ADVERTISEMENT

ಅಪ್ಪು ಮಹಿಳಾ ಅಭಿಮಾನಿಯಿಂದ ಧಾರವಾಡದಿಂದ ಬೆಂಗಳೂರಿಗೆ ಪಾದಯಾತ್ರೆ

ಚಿಕ್ಕ ಮಕ್ಕಳೊಂದಿಗೆ ಧಾರವಾಡದಿಂದ ಬೆಂಗಳೂರಿಗೆ ಹೊರಟ ಕುಟುಂಬ

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2021, 3:59 IST
Last Updated 8 ಡಿಸೆಂಬರ್ 2021, 3:59 IST
ಅಪ್ಪು ಸಮಾಧಿ ಸ್ಥಳಕ್ಕೆ ಪಾದಯಾತ್ರೆ ಹೊರಟಿರುವ ಧಾರವಾಡ ಜಿಲ್ಲೆಯ ದಾಕ್ಷಾಯಿಣಿ ಮತ್ತು ಅವರ ಕುಟುಂಬವನ್ನು ಚಿತ್ರದುರ್ಗದಲ್ಲಿ ಮಂಗಳವಾರ ಡಾ.ರಾಜ್‌ಕುಮಾರ್ ಅಭಿಮಾನಿಗಳು ಆತ್ಮೀಯವಾಗಿ ಸ್ವಾಗತಿಸಿದರು
ಅಪ್ಪು ಸಮಾಧಿ ಸ್ಥಳಕ್ಕೆ ಪಾದಯಾತ್ರೆ ಹೊರಟಿರುವ ಧಾರವಾಡ ಜಿಲ್ಲೆಯ ದಾಕ್ಷಾಯಿಣಿ ಮತ್ತು ಅವರ ಕುಟುಂಬವನ್ನು ಚಿತ್ರದುರ್ಗದಲ್ಲಿ ಮಂಗಳವಾರ ಡಾ.ರಾಜ್‌ಕುಮಾರ್ ಅಭಿಮಾನಿಗಳು ಆತ್ಮೀಯವಾಗಿ ಸ್ವಾಗತಿಸಿದರು   

ಚಿತ್ರದುರ್ಗ: ಅಪ್ಪು ನಿಧನದ ಬಳಿಕ ಸಮಾಧಿಗೆ ಭೇಟಿ ನೀಡುವ ಅಭಿಮಾನಿಗಳು ರಾಜ್ಯದ ವಿವಿಧೆಡೆಯಿಂದ ಬೆಂಗಳೂರಿಗೆ ಪಾದಯಾತ್ರೆ ಹೊರಡುತ್ತಿದ್ದಾರೆ. ಅದೇ ರೀತಿ ಮಹಿಳಾ ಅಭಿಮಾನಿಯೊಬ್ಬರು ಪಾದಯಾತ್ರೆ ಹೊರಟಿದ್ದಾರೆ.

ಧಾರವಾಡ ಜಿಲ್ಲೆಯಿಂದ ಬೆಂಗಳೂರಿನ ಕಂಠೀರವ ಸ್ಟುಡಿಯೊಗೆ ಚಿಕ್ಕಮಕ್ಕಳು ಸೇರಿ ಕುಟುಂಬ ಸಮೇತ ಮಹಿಳೆ ಹೊರಟಿದ್ದಾರೆ. ಮಾರ್ಗ ಮಧ್ಯೆ ಚಿತ್ರದುರ್ಗದ ಜೆಎಂಐಟಿ ವೃತ್ತದ ಬಿಗ್‌ಬಾಸ್‌ ಹೋಟೆಲ್‌ನಲ್ಲಿ ರಾಜ್‌ಕುಮಾರ್ ಅಭಿಮಾನಿಗಳು ಇವರ ಕುಟುಂಬವನ್ನು ಆತ್ಮೀಯವಾಗಿ ಬರಮಾಡಿಕೊಂಡರು.

ನಂತರ ಮಾತನಾಡಿದ ದಾಕ್ಷಾಯಿಣಿ ಉಮೇಶ್‌ ಪಾಟೀಲ್, ‘ನಟನೆಯ ಜತೆ ಸದ್ದಿಲ್ಲದೆ ಸಾಮಾಜಿಕ ಕಾರ್ಯದಲ್ಲಿ ತೊಡಗಿದ್ದ ನೆಚ್ಚಿನ ನಟ, ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಸಮಾಧಿ ಕಣ್ತುಂಬಿಕೊಳ್ಳಲು ಧಾರವಾಡದಿಂದ ಪಾದಯಾತ್ರೆ ಮೂಲಕ ಪಯಣ ಬೆಳೆಸಿದ್ದೇನೆ’ ಎಂದರು.

ADVERTISEMENT

‘ಒಟ್ಟಾರೆ ಸಮಾಧಿ ತಲುಪಲು 500 ಕಿ.ಮೀ. ಕ್ರಮಿಸಬೇಕಿದೆ. ನಿತ್ಯ 60 ಕಿ.ಮೀ. ಸಾಗಿದ ನಂತರ ಮಾರ್ಗ ಮಧ್ಯೆ ವಿಶ್ರಾಂತಿ ಪಡೆಯುತ್ತೇವೆ. ಪುನೀತ್‌ ಅವರ ಸಹೋದರ ಶಿವ ರಾಜ್‌ಕುಮಾರ್ ಪಾದಯಾತ್ರೆಗೆ ಅಗತ್ಯ ಸಹಕಾರ ನೀಡುತ್ತಿದ್ದಾರೆ. ಯಾವುದೇ ರೀತಿಯ ತೊಂದರೆಯಾಗದಂತೆ ಅವರ ಅಭಿಮಾನಿಗಳು ಸ್ವಾಗತಿಸುತ್ತಿದ್ದಾರೆ’ ಎಂದರು.

ಶಿವರಾಜ್, ಉಮೇಶ್, ರತ್ನಮ್ಮ, ಶ್ರೀದೇವಿ, ಸೋಹಿಲ್, ಸುಮನ್, ಆದ್ಯಾ ದಾಕ್ಷಾಯಿಣಿ ಅವರೊಂದಿಗೆ ಪಾದಯಾತ್ರೆ ಹೊರಟಿದ್ದಾರೆ. ಅಖಿಲ ಕರ್ನಾಟಕ ಡಾ.ರಾಜ್‌ಕುಮಾರ್, ಶಿವರಾಜ್‌ಕುಮಾರ್ ಅಭಿಮಾನಿಗಳ ಸಂಘಗಳ ಒಕ್ಕೂಟ, ರಾಜರತ್ನ ಪುನೀತ್‌ ರಾಜ್‌ಕುಮಾರ್ ಅಭಿಮಾನಿಗಳ ಸಂಘದ ರಾಜ್ಯ ಘಟಕದ ಅಧ್ಯಕ್ಷ ಪ್ರಕಾಶ್, ಪುನೀತ್ ಅಭಿಮಾನಿಗಳ ಸಂಘದ ಜಿಲ್ಲಾ ಗೌರವಾಧ್ಯಕ್ಷ ಬಿ.ಕಾಂತರಾಜ್, ಜಿಲ್ಲಾ ಅಧ್ಯಕ್ಷ ಜಯಣ್ಣ, ತಾಲ್ಲೂಕು ಅಧ್ಯಕ್ಷ ಪ್ರದೀಪ್, ಹಾಸನ ಜಿಲ್ಲಾ ಘಟಕದ ಅಧ್ಯಕ್ಷ ರತೀಶ್‌ಕುಮಾರ್, ಕೊಡಗು ಜಿಲ್ಲಾ ಘಟಕದ ಅಧ್ಯಕ್ಷ ಕುಮಾರ್ ಮಹಾಂತೇಶ್, ಕಾರ್ಯದರ್ಶಿ ಮಂಜು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.