ಮೊಳಕಾಲ್ಮುರು: ಮುಂಗಾರು ಹಂಗಾಮಿನಲ್ಲಿ ತಾಲ್ಲೂಕಿನ ಖುಷ್ಕಿ ಪ್ರದೇಶದಲ್ಲಿ ಆಗಿರುವ ಬೆಳೆ ಹಾನಿ ಬಗ್ಗೆ ಸರ್ಕಾರಕ್ಕೆ ಅಧಿಕಾರಿಗಳು ವಾಸ್ತವ ವರದಿ ಸಲ್ಲಿಸುವ ಮೂಲಕ ಅನುಕೂಲ ಕಲ್ಪಿಸಬೇಕು ಎಂದು ರೈತರು ಮನವಿ ಮಾಡಿದರು.
ತಾಲ್ಲೂಕು ಕಚೇರಿಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಮಧ್ಯಂತರ ಪರಿಹಾರ ಸಾಧ್ಯತೆ ಚರ್ಚೆ ಸಭೆಯಲ್ಲಿ ಅವರು ಮಾತನಾಡಿದರು.
‘ಮೊಳಕಾಲ್ಮುರು ಮತ್ತು ಚಳ್ಳಕೆರೆ ತಾಲ್ಲೂಕುಗಳ ರೈತರು ಸತತ ಮಳೆ ಕೊರತೆಯಿಂದ ನಷ್ಟ ಅನುಭವಿಸುತ್ತಿದ್ದಾರೆ. ಈ ವರ್ಷ ಕೃಷಿಗೆ ಹಾಕಿರುವ ಪೂರ್ಣ ಬಂಡವಾಳ ನಷ್ಟವಾಗಿದೆ. ಆದರೆ, ಕೇಂದ್ರ ಸರ್ಕಾರದ ಫಸಲ್ ಬಿಮಾ ಯೋಜನೆಯ ಮಾನದಂಡ ಕೆಲವು ಸಲ ಪರಿಹಾರ ಮಂಜೂರಿಗೆ ವಿರುದ್ಧವಾಗಿರುತ್ತದೆ. ಆದ್ದರಿಂದ ಅಗತ್ಯ ವರದಿ ಸಲ್ಲಿಸುವ ಜತೆಗೆ ರೈತರ ಸ್ಥಿತಿಗತಿ ಮನವರಿಕೆ ಮಾಡಿಕೊಡಬೇಕು’ ಎಂದು ಮನವಿ ಮಾಡಿದರು.
‘ಮಳೆ ಕೈಕೊಟ್ಟಿರುವ ಪರಿಣಾಮ ಶೇಂಗಾ ಕಾಯಿ ಕಟ್ಟಿಲ್ಲ. ಜತೆಗೆ ಗಿಡಗಳು ರೋಗಕ್ಕೆ ತುತ್ತಾಗಿವೆ. ಇದರಿಂದ ಬೆಳೆ ಹಾನಿ ಜತೆಗೆ ಮೇವಿನ ಸಮಸ್ಯೆಯೂ ಕಾಡುತ್ತಿದೆ. ಮೊಳಕಾಲ್ಮುರು ತಾಲ್ಲೂಕಿನಲ್ಲಿ 25,000 ಹೆಕ್ಟೇರ್‌ನಲ್ಲಿ ಶೇಂಗಾ ಬಿತ್ತನೆಯಾಗಿದೆ. ಪ್ರತಿ ಹೆಕ್ಟೇರ್‌ಗೆ ₹ 50,000 ಪರಿಹಾರಕ್ಕೆ ಸರ್ಕಾರಕ್ಕೆ ಶಿಫಾರಸ್ಸು ಮಾಡಬೇಕು. ಇಲ್ಲವಾದಲ್ಲಿ ಜಾನುವಾರು ಸಹಿತ ತಾಲ್ಲೂಕು ಕಚೇರಿ ಎದುರು ಠಿಕಾಣಿ ಹೂಡಲಾಗುವುದು’ ಎಂದು ಎಚ್ಚರಿಸಿದರು.
ರೈತರ ಮನವಿ, ಸಮಸ್ಯೆಯನ್ನು ಜಿಲ್ಲಾಧಿಕಾರಿ ಗಮನನಕ್ಕೆ ತರಲಾಗುವುದು ಎಂದು ತಹಶೀಲ್ದಾರ್ ಟಿ. ಜಗದೀಶ್ ಭರವಸೆ ನೀಡಿದರು.
ಕೃಷಿ ಅಧಿಕಾರಿ ಎನ್.ವಿ. ಪ್ರಕಾಶ್, ರೇಷ್ಮೆ ಇಲಾಖೆಯ ಮಹೇಶ್, ರೈತ ಮುಖಂಡರಾದ ಬೇಡರೆಡ್ಡಿಹಳ್ಳಿ ಬಸವರೆಡ್ಡಿ, ಮರ್ಲಹಳ್ಳಿ ರವಿಕುಮಾರ್, ಎಸ್.ಟಿ. ಚಂದ್ರಣ್ಣ, ಜಾಫರ್ ಷರೀಫ್, ಸೂರಮ್ಮನಹಳ್ಳಿ ರಾಜಣ್ಣ, ಕೃಷ್ಣಮೂರ್ತಿ, ಈರಣ್ಣ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.