ADVERTISEMENT

ವಿಶ್ಲೇಷಣೆ | ತಿಪ್ಪಾರೆಡ್ಡಿ ಅಸಮಾಧಾನಕ್ಕೆ ಮಣಿದರೇ ಸಿಎಂ?

ಸಚಿವ ಸ್ಥಾನದ ಕನಸು ಹಸಿರು, ನಿಗಮ ಮಂಡಳಿಗೆ ಚಂದ್ರಪ್ಪ ಅಧ್ಯಕ್ಷ

ಜಿ.ಬಿ.ನಾಗರಾಜ್
Published 27 ಜುಲೈ 2020, 15:59 IST
Last Updated 27 ಜುಲೈ 2020, 15:59 IST
   

ಚಿತ್ರದುರ್ಗ: ಶಾಸಕ ಜಿ.ಎಚ್‌.ತಿಪ್ಪಾರೆಡ್ಡಿ ಅವರನ್ನು ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರನ್ನಾಗಿ ನೇಮಕ ಮಾಡಿದ ರಾಜ್ಯ ಸರ್ಕಾರ ಕೆಲವೇ ಗಂಟೆಯಲ್ಲಿ ಆದೇಶ ಹಿಂಪಡೆದಿರುವುದು ಚರ್ಚೆಗೆ ಗ್ರಾಸವಾಗಿದೆ. ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದ ತಿಪ್ಪಾರೆಡ್ಡಿ ಅವರ ಅಸಮಾಧಾನಕ್ಕೆ ಮುಖ್ಯಮಂತ್ರಿ ಮಣಿದರೇ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷರನ್ನಾಗಿ ಹೊಳಲ್ಕೆರೆ ಶಾಸಕ ಎಂ.ಚಂದ್ರಪ್ಪ ಅವರನ್ನು ನೇಮಕ ಮಾಡಲಾಗಿದೆ. ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದ ಚಂದ್ರಪ್ಪ ಅವರಿಗೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಸ್ಥಾನ ನೀಡಿ ಸಮಾಧಾನ ಪಡಿಸಲಾಗಿದೆ. ‘ಮಂತ್ರಿಗಿರಿ’ ನೀಡಲು ಸಾಧ್ಯವಿಲ್ಲ ಎಂಬ ಸಂದೇಶವನ್ನು ಹೈಕಮಾಂಡ್‌ ಸ್ಪಷ್ಟವಾಗಿ ರವಾನಿಸಿದಂತೆ ಕಾಣುತ್ತಿದೆ.

ನಿಗಮ ಮಂಡಳಿ ಅಧ್ಯಕ್ಷರ ನೇಮಕಾತಿ ಆದೇಶ ಹೊರಬಿದ್ದ ತಕ್ಷಣವೇ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದರು. ‘ನಿಜಕ್ಕೂ ಇದೊಂದು ಅವಮಾನದ ಸಂಕೇತವಾಗಿದ್ದು, ಅಧ್ಯಕ್ಷ ಸ್ಥಾನ ತಿರಸ್ಕರಿಸುತ್ತೇನೆ’ ಎಂಬ ನಿರ್ಧಾರ ಪ್ರಕಟಿಸಿದರು. ಈ ಭಿನ್ನ ಧ್ವನಿ ಹೈಕಮಾಂಡ್‌ ಕಿವಿಗೆ ಬೀಳುತ್ತಿದ್ದಂತೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರೇ ಖುದ್ದು ದೂರವಾಣಿ ಕರೆ ಮಾಡಿ ತಿಪ್ಪಾರೆಡ್ಡಿ ಅವರೊಂದಿಗೆ ಮಾತನಾಡಿದ್ದಾರೆ.

ADVERTISEMENT

ಸಚಿವ ಸ್ಥಾನದ ಕನಸು ಕಾಣುತ್ತಿದ್ದ ತಿಪ್ಪಾರೆಡ್ಡಿ ಹಾಗೂ ಚಂದ್ರಪ್ಪ ಅವರಿಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ನೀಡಿ ಹೈಕಮಾಂಡ್‌ ಪರೀಕ್ಷಿಸಿದಂತೆ ಕಾಣುತ್ತಿದೆ. ಅಸಮಾಧಾನ ಹೊರಹಾಕಿದ ತಕ್ಷಣ ತಿಪ್ಪಾರೆಡ್ಡಿ ಅವರ ನೇಮಕಾತಿ ಆದೇಶ ರದ್ದುಪಡಿಸಿದ್ದು ಇಂತಹ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಚಂದ್ರಪ್ಪ ಅವರಿಗೆ ಮಾತ್ರ ಇದು ‘ಬಿಸಿತುಪ್ಪ’ದಂತೆ ಆಗಿದೆ.

‘ಚಿತ್ರದುರ್ಗ ವಿಧಾನಸಭಾ ಕ್ಷೇತ್ರದಿಂದ ಆರು ಬಾರಿ ಶಾಸಕನಾಗಿ ಆಯ್ಕೆಯಾಗಿದ್ದೇನೆ. 1998ರಲ್ಲಿ ಗೃಹ ಮಂಡಳಿಯ ಅಧ್ಯಕ್ಷನಾಗಿ ಸಚಿವ ಸ್ಥಾನದ ಸೌಲಭ್ಯ ಅನುಭವಿಸಿದ್ದೇನೆ. ಹಿರಿತನದ ಆಧಾರದ ಮೇರೆಗೆ ಸಚಿವ ಸ್ಥಾನ ನೀಡುವ ಆಶ್ವಾಸನೆ ಇತ್ತು’ ಎಂದು ಶಾಸಕ ಜಿ.ಎಚ್‌.ತಿಪ್ಪಾರೆಡ್ಡಿ ಅವರು ‘ಪ್ರಜಾವಾಣಿ’ಯೊಂದಿಗೆ ಅಭಿಪ್ರಾಯ ಹಂಚಿಕೊಂಡರು.

‘ರಾಜ್ಯ ರಾಜಕೀಯದಲ್ಲಿ 40 ವರ್ಷ ದುಡಿದಿದ್ದೇನೆ. ವಯಸ್ಸು ಮತ್ತು ಅನುಭವದಲ್ಲಿ ಅತ್ಯಂತ ಕಿರಿಯರಿಗೆ ಸಚಿವ ಸ್ಥಾನ ಸಿಕ್ಕಿದೆ. ನನ್ನ ಭಾವನೆಯನ್ನು ನಾಯಕರು ಅರ್ಥ ಮಾಡಿಕೊಂಡಂತೆ ಕಾಣುತ್ತಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿಯಲ್ಲಿ ಶಾಸಕರಾಗಿರುವುದಕ್ಕೆ ತೃಪ್ತಿ ಇದೆ’ ಎಂದು ಹೇಳಿದರು.

‘ಮತ್ತೆ ಮಾತನಾಡುತ್ತೇನೆ’ ಎಂದು ಮುಖ್ಯಮಂತ್ರಿ ಅವರು ತಿಪ್ಪಾರೆಡ್ಡಿಗೆ ಆಶ್ವಾಸನೆ ನೀಡಿರುವುದು ಹಲವು ಲೆಕ್ಕಾಚಾರಗಳಿಗೆ ಎಡೆಮಾಡಿಕೊಟ್ಟಿದೆ. ಸಚಿವ ಸ್ಥಾನ ನೀಡುವ ಅವಕಾಶವನ್ನು ಮತ್ತೆ ತೆರೆದಿಟ್ಟುವರುವಂತೆ ಕಾಣುತ್ತಿದೆ. ಈ ಬಗ್ಗೆ ಶಾಸಕರ ಬೆಂಬಲಿಗರು ಹಾಗೂ ಬಿಜೆಪಿ ಪಾಳೆಯಲ್ಲಿ ತರಹೇವಾರಿ ವಿಶ್ಲೇಷಣೆಗಳು ನಡೆಯುತ್ತಿವೆ.

2018ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಚಿತ್ರದುರ್ಗ ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳ ಪೈಕಿ ಐದರಲ್ಲಿ ಬಿಜೆಪಿ ಗೆಲುವು ಸಾಧಿಸಿತ್ತು. ಜೆಡಿಎಸ್‌ ಹಾಗೂ ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದಾಗ ಜಿಲ್ಲೆಯ ಶಾಸಕರು ನಿರಾಶೆಗೊಂಡಿದ್ದರು. ವರ್ಷದ ಹಿಂದೆ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ಅಧಿಕಾರಕ್ಕೆ ಮರಳಿದಾಗ ಸಚಿವ ಸ್ಥಾನದ ನಿರೀಕ್ಷೆಗಳು ಗರಿಗೆದರಿದ್ದವು. ಸಚಿವ ಸಂಪುಟ ಸೇರುವ ಅವಕಾಶ ಮೊಳಕಾಲ್ಮುರು ಕ್ಷೇತ್ರದ ಶಾಸಕ ಬಿ.ಶ್ರೀರಾಮುಲು ಅವರಿಗೆ ಮಾತ್ರ ಒದಗಿಬಂದಿತ್ತು.

ಚಿತ್ರದುರ್ಗ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ, ಹೊಸದುರ್ಗ ಶಾಸಕ ಗೂಳಿಹಟ್ಟಿ ಶೇಖರ್ ಅವರು ಸಚಿವ ಸ್ಥಾನದ ಆಕಾಂಕ್ಷಿಗಳು ಎಂಬುದನ್ನು ಬಹಿರಂಗವಾಗಿ ಹೇಳಿಕೊಂಡಿದ್ದರು. ಹಿರಿಯೂರು ಶಾಸಕಿ ಕೆ.ಪೂರ್ಣಿಮಾ ಹಾಗೂ ಹೊಳಲ್ಕೆರೆ ಶಾಸಕ ಎಂ.ಚಂದ್ರಪ್ಪ ಅವರು ತೆರೆಮರೆಯಲ್ಲಿ ಲಾಬಿ ನಡೆಸಿದ್ದರು. ಯಡಿಯೂರಪ್ಪ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಚಂದ್ರಪ್ಪ ಸಚಿವ ಸ್ಥಾನ ಸಿಗುವ ಭರವಸೆ ಇಟ್ಟುಕೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.