾಣದಲ್ಲಿಯ ತ್ಯಾಜ್ಯವನ್ನು ಎರಡು ದಿನಗಳಿಗೊಮ್ಮೆ ತೆಗೆಯುವಂತೆ ಹಲವು ಬಾರಿ ಹೇಳಿದ್ದರೂ ಸ್ಪಂದಿಸುತ್ತಿಲ್ಲ. ಅಧ್ಯಕ್ಷರು–ಉಪಾಧ್ಯಕ್ಷರು ಇದು ತಮಗೆ ಸಂಬಂಧಿಸಿದ ವಿಷಯ ಎಂದು ಭಾವಿಸಿಯೇ ಇಲ್ಲ. ಹೀಗಾಗಿ ಹೊರ ಊರುಗಳಿಂದ ಬರುವ ಪ್ರಯಾಣಿಕರು ನಮ್ಮನ್ನು ಶಪಿಸುವಂತಾಗಿದೆ’ ಎನ್ನುತ್ತಾರೆ ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಚಿತ್ರಜಿತ್ ಯಾದವ್.

ಕಾಯಕಲ್ಪ ಅಗತ್ಯ: ‘ನಿಲ್ದಾಣದ ಸುತ್ತ ಇರುವ ಖಾಸಗಿ ಕಟ್ಟಡಗಳ, ಖಾಸಗಿ ಬಸ್ ನಿಲ್ದಾಣದ ತ್ಯಾಜ್ಯ ರಸ್ತೆ ಸಾರಿಗೆ ಸಂಸ್ಥೆ ನಿಲ್ದಾಣದ ಒಳಗೆ ಬರದಂತೆ ತಡೆಯಬೇಕು. ಶೌಚಾಲಯದ ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡುವ ವ್ಯವಸ್ಥೆ ಆಗಬೇಕು. ನಿಲ್ದಾಣದ ಕಾಂಪೌಂಡ್‌ಗೆ ಹೊಂದಿಕೊಂಡಿರುವ ಸಣ್ಣ ಪುಟ್ಟ ಹೋಟೆಲ್, ಬೀಡಾ ಸ್ಟಾಲ್, ಪೆಟ್ಟಿಗೆ ಅಂಗಡಿಗಳವರು ಕಾಂಪೌಂಡ್ ದುರ್ಬಳಕೆ ಮಾಡಿಕೊಳ್ಳುತ್ತಿರುವುದು ತಪ್ಪಬೇಕು. ನಗರಸಭೆ ನಿಲ್ದಾಣದ ಸ್ವಚ್ಛತೆಗೆ ಜನರು ಸಹ ಕೈಜೋಡಿಸಬೇಕು’ ಎಂದು ನಗರಸಭೆ ನಾಮನಿರ್ದೇಶಿತ ಸದಸ್ಯ ಕೇಶವಮೂರ್ತಿ ಒತ್ತಾಯಿಸಿದ್ದಾರೆ.

ಬದಲಾವಣೆಗೆ ಸಲಹೆ

‘ಪ್ರಸ್ತುತ ಕೆಎಸ್ಆರ್‌ಟಿಸಿ ನಿಲ್ದಾಣದ ಸ್ವಲ್ಪ ಭಾಗವನ್ನು ಖಾಸಗಿ ಬಸ್ಸುಗಳ ನಿಲ್ದಾಣಕ್ಕೆ ಬಿಟ್ಟುಕೊಟ್ಟಿದ್ದು, ಖಾಸಗಿ ಬಸ್ ನಿಲ್ದಾಣಕ್ಕೆ ಪರ್ಯಾಯ ವ್ಯವಸ್ಥೆ ಮಾಡಿ, ಪೂರ್ಣ ಜಾಗವನ್ನು ರಸ್ತೆ ಸಾರಿಗೆ ಸಂಸ್ಥೆಗೆ ಬಿಟ್ಟು ಕೊಡಬೇಕು. 25 ವರ್ಷ ಹಳೆಯದಾಗಿರುವ ನಿಲ್ದಾಣಕ್ಕೆ ಹೈಟೆಕ್ ಸ್ಪರ್ಶ ನೀಡಬೇಕು. ಪ್ರವೇಶ ದ್ವಾರದಲ್ಲಿ ವಾಣಿಜ್ಯ ಮಳಿಗೆ ನಿರ್ಮಿಸಬೇಕು. ಇದರಿಂದ ನಿಲ್ದಾಣದ ಸೌಂದರ್ಯ ಹೆಚ್ಚುವ ಜೊತೆಗೆ ನಗರಸಭೆಗೆ ಹೆಚ್ಚಿನ ಆದಾಯ ಬರುತ್ತದೆ’ ಎನ್ನುತ್ತಾರೆ ವಂದೇಮಾತರಂ ಜಾಗೃತಿ ವೇದಿಕೆ ಅಧ್ಯಕ್ಷ ಗಿರಿಧರ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.