ADVERTISEMENT

ಚಿತ್ರದುರ್ಗ | ಉತ್ತಮ ಮಳೆ: ಸಂತೆ ಹೊಂಡ, ಗೋನೂರು ಕೆರೆ ಕೋಡಿ

ವರುಣನ ಆರ್ಭಟಕ್ಕೆ ಕೆರೆ, ಕಟ್ಟೆ, ಹೊಂಡಗಳು ಭರ್ತಿ | ಹೊಲ, ಮನೆ, ಅಂಗಡಿಗಳಿಗೆ ನುಗ್ಗಿದ ನೀರು

​ಪ್ರಜಾವಾಣಿ ವಾರ್ತೆ
Published 30 ಜುಲೈ 2020, 16:32 IST
Last Updated 30 ಜುಲೈ 2020, 16:32 IST
ಚಿತ್ರದುರ್ಗ ತಾಲ್ಲೂಕಿನ ಗೋನೂರು ಕೆರೆ ತುಂಬಿದ್ದು, ಮೈದುಂಬಿ ಹರಿಯುತ್ತಿರುವುದು.
ಚಿತ್ರದುರ್ಗ ತಾಲ್ಲೂಕಿನ ಗೋನೂರು ಕೆರೆ ತುಂಬಿದ್ದು, ಮೈದುಂಬಿ ಹರಿಯುತ್ತಿರುವುದು.   

ಚಿತ್ರದುರ್ಗ: ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಸುರಿಯುತ್ತಿರುವ ಭಾರಿ ಮಳೆಗೆ ಗ್ರಾಮೀಣ ಭಾಗದ ಜೀವನಾಡಿಯಾದ ಕೆರೆ, ಕಟ್ಟೆ, ಚೆಕ್‌ಡ್ಯಾಂಗಳು ಕೋಡಿ ಹರಿಯುತ್ತಿವೆ. ಮಳೆಯ ಆರ್ಭಟಕ್ಕೆ ಹೊಲ, ಮನೆಗಳಿಗೂ ನೀರು ನುಗ್ಗಿದೆ.

ಪುಷ್ಯಾ ಮಳೆ ಉತ್ತಮವಾಗಿ ಸುರಿದ ಕಾರಣ ಕಳೆದ ನಾಲ್ಕು ವರ್ಷದಲ್ಲಿ ಚಿತ್ರದುರ್ಗ ತಾಲ್ಲೂಕಿನ ಗೋನೂರು ಕೆರೆ ಎರಡನೇ ಬಾರಿ ಕೋಡಿ ಬಿದ್ದಿದೆ. ಜಲಧಾರೆಯಂತೆ ಧುಮ್ಮಿಕ್ಕಿ ಕೆರೆಯಿಂದ ನೀರು ಹೊರಗೆ ಹರಿಯುತ್ತಿದೆ. ಈ ದೃಶ್ಯ ನೋಡಿ ಜನರು ಸಂಭ್ರಮಿಸುತ್ತಿದ್ದಾರೆ.

ಬುಧವಾರ ರಾತ್ರಿ ಸುರಿದ ಮಳೆಗೆ ಕೋಡಿ ಬಿದ್ದ ಕೆರೆಯಿಂದ ಕೆಲ ರೈತರ ಹೊಲಗಳಿಗೂ ನೀರು ನುಗ್ಗಿದೆ. ಜಮೀನಿನಲ್ಲಿದ್ದ ಬೆಳೆ ನೀರಿನಲ್ಲಿ ಕೊಚ್ಚಿಹೋಗಿದೆ. ಈರುಳ್ಳಿ, ಮೆಕ್ಕೆಜೋಳ ಬೆಳೆಗಳಿಗೆ ಹಾನಿಯಾಗಿದೆ. ಅವೈಜ್ಞಾನಿಕ ಚೆಕ್‌ಡ್ಯಾಂ ನಿರ್ಮಾಣವೇ ಈ ಅನಾಹುತಕ್ಕೆ ಕಾರಣ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ADVERTISEMENT

ಕೆರೆಯ ಕೋಡಿಯಿಂದ ರಭಸವಾಗಿ ಹರಿಯುತ್ತಿರುವ ನೀರು ಬಂಡೆಗಳ ಸಂದುಗಳನ್ನು ಸೀಳಿಕೊಂಡು ದ್ಯಾಮವ್ವನಹಳ್ಳಿಯತ್ತ ಸಾಗಿದೆ. ಕೋಡಿ ಬಿದ್ದಾಗ ಸಾಮಾನ್ಯವಾಗಿ ನೀರು ಬೊಮ್ಮೇನಹಳ್ಳಿ, ಹಂಪಯ್ಯನ ಮಾಳಿಗೆ ಗೊಲ್ಲರಹಟ್ಟಿ ಮೂಲಕ ದ್ಯಾಮವ್ವನಹಳ್ಳಿ ಕೆರೆ, ಕಲ್ಲಳ್ಳಿ, ಮಧುರೆ, ರಾಣಿಕೆರೆಗೆ ಸೇರುತ್ತದೆ.

ಒಮ್ಮೆ ಕೆರೆ ಭರ್ತಿಯಾದರೆ ಕನಿಷ್ಠ ಮೂರು ವರ್ಷ ನೀರು ಇರುತ್ತದೆ. ವಿವಿಧ ಗ್ರಾಮಗಳ ಜನರಿಗೆ, ಜಾನುವಾರಿಗೆ ಅನುಕೂಲವಾಗುತ್ತದೆ. ಸುತ್ತಲೂ ಅಂತರ್ಜಲ ಮಟ್ಟ ವೃದ್ಧಿಯಾಗುತ್ತದೆ. ಕೊಳವೆಬಾವಿಗಳಲ್ಲಿ ನೀರಿನ ಪ್ರಮಾಣ ಹೆಚ್ಚಳವಾಗಲಿದೆ ಎಂದು ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ. ಗೋನೂರು ರಸ್ತೆ ಮಾರ್ಗದಲ್ಲಿನ ಚಿಕ್ಕ ಕೆರೆ ಸಮೀಪ ವಾಸಕ್ಕಾಗಿ ನಿರ್ಮಿಸಿಕೊಂಡಿದ್ದ ಗುಡಿಸಲುಗಳಿಗೂ ನೀರು ನುಗ್ಗಿದೆ.

ಇನ್ನೂ ಮಲ್ಲಾಪುರ ಕೆರೆಯಲ್ಲೂ ನೀರಿನ ಹರಿವು ಮತ್ತಷ್ಟು ಹೆಚ್ಚಳವಾಗಿ ಮೈದುಂಬಿ ಹರಿಯುತ್ತಿದೆ. ಕೆರೆ ಮುಂಭಾಗದ ರಾಷ್ಟ್ರೀಯ ಹೆದ್ದಾರಿ 13ರ ರಸ್ತೆ ಮೇಲೆ ರಭಸವಾಗಿ ನೀರು ಹರಿದಿದೆ. ಮಲ್ಲಾಪುರ, ಪಿಳ್ಳೆಕೇರನಹಳ್ಳಿ ಗ್ರಾಮಗಳ ರಸ್ತೆ ಮಾರ್ಗದ ಕೆಳಸೇತುವೆಯಲ್ಲಿ ನೀರು ನಿಂತಿದೆ. ಗುರುವಾರ ಮುಂಜಾನೆ ವಾಹನ ಸವಾರರು ರಸ್ತೆ ಮಾರ್ಗದಲ್ಲಿ ಸಂಚರಿಸಲು ಹರಸಾಹಸ ಪಡಬೇಕಾಯಿತು. ನಿಧಾನಗತಿಯಲ್ಲಿ ಸಾಗಬೇಕಾಗಿದ್ದರಿಂದ ವಾಹನ ದಟ್ಟಣೆ ಉಂಟಾಗಿತ್ತು.

ಕೋಟೆಯೊಳಗಿನ ಗೋಪಾಲಸ್ವಾಮಿ ಹೊಂಡ ತುಂಬಿ ಕೋಡಿ ಬಿದ್ದಿದೆ. ತಣ್ಣೀರು ದೋಣಿ, ಒನಕೆ ಓಬವ್ವನ ಕಿಂಡಿಗೂ ಅಧಿಕ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಬೆಟ್ಟದ ತಪ್ಪಲಿನಿಂದ, ಮೆಟ್ಟಿಲುಗಳಿಂದ ಹರಿಯುವ ಜಲಧಾರೆಯ ದೃಶ್ಯವನ್ನು ನಾಗರಿಕರು ಮೊಬೈಲ್‌ಗಳಲ್ಲಿ ಸೆರೆಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ನಿರೀಕ್ಷೆ ಮೀರಿ ಮಳೆ ಸುರಿದಿರುವುದು ಕೋಟೆನಾಡಿನ ಜನರ ಸಂಭ್ರಮವನ್ನು ಹೆಚ್ಚಿಸಿದೆ.

ಚಿತ್ರದುರ್ಗದಲ್ಲಿ ಸಾಮಾನ್ಯವಾಗಿ ಹಿಂಗಾರು ಮಳೆ ಅತ್ಯುತ್ತಮವಾಗಿ ಸುರಿಯುತ್ತದೆ. ಮುಂಗಾರು ಮಳೆ ಸುರಿದು ಕೆರೆ, ಕಟ್ಟೆ, ಹೊಂಡಗಳು ಭರ್ತಿಯಾಗಿದ್ದು ಅಪರೂಪ. ಪ್ರಸಕ್ತ ವರ್ಷ ಮುಂಗಾರು ಮಳೆ ನಿರೀಕ್ಷೆ ಮೀರಿ ಸುರಿದಿದೆ. ಇದರಿಂದ ರೈತರು ಹರ್ಷಗೊಂಡಿದ್ದು, ಕೃಷಿ ಚಟುವಟಿಕೆ ಬಿರುಸು ಪಡೆದಿದೆ.

ಅಂಗಡಿ, ಮನೆಗಳಿಗೆ ನುಗ್ಗಿದ ನೀರು

ನಗರ ವ್ಯಾಪ್ತಿಯ ಸಿಹಿನೀರು ಹೊಂಡ, ಸಂತೆಹೊಂಡ ಎರಡೂ ಕೋಡಿ ಬಿದ್ದಿವೆ. ಇದರಿಂದಾಗಿ ಸಂತೆ ಮೈದಾನ ಪಕ್ಕದ ಐದಾರು ಅಂಗಡಿ, ಮನೆಗಳಿಗೆ ನೀರು ನುಗ್ಗಿದೆ. ಇಡೀ ರಾತ್ರಿ ಕೆಲವರ ನಿದ್ದೆಗೆಡಿಸಿದೆ. ಮಳೆ ನೀರನ್ನು ಹೊರಗೆ ಹಾಕುವಷ್ಟರಲ್ಲಿ ಮನೆ ಮಾಲೀಕರು, ಕೆಲಸಗಾರರು ಹೈರಾಣಾಗಿದ್ದಾರೆ. ಸಂತೆಹೊಂಡ ಪಕ್ಕದ ತಡೆಗೋಡೆ ಒಡೆದು ನೀರನ್ನು ಚರಂಡಿಗೆ ಬಿಡಲಾಗಿದೆ.

ಮಲ್ಲಾಪುರ ಕೆರೆ ಕೋಡಿಯಲ್ಲಿ ನೀರಿನ ಪ್ರಮಾಣ ಹೆಚ್ಚಿ ಕೆಲ ಮನೆಗಳು ಜಲಾವೃತವಾಗಿದ್ದವು. ಬುಧವಾರ ಬೆಳಿಗ್ಗೆ ಮನೆಯಿಂದ ನೀರು ಹೊರಹಾಕುವಲ್ಲಿ ಜನರು ನಿರತರಾಗಿದ್ದರು. ಪುಣೆ–ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಕೆಳ ಸೇತುವೆಗಳಲ್ಲಿ ಬುಧವಾರವೂ ನೀರು ನಿಂತಿತ್ತು. ವಾಹನ ಸವಾರರು ಸಮಸ್ಯೆ ಎದುರಿಸಬೇಕಾಯಿತು.

ಚಿತ್ರದುರ್ಗದಲ್ಲಿ 99 ಮಿ.ಮೀ ಮಳೆ

ಚಿತ್ರದುರ್ಗ: ಚಿತ್ರದುರ್ಗ ನಗರ ವ್ಯಾಪ್ತಿಯಲ್ಲಿ ಜುಲೈ 29ರಂದು 99 ಮಿ.ಮೀ ಮಳೆಯಾಗಿದೆ. ತಾಲ್ಲೂಕು ವ್ಯಾಪ್ತಿಯಲ್ಲಿ 66 ಮಿ.ಮೀ. ಮಳೆ ಸುರಿದಿದೆ.

ಹಿರೇಗೂಂಟನೂರು 6 ಮಿ.ಮೀ, ಭರಮಸಾಗರ 13 ಮಿ.ಮೀ, ಸಿರಿಗೆರೆ 51, ತುರುವನೂರು 71, ಐನಹಳ್ಳಿ 34, ಹೊಳಲ್ಕೆರೆ 10, ಎಚ್.ಡಿ.ಪುರ 48, ಹೊಸದುರ್ಗ ತಾಲ್ಲೂಕಿನ ಹೊಸದುರ್ಗ 28, ಮತ್ತೋಡು 20, ಶ್ರೀರಾಂಪುರ 75 ಮಿ.ಮೀ ಮಳೆಯಾಗಿದೆ.

ಮೊಳಕಾಲ್ಮುರು 16 ಮಿ.ಮೀ, ರಾಯಾಪುರ 14, ಹಿರಿಯೂರು ತಾಲ್ಲೂಕು 8 ಮಿ.ಮೀ, ಚಳ್ಳಕೆರೆ 10 ಮಿ.ಮೀ, ಪರುಶುರಾಂಪುರ 19, ದೇವರಮರಿಕುಂಟೆ 29, ನಾಯಕನಹಟ್ಟಿಯಲ್ಲಿ 52 ಮಿ.ಮೀ. ಮಳೆಯಾಗಿದೆ ಎಂದು ಜಿಲ್ಲಾಧಿಕಾರಿ ಕಚೇರಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.