ಚಿತ್ರದುರ್ಗ: ಆಸ್ಪತ್ರೆಗಳೆಂದರೆ ಸಾರ್ವಜನಿಕರಿಗೆ ಉತ್ತಮ ಆರೋಗ್ಯ ಸೇವೆ ಕಲ್ಪಿಸುವ ತಾಣಗಳಾಗಬೇಕು. ಆದರೆ, ನಗರದಲ್ಲಿನ ಜಿಲ್ಲಾ ಆಸ್ಪತ್ರೆ ಸೇರಿದಂತೆ ಜಿಲ್ಲೆಯ ವಿವಿಧ ಆಸ್ಪತ್ರೆಗಳಲ್ಲಿ ಸ್ವಚ್ಛತೆ ಮರೀಚಿಕೆಯಾಗಿದೆ. ಇದರಿಂದ ರೋಗಿಗಳು ಹಾಗೂ ಅವರ ಆರೈಕೆ ಮಾಡುವ ಸಂಬಂಧಿಕರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತಿದೆ. ಒಂದರ್ಥದಲ್ಲಿ ಸರ್ಕಾರಿ ಆಸ್ಪತ್ರೆಗಳಿಗೇ ಅನಾರೋಗ್ಯ ಬಾಧಿಸಿದೆ!
ಸರ್ಕಾರಿ ವೈದ್ಯಕೀಯ ಕಾಲೇಜು ಕಟ್ಟಡದ ನಿರ್ಮಾಣ ಕಾಮಗಾರಿ ನಡೆಯುತ್ತಿರುವುದರಿಂದ ಬೃಹತ್ ವಾಹನಗಳು ಓಡಾಡುತ್ತಿವೆ. ಇದರಿಂದ ಜಿಲ್ಲಾ ಆಸ್ಪತ್ರೆ ಆವರಣದ ರಸ್ತೆಗಳು ಗುಂಡಿಮಯವಾಗಿವೆ. ಸೋನೆ ಮಳೆಯಾಗುತ್ತಿರುವ ಕಾರಣ ಅವುಗಳಲ್ಲಿ ಕೊಳಚೆ ನೀರು ಶೇಖರಣೆಗೊಳ್ಳುತ್ತಿದೆ.
ಕಳೆದೊಂದು ತಿಂಗಳಿಂದ ಮೋಡ ಮುಚ್ಚಿದ ವಾತಾವರಣವಿದ್ದು, ಜನರು ಅನಾರೋಗ್ಯಕ್ಕೀಡಾಗಿ ಆಸ್ಪತ್ರೆಯ ಬಾಗಿಲು ತಟ್ಟುವುದು ಹೆಚ್ಚಾಗುತ್ತಿದೆ. ಜಿಲ್ಲಾ ಆಸ್ಪತ್ರೆಗೆ ದಾಖಲಾಗುವ ರೋಗಿಗಳ ಸಂಖ್ಯೆಯೂ ಹೆಚ್ಚಾಗಿದೆ. ಆಸ್ಪತ್ರೆ ಆವರಣದಲ್ಲಿ ಸ್ವಚ್ಛತೆ ಮರೀಚಿಕೆಯಾಗಿರುವುದು ರೋಗಿಗಳ ಭೀತಿಗೆ ಕಾರಣವಾಗಿದೆ. ಆಸ್ಪತ್ರೆ ರಸ್ತೆಯ ಇಕ್ಕೆಲಗಳಲ್ಲಿ ಗೂಡಂಗಡಿಗಳಿದ್ದು, ಅಲ್ಲೂ ಸ್ವಚ್ಛತೆ ಮರೆಯಾಗಿದೆ.
ಜಿಲ್ಲೆಯಲ್ಲಿ ಒಂದು ಜಿಲ್ಲಾ ಆಸ್ಪತ್ರೆ, 5 ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಗಳಿವೆ. ಜೊತೆಗೆ ಸಮುದಾಯ ಆರೋಗ್ಯ ಕೇಂದ್ರ, ನಗರ ಆರೋಗ್ಯ ಕೇಂದ್ರ, ಪ್ರಾಥಮಿಕ ಆರೋಗ್ಯ ಕೇಂದ್ರ, 24X7 ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಆರೋಗ್ಯ ಉಪಕೇಂದ್ರಗಳಿವೆ. ಆದರೂ ಜನ ಜಿಲ್ಲಾ ಮತ್ತು ತಾಲ್ಲೂಕು ಆಸ್ಪತ್ರೆಗಳ ಮೇಲೆ ಹೆಚ್ಚು ಅವಲಂಬಿತರಾಗಿದ್ದಾರೆ.
ಆಸ್ಪತ್ರೆ ಹೊರ ಆವರಣದಲ್ಲಿನ ಗೂಡಂಗಡಿಗಳಲ್ಲಿ ಸಿಗುವ ಎಳನೀರು, ಗಂಜಿ, ಬಿಸಿ ನೀರು, ಊಟ, ತಿಂಡಿ, ಟೀ ಗುಣಮಟ್ಟದಿಂದ ಕೂಡಿಲ್ಲ. ಬಹುತೇಕ ಎಲ್ಲಾ ಅಂಗಡಿಗಳಲ್ಲಿ ಗುಟ್ಕಾ, ಬೀಡಿ, ಸಿಗರೇಟು ಮಾರಾಟ ಸಾಮಾನ್ಯವಾಗಿದೆ. ರೋಗಿಗಳನ್ನು ನೋಡಲು ಬರುವವರು, ಅವರ ಜತೆ ಉಳಿದುಕೊಂಡವರಿಗೆ ತಂಬಾಕು ವಸ್ತುಗಳು ಸುಲಭವಾಗಿ ಕೈಗೆ ಸಿಗುತ್ತಿವೆ. ಗುಟ್ಕಾ ಅಗಿದು ಆಸ್ಪತ್ರೆಯ ಒಳಾಂಗಣದಲ್ಲಿ ಎಲ್ಲೆಂದರಲ್ಲಿ ಉಗಿಯುವುದು ಸಾಮಾನ್ಯ ಎಂಬಂತಾಗಿದೆ. ಅಲ್ಲಲ್ಲಿ ಬೀಡಿ, ಸಿಗರೇಟಿನ ತುಂಡು, ಮದ್ಯದ ಪ್ಯಾಕೇಟ್‌ಗಳೂ ಕಂಡುಬರುತ್ತವೆ.
ಜಿಲ್ಲಾ ಆಸ್ಪತ್ರೆಯಲ್ಲಿ ನಿತ್ಯ ಸಾವಿರಾರು ಜನ ಹೊರ ರೋಗಿ ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಾರೆ. ಅವರು ಮೂಗು ಮುಚ್ಚಿಕೊಂಡು ಓಡಾಡಬೇಕಾದ ಸ್ಥಿತಿ ಇದೆ. ಗುಟ್ಕಾ ತಿಂದು ಗೋಡೆಗಳ ಮೇಲೆ ಉಗುಳಿದ್ದು, ನೋಡುಗರಲ್ಲಿ ಅಸಹ್ಯ ಮೂಡಿಸುತ್ತದೆ. ಆಸ್ಪತ್ರೆಯ ಕಿಟಕಿ, ಬಾಗಿಲುಗಳೂ ಇದನ್ನು ಸಾಕ್ಷೀಕರಿಸುತ್ತಿವೆ.
ಸ್ವಚ್ಛತೆ ಮತ್ತು ನೈರ್ಮಲ್ಯದ ವಿಚಾರದಲ್ಲಿ ರಾಷ್ಟ್ರಪ್ರಶಸ್ತಿ ಹಾಗೂ ಕಾಯಕಲ್ಪ ರಾಜ್ಯ ಪ್ರಶಸ್ತಿ ಪಡೆದಿರುವ ಚಳ್ಳಕೆರೆ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆ ಹಾಗೂ ಜಿಲ್ಲೆಯ ಇತರ ಭಾಗಗಳ ಆಸ್ಪತ್ರೆಗಳಲ್ಲಿ ಸ್ವಚ್ಛತೆ ಮರೆಯಾಗಿದೆ.
ಸರ್ಕಾರಿ ಆರ್ಯುವೇದಿಕ್ ಆಸ್ಪತ್ರೆ ಮತ್ತು 30 ಹಾಸಿಗೆ ಸಾಮರ್ಥ್ಯದ ಮಹಿಳೆ ಮತ್ತು ಮಕ್ಕಳ ಆಸ್ಪತ್ರೆ ಒಂದೇ ಆವರಣದಲ್ಲಿವೆ. ಇಲ್ಲಿ ಬಿದ್ದಿರುವ ಕಸ, ಕಡ್ಡಿ, ಹಳೆ ಪ್ಲಾಸ್ಟಿಕ್ ಪೇಪರ್ ಇನ್ನಿತರ ತ್ಯಾಜ್ಯ ಸಂಗ್ರಹಿಸಿ ಅದನ್ನು ಸಾಗಹಾಕಲು ಹೊರಗುತ್ತಿಗೆ ಸಿಬ್ಬಂದಿ ಹರಸಾಹಸ ಪಡುವಂತಾಗಿದೆ.
ಅಧಿಕಾರಿಗಳ ನಿರ್ಲಕ್ಷ್ಯದಿಂದ ಶಿಥಿಲಗೊಂಡ ಓವರ್ ಹೆಡ್ ಟ್ಯಾಂಕ್, ಪಾಳು ಬಿದ್ದ ವೈದ್ಯರ ವಸತಿ ಗೃಹ, ಕೆಟ್ಟು ನಿಂತ ವಿದ್ಯುತ್ ಪರಿವರ್ತಕ ಮತ್ತು ಕಡಿದು ಹಾಕಿದ ಮರ-ಗಿಡದ ಒಣ ಕೊಂಬೆ ಅಲ್ಲಲ್ಲಿ ಬಿದ್ದಿದ್ದು, ಅವುಗಳಲ್ಲಿ ವಿಷ ಜಂತುಗಳು ಸೇರಿಕೊಂಡಿವೆ. ಇದರಿಂದ ಆಸ್ಪತ್ರೆ ಆವರಣದಲ್ಲಿ ರಾತ್ರಿ ವೇಳೆ ಓಡಾಡಲೂ ಜನ ಭಯಪಡುವಂತಾಗಿದೆ.
ಅಡುಗೆ ತಯಾರಿಕೆ, ಆಸ್ಪತ್ರೆ ಮೇಲ್ವಿಚಾರಣೆ, ಭದ್ರತಾ ಸಿಬ್ಬಂದಿ, ಬಟ್ಟೆ ತೊಳೆಯುವುದು, ಹೆರಿಗೆ ವಾರ್ಡ್, ರಾತ್ರಿ ಪಾಳಿಯ ಕೆಲಸ ಮತ್ತು ಸ್ವಚ್ಛತೆಗಾಗಿ ಒಟ್ಟು 19 ಜನ ಹೊರಗುತ್ತಿಗೆ ಕಾರ್ಮಿಕರಿದ್ದಾರೆ. ಸ್ವಚ್ಛತೆ ಕೆಲಸಕ್ಕೆ ಇನ್ನು 30ಕ್ಕೂ ಹೆಚ್ಚು ಕಾರ್ಮಿಕರ ಅಗತ್ಯವಿದೆ ಎನ್ನುತ್ತಾರೆ ಆಸ್ಪತ್ರೆ ನೌಕರರು.
ಚರ್ಮ, ಕಣ್ಣು, ಹೆರಿಗೆ ಸೇರಿದಂತೆ ವಿವಿಧ ವಿಭಾಗಗಳಲ್ಲಿ ವೈದ್ಯರ ಕೊರತೆ ಇದೆ. ಆಂಧ್ರದ ಗಡಿ ಭಾಗಕ್ಕೆ ಹೊಂದಿಕೊಂಡಿರುವ ಪರಶುರಾಂಪುರ, ಜಾಜೂರು, ಕಲಮರಹಳ್ಳಿ, ರಾಮಜೋಗಿಹಳ್ಳಿ, ತಳುಕು, ದೊಡ್ಡಉಳ್ಳಾರ್ತಿ, ಮೀರಾಸಾಬಿಹಳ್ಳಿ ಮುಂತಾದ ಗ್ರಾಮದಳಲ್ಲಿ ಆರೋಗ್ಯ ಕೇಂದ್ರಗಳ ಸ್ಥಿತಿ ಹೇಳತೀರದಾಗಿದೆ.
ಪ್ರತಿ ದಿನ ಹಗಲು ವೇಳೆ ವೈದ್ಯರು 3-4 ಗಂಟೆ ಕೇಂದ್ರ ಸ್ಥಾನದಲ್ಲಿ ಕರ್ತವ್ಯ ನಿರ್ವಹಿಸಿ ನಂತರ ನಗರಪ್ರದೇಶಕ್ಕೆ ಹೋಗಿ ಬಿಡುತ್ತಾರೆ. ರಾತ್ರಿ ವೇಳೆ ಆಸ್ಪತ್ರೆಯಲ್ಲಿ ಯಾರೂ ಇರುವುದಿಲ್ಲ. ಇದರಿಂದ ತುರ್ತು ಸಂದರ್ಭದಲ್ಲಿ ಗ್ರಾಮೀಣ ಜನರ ಚಿಕಿತ್ಸೆಗೆ ತೀವ್ರ ತೊಂದರೆಯಾಗುತ್ತದೆ.
ಆಯಾ ಹೋಬಳಿ ಕೇಂದ್ರದಲ್ಲಿ ಪ್ರಾಥಮಿಕ ಕೇಂದ್ರಗಳಿದ್ದರೂ ನಗರ ಪ್ರದೇಶದ ಆಸ್ಪತ್ರೆಗೆ ಹೆಚ್ಚು ಸಂಖ್ಯೆಯಲ್ಲಿ ಜನ ಬರುತ್ತಾರೆ. ಇದರಿಂದ ಸೂಕ್ತ ಚಿಕಿತ್ಸೆ ನೀಡುವುದು ಮತ್ತು ಸ್ವಚ್ಛತೆ ಕಾಪಾಡುವುದು ಕಷ್ಟವಾಗುತ್ತದೆ ಎನ್ನುತ್ತಾರೆ ಸರ್ಕಾರಿ ಆಸ್ಪತ್ರೆ ಸಿಬ್ಬಂದಿ.
ಜಿಲ್ಲೆಯ ಜನರ ಪಾಲಿಗೆ ಆರೋಗ್ಯ ಸಂಜೀವಿನಿಯಾಗಬೇಕಿದ್ದ ಆಸ್ಪತ್ರೆಗಳು, ಅನೇಕ ಸಮಸ್ಯೆಗಳಿಂದ ನಲುಗುತ್ತಿವೆ. ರೋಗಿಗಳು ಸೌಲಭ್ಯ ವಂಚಿತರಾಗಿದ್ದಾರೆ. ಆಸ್ಪತ್ರೆಯ ಆವರಣ ಅನೈರ್ಮಲ್ಯದ ತಾಣವಾಗಿದೆ. ಹಂದಿಗಳ ಹಿಂಡು ಸದಾ ಓಡಾಡುತ್ತಿರುತ್ತವೆ. ಶೌಚಾಲಯದ ಕೊರತೆಯಿಂದ ಸಾರ್ವಜನಿಕರು ಬಯಲಲ್ಲೇ ಮೂತ್ರ ವಿಸರ್ಜನೆ ಮಾಡುವುದು ಸಾಮಾನ್ಯವಾಗಿದೆ.
ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳ ಆವರಣದಲ್ಲಿ ಹಾಗೂ ಸುತ್ತಲಿನ ಅಂಗಡಿಗಳಲ್ಲಿ ಸ್ವಚ್ಛತೆ ಇಲ್ಲದಿರುವ ವಿಚಾರ ಗಮನಕ್ಕೆ ಬಂದಿದೆ. ಶೀಘ್ರ ಸ್ಥಳೀಯ ಸಂಸ್ಥೆಗಳಿಗೆ ಪತ್ರ ಬರೆದು ಸ್ವಚ್ಛತೆಗೆ ಕ್ರಮವಹಿಸಲಾಗುವುದುಡಾ.ಜಿ.ಪಿ.ರೇಣುಪ್ರಸಾದ್ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ
ಜಿಲ್ಲಾ ಆಸ್ಪತ್ರೆ ಮುಂಭಾಗದ ಗೂಡಂಗಡಿಗಳಲ್ಲಿ ತಂಬಾಕು ಉತ್ಪನ್ನಗಳ ಮಾರಾಟ ವಿಪರೀತವಾಗಿದೆ. ಆಹಾರ ತ್ಯಾಜ್ಯದ ವಿಲೇವಾರಿ ಸರಿಯಾದ ರೀತಿ ಆಗುತ್ತಿಲ್ಲ. ಈ ಬಗ್ಗೆ ಕ್ರಮವಹಿಸುವಂತೆ ಜಿಲ್ಲಾಧಿಕಾರಿಯವರಿಗೆ ಮನವಿ ಮಾಡಲಾಗಿದೆಡಾ.ಎಸ್.ಪಿ.ರವೀಂದ್ರ ಜಿಲ್ಲಾ ಶಸ್ತ್ರಚಿಕಿತ್ಸಕ
ಜಿಲ್ಲಾ ಆಸ್ಪತ್ರೆ ಮುಂಭಾಗದ ಗೂಡಂಗಡಿಗಳಲ್ಲಿ ತಂಬಾಕು ಉತ್ಪನ್ನಗಳ ಮಾರಾಟ ವಿಪರೀತವಾಗಿದೆ. ಆಹಾರ ತ್ಯಾಜ್ಯದ ವಿಲೇವಾರಿ ಸರಿಯಾದ ರೀತಿ ಆಗುತ್ತಿಲ್ಲ. ಈ ಬಗ್ಗೆ ಕ್ರಮವಹಿಸುವಂತೆ ಜಿಲ್ಲಾಧಿಕಾರಿಯವರಿಗೆ ಮನವಿ ಮಾಡಲಾಗಿದೆಡಾ.ಎಸ್.ಪಿ.ರವೀಂದ್ರ ಜಿಲ್ಲಾ ಶಸ್ತ್ರಚಿಕಿತ್ಸಕ
ಲ್ಲಾ ಆಸ್ಪತ್ರೆ ಮುಂಭಾಗದ ಗೂಡಂಗಡಿಗಳಲ್ಲಿ ತಂಬಾಕು ಉತ್ಪನ್ನಗಳ ಮಾರಾಟಕ್ಕೆ ಕಡಿವಾಣ ಹಾಕಬೇಕು. ಜನರಲ್ಲಿ ಜಾಗೃತಿ ಮೂಡಿಸುವ ಜತೆಗೆ ಅಂಗಡಿಗಳನ್ನು ಬೇರೆಡೆಗೆ ಸ್ಥಳಾಂತರಿಸಲು ಕ್ರಮ ಕೈಗೊಳ್ಳಬೇಕುಓ.ಪ್ರತಾಪ್ ಜೋಗಿ ವಕೀಲರು
ಜಿಲ್ಲಾ ಆಸ್ಪತ್ರೆ ಮುಂಭಾಗದ ಗೂಡಂಗಡಿಗಳಲ್ಲಿ ತಂಬಾಕು ಉತ್ಪನ್ನಗಳ ಮಾರಾಟಕ್ಕೆ ಕಡಿವಾಣ ಹಾಕಬೇಕು. ಜನರಲ್ಲಿ ಜಾಗೃತಿ ಮೂಡಿಸುವ ಜತೆಗೆ ಅಂಗಡಿಗಳನ್ನು ಬೇರೆಡೆಗೆ ಸ್ಥಳಾಂತರಿಸಲು ಕ್ರಮ ಕೈಗೊಳ್ಳಬೇಕುಓ.ಪ್ರತಾಪ್ ಜೋಗಿ ವಕೀಲರು
ತಾಲ್ಲೂಕು ಆಸ್ಪತ್ರೆ ಆವರಣದಲ್ಲಿ ಸ್ವಚ್ಛತೆ ಮರೀಚಿಕೆಯಾಗಿದೆ. ವಸತಿ ಗೃಹ ಪಾಳುಬಿದ್ದಿದ್ದು ಕುಡಿಯುವ ನೀರಿನ ಓವರ್ ಹೆಡ್ ಟ್ಯಾಂಕ್ ಶಿಥಿಲಗೊಂಡಿದೆ. ರೋಗ ಗುಣಪಡಿಸಬೇಕಾದ ಆಸ್ಪತ್ರೆ ರೋಗ ಉತ್ಪತ್ತಿ ತಾಣವಾಗಿದೆಪೆನ್ನಯ್ಯ ಬೆಳಗೆರೆ
ಮಾಡದಕೆರೆ ಹೊರತುಪಡಿಸಿ ತಾಲ್ಲೂಕಿನ ಇತರ ಆರೋಗ್ಯ ಕೇಂದ್ರಗಳು ಸ್ವಚ್ಛತೆಯಿಂದ ಕೂಡಿವೆ. ವಾರದಲ್ಲಿ ಎರಡು ದಿನ ಬಯೋ ತ್ಯಾಜ್ಯ ವಿಲೇವಾರಿ ಮಾಡಲಾಗುವುದುಡಾ.ರಾಘವೇಂದ್ರ ಪ್ರಸಾದ್ ತಾಲ್ಲೂಕು ಆರೋಗ್ಯಾಧಿಕಾರಿ
ಮಾಡದಕೆರೆ ಆಸ್ಪತ್ರೆ ಅನೈರ್ಮಲ್ಯದ ತಾಣವಾಗಿದೆ. ರಾತ್ರಿ ವೇಳೆ ವೈದ್ಯರು ಇರುವುದಿಲ್ಲ. ಗಂಭೀರ ಗಾಯಗೊಂಡವರಿಗೆ ತುರ್ತು ಚಿಕಿತ್ಸೆ ದೊರೆಯುವುದಿಲ್ಲ. ಕೂಡಲೇ ಸಮಸ್ಯೆ ಬಗೆಹರಿಸಬೇಕುಜಯಸೂರ್ಯ ಮಾಡದಕೆರೆ
‘ಜಿಲ್ಲಾ ಆಸ್ಪತ್ರೆ ಎದುರು ಇರುವ ಗೂಡಂಗಡಿಗಳಲ್ಲಿ ತಂಬಾಕು ಉತ್ಪನ್ನಗಳಾದ ಬೀಡಿ ಸಿಗರೇಟು ಜರ್ದಾ ಗುಟ್ಕಾ ಮುಂತಾದವುಗಳನ್ನು ಮಾರಾಟ ಮಾಡುತ್ತಿರುವುದು ಕಂಡುಬಂದಿದೆ. ಇಲ್ಲಿನ ಅಂಗಡಿಗಳಲ್ಲಿ ಸಾರ್ವಜನಿಕರಿಗೆ ಮಾರಾಟ ಮಾಡುವ ಊಟ ಉಪಾಹಾರದ ಗುಣಮಟ್ಟದ ಮೇಲೆ ನಿಗಾ ಇಡಲಾಗುತ್ತದೆ. ತ್ಯಾಜ್ಯವನ್ನು ರಸ್ತೆ ಸೇರಿದಂತೆ ಎಲ್ಲೆಂದರಲ್ಲಿ ಬಿಸಾಡುತ್ತಿರುವುದರಿಂದ ನಾಯಿ ಹೆಗ್ಗಣಗಳ ಕಾಟ ವಿಪರೀತವಾಗಿದೆ. ನಾಯಿಗಳು ರಾತ್ರಿ ವೇಳೆ ದಾಳಿ ಮಾಡುತ್ತವೆ’ ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎಸ್.ಪಿ.ರವೀಂದ್ರ ಹೇಳುತ್ತಾರೆ.
- ಎಚ್.ಡಿ.ಸಂತೋಷ್
ಹೊಸದುರ್ಗ: ತಾಲ್ಲೂಕಿನಾದ್ಯಂತ ಇರುವ ಪ್ರಾಥಮಿಕ ಸಮುದಾಯ ಆರೋಗ್ಯ ಕೇಂದ್ರ ಹಾಗೂ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಕಾಂಪೌಂಡ್ ಸುತ್ತಲೂ ಸ್ವಚ್ಛತೆ ಮರಿಚೀಕೆಯಾಗಿದೆ. ತಾಲ್ಲೂಕಿನ ಮಾಡದಕೆರೆ ಪ್ರಾಥಮಿಕ ಆರೋಗ್ಯ ಕೇಂದ್ರದ ಸುತ್ತಲೂ ಕಸದ ರಾಶಿಯಿದೆ. ಇಲ್ಲಿ ಓಡಾಡಲು ಜನರಿಗೂ ಕಿರಿಕಿರಿಯಾಗುತ್ತಿದೆ. ಸ್ವಚ್ಛತೆ ಬಗ್ಗೆ ಯಾರೂ ಗಮನಹರಿಸಿಲ್ಲ.
ಯಾವುದಾದರೂ ಗಂಭೀರ ಆರೋಗ್ಯ ಸಮಸ್ಯೆ ಎದುರಾದರೆ ಹೊಸದುರ್ಗ ಆಸ್ಪತ್ರೆಗೆ ಬರುತ್ತೇವೆ. ವೈದ್ಯಾಧಿಕಾರಿಗಳು ಇಲ್ಲಿನ ಅವ್ಯವಸ್ಥೆಯನ್ನು ಕಂಡು ಕಾಣದಂತೆ ಇದ್ದಾರೆ ಎಂದು ಗ್ರಾಮಸ್ಥರು ದೂರುತ್ತಾರೆ. ‘ಮಾಡದಕೆರೆ ಆಸ್ಪತ್ರೆಯಲ್ಲಿ ಆರೋಗ್ಯ ಸೇವೆ ಉತ್ತಮವಾಗಿದೆ. ನಿತ್ಯ 100 ರಿಂದ 150 ಜನರಿಗೆ ಚಿಕಿತ್ಸೆ ನೀಡಲಾಗುತ್ತದೆ. ತಿಂಗಳಿಗೆ 7 ರಿಂದ 8 ಹೆರಿಗೆಗಳಾಗುತ್ತಿವೆ.
ಇಲ್ಲಿ ವಸತಿ ಗೃಹಗಳ ನಿರ್ಮಾಣ ಕಾರ್ಯ ನಡೆಯುತ್ತಿರುವುದರಿಂದ ಸದ್ಯದ ಮಟ್ಟಿಗೆ ಸ್ವಚ್ಛತೆ ಮರೆಯಾಗಿದೆ. ಈ ಕಾರ್ಯ ಮುಗಿದ ಕೂಡಲೇ ಸ್ವಚ್ಛತೆಗೂ ಆದ್ಯತೆ ನೀಡಲಾಗುವುದು’ ಎನ್ನುತ್ತಾರೆ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ರಾಘವೇಂದ್ರ ಪ್ರಸಾದ್.
-ಕೊಂಡ್ಲಹಳ್ಳಿ ಜಯಪ್ರಕಾಶ
ಮೊಳಕಾಲ್ಮುರು: ದೀಪದ ಕೆಳಗೆ ಕತ್ತಲು ಎನ್ನುವಂತೆ ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಿಸುವ ತಾಲ್ಲೂಕು ಆಸ್ಪತ್ರೆ ಸುತ್ತಲೂ ತ್ಯಾಜ್ಯ ಬಿದ್ದಿರುವುದು ನಿರ್ಲಕ್ಷ್ಯಕ್ಕೆ ಹಿಡಿದ ಕನ್ನಡಿಯಂತಿದೆ. ತಾಲ್ಲೂಕಿನ ದೊಡ್ಡ ಆಸ್ಪತ್ರೆಗಳನ್ನು ಒಳಗೊಂಡಿರುವ ರಾಂಪುರ ಕೊಂಡ್ಲಹಳ್ಳಿ ಬಿ.ಜಿ.ಕೆರೆ ನಾಗಸಮುದ್ರದಲ್ಲೂ ಇದೇ ಪರಿಸ್ಥಿತಿ ಕಾಣಬಹುದು. ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಸುತ್ತಲೂ ಕಸದ ರಾಶಿ ಕಾಣಸಿಗುತ್ತದೆ.
ಮಳೆ ಬಂದರಂತೂ ಆರೋಗ್ಯಾಧಿಕಾರಿ ಕಚೇರಿಯ ರಸ್ತೆ ಕೆಸರುಮಯವಾಗುತ್ತದೆ. ಸ್ವಚ್ಛತೆಯ ಹೊಣೆಯು ಪಟ್ಟಣ ಪಂಚಾಯಿತಿಯದ್ದು ಎಂದು ಆರೋಗ್ಯ ಇಲಾಖೆಯವರು ಹೇಳುತ್ತಾರೆ. ಆಗಾಗ ಸ್ವಚ್ಛತೆ ಕೈಗೊಳ್ಳುತ್ತಿರುವುದಾಗಿ ಪಟ್ಟಣ ಪಂಚಾಯಿತಿಯವರು ಜವಾಬು ನೀಡುತ್ತಾರೆ. ರಾಂಪುರದ ಆಸ್ಪತ್ರೆ ರಸ್ತೆ ಸೇರಿದಂತೆ ಬಸ್ ನಿಲ್ದಾಣ ಸುತ್ತಮುತ್ತ ಜೆ.ಬಿ.ಹಳ್ಳಿ ರಸ್ತೆ ಬದಿ ಹೋಟೆಲ್ ಮತ್ತು ಅಂಗಡಿಗಳ ತ್ಯಾಜ್ಯವನ್ನು ಬೇಕಾಬಿಟ್ಟಿ ಚೆಲ್ಲಲಾಗುತ್ತಿದೆ. ಈ ಕಾರಣಕ್ಕೆ ಹೋಟೆಲ್‌ಗಳಿಗೆ ಹಲವು ಬಾರಿ ನೋಟಿಸ್ ನೀಡಲಾಗಿದೆ. ಇಲ್ಲಿ ಬೀದಿನಾಯಿ ಉಪಟಳ ಮಿತಿಮೀರಿದೆ. ಹೀಗಾಗಿ ಓಡಾಡಲು ಭಯವಾಗುತ್ತದೆ. ಒಂದು ವರ್ಷದ ಹಿಂದೆ ನಾಯಿ ಹಾವಳಿಗೆ ಬಾಲಕನೊಬ್ಬ ಬಲಿಯಾಗಿದ್ದರೂ ಬಿಗಿ ಕ್ರಮ ಕೈಗೊಂಡಿಲ್ಲ ಎಂದು ಸಾರ್ವಜನಿಕರು ದೂರಿದ್ದಾರೆ.
‘ಕೊಂಡ್ಲಹಳ್ಳಿ ಆರೋಗ್ಯ ಕೇಂದ್ರ ಎರಡು ಸಲ ಕಾಯಕಮಿತ್ರ ಪ್ರಶಸ್ತಿಗೆ ಭಾಜನವಾಗಿದೆ. ಆದರೆ ವೈದ್ಯರ ವಸತಿಗೃಹ ಮುಂಭಾಗದಲ್ಲಿಯೇ ತ್ಯಾಜ್ಯ ನೀರು ಶೇಖರಣೆಯಾಗಿ ಸೊಳ್ಳೆ ಉತ್ಪತ್ತಿ ತಾಣವಾಗಿದೆ. ವೈದ್ಯರು ರಾತ್ರಿ ವಾಸ್ತವ್ಯ ನಡೆಸದ ಕಾರಣ ಅವರಿಗೆ ಸೊಳ್ಳೆ ಹಾವಳಿ ಗಮನಕ್ಕೆ ಬರುತ್ತಿಲ್ಲ’ ಎನ್ನುತ್ತಾರೆ ಗ್ರಾಮಸ್ಥ ತಿಪ್ಪೇಶ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.